More

    ನಿರಂತರ ಮಳೆಯಿಂದ ಹಾಳಾದ ಬೆಳೆ

    ಲಿಂಗಸುಗೂರು: ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆ ಸುರಿದಿದ್ದರಿಂದ ಬಿತ್ತನೆ ಚುರುಕುಗೊಳ್ಳುವಂತೆ ಮಾಡಿತ್ತು. ಆದರೆ ಕಳೆದ ತಿಂಗಳಿಂದ ಮೇಲಿಂದ ಮೇಲೆ ಮಳೆಯಾಗಿದ್ದರಿಂದ ಜಮೀನುಗಳು ಜಲಾವೃತಗೊಂಡು ಬಿತ್ತನೆ ಮಾಡಿದ ಬೆಳೆಗಳು ನಾನಾ ರೋಗ ಬಾಧೆಗೆ ತುತ್ತಾಗುವಂತಾಗಿವೆ.

    ತಾಲೂಕಿನಲ್ಲಿ ತೊಗರಿ 17,268 ಹೆಕ್ಟರ್, ಸೂರ್ಯಕಾಂತಿ 19,402 ಹೆ. ಹತ್ತಿ 3,189 ಹೆ. ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಆನೆಹೊಸೂರು, ಚಿತ್ತಾಪುರ, ಮಾವಿನಭಾವಿ, ಹೊನ್ನಳ್ಳಿ, ಸರ್ಜಾಪುರ, ಗುಂತಗೋಳ, ದೇವರಭೂಪುರ, ಈಚನಾಳ, ಪೈದೊಡ್ಡಿ, ಗೊರೇಬಾಳ ಸೇರಿ ನಾನಾ ಗ್ರಾಪಂ ವ್ಯಾಪ್ತಿಯಲ್ಲಿ ಹತ್ತಿ, ಸೂರ್ಯಕಾಂತಿ, ತೊಗರಿ, ಭತ್ತ, ಎಳ್ಳು ಸೇರಿ ಇತರೆ ಬೆಳೆ ಬೆಳೆದು ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದರು.

    ಜೂ.1ರಿಂದ ಸೆ.30 ರವರೆಗೆ 402.6 ಎಂಎಂ ವಾಡಿಕೆ ಮಳೆಯಾಗಬೇಕಿತ್ತು. ಆದರೆ 614.2 ಎಂಎಂ ಮಳೆ ಸುರಿದಿದ್ದು, ವಾಡಿಕೆಗಿಂತ 211.6 ಅಧಿಕ ಮಳೆ ಸುರಿದ ಪ್ರಯುಕ್ತ ರೈತರ ಜಮೀನುಗಳು ಜಲಾವೃತಗೊಂಡು ಬೆಳೆಗಳು ಕೊಳೆತು ಹೋಗುವ ಹಂತ ತಲುಪಿವೆ. ಸೂರ್ಯಕಾಂತಿ ತೆನೆ ಕಪ್ಪಾಗಿ ನೆಲಕ್ಕೆ ಬಾಗಿವೆ. ಹತ್ತಿ ಬೆಳೆ ಕಾಯಿ ಒಡೆದು ಹತ್ತಿ ಹೊರಬಂದು ಹಳದಿ ಬಣ್ಣಕ್ಕೆ ತಿರುಗಿ ಬಾಣಂತಿ ರೋಗಕ್ಕೆ ತುತ್ತಾಗಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿವೆ.

    ಅದೇ ರೀತಿ ಸೂರ್ಯಕಾಂತಿ ಬೆಳೆ ಕಪ್ಪು ಬಣ್ಣಕ್ಕೆ ತಿರುಗಿದ್ದು, ಆರಂಭಿಕ ಹಂತದ ತೊಗರಿ ಬೆಳೆ ಜಲಾವೃತದಿಂದ ಬೇರು ಕೊಳೆ ರೋಗಕ್ಕೆ ತುತ್ತಾಗುವ ಸಾಧ್ಯತೆಯಿದೆ. ದ್ವಿದಳ ಧಾನ್ಯಗಳಾದ ಹೆಸರು, ಅಲಸಂದಿ, ತೋಟಗಾರಿಕೆ ಬೆಳೆಗಳಾದ ಈರುಳ್ಳಿ, ಮೆಣಸಿನಕಾಯಿ, ತರಕಾರಿ ಬೆಳೆಗಳು ಹಾಗೂ ದಾಳಿಂಬೆ, ಪಪ್ಪಾಯಿ, ಪೇರಲ ತೇವಾಂಶ ಹೆಚ್ಚಾಗಿ ರೋಗ ಮತ್ತು ಕೀಟ ಬಾಧೆಯ ಭೀತಿ ಎದುರಾಗಿದೆ. ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸೆ.26 ರವರೆಗೆ ಬೆಳೆ ನಷ್ಟ ಜಂಟಿ ಸಮೀಕ್ಷೆ ನಡೆಸಿದ್ದು, ಈಗಾಗಲೇ 320 ಹೆ. ಪ್ರದೇಶ ಮಳೆಯಿಂದ ಹಾನಿಗೀಡಾದ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ರೈತರಿಗೆ ಬೆಳೆನಷ್ಟ ಪರಿಹಾರ ಒದಗಿಸಲು ಕೋರಲಾಗಿದೆ.

    ತಾಲೂಕಿನಲ್ಲಿ ಸುರಿದ ಭಾರೀ ಮಳೆಯಿಂದ ಬಹುತೇಕ ಬೆಳೆಗಳು ಹಾನಿಗೀಡಾಗಿವೆ. ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಗಳು ಸಿಬ್ಬಂದಿ ಕೊರತೆ ನೆಪ ಮತ್ತು ಪರಸ್ಪರ ಹೊಂದಾಣಿಕೆ ಇಲ್ಲದೆ ಸರಿಯಾಗಿ ಬೆಳೆ ಸಮೀಕ್ಷೆ ನಡೆಸುತ್ತಿಲ್ಲ. ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರವಾಗಿ ಬೆಳೆಹಾನಿ ಸಮೀಕ್ಷೆ ನಡೆಸಿ ರೈತರಿಗೆ ಬೆಳೆನಷ್ಟ ಪರಿಹಾರ ಒದಗಿಸಬೇಕು.
    | ಅಮರಣ್ಣ ಗುಡಿಹಾಳ, ರಾಜ್ಯ ಪ್ರಮುಖ ಕರ್ನಾಟಕ ರಾಜ್ಯ ರೈತಸಂಘ, ಲಿಂಗಸುಗೂರು

    ಕಳೆದ ತಿಂಗಳು ಪ್ರಕೃತಿ ವಿಕೋಪದಿಂದ ವಾಡಿಕೆಗಿಂತ ಅಧಿಕ ಮಳೆ ಸುರಿದ ಪ್ರಯುಕ್ತ ಜಮೀನುಗಳು ಜಲಾವೃತಗೊಂಡು ಕೆಲ ಭಾಗದಲ್ಲಿ ಬೆಳೆಗಳು ಹಾನಿಗೀಡಾಗಿವೆ. ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಗಳು ಸೆ.30 ರವರೆಗೆ ಜಂಟಿ ಸಮೀಕ್ಷೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ.
    | ಆರೀಫಾ ಅಕ್ತರ್, ಸಹಾಯಕ ಕೃಷಿ ನಿರ್ದೇಶಕಿ, ಲಿಂಗಸುಗೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts