More

    12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾ.4,5ಕ್ಕೆ

    ಚನ್ನಗಿರಿ: 12 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾಲೂಕಿನ ಬಸವಾಪಟ್ಟಣ ಹೋಬಳಿ ಕೆಂಗಾಪುರ ಗ್ರಾಮದ ಶ್ರೀ ರಾಮಲಿಂಗೇಶ್ವರ ವಿದ್ಯಾಸಂಸ್ಥೆ ಆವರಣದಲ್ಲಿ ಮಾರ್ಚ್ 4 ಮತ್ತು 5ರಂದು ವಿಜೃಂಭಣೆಯಿಂದ ನಡೆಸಲಾಗುವುದು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ತಿಳಿಸಿದರು. ತಾಲೂಕಿನ ಕೆಂಗಾಪುರ ಗ್ರಾಮದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದರು.
    ಸಮ್ಮೇಳನದ ಅಧ್ಯಕ್ಷರಾಗಿ ಚನ್ನಗಿರಿ ತಾಲೂಕು ಸಿದ್ದನಮಠ ಜಾನಪದ ಕಲಾವಿದ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುಗಧರ್ಮ ರಾಮಣ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಗ್ರಾಮಸ್ಥರು ಎಲ್ಲ ತರಹದ ಸಹಕಾರ ನೀಡುವ ಭರವಸೆ ಕೊಟ್ಟಿದ್ದಾರೆ. ಕಾರ್ಯಕ್ರಮದ ಊಟದ ವ್ಯವಸ್ಥೆಯನ್ನು ಗ್ರಾಮದ ಪಿ.ಟಿ. ಸಿದ್ದಪ್ಪ ಹಾಗೂ ಶಾಮಿಯಾನ ವ್ಯವಸ್ಥೆಯನ್ನು ಬಿಜೆಪಿ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಅನಿಲ್‌ನಾಯ್ಕ ವಹಿಸಿಕೊಂಡಿದ್ದಾರೆ ಎಂದರು.
    ಅಂದು ಗ್ರಾಮದ ಎಲ್ಲ ಬೀದಿಗಳಲ್ಲಿ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ನಡೆಸಲಾಗುತ್ತದೆ. ಸಮ್ಮೇಳನದಲ್ಲಿ ಒಟ್ಟು 5 ಗೋಷ್ಠಿಗಳು ನಡೆಯಲಿದೆ. ಯುವ ಕವಿಗಳು, ಬರಹಗಾರರಿಗೆ ಮತ್ತು ಪುಸ್ತಕ ಅಂಗಡಿಗಳಿಗೆ ಅವಕಾಶ ನೀಡಲಾಗಿದೆ.
    ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ದಾನಿಬಾಯಿ, ಸದಸ್ಯ ಅಣ್ಣೋಜಿರಾವ್, ತಾಲೂಕು ಕಸಾಪ ಅಧ್ಯಕ್ಷ ಎಲ್.ಜಿ. ಮಧುಕುಮಾರ್, ಮಾಜಿ ಅಧ್ಯಕ್ಷ ಎಂ.ಯು. ಚನ್ನಬಸಪ್ಪ, ಮಾಜಿ ಜಿಲ್ಲಾಧ್ಯಕ್ಷ ಉಜ್ಜಿನಪ್ಪ, ಜಿಲ್ಲಾ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ, ಜಿಪಂ ಮಾಜಿ ಸದಸ್ಯ ತೇಜಸ್ಸಿ ಪಟೇಲ್, ಪಿ.ಟಿ. ಸಿದ್ದಪ್ಪ, ಅನಿಲ್‌ಕುಮಾರ್, ಗೌರವಾಧ್ಯಕ್ಷ ದಿಳ್ಳೇಪ್ಪ, ರಾಮಲಿಂಗೇಶ್ವರ ಸಂಸ್ಥೆ ಅಡಳಿತಾಧಿಕಾರಿ ರಘು ದೊಡ್ಡಮನಿ ಮತ್ತಿತರರಿದ್ದರು.
    ಸಮ್ಮೇಳನಾಧ್ಯಕ್ಷರಾಗಿ ಯುಗಧರ್ಮ ರಾಮಣ್ಣ:
    ತಾಲೂಕಿನ ಬಸವಾಪಟ್ಟಣ ಹೋಬಳಿ ವ್ಯಾಪ್ತಿಯ ಕೆಂಗಾಪುರ ಗ್ರಾಮದಲ್ಲಿ ಸೋಮವಾರ ನಡೆದ ಜಿಲ್ಲಾ ಕಸಾಪ ಸಭೆಯಲ್ಲಿ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನಾಧ್ಯಕ್ಷರಾಗಿ ತಾಲೂಕಿನ ಸಿದ್ದನಮಠ ಗ್ರಾಮದ ಯುಗಧರ್ಮ ರಾಮಣ್ಣರನ್ನು ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
    ಸಮ್ಮೇಳನಾಧ್ಯಕ್ಷರ ಪರಿಚಯ:
    ತಾಲೂಕಿನ ಸಿದ್ದನಮಠ ಗ್ರಾಮದ ತಂದೆ ಕೆಂಚಪ್ಪ ತಾಯಿ ಹುಚ್ಚಮ್ಮ ಮಗನಾಗಿ 10-06.1938ರಲ್ಲಿ ಜನಿಸಿದರು. ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ 3 ನೇ ತರಗತಿ ವಿದ್ಯಾಭ್ಯಾಸ ಮಾಡಿ ಮನೆ ಸಮಸ್ಯೆಗೆ ಓದುವುದನ್ನು ಬಿಟ್ಟರು. ಚಿಕ್ಕ ವಯಸ್ಸಿನಿಂದ ಸಾಹಿತ್ಯ, ಬರಹ, ಜಾನಪದ ಕಲೆಗಳಲ್ಲಿ ಆಸಕ್ತಿ ಹೊಂದಿ ಗ್ರಾಮದಲ್ಲಿ ನಡೆಯುವ ನಾಟಕ, ಹರಿಕಥೆ, ಜನಪದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಅಕ್ಷರಾಭ್ಯಾಸ ಕಡಿಮೆ ಇದ್ದರೂ ಬರವಣಿಗೆ ಮಾಡುತ್ತಾ ಬಂದರು.
    ಆರು ಸಾವಿರ ಜಾನಪದ ತ್ರಿಪದಿಗಳು, ನಾಲ್ಕು ಸಾವಿರ ತೋಚಿದ್ ಗೀಚು, 3010 ವಚನಧರ್ಮ, 13.500 ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜಾನಪದ ಹಾಡು ಹಾಡಿದ್ದಾರೆ, ರಾಜ್ಯ ಸರ್ಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಕನಕಶ್ರೀ ಪ್ರಶಸ್ತಿ, ಸಿರಿಗೆರೆ ಜಾನಪದ ಜಂಗಮ ಪ್ರಶಸ್ತಿ, ಹೆಚ್.ಡಿ. ದೇವೆಗೌಡ ಪ್ರತಿಷ್ಠಾನ ಪ್ರಶಸ್ತಿ ಪಡೆದಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts