More

    ಸರ್ಕಾರಕ್ಕೆ ಮತ್ತೊಂದು ಸವಾಲು: 58 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ; ಡಿಸೆಂಬರ್ 27 ರಂದು ಮತದಾನ..

    ಬೆಂಗಳೂರು: ವಿಧಾನಸಭೆ ಉಪ ಚುನಾವಣೆ ಮುಗಿದ ಬಳಿಕ ಮೇಲ್ಮನೆಯ 25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆ ಬೆನ್ನಲ್ಲೇ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು, ಸರ್ಕಾರಕ್ಕೆ ಮತ್ತೊಂದು ಸವಾಲು ಎದುರಾಗಿದೆ. 2019ರಲ್ಲಿ ಅವಧಿ ಪೂರ್ಣಗೊಂಡ ಚಿಕ್ಕಮಗಳೂರು, ಗದಗ-ಬೆಟಗೇರಿ, ಹೊಸಪೇಟೆ, ಶಿರಾ ನಗರಸಭೆ ಮತ್ತು ಅಥಣಿ, ಅಣ್ಣಿಗೇರಿ ಮತ್ತು ಬಂಕಾಪುರ ಪುರಸಭೆಗಳು ಹಾಗೂ 2021ನೇ ಸಾಲಿನಲ್ಲಿ ಅವಧಿ ಮುಕ್ತಾಯವಾಗಿರುವ 51 ನಗರ-ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಈ ಸ್ಥಳೀಯ ಸಂಸ್ಥೆಗಳಿಗೆ ಡಿಸೆಂಬರ್ 27ರಂದು ಮತದಾನ ನಡೆಯಲಿದೆ. ಐದು ನಗರಸಭೆ, 19 ಪುರಸಭೆ, 34 ಪಟ್ಟಣ ಪಂಚಾಯಿತಿಯ 1185 ವಾರ್ಡ್​ಗಳಿಗೆ ಚುನಾವಣಾ ನಡೆಯಲಿದೆ. ಆಯಾ ವ್ಯಾಪ್ತಿಯ ಜಿಲ್ಲಾಧಿಕಾರಿಗಳು ಡಿ.8ರಂದು ಚುನಾವಣಾ ಅಸೂಚನೆ ಹೊರಡಿಸಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.

    ಸದಾಚಾರ ಸಂಹಿತೆ: ಡಿ.8ರಿಂದ ಡಿ.ರವರೆಗೆ ನಗರ -ಸ್ಥಳೀಯ ಸಂಸ್ಥೆಗಳು ನಡೆಯುವ ವ್ಯಾಪ್ತಿಯಲ್ಲಿ ಸದಾಚಾರ ಸಂಹಿತೆ ಜಾರಿಯಲ್ಲಿರುತ್ತದೆ. ಮಹಾನಗರ ಪಾಲಿಕೆಗೆ 3 ಲಕ್ಷ ರೂ. ನಗರಸಭೆಗೆ 2 ಲಕ್ಷ ರೂ. ಪುರಸಭೆಗೆ 1.50 ಲಕ್ಷ ರೂ. ಹಾಗೂ ಪಟ್ಟಣ ಪಂಚಾಯಿತಿಗೆ 1 ಲಕ್ಷ ರೂ. ಚುನಾವಣಾ ವೆಚ್ಚದ ಗರಿಷ್ಠ ಮಿತಿ ನಿಗದಿಪಡಿಸಲಾಗಿದೆ.

    ನೋಟಾಕ್ಕೂ ಅವಕಾಶ ಉಂಟು: ಮತದಾರರಿಗೆ ಗೊಂದಲ ಉಂಟಾಗುವುದನ್ನು ತಪ್ಪಿಸಲು, ಮತಪತ್ರಗಳಲ್ಲಿ ಅಭ್ಯರ್ಥಿಯ ಹೆಸರಿನ ಮುಂದೆ ಅವರ ಭಾವಚಿತ್ರ ಮುದ್ರಿಸಲಾಗುತ್ತದೆ. ನೋಟಾ ಚಲಾವಣೆಗೂ ಅವಕಾಶವಿದೆ.

    ಯಾವ್ಯಾವ ಪುರಸಭೆ?: 2021ರಲ್ಲಿ ಅವಧಿ ಮುಕ್ತಾಯಗೊಂಡ ಹೆಬ್ಬಗೋಡಿ ನಗರಸಭೆ, ಜಿಗಣಿ, ಚಂದಾಪುರ, ಬಿಡದಿ, ಮಲೆಬೆನ್ನೂರು, ಕಾಪು, ಹಾರೋಗೇರಿ, ಮುಗಳಖೋಡ, ಮುನವಳ್ಳಿ, ಉಗಾರಖುರ್ದ, ಕಾರಟಗಿ, ಕುರೇಕುಪ್ಪ, ಕುರಗೋಡು, ಹಗರಿಬೊಮ್ಮನಹಳ್ಳಿ, ಮಸ್ಕಿ, ಕೆಂಬಾವಿ, ಕಕ್ಕೇರ ಪುರಸಭೆೆಗಳಿಗೆ ಚುನಾವಣೆ ಘೊಷಿಸಲಾಗಿದೆ.

    ಪಟ್ಟಣ ಪಂಚಾಯಿತಿಗಳು: ನಾಯಕನಹಟ್ಟಿ, ವಿಟ್ಲ, ಕೋಟೆಕಾರು, ಎಂ.ಕೆ.ಹುಬ್ಬಳ್ಳಿ, ಕಂಕನವಾಡಿ, ನಾಗನೂರ, ಯಕ್ಸಾಂಬ, ಚನ್ನಮ್ಮನ ಕಿತ್ತೂರು, ಅರಭಾವಿ, ಐನಾಪುರ, ಶೇಡಬಾಳ, ಚಿಂಚಿಲಿ, ಬೋರಗಾಂವ, ಕಲ್ಲೋಳ್ಳಿ, ನಲತವಾಡ, ನಿಡಗುಂದಿ, ದೇವರಹಿಪ್ಪರಗಿ, ಆಲಮೇಲ, ಮನಗೂಳಿ, ಕೋಲ್ಹಾರ, ಕಮತಗಿ, ಬೆಳಗಲಿ, ಅಮೀನಗಡ, ಗುತ್ತಲ, ಜಾಲಿ, ತಾವರಗೇರಾ, ಕೂಕನೂರ, ಭಾಗ್ಯನಗರ, ಕನಕಗಿರಿ, ಮರಿಯಮ್ಮನಹಳ್ಳಿ, ಕವಿತಾಳ, ತುರ್ವಿಹಾಳ, ಬಳಗನೂರು, ಸಿರವಾರ ಪಟ್ಟಣ ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.

    ಕೆಲವೆಡೆ ಉಪ ಚುನಾವಣೆ: ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸ್ಥಾನಗಳಿಗೆ ಉಪಚುನಾವಣೆ ಘೊಷಣೆಯಾಗಿದೆ. ಕೊಳ್ಳೇಗಾಲ ನಗರಸಭೆಯ 6 ವಾರ್ಡ್, ಹರಿಹರ -21, ದಾಂಡೇಲಿ- 18, ಗೌರಿಬಿದನೂರು -10, ಜಮಖಂಡಿ ನಗರಸಭೆಯ 9 ವಾರ್ಡ್​ಗಳಿಗೆ, ಮೂಡಲಗಿ ಪುರಸಭೆಯ 9, ಚಡಚಣ ಪಪಂನ 4, ಸೇಡಂ ಪುರಸಭೆಯ 13, ಹಾನಗಲ್ ಪುರಸಭೆಯ 19 ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ.

    ಚುನಾವಣಾ ವೇಳಾಪಟ್ಟಿ

    • ಅಧಿಸೂಚನೆ ದಿನ-ಡಿ. 8
    • ನಾಮಪತ್ರ ಸಲ್ಲಿಕೆಗೆ ಕಡೇ ದಿನ-ಡಿ.15
    • ನಾಮಪತ್ರಗಳ ಪರಿಶೀಲನೆ-ಡಿ.16
    • ಉಮೇದುವಾರಿಕೆ ವಾಪಸ್-ಡಿ. 18
    • ಮತದಾನ ದಿನ-ಡಿ. 27
    • ಮತದಾನ ಸಮಯ: ಬೆಳಗ್ಗೆ 7-ಸಂಜೆ 5.
    • ಅವಶ್ಯವಿದ್ದಲ್ಲಿ ಮರುಮತದಾನ -ಡಿ.29
    • ಮತ ಎಣಿಕೆ ದಿನ-ಡಿ. 30

    1264 ಗ್ರಾಪಂ ಸ್ಥಾನಕ್ಕೆ ಚುನಾವಣೆ

    ರಾಜ್ಯದ ಅವಧಿ ಮುಕ್ತಾಯವಾಗುವ, ನ್ಯಾಯಾಲಯ ಪ್ರಕರಣ, ಇತರ ಕಾರಣಗಳಿಂದ ಸದಸ್ಯರು ಆಯ್ಕೆಯಾಗದ ಹಾಗೂ ನಾನಾ ಕಾರಣಗಳಿಂದ ತೆರವಾಗಿರುವ 1264 ಗ್ರಾಪಂ ಸದಸ್ಯ ಸ್ಥಾನಗಳಿಗೆ ರಾಜ್ಯ ಚುನಾವಣಾ ಆಯೋಗ ವೇಳಾ ಪಟ್ಟಿ ಪ್ರಕಟಿಸಿದೆ. 2022ರ ಮಾರ್ಚ್ ತಿಂಗಳ ಅವಧಿಯಲ್ಲಿ ಅವಧಿ ಮುಕ್ತಾಯವಾಗುವ 12 ಜಿಲ್ಲೆಗಳ 44 ಗ್ರಾಮ ಪಂಚಾಯಿತಿಗಳ 633 ಸದಸ್ಯ ಸ್ಥಾನ ಹಾಗೂ ನ್ಯಾಯಾಲಯ ಪ್ರಕರಣ, ಇತರ ಕಾರಣಗಳಿಂದ ಸಾರ್ವತ್ರಿಕ ಚುನಾವಣೆ ಯಲ್ಲಿ ಸದಸ್ಯರು ಆಯ್ಕೆಯಾಗದ 8 ಜಿಲ್ಲೆಯ 13 ಗ್ರಾ.ಪಂ.ನ 245 ಸ್ಥಾನಗಳು ಸೇರಿ 878 ಸದಸ್ಯ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. 2021ನೇ ಸಾಲಿನಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ 31 ಜಿಲ್ಲೆಗಳ 386 ಸದಸ್ಯ ಸ್ಥಾನಗಳಿಗೂ ಚುನಾವಣೆ ನಿಗದಿಯಾಗಿದೆ.

    ನೀತಿ ಸಂಹಿತೆ ಜಾರಿ: ಡಿಸೆಂಬರ್ 13 ರಿಂದ 30ರ ವರೆಗೆ ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಜಾರಿಯಲ್ಲಿರಲಿದೆ.

    ಚುನಾವಣೆ ಯಾವಾಗ?

    • ಅಧಿಸೂಚನೆ ದಿನಾಂಕ: ಡಿ.13
    • ನಾಮಪತ್ರ ಸಲ್ಲಿಕೆಗೆ ಕಡೇ ದಿನ-ಡಿ.17
    • ನಾಮಪತ್ರ ಪರಿಶೀಲನೆ-ಡಿ.18
    • ಉಮೇದುವಾರಿಕೆ ವಾಪಸ್-ಡಿ.20
    • ಮತದಾನ ದಿನ-ಡಿ.27
    • ಅವಶ್ಯವಿದ್ದರೆ ಮರುಮತದಾನ-ಡಿ. 29
    • ಮತದಾನ ಸಮಯ- ಬೆಳಗ್ಗೆ 7-ಸಂಜೆ 5
    • ಮತ ಎಣಿಕೆ ದಿನ-ಡಿ. 30

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts