More

    ಬದಲಾಗುತ್ತಿದೆ ಸಿಂಹಿಣಿಯರ ವರ್ತನೆ; ಅನ್ಯಗುಂಪಿನ ಗಂಡು ಸಿಂಹಗಳನ್ನು ಕೂಡಲು ಆಸಕ್ತಿ

    ಅಹಮದಾಬಾದ್​: ಸಾಮಾನ್ಯವಾಗಿ ಸಿಂಹಗಳು ಒಂದು ಗುಂಪಾಗಿ ಇರುತ್ತವೆ. ಇದನ್ನು ಲಯನ್​ ಪ್ರೈಡ್​ ಎಂದು ಕರೆಯಲಾಗುತ್ತದೆ. ಕೆಲವು ಗಂಡು ಸಿಂಹಗಳು ಮತ್ತು ಅವುಗಳಿಗೆ ಸಂಬಂಧಿಸಿದ ಸಿಂಹಿಣಿಗಳು ಹಾಗೂ ಮರಿಗಳು ಈ ಗುಂಪಿನಲ್ಲಿರುತ್ತವೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಸಾಮಾಜಿಕ ವಿನ್ಯಾಸಕ್ಕೆ ವಿರುದ್ಧವಾಗಿ ಸಿಂಹಿಣಿಗಳು ತಮ್ಮ ಗುಂಪಿಗಿಂತಲೂ ಬೇರೊಂದು ಗುಂಪಿನ ಗಂಡು ಸಿಂಹಗಳೊಂದಿಗೆ ಕೂಡಿಕೊಳ್ಳಲು ಹೆಚ್ಚು ಆಸಕ್ತಿ ತೋರುತ್ತಿವೆ.

    ಭಾರತೀಯ ವನ್ಯಜೀವಿ ಸಂಸ್ಥೆಯ (ವೈಲ್ಡ್​ಲೈಫ್​ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ) ತಜ್ಞರು ಸಿಂಹಿಣಿಗಳ ವರ್ತನೆಯನ್ನು ಒಂದು ದಶಕಕ್ಕೂ ಹೆಚ್ಚುಕಾಲದಿಂದ ಅಧ್ಯಯನ ಮಾಡುತ್ತಿದ್ದು, ಇದೀಗ ತಮ್ಮ ಅಧ್ಯಯನದ ಮಾಹಿತಿಯನ್ನು ಹೊರಹಾಕಿದ್ದಾರೆ. ಅದರಲ್ಲಿ ಸಿಂಹಿಣಿಗಳು ಬೇರೊಂದು ಗುಂಪಿನ ಗಂಡು ಸಿಂಹಗಳೊಂದಿಗೆ ಕೂಡಿಕೊಳ್ಳಲು ಹೆಚ್ಚು ಆಸಕ್ತಿ ತೋರುತ್ತಿರುವ ಅಂಶವನ್ನು ತಿಳಿಸಿದ್ದಾರೆ.

    ಗಂಡು ಸಿಂಹಗಳು ಸಿಂಹಿಣಿಗಳೊಂದಿಗೆ ಕೂಡಿಕೊಳ್ಳಲು ಹಾಗೂ ತಮ್ಮ ಪ್ರದೇಶವನ್ನು ಗುರುತಿಸಿಕೊಳ್ಳಲು ತಮ್ಮದೇ ಆದ ಕಾರ್ಯವಿಧಾನವನ್ನು ಅನುಸರಿಸುತ್ತವೆ. ಎಲ್ಲರಿಗೂ ಗೊತ್ತಿರುವಂತೆ ಮೂತ್ರ ವಿಸರ್ಜನೆಯ (ಸೆಂಟ್​ ಮಾರ್ಕಿಂಗ್​) ಮೂಲಕ ಸಿಂಹಗಳು ತಮ್ಮ ಪ್ರದೇಶವನ್ನು ಗುರುತಿಸಿಕೊಳ್ಳುತ್ತವೆ. ಶೇ.72 ಸಿಂಹಗಳು ಈ ರೀತಿ ವರ್ತಿಸುತ್ತವೆ. ಶೇ.26 ಸಿಂಹಗಳು ಗರ್ಜನೆ ಮೂಲಕ ಹಾಗೂ ಶೇ.2 ಸಿಂಹಗಳು ಮರಗಳ ಕಾಂಡಗಳ ಮೇಲೆ ಉಗುರಿನಿಂದ ಗೀಚುವ ಮೂಲಕ ಹೆಣ್ಣು ಸಿಂಹಗಳೊಂದಿಗೆ ಕೂಡಿಕೊಳ್ಳುವ ಪ್ರದೇಶವನ್ನು ಗುರುತಿಸುತ್ತವೆ ಎಂದು ಹೇಳಿದ್ದಾರೆ.

    ಹೆಣ್ಣು ಸಿಂಹಗಳು ಬೇರೊಂದು ಗುಂಪಿನ ಗಂಡು ಸಿಂಹಗಳೊಂದಿಗೆ ಕೂಡಿಕೊಳ್ಳಲು ಹೆಚ್ಚು ಆಸಕ್ತಿ ತೋರುತ್ತಿರುವುದು ಏಕೆ ಎಂಬ ಬಗ್ಗೆ ಸ್ಪಷ್ಟನೆ ನೀಡಿರುವ ತಜ್ಞರು, ಸಿಂಹಿಣಿಗಳು ಮರಿ ಹಾಕಿದಾಗ ಅನ್ಯ ಗುಂಪಿನ ಸಿಂಹಗಳು ಮರಿಗಳನ್ನು ತಿಂದುಹಾಕುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ, ಬೇರೊಂದು ಗುಂಪಿನ ಸಿಂಹಗಳೊಂದಿಗೆ ಕೂಡಿಕೊಂಡರೆ, ಈ ಸಮಸ್ಯೆ ಪರಿಹಾರವಾಗುತ್ತದೆ ಎಂಬ ಕಾರಣಕ್ಕಾಗಿ ಅವು ಹೀಗೆ ಮಾಡಲು ಮುಂದಾಗುತ್ತಿವೆ ಎಂದು ತಿಳಿಸಿದ್ದಾರೆ.

    ಮೀನಾ ವೆಂಕಟ್​ರಾಮನ್​ ಎಂಬುವರು ಈ ಅಧ್ಯಯನ ನಡೆಸಿ ಅಬ್ಸರ್ವೇಷನ್​ ಆಫ್​ ಪ್ಯಾಟರೋಲಿಂಗ್​ ಬಿಹೇವಿಯರ್​ ಇನ್​ ಮೇಲ್​ ಲಯನ್ಸ್​ ಇನ್​ ಗಿರ್​ ಪ್ರೊಟೆಕ್ಟೆಡ್​ ಏರಿಯಾ, ಇಂಡಿಯಾ ಎಂಬ ವರದಿಯನ್ನು ಸಿದ್ಧಪಡಿಸಿ ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ.

    ಸಂತಸವಾಗಿವೆ ಮರಿಗಳು: ಸಿಂಹಿಣಿಗಳು ಬೇರೊಂದು ಗುಂಪಿನ ಗಂಡು ಸಿಂಹಗಳೊಂದಿಗೆ ಕೂಡಿಕೊಳ್ಳುತ್ತಿರುವುದರಿಂದ ಅವುಗಳಿಗೆ ಹುಟ್ಟುವ ಮರಿಗಳು ತುಂಬಾ ಸಂತಸದಿಂದಿವೆ. ಅವಕ್ಕೆ ತಾಯಿ ಸಿಂಹ ಇರುವ ಗುಂಪಿನ ಜತೆಗೆ ಅಪ್ಪ ಸಿಂಹ ಇರುವ ಗುಂಪಿನ ರಕ್ಷಣೆಯೂ ಸಿಗುತ್ತಿರುವುದು ಇದಕ್ಕೆ ಕಾರಣವಾಗಿದೆ ಎಂದು ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಸಾಮಾನ್ಯವಾಗಿ ತಮ್ಮ ಪ್ರದೇಶವನ್ನು ಗುರುತಿಸುವ ಸಲುವಾಗಿ ಗಂಡು ಸಿಂಹಗಳು ಮರಿಗಳನ್ನು ಸಾಯಿಸುತ್ತವೆ. ಆದರೆ, ಈಗ ಎರಡು ಗುಂಪಿನ ನಡುವೆ ಈ ಕಾದಾಟ ಕಡಿಮೆ ಆಗುವುದರಿಂದ, ಮರಿಗಳ ಉಳಿಯುವಿಕೆ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದ ಸಿಂಹಗಳ ಸಂತತಿ ಕೂಡ ಹಿಗ್ಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts