More

    ಒಂದೇ ದಿನಕ್ಕೆ ಇಳೀತು ಮದ್ಯದ ಕಿಕ್!

    ಮಂಗಳೂರು: 40 ದಿನಗಳ ಲಾಕ್‌ಡೌನ್ ಬಳಿಕ ತೆರೆದ ಮದ್ಯದಂಗಡಿಗಳಲ್ಲಿ ಮೇ 4ರಂದು ಭರ್ಜರಿ ಜನ ನೋಡಿ ಎಲ್ಲರೂ ಬೆಚ್ಚಿದ್ದರು. ಆದರೆ ಆರಂಭಿಕ ದಿನದ ದಟ್ಟಣೆ ಹೊರತು ಪಡಿಸಿದರೆ ಆ ಬಳಿಕ ಮದ್ಯದಂಗಡಿಗಳಲ್ಲಿ ಪೇಲವ ಕಳೆ.

    ಎರಡನೇ ದಿನ ಅರ್ಧಕ್ಕರ್ಧ ಮದ್ಯ ಮಾರಾಟ ಕಡಿಮೆಯಾಗಿತ್ತು. ಈಗ ಮದ್ಯದಂಗಡಿಯವರನ್ನು ನೋಡಿದರೆ ಗ್ರಾಹಕರಿಲ್ಲದೆ ಪೆಚ್ಚಾಗಿದ್ದಾರೆ. ಸಾಧಾರಣ ಮಾರಾಟ ಆಗುವ ಮದ್ಯದ ಶೇ.50 ಕೂಡ ಈಗ ಮಾರಾಟವಿಲ್ಲ. ಜನರಲ್ಲಿ ಹಣವಿಲ್ಲ, ಹಿಂದಿನಂತೆ ಜನರ ಓಡಾಟವೂ ಇಲ್ಲ, ಬಸ್ ಶುರುವಾಗಿಲ್ಲ, ಈ ಕಾರಣದಿಂದಾಗಿ ಮದ್ಯದ ಮಾರಾಟ ಕಡಿಮೆ ಎನ್ನುವುದು ಮದ್ಯ ಮಾರಾಟಗಾರರ, ಅಬಕಾರಿ ಅಧಿಕಾರಿಗಳ ಅಭಿಮತ.
    ಮೇ 4ರಂದು ದ.ಕ. ಜಿಲ್ಲೆಯಲ್ಲಿ ಮದ್ಯ ಮಾರಾಟ ಶುರುವಾದಾಗ ಅಲ್ಲಲ್ಲಿ ಉದ್ದ ಸರತಿ ಸಾಲು ಕಂಡು ಬಂದಿದ್ದು, ಏನೇ ಆದರೂ ಮದ್ಯದ ಬೇಡಿಕೆ ಇಳಿಯದು ಎಂದೇ ಭಾವಿಸಲಾಗಿತ್ತು. ಮೊದಲ ದಿನ 171 ಮದ್ಯದಂಗಡಿಗಳು ತೆರೆದು 65,751 ಲೀಟರ್ ಐಎಂಎಲ್ ಹಾಗೂ 43,583 ಲೀಟರ್ ಬಿಯರ್ ಮಾರಾಟವಾಗಿದ್ದು 7 ಕೋಟಿ ರೂ. ವಹಿವಾಟು ದಾಖಲಾಗಿತ್ತು. ಮರುದಿನ ಮಾರಾಟ 4 ಕೋಟಿ ರೂ.ಗೆ ಇಳಿದಿತ್ತು. ಆ ಬಳಿಕ ಮದ್ಯ ಮಾರಾಟ ತೀರಾ ಕಡಿಮೆಯಾಗಿದೆ.

    ಸಾಮಾನ್ಯವಾಗಿ ತಿಂಗಳಿಗೆ ಸರಾಸರಿ 2.10 ಲಕ್ಷ ಕೇಸ್ ಬಾಕ್ಸ್ (ಒಂದು ಬಾಕ್ಸ್‌ನಲ್ಲಿ ಸರಾಸರಿ 9 ಲೀಟರ್) ಮದ್ಯ ಮಾರಾಟವಾಗುತ್ತದೆ. ಈ ಬಾರಿ ಮೇ 13ರ ವರೆಗೆ ಕೇವಲ 70 ಸಾವಿರ ಕೇಸ್ ಬಾಕ್ಸ್ ಮಾರಾಟವಾಗಿದೆ ಎನ್ನುತ್ತಾರೆ ಅಬಕಾರಿ ಇಲಾಖೆ ಉಪ ಆಯುಕ್ತೆ ಶೈಲಜಾ.

    ಕುಡಿಯಲು ದುಡ್ಡು ಬೇಕಲ್ಲ?:
    ಮಧ್ಯಮ ಹಾಗೂ ಕೆಳಮಧ್ಯಮ ವರ್ಗದವರ ಕೈಯಲ್ಲಿ ಹಣದ ಚಲಾವಣೆ ಕಡಿಮೆಯಾಗಿದೆ, ಆದಾಯವಿಲ್ಲ. ಇದರ ಪರಿಣಾಮ ಮದ್ಯ ಮಾರಾಟದಲ್ಲೂ ಕುಸಿತ ಆಗಿದೆ. ಇನ್ನೊಂದೆಡೆ ಮದ್ಯ ಸೇವಿಸುವವರಲ್ಲಿ ಕಾರ್ಮಿಕರ ಸಂಖ್ಯೆ ಸಾಕಷ್ಟಿದೆ. ಉಭಯ ಜಿಲ್ಲೆಗಳಲ್ಲಿ 30 ಸಾವಿರದಷ್ಟು ವಲಸೆ ಕಾರ್ಮಿಕರಿದ್ದರು. ಅವರಲ್ಲಿ ಬಹುತೇಕ ಮಂದಿ ಊರಿಗೆ ತೆರಳಿದ್ದಾರೆ. ಉಳಿದವರಿಗೂ ಸರಿಯಾದ ಕೆಲಸ ಇಲ್ಲ. ಹಾಗಾಗಿ ಕುಡಿಯುವ ಬಗ್ಗೆ ಅವರು ಈಗ ಯೋಚಿಸುವುದೂ ಸಾಧ್ಯವಾಗುತ್ತಿಲ್ಲ.

    ಬಾರ್‌ನಲ್ಲೂ ಉಳಿದ ಸ್ಟಾಕ್ ಮಾತ್ರ
    ಮೇ 9ರಿಂದೀಚೆಗೆ ಬಾರ್ ಆ್ಯಂಡ್ ರೆಸ್ಟೋರೆಂಟ್ ಹಾಗೂ ಇತರ ಮದ್ಯ ಮಾರಾಟದ ಕೇಂದ್ರಗಳಲ್ಲಿ ಉಳಿದಿರುವ ಸ್ಟಾಕ್ ಮದ್ಯವನ್ನು ಮುಗಿಯುವ ತನಕ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ಆದರೆ ಪಾರ್ಸೆಲ್ ಮಾತ್ರವೇ ನೀಡಬೇಕು ಹೊರತು ಮತ್ತೆ ಹೊಸ ಆರ್ಡರ್ ಮಾಡಿ ಮದ್ಯ ತರುವಂತಿಲ್ಲ. 176 ಮದ್ಯದಂಗಡಿಗಳು ಸೇರಿದಂತೆ ಒಟ್ಟು 438 ಸನ್ನದುಗಳ ಮೂಲಕ ಇದುವರೆಗೆ ದ.ಕ. ಜಿಲ್ಲೆಯಲ್ಲಿ 4.71 ಲಕ್ಷ ಲೀಟರ್ ಮದ್ಯ ಮಾರಾಟವಾಗಿದೆ. 2.66 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ.

    ವಿಮುಖರಾದರು ಹಲವರು
    ಒಂದೂವರೆ ತಿಂಗಳು ಮದ್ಯ ಮಾರಾಟ ಬಂದ್ ಆದ ಸಂದರ್ಭ ಮದ್ಯ ಸೇವಿಸದೆ ಜೀವನ ರೂಢಿಸಿಕೊಂಡವರಲ್ಲಿ ಕೆಲವರು ಮದ್ಯ ಸೇವನೆಯನ್ನೇ ತ್ಯಜಿಸಿದ್ದಾರೆ. ಕಠಿಣ ಲಾಕ್‌ಡೌನ್ ಸಂದರ್ಭ ಮದ್ಯ ವ್ಯಸನದಿಂದ ದೂರವಾಗಿದ್ದಾಗ ಕುಟುಂಬ ಸಂತೋಷದಿಂದ ಇರುವುದನ್ನು ಕಂಡು ದುರಭ್ಯಾಸದಿಂದ ದೂರ ಉಳಿದವರೂ ಇದ್ದಾರೆ.

    ಉಡುಪಿಯಲ್ಲಿ ಶೇ.60 ಮಾರಾಟ ಇಳಿಕೆ
    ಉಡುಪಿ: ಜಿಲ್ಲೆಯಲ್ಲಿ ಶೇ.60ರಷ್ಟು ವ್ಯಾಪಾರ ಕಡಿಮೆಯಾಗಿದೆ ಎನ್ನುತ್ತಾರೆ ಮದ್ಯದಂಗಡಿ ಮಾಲೀಕರು. ಮೇ 4ರಂದು ಮದ್ಯದಂಗಡಿ ತೆರೆದಾಗ ಕಿಲೋಮೀಟರ್‌ವರೆಗೆ ಸಾಲು ನಿಂತು ಖರೀದಿಸಿದ ಮದ್ಯಪ್ರಿಯರು ಈಗ ಮಾಯವಾಗಿದ್ದಾರೆ. ಕೆಲವು ಮದ್ಯದಂಗಡಿಗಳಿಗೆ ಗ್ರಾಹಕರೇ ಇಲ್ಲ. ಮೇ 4ರಂದು ಒಂದೇ ದಿನ 1.50 ಕೋಟಿ ರೂ. ಮದ್ಯ ಮಾರಾಟ ನಡೆದಿತ್ತು, ಮರುದಿನವೂ 2 ಕೋಟಿ ರೂ.ನಷ್ಟು ವಹಿವಾಟು ನಡೆದಿತ್ತು. ಆದರೆ ನಂತರ ಶೇ.60ರಷ್ಟು ಮಾರಾಟ ಕುಸಿದಿದೆ ಎನ್ನುತ್ತಾರೆ ಜಿಲ್ಲೆಯ ಅಬಕಾರಿ ಉಪ ಆಯುಕ್ತ ನಾಗೇಶ್ ಕುಮಾರ್. ವಲಸೆ ಕಾರ್ಮಿಕ ವರ್ಗ ಸಂಖ್ಯೆ ಕಡಿಮೆಯಾಗಿರುವುದು, ಜನರಲ್ಲಿ ಹಣದ ಓಡಾಟ ಕಡಿಮೆ ಆಗಿರುವುದು, ಕೆಲವರು ಆರಂಭದಲ್ಲೇ ಮದ್ಯ ಖರೀದಿಸಿ ಸ್ಟಾಕ್ ಇಟ್ಟಿರುವುದು ಕಾರಣ ಇರಬಹುದು ಎನ್ನುತ್ತಾರೆ ಅಧಿಕಾರಿಗಳು.

    ಕಳೆದ ಕೆಲ ದಿನಗಳಿಂದ ದೈನಂದಿನ ಸಾಮಾನ್ಯ ಮಾರಾಟದ ಶೇ.10ರಷ್ಟೂ ಮದ್ಯ ಸೇಲ್ ಆಗುತ್ತಿಲ್ಲ. ಜನರ ಓಡಾಟ ಕಡಿಮೆ, ಕೈನಲ್ಲಿ ಹಣವಿರುವುದೂ ಕಡಿಮೆ, ಹಣ ಇರುವವರಷ್ಟೇ ಬರುತ್ತಾರೆ. ಜನರ ಓಡಾಟ ಹಿಂದಿನಂತಾಗಿ, ಬಸ್ ಸಂಚಾರ, ಕೆಲಸ ಸರಿಯಾದಾಗ ಮಾತ್ರವೇ ಸೇಲ್ಸ್ ಹೆಚ್ಚಾಗಬಹುದು.
    – ರಮೇಶ್ ನಾಯಕ್, ಮದ್ಯದಂಗಡಿ ಮಾಲೀಕ, ಮಂಗಳೂರು

    ಮಾಸಿಕ ಸರಾಸರಿ ಮದ್ಯ ಮಾರಾಟದ ಪ್ರಮಾಣ ನೋಡಿದರೆ ನಿಗದಿತ ಗುರಿಯ ಅರ್ಧವೂ ತಲುಪುವುದೂ ಸಾಧ್ಯವಾಗದು. ಕಾರ್ಮಿಕರು ತಮ್ಮೂರಿಗೆ ತೆರಳಿರುವುದು, ಉಳಿದವರಿಗೆ ಕೆಲಸ ಇಲ್ಲದಿರುವುದು. ಇವೆಲ್ಲದರ ಪರಿಣಾಮ ಮದ್ಯ ಮಾರಾಟ ಕಡಿಮೆಯಾಗಿದೆ.
    – ಶೈಲಜಾ ಕೋಟೆ, ಅಬಕಾರಿ ಉಪ ಆಯುಕ್ತರು, ದ.ಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts