More

    ಹಲ್ಲಿ ಬಿದ್ದಿದ್ದ ಹಾಲು ಕುಡಿದು 90 ಮಕ್ಕಳು ಅಸ್ವಸ್ಥ

    ಆಸ್ಪತ್ರೆಗೆ ದಾಖಲು ಉಳ್ಳಾಗಡ್ಡಿ-ಖಾನಾಪುರದಲ್ಲಿ ಘಟನೆ ಪಾಲಕರ ಆಕ್ರೋಶ

    ಉಳ್ಳಾಗಡ್ಡಿ-ಖಾನಾಪುರ: ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆ, ಸರ್ಕಾರಿ ಪ್ರಾಥಮಿಕ ಉರ್ದು ಶಾಲೆ ಹಾಗೂ ಉರ್ದುಶಾಲೆಯ ಸುಮಾರು 90 ವಿದ್ಯಾರ್ಥಿಗಳು ಗುರುವಾರ ಹಲ್ಲಿ ಬಿದ್ದಿದ್ದ ಹಾಲು ಸೇವಿಸಿ ಅಸ್ವಸ್ಥಗೊಂಡ ಘಟನೆ ನಡೆಯಿತು.

    ತಕ್ಷಣ ವಿದ್ಯಾರ್ಥಿಗಳನ್ನು ಸರ್ಕಾರಿ ಆಂಬುಲೆನ್ಸ್, ಖಾಸಗಿ ವಾಹನಗಳಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಎಲ್ಲ ವಿದ್ಯಾರ್ಥಿಗಳು ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸಂಕೇಶ್ವರ ಆಸ್ಪತ್ರೆಗೆ ಬಿಇಒ ಪ್ರಭಾವತಿ ಪಾಟೀಲ, ಕೆಲ ಅಧಿಕಾರಿಗಳು ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.

    ಒಂದೇ ಆವರಣದಲ್ಲಿರುವ ಎರಡು ಶಾಲೆಗಳಿಗೆ ಹಾಲು ಹಂಚಿದ ಬಳಿಕ ಕನ್ನಡ ಗಂಡು ಮಕ್ಕಳ ಶಾಲೆಗೆ ಹಾಲು ಕೊಡುವ ಪಾತ್ರೆಯಲ್ಲಿ ಹಲ್ಲಿ ಪತ್ತೆಯಾಗಿದ್ದರಿಂದ ತಕ್ಷಣ ಶಿಕ್ಷಕರು ಮಕ್ಕಳಿಗೆ ಹಾಲು ಸೇವಿಸದಂತೆ ತಿಳಿಸಿದ್ದಾರೆ. ಇದರಿಂದ ಉಳಿದ ಮಕ್ಕಳು ಹಾಲು ಸೇವಿಸಿಲ್ಲ.

    ಸರ್ಕಾರಿ ಶಾಲೆಗೆ ಹುಕ್ಕೇರಿಯಿಂದ ಬರುತ್ತಿದ್ದ ಹಾಲಿನಲ್ಲಿ ಹಲ್ಲಿ ಬಿದ್ದಿತ್ತೋ? ಅಥವಾ ಶಾಲೆಯಲ್ಲೇ ಬಿದ್ದಿತ್ತೋ? ಎಂಬ ಪ್ರಶ್ನೆ ಉದ್ಭವಾಗಿದ್ದು, ಸತ್ತ ಹಲ್ಲಿ ವೀಕ್ಷಿಸಿದಾಗ ಹಲ್ಲಿ ಬೆಂದು ದಪ್ಪವಾಗಿದ್ದರಿಂದ ಹಲ್ಲಿ ಮೊದಲೇ ಹಾಲಿನಲ್ಲಿ ಬಿದ್ದಿದೆ ಎಂದು ಶಂಕಿಸಲಾಗಿದೆ. ಹಾಲಿನಲ್ಲಿ ಹಲ್ಲಿ ಬಿದ್ದು ಅವಾಂತರ ಸೃಷ್ಟಿಸಿದ ಹಿನ್ನೆಲೆಯಲ್ಲಿ ಮೂರೂ ಶಾಲೆಗಳಿಗೆ ಗುರುವಾರ ರಜೆ ಘೋಷಿಸಲಾಯಿತು.

    ಪಾಲಕರ ಆಕ್ರೋಶ: ಶಿಕ್ಷಕರು, ಸಂಬಂಧಿತ ಅಧಿಕಾರಿಗಳು ಹಾಗೂ ಮೇಲಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು. ಹಲ್ಲಿ ಬಿದ್ದು ವಿಷವಾಗಿದ್ದ ಹಾಲು ಕುಡಿದ ಮಕ್ಕಳು ಅಪಾಯಕ್ಕೀಡಾದರೆ ಹೊಣೆ ಯಾರು ಎಂದು ಪಾಲಕರು ಪ್ರಶ್ನಿಸಿದರು. ನಮ್ಮ ಮಕ್ಕಳಿಗೆ ಏನಾದರೂ ಆದರೆ ಮರಳಿ ಕೊಡುವಿರೇನು? ಎಂದಿರುವ ಅವರು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts