More

    ಕರಾವಳಿ ಸಂಪೂರ್ಣ ಲಾಕ್‌ಡೌನ್

    ಮಂಗಳೂರು/ಉಡುಪಿ: ಭಾನುವಾರದ ಲಾಕ್‌ಡೌನ್ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಯಶಸ್ವಿಯಾಗಿದೆ. ರಂಜಾನ್ ಹಬ್ಬದ ಆಚರಣೆ ಇದ್ದರೂ, ಸಾರ್ವಜನಿಕರಿಂದ ಲಾಕ್‌ಡೌನ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
    ದ.ಕ.ಜಿಲ್ಲೆಯ ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಕಡಬ, ಮೂಡುಬಿದಿರೆ ತಾಲೂಕು ಕೇಂದ್ರ ಹಾಗೂ ಗ್ರಾಮೀಣ ಭಾಗಗಳಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಅಂಗಡಿ, ಮುಂಗಟ್ಟುಗಳು ಬಂದ್ ಆಗಿದ್ದವು. ತರಕಾರಿ, ಮಾಂಸ ಮಾರಾಟಕ್ಕೆ ಅವಕಾಶ ಇದ್ದರೂ, ಹೆಚ್ಚಿನ ಕಡೆಗಳಲ್ಲಿ ಅಂಗಡಿಗಳು ಬಾಗಿಲು ತೆರೆಯಲಿಲ್ಲ. ಸ್ಟೇಟ್‌ಬ್ಯಾಂಕ್‌ನಲ್ಲಿ ಮಾರುಕಟ್ಟೆಗೆ ಬೆರಳೆಣಿಕೆಯ ಮೀನು ಮಾರಾಟಗಾರರು ಆಗಮಿಸಿದ್ದರು. ಗ್ರಾಹಕರ ಸಂಖ್ಯೆಯೂ ಕಡಿಮೆಯಿತ್ತು.

    ರಾಜ್ಯದಲ್ಲಿ ಲಾಕ್‌ಡೌನ್ 4 ಜಾರಿಗೊಳಿಸಿದ ಬಳಿಕ ಸಹಜ ಜೀವನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಪ್ರತಿ ಶನಿವಾರ ರಾತ್ರಿ 7ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆ ತನಕ 36 ತಾಸುಗಳ ಕರ್ಫ್ಯೂ ಜಾರಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರ ರಾತ್ರಿಯಿಂದಲೇ ವಾಹನಗಳ ಓಡಾಟ ಕಡಿಮೆಯಾಗಿತ್ತು. ಭಾನುವಾರ ಬೆಳಗ್ಗೆಯಿಂದಲೇ ಅಂಗಡಿ, ಮುಂಗಟ್ಟು ಬಂದ್ ಆಗಿದ್ದವು. ಆಟೋ ರಿಕ್ಷಾ, ಕ್ಯಾಬ್, ಖಾಸಗಿ ವಾಹನಗಳು ಸ್ಥಗಿತಗೊಂಡಿದ್ದವು. ಹೊರ ಜಿಲ್ಲೆಗಳಿಂದ ವಾಹನಗಳ ಪ್ರವೇಶಕ್ಕೂ ಅವಕಾಶ ನಿರಾಕರಿಸಲಾಗಿತ್ತು.

    ಪೊಲೀಸ್ ಬಂದೋಬಸ್ತ್
    ದ.ಕ.ಜಿಲ್ಲಾದ್ಯಂತ ಪೂರ್ಣಪ್ರಮಾಣದಲ್ಲಿ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಆದೇಶ ಹೊರಡಿಸಿದ್ದರು. ಶನಿವಾರ ರಾತ್ರಿಯಿಂದಲೇ ಜಿಲ್ಲೆಯ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು. ವಾಹನಗಳಲ್ಲಿ ಅನಗತ್ಯ ತಿರುಗಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ಕರ್ಫ್ಯೂ ಹಿನ್ನೆಲೆಯಲ್ಲಿ ತೊಕ್ಕೊಟ್ಟಿನಲ್ಲಿ ಬಂದೂಕು ಹಿಡಿದು ಕರ್ತವ್ಯ ನಿರ್ವಹಿಸಿದರು. ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸಿದ್ದಾರೆ. ಜಿಲ್ಲೆಯಲ್ಲಿ 40ಕ್ಕೂ ಅಧಿಕ ಮದುವೆ ಕಾರ್ಯಕ್ರಮಗಳು ಸರಳವಾಗಿ ನಡೆದಿದೆ. ಸ್ಥಳೀಯ ಆಡಳಿತದಿಂದ ವಾಹನಗಳ ಸಂಚಾರಕ್ಕೆ ಅನುಮತಿ ಪಡೆದು ಮುಂಜಾಗ್ರತಾ ಕ್ರಮಗಳೊಂದಿಗೆ ಕಾರ್ಯಕ್ರಮ ನಡೆಸಲಾಗಿದೆ. ಹಲವು ಕಡೆಗಳಲ್ಲಿ ಪತ್ತನಾಜೆ ತಂಬಿಲಗಳು ನಡೆದಿದ್ದು, ಸೀಮಿತ ಸಂಖ್ಯೆಯ ಜನ ಸೇರುವಿಕೆಯೊಂದಿಗೆ ಕಾರ್ಯಕ್ರಮ ನಡೆಯಿತು.

    ಉಡುಪಿ ವಾಹನ ಸಂಚಾರ ವಿರಳ
    ಉಡುಪಿ: ಭಾನುವಾರದ ಲಾಕ್‌ಡೌನ್‌ಗೆ ಉಡುಪಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಗತ್ಯವಸ್ತುಗಳ ಸೇವೆ ಅಬಾಧಿತವಾಗಿದ್ದರೂ ಗ್ರಾಹಕರಿಲ್ಲದ ಕಾರಣ ತೆರೆದಿದ್ದ ಅಂಗಡಿಗಳು ಕೂಡ ಸ್ವಲ್ಪ ಹೊತ್ತಿನಲ್ಲಿ ಬಾಗಿಲು ಮುಚ್ಚಿದ್ದವು.

    ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣ ಹೆಚ್ಚುತ್ತಿರುವುದರಿಂದ ಜನರು ಸ್ವಯಂಸ್ಫೂರ್ತಿಯಿಂದಲೇ ಭಾಗವಹಿಸಿದ್ದರು. ದಿನಸಿ ಅಂಗಡಿಗಳು, ಕೆಲವು ಹೋಟೆಲ್‌ಗಳು, ಮಾಂಸ ಮಾರಾಟ ಅಂಗಡಿಗಳು ಬೆಳಗ್ಗೆ ಬಾಗಿಲು ತೆರೆದಿದ್ದರೂ ಗ್ರಾಹಕರಿಲ್ಲದೆ 11 ಗಂಟೆ ಸುಮಾರಿಗೆ ಮುಚ್ಚಿದವು. ಹಾಲಿನ ಅಂಗಡಿ, ಮೆಡಿಕಲ್ ಶಾಪ್‌ಗಳು ಮಾತ್ರ ಕಾರ್ಯನಿರ್ವಹಿಸಿದ್ದವು. ಪೊಲೀಸರು ಜಿಲ್ಲೆಯ ವಿವಿಧೆಡೆ ವಾಹನಗಳನ್ನು ತಪಾಸಣೆ ಮಾಡಿದ್ದು, ಏಳು ವಾಹನಗಳನ್ನು ಜಪ್ತಿ ಮಾಡಿದ್ದಾರೆ.

    ಕಾರ್ಕಳ, ಕುಂದಾಪುರ, ಹೆಬ್ರಿ ಬ್ರಹ್ಮಾವರ, ಪಡುಬಿದ್ರಿ, ಕಾಪು, ಶಿರ್ವ, ಬೈಂದೂರು, ಗಂಗೊಳ್ಳಿ ಭಾಗದಲ್ಲಿ ಜನ ಜೀವನ ಸಂಪೂರ್ಣ ಸ್ತಬ್ಧವಾಗಿತ್ತು. ನಗರ, ಗ್ರಾಮೀಣ ಭಾಗದಲ್ಲಿ ಜನರು ಮನೆಗಳಿಂದ ಆಚೆಗೆ ಬಾರದೆ ಮನೆಯಲ್ಲೆ ಸ್ವಯಂ ನಿರ್ಬಂಧ ಹಾಕಿಕೊಂಡಿದ್ದರು. ಜಿಲ್ಲೆಯ ದೇವಸ್ಥಾನ, ಚರ್ಚ್‌ಗಳಲ್ಲಿಯೂ ಯಾವುದೇ ರೀತಿಯ ಧಾರ್ಮಿಕ ಕಾಯಕ್ರಮ, ಚಟುವಟಿಕೆಗಳು ಇರಲಿಲ್ಲ. ಈದ್ ಹಬ್ಬ ಹಿನ್ನೆಲೆಯಲ್ಲಿ ಮಸೀದಿಗಳಲ್ಲಿ ಸಾಂಪ್ರದಾಯಿಕ ಪ್ರಾರ್ಥನೆ ಸಲ್ಲಿಸಲಾಯಿತು. ಮುಸ್ಲಿಮರು ಮನೆಯಲ್ಲೇ ಸರಳ ಈದ್ ಆಚರಿಸಿದರು.

    ಕೆಎಸ್‌ಆರ್‌ಟಿಸಿ, ಖಾಸಗಿ ಸಂಚಾರವನ್ನೂ ಸ್ಥಗಿತಗೊಳಿಸಲಾಗಿತ್ತು. ಪಡುಬಿದ್ರಿ, ಕಾಪು, ಮೂಳೂರು, ಉಚ್ಚಿಲ, ಹೆಜಮಾಡಿ ಸಹಿತ ಗ್ರಾಮೀಣ ಭಾಗವಾದ ಮುದರಂಗಡಿ, ಪಲಿಮಾರು, ಎಲ್ಲೂರು ಮತ್ತಿತರ ಕಡೆ ಜನ ಮನೆಯಿಂದ ಹೊರಬರದೆ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಿದರು. ಕುಂದಾಪುರ ಪೇಟೆ, ಗಂಗೊಳ್ಳಿ ಬಂದರು ಸೇರಿದಂತೆ ಗುಜ್ಜಾಡಿ, ನಾಯಕವಾಡಿ, ತ್ರಾಸಿ, ಮುಳ್ಳಿಕಟ್ಟೆ, ಮರವಂತೆ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಬೆಳಗ್ಗಿನಿಂದಲೂ ಮೆಡಿಕಲ್ ಶಾಪ್ ಹೊರತು ಯಾವುದೇ ಅಂಗಡಿ ಮುಂಗಟ್ಟುಗಳು ತೆರೆಯಲಿಲ್ಲ. ಹೆಬ್ರಿ, ಬ್ರಹ್ಮಾವರ, ಕೋಟೇಶ್ವರ, ಕೋಟ, ಸಿದ್ಧಾಪುರ ಪೇಟೆಗಳು ಬಂದ್ ಆಗಿ ಬಿಕೋ ಎನ್ನುತಿದ್ದವು.

    ಆಸ್ಪತ್ರೆಗಳಲ್ಲಿಯೂ ಜನ ವಿರಳ
    ಉಡುಪಿ ನಗರದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಜನರ ಸಂಖ್ಯೆ ತೀರ ವಿರಳವಾಗಿತ್ತು. ಒಪಿಡಿ ವಿಭಾಗದಲ್ಲಿ ರೋಗಿಗಳ ಸಂಖ್ಯೆ ವಿರಳವಾಗಿತ್ತು. ಎಲ್ಲಾ ತಾಲೂಕು, ಜಿಲ್ಲಾ ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆ ತುರ್ತು ಆರೋಗ್ಯ ಸೇವೆ ಲಭ್ಯವಿತ್ತು. ಸದಾ ಭಾರಿ ಮತ್ತು ಲಘು ವಾಹನಗಳಿಂದ ಸಂಚಾರ ದಟ್ಟಣೆಯಲ್ಲಿರುತ್ತ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಓಡಾಟ ಇರಲಿಲ್ಲ. ಅಗತ್ಯ ವಸ್ತು ಸಾಗಾಟ ಲಾರಿಗಳು, ಬೆರಳೆಣಿಕೆಯ ಕಾರು, ಬೈಕ್‌ಗಳು ಮಾತ್ರ ಸಂಚರಿಸುತ್ತಿದ್ದವು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಂಬ್ಯುಲೆನ್ಸ್ ಸೇವೆ ತುರ್ತು ಸೇವೆಗೆ ನೆರವಾಗಲು ಸನ್ನದ್ಧವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts