More

    ಅತಿಥಿ ಉಪನ್ಯಾಸಕರ ಬೇಡಿಕೆ ಆಲಿಸಿ

    ಬಾಗಲಕೋಟೆ: ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಆಲಿಸಿ, ವಿದ್ಯಾರ್ಥಿಗಳ ತರಗತಿಗಳು ಸುಗಮವಾಗಿ ನಡೆಸುವಂತೆ ಮಾಡಬೇಕು ಎಂದು ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಹಳೇ ನಗರದ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

    ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಕಾರ್ಯಕರ್ತರು ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಬಳಿಕ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಡಳಿತ ಭವನ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

    ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಉನ್ನತ ಬೇವಿನಕಟ್ಟಿ ಮಾತನಾಡಿ, ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದರಿಂದಾಗಿ ಪದವಿ ಕಾಲೇಜುಗಳಲ್ಲಿ ಸರಿಯಾಗಿ ತರಗತಿಗಳು ನಡೆಯದೆ ವಿದ್ಯಾರ್ಥಿಗಳ ಪಠ್ಯ ಚಟುವಟಿಕೆಗಳಲ್ಲಿ ಹಿನ್ನಡೆ ಆಗುತ್ತಿದೆ. ಕೆಲವೊಂದು ವಿಶ್ವ ವಿದ್ಯಾಲಯಗಳು ಸೆಮಿಸ್ಟರ್ ಪರೀಕ್ಷೆಯನ್ನು ನಡೆಸುವ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿವೆ. ಆದರೆ ತರಗತಿಗಳು ಸರಿಯಾಗಿ ನಡೆಯದೆ ವಿದ್ಯಾರ್ಥಿಗಳು ಹೇಗೆ ಪರೀಕ್ಷೆ ಬರೆಯಬೇಕು ಎಂದು ಪ್ರಶ್ನಿಸಿದರು.

    ಅತಿಥಿ ಉಪನ್ಯಾಸಕರಿಗೆ ಯುಜಿಸಿ ನಿಯಮಾವಳಿ ಪ್ರಕಾರ ವೇತನ ನೀಡನೇಕು, ಸರ್ಕಾರಿ ನೌಕರರಿಗೆ ನೀಡುವ ಹಾಗೆ ಪ್ರತಿ ತಿಂಗಳು ಸಂಬಳ ನೀಡಬೇಕು, ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಸರ್ಕಾರ ಕೂಡಲೇ ರಾಜ್ಯದ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕ ಹುದ್ದೆಯನ್ನು ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು, ಅತಿಥಿ ಉಪನ್ಯಾಸಕರು ಕಾನೂನಾತ್ಮಕವಾಗಿ ಹೋರಾಟ ಮುಂದುವರಿಸಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೂಡಲೇ ತರಗತಿ ಬಹಿಷ್ಕಾರವನ್ನು ಹಿಂಪಡೆದು ಪಾಠ ಪ್ರವಚನಗಳನ್ನು ಆರಂಭಿಸಬೇಕು, ಉಪನ್ಯಾಸಕರ ಮನವೊಲಿಸುವ ಕೆಲಸ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.

    ಎಬಿವಿಪಿ ಜಿಲ್ಲಾ ಸಹ ಸಂಚಾಲಕ ಶ್ರೇಯಸ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಚಂದ್ರಮತಿ ಪಾಟೀಲ, ಕಾರ್ಯಕರ್ತ ಸುಹಾಸ ಬಡಿಗೇರ, ವಿಪುಲ್ ಪೇಟ್ಕರ, ರಾಘು ಒಂಟಗೋಡಿ, ಸಾಗರ ಕುಲಕರ್ಣಿ, ವೈಭವ ಹಂದ್ರಾಳ, ಹರ್ಷ ಚಂದಕ, ಧೀರಜ್ ವರ್ನೇಕರ, ಸುಪ್ರೀತ ಅಂಗಡಿ, ಮನೋಜ ಪತ್ತಾರ, ಪ್ರವೀಣ ಗೌಡರ, ಶುಭಂ ಅದುಲ್ಕರ, ಪ್ರದೀಪ ಅನದಿನ್ನಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts