More

    ಸಾಹಿತ್ಯ, ಅನುವಾದದಲ್ಲಿ ‘ಅಧ್ಯಯನಾ’

    ಮೂಡುಬಿದಿರೆ: ತಂದೆಯ ಸಾಹಿತ್ಯ ಕೃಷಿಯಿಂದ ಸ್ಫೂರ್ತಿ ಪಡೆದ 16 ವರ್ಷದ ಬಾಲಕಿ ರಜಾ ದಿನಗಳಲ್ಲಿ ಕನ್ನಡದ ಪುಸ್ತಕವನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡುವ ಮೂಲಕ ಗಮನ ಸೆಳೆದಿದ್ದಾಳೆ.
    ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನ ಕಲಾ ವಿಭಾಗದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ, ಶಿಕ್ಷಕ ಅರವಿಂದ ಚೊಕ್ಕಾಡಿ- ಉಪನ್ಯಾಸಕಿ ಪ್ರಮೀಳಾ ದಂಪತಿಯ ಪುತ್ರಿ ಅಧ್ಯಯನಾ ಇಂಥ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ. ವಿಜಯಪುರದ ಚಾಣಕ್ಯ ಕರಿಯರ್ ಅಕಾಡೆಮಿಯಿಂದ ಪ್ರಕಟಿತ, ಕನ್ನಡದಲ್ಲಿ ಮೂರು ಲಕ್ಷಕ್ಕೂ ಅಧಿಕ ಪ್ರತಿಗಳು ಪ್ರಕಟಗೊಂಡಿರುವ ‘ಕರ್ನಾಟಕ ಕಣಜ-ಜನರಲ್ ನಾಲೆಡ್ಜ್’ ಪುಸ್ತಕದ ಕರ್ನಾಟಕ ವಿಭಾಗವನ್ನು ಅಧ್ಯಯನಾ ಆಂಗ್ಲ ಭಾಷೆಗೆ ತರ್ಜುಮೆ ಮಾಡಿದ್ದಾರೆ. ಪುಸ್ತಕ ಒಂದು ಸಾವಿರ ಪುಟಗಳನ್ನು ಒಳಗೊಂಡಿದ್ದು, ಪುಸ್ತಕದಲ್ಲಿರುವ ಕರ್ನಾಟಕ ವಿಭಾಗವನ್ನು ತರ್ಜುಮೆ ಮಾಡಿದಾಗ ಕೈಬರಹದಲ್ಲಿ 350 ಪುಟಗಳಾಗಿವೆ. ಮುದ್ರಣದಲ್ಲಿ ಇದು 200 ಪುಟಗಳಷ್ಟಾಗಬಹುದು ಎನ್ನುವುದು ಪ್ರಕಾಶಕರ ಅಭಿಪ್ರಾಯ. ಲಾಕ್‌ಡೌನ್ ಸಂದರ್ಭ ದ್ವಿತೀಯ ಪಿಯುಸಿ ಆನ್‌ಲೈನ್ ತರಗತಿಗಳ ಮಧ್ಯೆ ಬಿಡುವು ಸಿಕ್ಕಾಗ ಅಧ್ಯಯನಾ ಪುಸ್ತಕ ತರ್ಜುಮೆ ಮಾಡಿದ್ದಾರೆ.

    ಕೇಳಿದ್ದು ಸಲಹೆ, ಸ್ವೀಕರಿಸಿದ್ದು ಸವಾಲು
    ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪದವೀಧರ ಸಹಶಿಕ್ಷಕ ಅರವಿಂದ ಚೊಕ್ಕಾಡಿ ಸಾಹಿತ್ಯ ಕ್ಷೇತ್ರದಲ್ಲೂ ಕೆಲಸ ಮಾಡುತ್ತಿದ್ದಾರೆ. ಚಾಣಕ್ಯ ಪ್ರಕಾಶನ ಚೊಕ್ಕಾಡಿಯವರ ಹಲವು ಪುಸ್ತಕಗಳನ್ನು ಪ್ರಕಟಿಸಿದೆ. ‘ಕರ್ನಾಟಕ ಕಣಜ-ಜನರಲ್ ನಾಲೆಡ್ಜ್’ ಪುಸ್ತಕದ ಕರ್ನಾಟಕ ವಿಭಾಗವನ್ನು ತರ್ಜುಮೆ ಮಾಡುವಂತೆ ಚೊಕ್ಕಾಡಿಯವರ ಬಳಿ ಪ್ರಕಾಶನ ಸಂಸ್ಥೆ ಕೋರಿಕೆಯಿಟ್ಟಿತು. ಶೈಕ್ಷಣಿಕ ಕೆಲಸದಲ್ಲಿ ಬ್ಯುಸಿಯಾಗಿದ್ದ ಚೊಕ್ಕಾಡಿಯವರು ಮಗಳು ಅಧ್ಯಯನಾ ಬಳಿ ಸಲಹೆ ಕೇಳಿದಾಗ ತರ್ಜುಮೆ ಮಾಡಲು ಮುಂದಾಗಿದ್ದರು.

    ಕನ್ನಡ ಮಾಧ್ಯಮದಲ್ಲಿ ಅಧ್ಯಯನ
    ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಇಂಗ್ಲೀಷ್ ಕಷ್ಟ ಎಂಬ ಭಾವನೆಯನ್ನು ಅಧ್ಯಯನಾ ಸುಳ್ಳಾಗಿಸಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಕಲಿತು ಉತ್ತಮ ಅಂಕ ಪಡೆದು ಪಿಯುಸಿ ಕಲಾ ವಿಭಾಗದಲ್ಲಿ ಕಲಿಯುತ್ತಿರುವ ಈಕೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಯಲ್ಲಿರುವವರಿಗೆ ಅನುಕೂಲಕರ ಪುಸ್ತಕ ತರ್ಜುಮೆ ಮಾಡಿರುವುದು ಗಮನಾರ್ಹ. ಮೂಡುಬಿದಿರೆಯ ಪ್ರಾಂತ್ಯ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಕಲಿತಿರುವ ಈಕೆ ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.91 ಅಂಕಗಳನ್ನು ಪಡೆದಿದ್ದರು.

    ನನ್ನ ಸಾಹಿತ್ಯ ಆಸಕ್ತಿಗೆ ತಂದೆಯ ಕೆಲಸವೇ ಸ್ಫೂರ್ತಿ. ಶಾಲಾ ಕಾಲೇಜು ದಿನಗಳಲ್ಲಿ ಪಠ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕಾದ ಕಾರಣ ಸಾಹಿತ್ಯ ಕೆಲಸ ಪರಿಪೂರ್ಣವಾಗಿ ಮಾಡಲು ಕಷ್ಟ. ರಜಾದಿನಗಳಲ್ಲಿ ಸಾಹಿತ್ಯದ ಕೆಲಸಗಳನ್ನು ಮಾಡುತ್ತಿದ್ದೇನೆ. ಪುಸ್ತಕ ತರ್ಜುಮೆ ಮಾಡುವಾಗ ಕನ್ನಡಕ್ಕೆ ಸರಿಯಾದ ಪದಗಳು ಸಿಗದಿದ್ದಾಗ ಡಿಕ್ಷನರಿ ನೋಡಿದ್ದೇನೆ. ತಂದೆಯ ಸಲಹೆ ಪಡೆದು ನನ್ನದೇ ರೀತಿ ತರ್ಜುಮೆ ಮಾಡಿದ್ದೇನೆ.
    ಅಧ್ಯಯನಾ, ಕರ್ನಾಟಕ ಕಣಜ ಪುಸ್ತಕದ ಅನುವಾದಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts