More

    ಲೈವ್ ಸ್ಟ್ರೀಮ್ ಸ್ಟುಡಿಯೋ: ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ 25 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣ

    ಪ್ರಕಾಶ್ ಮಂಜೇಶ್ವರ, ಮಂಗಳೂರು
    ಕೋವಿಡ್ ಕಾಲದಲ್ಲಿ ಬಹುತೇಕ ಸ್ತಬ್ಧವಾಗಿದ್ದ ಸಾಮೂಹಿಕ ಚಟುವಟಿಕೆಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತಿವೆ. ಆದರೂ ಜನರ ಓಡಾಟ ಸಹಜಸ್ಥಿತಿಗೆ ಮರಳಲು ವರ್ಷಗಳೇ ಬೇಕು. ಇಂತಹ ಕಾಲದಲ್ಲೂ ಜಗತ್ತಿನಾದ್ಯಂತ ಕೊಂಕಣಿಗರು ಹಾಗೂ ಕೊಂಕಣಿ ಅಭಿಮಾನಿಗಳನ್ನು ಸುಲಭವಾಗಿ ತಲುಪುವ ಉದ್ದೇಶದಿಂದ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಅತ್ಯಾಧುನಿಕ ಲೈವ್ ಸ್ಟ್ರೀಮ್(ನೇರ ಪ್ರಸಾರದ) ಸ್ಟುಡಿಯೋ ರೂಪು ತಳೆದಿದೆ.

    ಲೆಕ್ಕಪರಿಶೋಧಕ ನಂದಗೋಪಾಲ ಶೆಣೈ ತಮ್ಮ ಅಜ್ಜ ನಂದಗೋಪಾಲ ವಿ.ಶೆಣೈ ಕಣ್ಣೂರು ಮತ್ತು ಅಜ್ಜಿ ದಿ.ಲಕ್ಷ್ಮೀ ಅವರ ಹೆಸರಿನಲ್ಲಿ 25 ಲಕ್ಷ ರೂ ವೆಚ್ಚದಲ್ಲಿ ಈ ಸ್ಟುಡಿಯೂ ನಿರ್ಮಿಸಿ, ಕೇಂದ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ನಿರ್ವಹಣೆ ವೆಚ್ಚವನ್ನು ಅವರೇ ಭರಿಸುತ್ತಾರೆ. ಕೊಂಕಣಿ ಭಾಷೆ, ಸಂಸ್ಕೃತಿ, ಸಾಹಿತ್ಯ, ಸಾಂಸ್ಕೃತಿಕ ಸೊಗಡನ್ನು ಬಿಂಬಿಸುವ ಕಾರ್ಯಕ್ರಮ, ಲೈವ್ ಕಾನ್ಫರೆನ್ಸ್, ಸಂದರ್ಶನ, ಮಾತುಕತೆ ಮುಂತಾದ ಕಾರ್ಯಕ್ರಮಗಳನ್ನು ಈ ಸ್ಟ್ಟುಡಿಯೋದಲ್ಲಿ ನಿರ್ವಹಿಸಬಹುದು. ಇಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಜಗತ್ತಿನ ವಿವಿಧೆಡೆ ನೆಲೆಸಿರುವವರು ಮೊಬೈಲ್‌ನಲ್ಲಿ ವೀಕ್ಷಿಸಬಹುದು. ದ್ವಿಮುಖ ಸಂವಹನ ಅವಕಾಶ ಸಂದರ್ಭ ಜನರು ಆನ್‌ಲೈನ್ ಚರ್ಚೆ, ಸಂವಾದದಲ್ಲಿಯೂ ಭಾಗವಹಿಸಬಹುದು. ಹಿಂದೆ ಕಾರ್ಯಕ್ರಮ ನಡೆಯುವ ಸಭಾಂಗಣದಲ್ಲಿ ಉಪಸ್ಥಿತರಿದ್ದ ಜನರಿಗಷ್ಟೇ ಈ ಅವಕಾಶ ಇತ್ತು.

    ಸಾಂಸ್ಕೃತಿಕ ವಿನಿಮಯಕ್ಕೆ ಪೂರಕ: ಭಾರತದಲ್ಲಿ ಸುಮಾರು 50 ಲಕ್ಷ ಕೊಂಕಣಿಗರು ಇದ್ದಾರೆ. ಈ ಪೈಕಿ ಬಹುಸಂಖ್ಯಾತ(ಶೇ.50) ಕೊಂಕಣಿಗರು ಕರ್ನಾಟಕದಲ್ಲಿದ್ದಾರೆ. ಗೋವಾದಲ್ಲಿ ಈ ಸಮುದಾಯದವರ ಸಂಖ್ಯೆ ಕರ್ನಾಟಕಕ್ಕಿಂತ ಕಡಿಮೆ. ಭಟ್ಕಳದ ನವಾಯತರು, ಕ್ರಿಶ್ಚಿಯನರು, ಬುಡಕಟ್ಟು ಜನಾಂಗದ ಸಿದ್ದಿಗಳು, ಸಹಿತ 42ಕ್ಕೂ ಅಧಿಕ ಸಮುದಾಯಗಳ ಜನರು ಮಾತನಾಡುವ ಕೊಂಕಣಿ ಭಾಷೆ ವೈವಿಧ್ಯಮಯ ಸಂಸ್ಕೃತಿ, ಸಾಂಸ್ಕೃತಿಕ ಬದುಕಿನ ಹಿನ್ನೆಲೆ ಹೊಂದಿದೆ. ಕೊಂಕಣಿ ಮಾತನಾಡುವ ವಿವಿಧ ವಿಭಾಗಗಳ ಜನರ ಕಾರ್ಯಕ್ರಮಗಳನ್ನು ಲೈವ್ ಸ್ಟ್ರೀಮ್ ಸ್ಟುಡಿಯೋದಲ್ಲಿ ಪ್ರಸಾರ ಮಾಡುವ ಮೂಲಕ ಕೊಂಕಣಿ ಭಾಷೆಯ ವಿಸ್ತಾರ, ಶಬ್ದ ಭಂಡಾರ, ಸಾಂಸ್ಕೃತಿಕ ವಿನಿಮಯ ಹೆಚ್ಚಲಿದೆ ಎಂದು ನಿರೀಕ್ಷಿಸಲಾಗಿದೆ.

    ಅತ್ಯಾಧುನಿಕ ಪರದೆ, ಧ್ವನಿಮುದ್ರಣ ವ್ಯವಸ್ಥೆ: ಹಸಿರು ಪರದೆ ಮತ್ತು ಹಸಿರು ಮ್ಯಾಟ್ ಸಹಿತ ಅತ್ಯಾಧುನಿಕ ಪರದೆ, ಧ್ವನಿಮುದ್ರಣ ವ್ಯವಸ್ಥೆಯನ್ನು ನೂತನ ವಿಶ್ವ ಕೊಂಕಣಿ ಕೇಂದ್ರದ ಲೈವ್ ಸ್ಟ್ರೀಮ್ ಸ್ಟುಡಿಯೋ ಹೊಂದಿದೆ. ಸೌಂಡ್ ಪ್ರೂಫ್ ಸ್ಟುಡಿಯೋ ಆನ್‌ಲೈನ್ ಕಾನ್ಫರೆೆನ್ಸ್ ವ್ಯವಸ್ಥೆಯನ್ನೂ ಹೊಂದಿದೆ. ವಿಶ್ವ ಕೊಂಕಣಿ ಕಾರ್ಯಕ್ರಮಗಳಿಗೆ ಮಾತ್ರವಲ್ಲದೆ ಸಾರ್ವಜನಿಕರ ಕಾರ್ಯಕ್ರಮಗಳಿಗೂ ಲಭ್ಯವಿದೆ.

    ಕೋವಿಡ್ ಮಹಾಮಾರಿಯಿಂದಾಗಿ ದೂರವಾಗಿರುವ ಸಮಾಜವನ್ನು ಹತ್ತಿರ ತರಲು ತಂತ್ರಜ್ಞಾನ ಸಹಕಾರಿ. ಈ ನಿಟ್ಟಿನಲ್ಲಿ ವಿಶ್ವ ಕೊಂಕಣಿ ಕೇಂದ್ರದ ಚಟುವಟಿಕೆಗಳು ಕೊಂಕಣಿ ಸಮಾಜ ಮನೆ ಮನೆಗೆ ತಲುಪುವಂತೆ ಈ ನೇರ ಪ್ರಸಾರ ಸ್ಟುಡಿಯೋವನ್ನು ನಮ್ಮ ಹಿರಿಯರ ಸ್ಮರಣೆಯಲ್ಲಿ ನಿರ್ಮಿಸಲಾಗಿದೆ.
    -ನಂದಗೋಪಾಲ ಜಿ.ಶೆಣೈ ದಾನಿ, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts