More

    8.5 ಕೋಟಿ ರೂ. ಮೌಲ್ಯದ ಮದ್ಯ ವ್ಯಾಪಾರ

    ಮಂಗಳೂರು/ಉಡುಪಿ: ಲಾಕ್‌ಡೌನ್ ಸಡಿಲಗೊಳಿಸಿ ಸೋಮವಾರದಿಂದ ಮದ್ಯ ಮಾರಾಟಕ್ಕೆ ನೀಡಲಾಗಿದ್ದು, ಮದ್ಯಪ್ರಿಯರು ಮುಗಿಬಿದ್ದು ಖರೀದಿಸಿದ್ದಾರೆ. ಕೆಲವು ಕಡೆ ಮದ್ಯ ಖಾಲಿಯಾಗಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸುಮಾರು 8.5 ಕೋಟಿ ರೂಪಾಯಿಗಳ ಭರ್ಜರಿ ವ್ಯಾಪಾರ ನಡೆದಿದೆ.
    ದ.ಕ. ಜಿಲ್ಲೆಯಲ್ಲಿ 65,751 ಲೀಟರ್ ಐಎಂಎಲ್ ಹಾಗೂ 43,583 ಲೀಟರ್ ಬಿಯರ್ ಮಾರಾಟವಾಗಿದೆ. ಸುಮಾರು 7 ಕೋಟಿ ರೂ. ವಹಿವಾಟು ನಡೆದಿದೆ. 149 ವೈನ್‌ಶಾಪ್ ಹಾಗೂ 22 ಎಂಎಸ್‌ಐಎಲ್ ಸೇರಿ ಒಟ್ಟು 171 ಮದ್ಯದಂಗಡಿಗಳು ತೆರೆದಿದ್ದವು ಎಂದು ಮಂಗಳೂರು ಅಬಕಾರಿ ಡಿಸಿ ಶೈಲಜಾ ಕೋಟೆ ತಿಳಿಸಿದ್ದಾರೆ.
    ಉಡುಪಿ ಜಿಲ್ಲೆಯಲ್ಲಿ ಅಂದಾಜು 1.50 ಕೋಟಿ ರೂ. ಮದ್ಯ ಮಾರಾಟ ನಡೆದಿದೆ. ಶೇ.20ರಷ್ಟು ಹೆಚ್ಚು ಲಿಕ್ಕರ್, ಶೇ.50ರಷ್ಟು ಹೆಚ್ಚು ಬಿಯರ್ ಮಾರಾಟವಾಗಿದೆ. 89 ವೈನ್‌ಶಾಪ್, 14 ಎಂಎಸ್‌ಐಎಲ್ ಮದ್ಯದಂಗಡಿಗಳಲ್ಲಿ 4,850 ಬಾಕ್ಸ್ ಒಳಗೊಂಡ 41,927 ಲೀಟರ್ ಲಿಕ್ಕರ್, 2,035 ಬಾಕ್ಸ್ ಒಳಗೊಂಡ 15,872 ಲೀಟರ್ ಬಿಯರ್ ಮಾರಾಟವಾಗಿದೆ ಎಂದು ಅಬಕಾರಿ ಇಲಾಖೆ ಉಪ ಆಯುಕ್ತ ನಾಗೇಶ್‌ಕುಮಾರ್ ತಿಳಿಸಿದ್ದಾರೆ.

    ಕಿ.ಮೀ.ಗಟ್ಟಲೆ ಸಾಲು: ಬೆಳಗ್ಗೆಯೇ ಮದ್ಯದಂಗಡಿಗಳ ಮುಂದೆ ಕಿ.ಮೀ.ವರೆಗೂ ಸರತಿ ಸಾಲು ಕಂಡು ಬಂತು. ಯುವತಿಯರು, ಮಹಿಳೆಯರು, ವಿದ್ಯಾರ್ಥಿಗಳು, ವೃದ್ಧರೂ ನಿಂತಿದ್ದರು. ಅಂಗಡಿಗಳ ಮುಂದೆ ಚೌಕ ಬರೆದು, ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿತ್ತು. ತೊಕ್ಕೊಟ್ಟಿನಲ್ಲಿ ಶಾಮಿಯಾನ ಹಾಕಲಾಗಿತ್ತು. ಕೆಲವೆಡೆ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವುದರಿಂದ ಜನ ದೂರ ಉಳಿದರು. ಬಿಸಿಲನ್ನೂ ಲೆಕ್ಕಿಸದೆ ಮಧ್ಯಾಹ್ನದವರೆಗೂ ಕೆಲವೆಡೆ ಜನ ಸಾಲು ನಿಂತರು. ಕೆಲವೆಡೆ ಪೊಲೀಸರು ಲಾಠಿ ಬಿಸಿ ಮುಟ್ಟಿಸಿದರು.

    ಕೆಲವೇ ಹೊತ್ತಿನಲ್ಲಿ ಸ್ಟಾಕ್ ಖಾಲಿ
    ಉಭಯ ಜಿಲ್ಲೆಗಳ ಹೆಚ್ಚಿನ ಮದ್ಯದಂಗಡಿಗಳಲ್ಲಿ ಮಧ್ಯಾಹ್ನದ ಹೊತ್ತಿಗೆ ಸ್ಟಾಕ್ ಖಾಲಿಯಾಗಿತ್ತು. ಸಾಲಿನಲ್ಲಿ ನಿಂತವರು ಭಾರಿ ಪ್ರಮಾಣದಲ್ಲಿ ಖರೀದಿಸಿರುವುದು ಮತ್ತು ಸ್ಟಾಕ್ ಕಡಿಮೆ ಇದ್ದುದು ಕಾರಣ. ಕೆಲವೆಡೆ ದುಬಾರಿ ಮೊತ್ತದ ಬ್ರಾಂಡ್ ಮದ್ಯಗಳು ಬೇಗನೆ ಖಾಲಿಯಾದರೆ, ಕಡಿಮೆ ಮೌಲ್ಯದ ಮದ್ಯಗಳೂ ಕೆಲವೆಡೆ ಬೇಗನೆ ಮುಗಿದವು. ಮಂಗಳವಾರ ಬೆಳಗ್ಗೆ ಪೂರೈಕೆಯಾಗಲಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

    ಕಮಿಷನ್ ವಹಿವಾಟು: ಮೂಲ್ಕಿ, ಮೂಡುಬಿದಿರೆಯಲ್ಲಿ ಕೆಲ ಮದ್ಯಪ್ರಿಯರು ಯುವಕರಿಗೆ ಹಣದ ಆಮಿಷ ನೀಡಿ ಮದ್ಯ ತರಿಸಿಕೊಂಡಿದ್ದಾರೆ. ಕೆಲವೆಡೆ ಒಬ್ಬರಿಗೆ ಎರಡು ಬಾಟಲಿ ಮದ್ಯ ಎಂದು ನಿಗದಿಪಡಿಸಿದ್ದು, 90 ಎಂಎಲ್ ಸ್ಯಾಚೆಟ್‌ಗಳನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರುವುದೂ ಕಂಡುಬಂತು.

    ಗುರುತು ಮರೆಮಾಚಲು ಯತ್ನ
    ಮದ್ಯ ಖರೀದಿಗೆ ಲೈನ್‌ನಲ್ಲಿ ನಿಲ್ಲುವುದರಿಂದ ಗುರುತು ಮರೆ ಮಾಚಲು ಮಾಸ್ಕ್ ಸ್ವಲ್ಪ ನೆರವಾದರೂ ಕರವಸ್ತ್ರ, ಕೈಗಳ ಮೂಲಕ ಪೂರ್ಣ ಮುಖಮುಚ್ಚಲು ಕೆಲವರು ಯತ್ನಿಸುತ್ತಿದ್ದರು. ಸಾಸ್ತಾನ ಒಳಪೇಟೆ ಸಹಿತ ಕೆಲವೆಡೆ ಹೆಲ್ಮೆಟ್ ಧರಿಸಿ ಮದ್ಯ ಖರೀದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts