More

    ಮದ್ಯ ಮಾರಾಟ ಮಳಿಗೆ ಸ್ಥಳಾಂತರಿಸಲು ಒತ್ತಾಯ

    ರಟ್ಟಿಹಳ್ಳಿ: ಪಟ್ಟಣದ ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆ ಶಾಲೆ ಮತ್ತು ದೇವಸ್ಥಾನದ ಸಮೀಪವಿದ್ದು, ಅದನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ಮಳಿಗೆ ಮುಂಭಾಗದಲ್ಲಿ ಆದಿಜಾಂಬವ ಮಾದಿಗ ತಾಲೂಕು ಸಮಿತಿ ವತಿಯಿಂದ ಬುಧವಾರ ಶಾಂತಿಯುತ ಪ್ರತಿಭಟನೆ ನಡೆಸಲಾಯಿತು.

    ಸಮಿತಿ ಜಿಲ್ಲಾಧ್ಯಕ್ಷ ಆನಂದ ಎಂ.ಎಂ. ಮಾತನಾಡಿ, ಸರ್ಕಾರದ ಆದೇಶದಂತೆ ಮದ್ಯದ ಅಂಗಡಿ ಶಾಲೆಯಿಂದ 200 ಮೀಟರ್ ದೂರದಲ್ಲಿ ಇರಬೇಕು. ಆದರೂ, ಸರ್ಕಾರದ ನಿಯಮ ಉಲಂಘಿಸಿ ಶಾಲೆಯ ಸಮೀಪದಲ್ಲಿ ಸುಮಾರು ವರ್ಷಗಳ ಹಿಂದೆ ಮಳಿಗೆ ತೆರೆಯಲಾಗಿದೆ. ಈ ರಸ್ತೆಯ ಮಾರ್ಗದಲ್ಲಿ ಶಾಲೆಯ ಮಕ್ಕಳು ನಿತ್ಯ ಸಂಚರಿಸುತ್ತಾರೆ. ಸಮೀಪದಲ್ಲಿ ಐತಿಹಾಸಿಕ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ದೇವಸ್ಥಾನವು ಇದೆ. ಮಳಿಗೆಯಿಂದಾಗಿ ರಸ್ತೆಯಲ್ಲಿ ದಟ್ಟಣೆ ಸಮಸ್ಯೆ ಆಗುತ್ತಿದೆ. ಕೂಡಲೇ ಅಬಕಾರಿ ಇಲಾಖೆ ಅಧಿಕಾರಿಗಳು ಮಳಿಗೆ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದರು.

    ಸಮಿತಿ ತಾಲೂಕು ಅಧ್ಯಕ್ಷ ಹನುಮಂತಪ್ಪ ಗಾಜೇರ ಮಾತನಾಡಿ, ಮಳಿಗೆ ಸ್ಥಳಾಂತರಿಸಬೇಕು. ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಅನಾರೋಗ್ಯದಿಂದ ಮೃತಪಟ್ಟಿದ್ದು, ಆತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಅಂಗಡಿಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

    ಸ್ಥಳಕ್ಕೆ ಭೇಟಿ ನೀಡಿದ ಎಂಎಸ್‌ಐಎಲ್ ಜಿಲ್ಲಾ ಸಂಪರ್ಕ ಅಧಿಕಾರಿ ರಾಜಶೇಖರ ಗೊಲ್ಲರ ಮಾತನಾಡಿ, ಸರ್ಕಾರದ ಆದೇಶದಂತೆ ಶಾಲೆಯಿಂದ 100 ಮೀಟರ್ ಅಂತರವಿರಬೇಕು ಎಂದು ನಿಯಮವಿದೆ. ಮದ್ಯ ಮಾರಾಟ ಮಳಿಗೆ 100 ಮೀಟರ್‌ಗಿಂತ ಹೆಚ್ಚು ದೂರ ಇರುತ್ತದೆ. ಈಗಾಗಲೇ ಇದನ್ನು ಪರಿಶೀಲಿಸಿ, ಮಳಿಗೆ ತೆರೆಯಲಾಗಿದೆ. ನಿಮ್ಮ ಬೇಡಿಕೆಯಂತೆ ಅಂಗಡಿಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ನೀಡಲು ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.


    ಬಸವರಾಜ ಕಟ್ಟಿಮನಿ, ಗಣೇಶ ಗುತ್ತ್ಯೆಣ್ಣನವರ, ರಮೇಶ ಹಿರೇಕಬ್ಬಾರ, ಸಂಜು ಬಡಗಣ್ಣನವರ, ಪರಶುರಾಮ ಬಾಗೋಡಿ, ಬೋಜರಾಜ ಗಲಗಿನಕಟ್ಟಿ, ಕುಮಾರ ಉಪ್ಪಾರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts