More

    ಸಾಹಿತ್ಯ ಜಾತ್ರೆಗೆ ಸಿದ್ಧತೆ ಜೋರು: ಮದುವಣಗಿತ್ತಿಯಂತೆ ಸಿಂಗಾರಗೊಂಡ ಹನುಮಸಾಗರ

    ಹನುಮಸಾಗರ: ಎರಡು ದಿನ (ಮಾ.5-6) ನಡೆಯಲಿರುವ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗ್ರಾಮವು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಸಾಹಿತ್ಯಾಸಕ್ತರನ್ನು ಸ್ವಾಗತಿಸಲು ಕಸಾಪ ಸಕಲ ಸಿದ್ಧತೆ ಮಾಡಿಕೊಂಡಿದೆ.

    ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಸಮ್ಮೇಳನ ನಡೆಯಲಿದ್ದು, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ದಿ.ಪಿ.ಬಿ. ಧುತ್ತರಗಿ ಮಹಾವೇದಿಕೆ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ದಿ.ಎಚ್.ಟಿ.ಅರಸ್ ಸಭಾಮಂಟಪ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಮಾ.5 ರಂದು ಬೆಳಗ್ಗೆ ರಾಷ್ಟ್ರಧ್ವಜಾರೋಹಣ, ಪರಿಷತ್ ಧ್ವಜಾರೋಹಣ, ಕನ್ನಡ ಧ್ವಜಾರೋಹಣ, ನಂತರ ಸಮ್ಮೇಳನ ದ್ವಾರಗಳ ಉದ್ಘಾಟನೆ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಕುಂಭ, ಕಳಸ, ವಿವಿಧ ಕಲಾತಂಡ ಹಾಗೂ ಸಕಲ ವಾದ್ಯಮೇಳದೊಂದಿಗೆ ಸಮ್ಮೇಳನಾಧ್ಯಕ್ಷ ಡಾ.ಉದಯಶಂಕರ ಪುರಾಣಿಕ ಮೆರವಣಿಗೆ ನಡೆಯಲಿದೆ. ನಂತರ ಕಾರ್ಯಕ್ರಮದ ಉದ್ಘಾಟನೆ, ವಿವಿಧ ಗೋಷ್ಠಿಗಳು ರಾತ್ರಿ 9ರವರೆಗೆ ನಡೆಯಲಿವೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮಾ.6 ರಂದು ಗೋಷ್ಠಿ, ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಸಮಾರೋಪ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ.

    ದವಸ-ಧಾನ್ಯ ಸಂಗ್ರಹ: ಸಮ್ಮೇಳನದಲ್ಲಿ ಊಟದ ವ್ಯವಸ್ಥೆಯ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಲು ಕೊನೇ ಕ್ಷಣದಲ್ಲಿ ಗ್ರಾಪಂ ನಿರಾಕರಿಸಿದೆ. ಸಮ್ಮೇಳನ ನಡೆಸಲು ಅನುದಾನದ ಕೊರತೆ ಎದುರಿಸುತ್ತಿರುವ ಕಸಪಾ ಪದಾಧಿಕಾರಿಗಳು ದಾನಿಗಳಿಂದ ದವಸಧಾನ್ಯ ಹಾಗೂ ಹಣ ಸಂಗ್ರಹಕ್ಕೆ ಮುಂದಾಗಿದ್ದಾರೆ. ಲಭ್ಯವಿರುವ ಅನುದಾನದಲ್ಲಿಯೇ ಅಚ್ಚುಕಟ್ಟಾಗಿ ಸಮ್ಮೇಳನ ನಡೆಸುವ ಉದ್ದೇಶದಿಂದ ಉಟದ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ. ಭಾನುವಾರ ಬೆಳಗ್ಗೆಯ ಉಪಾಹಾರಕ್ಕೆ ಉಪ್ಪಿಟ್ಟು, ಶೇಂಗಾ ಚಟ್ನಿ, ಮಧ್ಯಾಹ್ನದ ಊಟಕ್ಕೆ ಹುಗ್ಗಿ, ಬದನೆಕಾಯಿ ಪಲ್ಯ, ಅನ್ನಾ ಸಾಂಬರ್, ರಾತ್ರಿ ಊಟಕ್ಕೆ ಅನ್ನ ಸಾಂಬರ್, ಸೋಮವಾರ ಬೆಳಗ್ಗೆ ಅವಲಕ್ಕಿ ಒಗ್ಗರಣೆ, ಮಧ್ಯಾಹ್ನ ಸಜ್ಜಕ, ಬದನೆಕಾಯಿ ಪಲ್ಯ, ಅನ್ನ ಸಾಂಬರ್ ಅಡುಗೆ ಸಿದ್ಧತೆಗೆ ಸಾಮಗ್ರಿ ಹಾಗೂ ದವಸಧಾನ್ಯ ಸಂಗ್ರಹಿಸಲಾಗುತ್ತಿದೆ.

    ಕಸಾಪ ಎಡವಟ್ಟು : ಸಮ್ಮೇಳನ ಮೂರ‌್ನಾಲ್ಕು ದಿನ ಬಾಕಿ ಇದ್ದಾಗ ತರಾತುರಿಯಲ್ಲಿ ಜಿಲ್ಲಾ ಕಸಾಪ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದೆ. ಆದರೆ, ಇತ್ತೀಚೆಗೆ ನಿಧನರಾದ ಕಲಾವಿದ ರಾಮಣ್ಣ ಚೌಡಕಿ ಹೆಸರನ್ನು ಕಾರ್ಯಕ್ರಮವೊಂದರ ಪಟ್ಟಿಯಲ್ಲಿ ಪ್ರಕಟಿಸಿ ಎಡವಟ್ಟು ಮಾಡಿಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts