More

    ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಿ, ದಲಿತ ಸಂಘರ್ಷ ಸಮಿತಿ ಮನವಿ

    ಲಿಂಗಸುಗೂರು: ನಾರಾಯಣಪುರ ಬಲದಂಡೆ ಮುಖ್ಯನಾಲೆ ಮತ್ತು ವಿತರಣಾ ನಾಲೆಗಳ ಆಧುನೀಕರಣ ಕಾಮಗಾರಿ ಕಳಪೆಯಿಂದ ಕೂಡಿದ್ದು, ಕೂಡಲೇ ತನಿಖೆ ನಡೆಸಿ ಗುತ್ತಿಗೆದಾರರು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ತಹಸೀಲ್ದಾರ್ ಶಂಶಾಲಂಗೆ ಗುರುವಾರ ಮನವಿ ಸಲ್ಲಿಸಿದರು.

    ಕಳೆದೆರಡು ದಶಕಗಳ ಹಿಂದೆ ಬಲದಂಡೆ ಕಾಮಗಾರಿ ಆರಂಭಗೊಂಡ ವೇಳೆ ರೈತರಲ್ಲಿ ಹರ್ಷ ಮೂಡಿತ್ತು. ಆದರೆ ಸಮರ್ಪಕ ಕಾಮಗಾರಿ ನಡೆಯದೆ ಕೊನೇ ಭಾಗದವರೆಗೆ ನೀರು ತಲುಪಿಸಲು ಸಾಧ್ಯವಾಗಿಲ್ಲ. ಕಳಪೆ ಕಾಮಗಾರಿ ಮತ್ತು ಹಣ ದುರ್ಬಳಕೆ ತಡೆಯುವಲ್ಲಿ ವಿಫಲವಾಗಿದ್ದರಿಂದ ಪುನಃ ನಾಲೆಗಳ ಆಧುನೀಕರಣಕ್ಕೆ ಕಳೆದೆರಡು ವರ್ಷಗಳ ಹಿಂದೆ 980 ಕೋಟಿ ರೂ. ಮತ್ತು ವಿತರಣಾ ನಾಲೆಗಳ ಆಧುನೀಕರಣಕ್ಕೆ 1,444 ಕೋಟಿ ರೂ. ವೆಚ್ಚ ಮಾಡಲಾಗಿದೆ.

    ಇತ್ತೀಚೆಗೆ ಕೈಗೊಂಡ ಆಧುನೀಕರಣ ಕಾಮಗಾರಿಗಳು ಕಳಪೆಯಾಗಿದ್ದು, ಅಕ್ರಮದಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಮೀಲಾಗಿದ್ದಾರೆ. ಕಳೆದ ಅಧಿವೇಶನದಲ್ಲಿ ಚರ್ಚೆ ನಡೆದು ಅಂದಾಜು ಸದನ ಸಮಿತಿ ರಚಿಸಿ ತನಿಖೆ ನಡೆಸಲಾಯಿತು. ಈ ವೇಳೆ ಸರ್ಕಾರದ ಕಣ್ಣಿಗೆ ಮಣ್ಣೆರೆಚಿದ ಬಗ್ಗೆ ಸದನ ಸಮಿತಿ ಸದಸ್ಯರು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡಿದ್ದರು. ಹಣ ದುರ್ಬಳಕೆಯಲ್ಲಿ ಮುಖ್ಯ ಇಂಜಿನಿಯರ್ ಸೇರಿ 45ಕ್ಕೂ ಹೆಚ್ಚು ಅಧಿಕಾರಿಗಳ ವಿರುದ್ಧ ಸರ್ಕಾರಕ್ಕೆ ವರದಿ ನೀಡಿದ್ದು, ತಪ್ಪಿತಸ್ಥ ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts