More

    ಲಾಕ್‌ಡೌನ್‌ಗೆ ಉತ್ತಮ ಸ್ಪಂದನೆ, ಅಂಗಡಿ ಮುಂಗಟ್ಟು ಬಂದ್, ವಾಹನ ಸಂಚಾರವೂ ವಿರಳ

    ಉಡುಪಿ: ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ನ ನಾಲ್ಕನೇ ಭಾನುವಾರವೂ ನಗರ, ಗ್ರಾಮೀಣ ಪ್ರದೇಶಗಳು ಸ್ತಬ್ಧವಾಗಿದ್ದವು. ಆಸ್ಪತ್ರೆ, ಕ್ಲಿನಿಕ್, ಮೆಡಿಕಲ್, ಪೆಟ್ರೋಲ್ ಬಂಕ್‌ಗಳು ತೆರೆದಿದ್ದು, ಕೆಲವು ಮೆಡಿಕಲ್ ಶಾಪ್‌ಗಳೂ ಬಂದ್ ಮಾಡಿದ್ದವು.

    ಹಾಲಿನ ಅಂಗಡಿಗಳು ಬೆಳಗ್ಗೆ 11ರವರೆಗೆ ತೆರೆದಿದ್ದವು. ಕೆಲವು ಹೋಟೆಲ್‌ಗಳಲ್ಲಿ ಪಾರ್ಸೆಲ್ ನೀಡಲಾಗುತ್ತಿತ್ತು. ಸಾರ್ವಜನಿಕ ಸ್ಥಳ, ರಸ್ತೆಗಳಲ್ಲಿ ವ್ಯಾಪಾರ ವಹಿವಾಟು, ವಾಹನ, ಜನರ ಓಡಾಟ ಇರಲಿಲ್ಲ. ನಗರದ ಕಲ್ಸಂಕ ವೃತ್ತದಲ್ಲಿ ಸಂಚಾರಿ ಪೊಲೀಸರು ಅನಗತ್ಯ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ದಂಡ ವಿಧಿಸುತ್ತಿದ್ದರು. ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಕಡಿಮೆ ಇತ್ತು.

    ಅನಗತ್ಯ ಸಂಚಾರಕ್ಕೆ ಬ್ರೇಕ್
    ಪಡುಬಿದ್ರಿ: ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸುವ ಹೆಜಮಾಡಿ ಗಡಿ ತಪಾಸಣಾ ಕೇಂದ್ರದಲ್ಲಿ ಅನಗತ್ಯ ಸಂಚರಿಸುವ ವಾಹನಗಳನ್ನು ತಪಾಸಣೆ ನಡೆಸಿದ ಪೊಲೀಸರು ಹಿಂದಕ್ಕೆ ಕಳುಹಿಸಿದರು. ವಾಹನಗಳ ಸಂಚಾರವಿಲ್ಲದೆ ಹೆಜಮಾಡಿ ಟೋಲ್ ಪ್ಲಾಜಾ ಬಿಕೋ ಅನ್ನುತ್ತಿತ್ತು.

    ಆಯುಷ್ ಔಷಧ ವಿತರಣೆ
    ಗಂಗೊಳ್ಳಿ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯುಷ್ ಔಷಧ ವಿತರಣಾ ಕಾರ್ಯಕ್ರಮ ನಡೆಯಿತು. ಕಾಲ್ತೋಡು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ವೈದ್ಯಾಧಿಕಾರಿ ಡಾ.ವೀಣಾ ಕಾರಂತ್ ಕೋವಿಡ್-19 ಕುರಿತು, ಆಹಾರ, ವಿಹಾರ ಹಾಗೂ ಕಷಾಯಗಳ ಬಳಕೆ, ಸಂಶಮನ ವಟಿ ಹಾಗೂ ಆರ್ಕ್ ಅಜೀಬ್ ಔಷಧ ಹಾಗೂ ಬಳಸುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ರುದ್ರಗೌಡ ಪಾಟೀಲ್ ಆಸ್ಪತ್ರೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಆಯುಷ್ ಔಷಧ ಕಿಟ್ ವಿತರಿಸಿದರು. ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಹಿರಿಯ ಆರೋಗ್ಯ ಸಹಾಯಕಿ ಶೋಭಾ ಸ್ವಾಗತಿಸಿದರು. ಆಶಾ ಕಾರ್ಯಕರ್ತೆ ಕಲ್ಪನಾ ಶೇರುಗಾರ್ ವಂದಿಸಿದರು.

    ಇಂದು ಜಾಗೃತಿ ಅಭಿಯಾನಕ್ಕೆ ಚಾಲನೆ
    ಉಡುಪಿ: ನಗರ ಹಾಗೂ ಗ್ರಾಮಾಂತರ ಬಿಜೆಪಿ ಆಶ್ರಯದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರಾದ್ಯಂತ ಕೋವಿಡ್-19 ಜನಜಾಗೃತಿ ಅಭಿಯಾನಕ್ಕೆ ಜುಲೈ 27ರಂದು ಬೆಳಗ್ಗೆ 11ಕ್ಕೆ ನಗರ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹಾಗೂ ಶಾಸಕ ಕೆ. ರಘುಪತಿ ಭಟ್ ಚಾಲನೆ ನೀಡಲಿದ್ದಾರೆ. ನಾಲ್ಕು ದಿನ ಧ್ವನಿವರ್ಧಕ ಮೂಲಕ ವಾಹನದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಪ್ರಮುಖ ಪ್ರದೇಶಗಳಲ್ಲಿ ಕೋವಿಡ್ -19 ಮುನ್ನೆಚ್ಚರಿಕೆಗಾಗಿ ಜನಜಾಗೃತಿ ಅಭಿಯಾನ ನಡೆಯಲಿದೆ ಎಂದು ಮಂಡಲ ಅಧ್ಯಕ್ಷ ಮಹೇಶ್ ಠಾಕೂರ್ ಮತ್ತು ವೀಣಾ ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಮಯಪ್ರಜ್ಞೆ ಮೆರೆದು ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿ ಜನಮೆಚ್ಚುಗೆ ಗಳಿಸಿರುವ ಆಟೋ ಚಾಲಕಿ ಪೆರ್ಣಂಕಿಲದ ರಾಜೀವಿ ಅವರನ್ನು ಕಾಪು ಕ್ಷೇತ್ರ ಬಿಜೆಪಿಯಿಂದ ಕ್ಷೇತ್ರಾಧ್ಯಕ್ಷ ಶ್ರೀಕಾಂತ ನಾಯಕ್ ಹಾಗೂ ಯುವಮೋರ್ಚಾ ಅಧ್ಯಕ್ಷ ಸಚಿನ್ ಸುವರ್ಣ ನೇತೃತ್ವದಲ್ಲಿ ಶನಿವಾರ ಗೌರವಿಸಲಾಯಿತು. ಜಿಲ್ಲಾ ಬಿಜೆಪಿ ಗೋ ಸಂರಕ್ಷಣಾ ಪ್ರಕೋಷ್ಠ ಸಂಚಾಲಕ ಸದಾನಂದ ಪ್ರಭು, ನಿಕಟಪೂರ್ವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಪೈ, ಕಾಪು ಯುವಮೋರ್ಚಾ ಉಪಾಧ್ಯಕ್ಷ ರಾಘವೇಂದ್ರ ಮಾಂಬೆಟ್ಟು, ಕಾರ್ಯದರ್ಶಿ ಪ್ರಸನ್ನ ಕಾಮತ್, ಕಾಪು ಸಾಮಾಜಿಕ ಜಾಲತಾಣ ಸಂಚಾಲಕ ನಿತಿನ್ ಸೇರಿಗಾರ್, ಕುರ್ಕಾಲು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಗುರುಕೃಪಾ ರಾವ್, ಕಾಪು ಪುರಸಭಾ ಮಹಾಶಕ್ತಿ ಕೇಂದ್ರ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ನೀತಾ ಪ್ರಭು ಉಪಸ್ಥಿತರಿದ್ದರು.

    1,06,800 ರೂ.ದಂಡ ವಸೂಲಿ
    ಉಡುಪಿ: ಜಿಲ್ಲಾದ್ಯಂತ ಸುರಕ್ಷಿತ ಅಂತರ ಹಾಗೂ ಮಾಸ್ಕ್ ಧರಿಸದೆ ಕೋವಿಡ್-19 ನಿಯಮ ಉಲ್ಲಂಘಿಸಿದವರಿಂದ ಇಲ್ಲಿವರೆಗೆ ಒಟ್ಟು 1,06,800ರೂ. ದಂಡ ವಸೂಲಿ ಮಾಡಲಾಗಿದೆ. ನಗರ ಪ್ರದೇಶಗಳಾದ ಉಡುಪಿ ನಗರಸಭೆ, ಕಾರ್ಕಳ, ಕುಂದಾಪುರ, ಕಾಪು ಪುರಸಭೆ ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 74 ಸಾವಿರ ರೂ. ಮತ್ತು ಜು.23ರಂದು ಒಂದೇ ದಿನ 4200ರೂ. ದಂಡ ವಸೂಲಿ ಮಾಡಲಾಗಿದೆ. ಗ್ರಾಮೀಣ ಪ್ರದೇಶಗಳಾದ ಉಡುಪಿ, ಕಾರ್ಕಳ, ಕುಂದಾಪುರ, ಕಾಪು, ಬ್ರಹ್ಮಾವರ, ಹೆಬ್ರಿ, ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ 32,800 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

    ಕೋವಿಡ್ ವಿಪತ್ತು ನಿರ್ವಹಣಾ ತರಬೇತಿ
    ಪಡುಬಿದ್ರಿ: ಕಾಪು ಪುರಸಭೆ ವ್ಯಾಪ್ತಿಯಲ್ಲಿ ಕೋವಿಡ್ ವಿಪತ್ತು ನಿರ್ವಹಣೆಗಾಗಿ ರಚಿಸಿರುವ ವಾರ್ಡ್ ಮಟ್ಟದ ಕಾರ್ಯಾಚರಣೆ ಪಡೆ ಹಾಗೂ ಬೂತ್ ಮಟ್ಟದ ಸಮಿತಿಗಳಿಗೆ ಆನ್‌ಲೈನ್ ತಂತ್ರಾಂಶ ಮೂಲಕ ಪುರಸಭೆಯಲ್ಲಿ ಸೋಮವಾರ ತರಬೇತಿ ನೀಡಲಾಯಿತು.
    ಸಮಿತಿ ಹಾಗೂ ಕಾರ್ಯಾಚರಣೆ ಪಡೆ ಪ್ರಮುಖ ಕರ್ತವ್ಯ, ಪಾತ್ರ ಮತ್ತು ಜವಾಬ್ದಾರಿ ಬಗ್ಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಾದ ಡಾ.ರವಿಕುಮಾರ್, ಎ.ಎಲ್.ಅತೀಕ್, ಪೌರಾಡಳಿತ ಇಲಾಖೆ ನಿರ್ದೇಶಕಿ ಕಾವೇರಿ ಬಿ.ಬಿ. ಮಾಹಿತಿ ನೀಡಿದರು. ವಾರ್ಡ್ ಮಟ್ಟದ ಕಾರ್ಯಾಚರಣೆ ಪಡೆ ಹಾಗೂ ಬೂತ್ ಮಟ್ಟದ ಸಮಿತಿ ಮುಖ್ಯಸ್ಥರು ಮತ್ತು ಸದಸ್ಯರು, ಮುಖ್ಯಾಧಿಕಾರಿಗಳು, ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳು, ಗ್ರಾಮಲೆಕ್ಕಿಗರು, ಬಿಎಲ್‌ಒಗಳು, ಅಂಗನವಾಡಿ ಶಿಕ್ಷಕಿಯರು, ಕಾಪು ಪ್ರಥಮದರ್ಜೆ ಕಾಲೇಜಿನ ಎನ್ನೆಸ್ಸೆಸ್ ಅಧಿಕಾರಿಗಳು, ಪುರಸಭೆ ಅಧಿಕಾರಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು.

    13 ಮಂದಿ ವಿರುದ್ಧ ಪ್ರಕರಣ
    ಪಡುಬಿದ್ರಿ: ಕರೊನಾ ಸೋಂಕು ದೃಢಪಟ್ಟ ಮೇಲೆ ಬೇಜವಾಬ್ದಾರಿಯಿಂದ ವರ್ತಿಸಿದ ಆರೋಪದಲ್ಲಿ ಇನ್ನಾ ಗ್ರಾಮದ ಖಾಸಗಿ ಕಂಪನಿಯ 13 ಮಂದಿ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ. ನೌಕರರಿಗೆ ಕೋವಿಡ್ ದೃಢಪಟ್ಟ ಕಾರಣ ಜು.21ರಂದು ಕಂಪನಿಯನ್ನು ಸೀಲ್‌ಡೌನ್ ಮಾಡಲಾಗಿತ್ತು. ಆದರೂ ಕೆಲವರು ಸೀಲ್‌ಡೌನ್ ಉಲ್ಲಂಘಿಸಿ ಬೇರೆಡೆ ತೆರಳಲು ಆಸ್ಪದ ನೀಡಿದ ಬಗ್ಗೆ ಇನ್ನ್ನಾ ಗ್ರಾಪಂಗೆ ಬಂದ ದೂರಿನಂತೆ 24ರಂದು ಕಂಪನಿಗೆ ನೋಟಿಸ್ ನೀಡಲಾಗಿತ್ತು. ಅದೇ ದಿನ ಕೆಲವು ಕಾರ್ಮಿಕರನ್ನು ಕೋವಿಡ್ -19 ಪರೀಕ್ಷೆಗೂ ಒಳಪಡಿಸಲಾಗಿದ್ದು, 36 ಮಂದಿಗೆ ಸೋಂಕು ದೃಢಪಟ್ಟಿತ್ತು. ಸೋಂಕು ತಗುಲಿದ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಡುಬಿದ್ರಿ ಪಾದೆಬೆಟ್ಟು ಬಾಡಿಗೆ ಕೊಠಡಿಯಲ್ಲಿರುವ ಕಂಪನಿಯ ಇಬ್ಬರು ನೌಕರರಿಗೂ ಭಾನುವಾರ ಸೋಂಕು ದೃಢಪಟ್ಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts