More

    ಗಮನಕ್ಕೆ ತರದೆ ಕಾಮಗಾರಿ ಆರಂಭ

    ಲಿಂಗಸುಗೂರು: ಅಧಿಕಾರಿಗಳು ನಮ್ಮ ಗಮನಕ್ಕೆ ತರದೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದಾರೆ ಎಂದು ಪುರಸಭೆ ಸದಸ್ಯರು ಆರೋಪಿಸಿದರು.

    ಸ್ಥಳೀಯ ಸಾಂಸ್ಕೃತಿಕ ಭವನದಲ್ಲಿ ಪುರಸಭೆ ಅಧ್ಯಕ್ಷೆ ಸುನಿತಾ ಕೆಂಭಾವಿ ಅಧ್ಯಕ್ಷತೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರಾದ ದೊಡ್ಡನಗೌಡ ಹೊಸಮನಿ, ಬಾಬುರೆಡ್ಡಿ ಮುನ್ನೂರು, ಟೆಂಡರ್ ಆದ ಬಳಿಕ ಸದಸ್ಯರಿಗೆ ತಿಳಿಯದಂತೆ 17 ಮತ್ತಿತರ ವಾರ್ಡ್‌ಗಳಲ್ಲಿ ಉದ್ಯಾನವನ ಇತರ ಕಾಮಗಾರಿ ನಡೆಸಿದ್ದಾರೆಂದು ದೂರಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಸುನಿತಾ ಕೆಂಭಾವಿ, ಯಾವುದೇ ಕಾಮಗಾರಿ ಆರಂಭಿಸಿದರೂ ಆಯಾ ವಾರ್ಡ್ ಸದಸ್ಯರ ಗಮನಕ್ಕೆ ತರುವಂತೆ ಮುಖ್ಯಾಧಿಕಾರಿ ಜಗನ್ನಾಥ ಕುಲಕರ್ಣಿ ಇತರ ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಪಟ್ಟಣದ ಬಸ್ ನಿಲ್ದಾಣ ಮುಂಭಾಗದ ಮುಖ್ಯರಸ್ತೆ 50 ಅಡಿ ವಿಸ್ತರಣೆಗೆ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಿದರೂ ನಿಯಮಾನುಸಾರ ರಸ್ತೆ ನಿರ್ಮಿಸಿಲ್ಲ. ಇದರಿಂದ ಜನರು ಹಾಗೂ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸದಸ್ಯ ದೊಡ್ಡನಗೌಡ ಹೊಸಮನಿ, ಬಾಬುರೆಡ್ಡಿ ಮುನ್ನೂರು, ಶಿವರಾಯ ದೇಗಲಮಡಿ ಆರೋಪಿಸಿದರು.

    ರಸ್ತೆ ವಿಸ್ತರಣೆ ವಿರುದ್ಧ ಕೆಲವರು ನ್ಯಾಯಲಯದಲ್ಲಿ ದಾವೆ ಹೂಡಿದ್ದಾರೆ. ಶೀಘ್ರ ಇತ್ಯರ್ಥವಾಗುವ ಮುನ್ಸೂಚನೆ ದೊರೆತಿದ್ದು, ರಸ್ತೆ ಅತಿಕ್ರಮಣ ತೆರವು ಕಾರ್ಯ ಮುಂದುವರಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದೆಂದು ಸಿಒ ಜಗನ್ನಾಥ ಕುಲಕರ್ಣಿ ಸ್ಪಷ್ಟಪಡಿಸಿದರು.

    ಕಳೆದ ಸಭೆಯಲ್ಲಿ ವಿವಿಧ ಯೋಜನೆಗಳ ಅನುದಾನಗಳಲ್ಲಿ ಬಾಕಿ 85 ಲಕ್ಷ ರೂ.ಗಳನ್ನು ಕೆರೆ ದಂಡೆಯ ಹಳೆಯ ಉದ್ಯಾನವನ ಅಭಿವೃದ್ಧಿಗೆ ಬಳಸಲು ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದ್ದರು. ಆದರೆ ಅನುದಾನ ಬೇರೆ ಬೇರೆ ಕೆಲಸಗಳಿಗೆ ಬಳಸಲಾಗುತ್ತಿದೆ. ಹೀಗಾದರೆ ಸರ್ವಾನುಮತದ ಒಪ್ಪಿಗೆಗೆ ಬೆಲೆ ಏನಿದೆ ಎಂದು ಸದಸ್ಯ ಮಹಾಂತೇಶ ನರಕಲದಿನ್ನಿ ಪ್ರಶ್ನಿಸಿದರು. ಅನಿವಾರ್ಯ ಪರಿಸ್ಥಿತಿ ಕಾರಣ ಬಳಕೆಯಾಗಿದೆ ಎಂಬ ಸಬೂಬು ನೀಡಿದ ಸಿಒ ಜಗನ್ನಾಥ, ಬಾಡಿಗೆ ಕಟ್ಟಡದಲ್ಲಿ ನಡೆದಿರುವ ಪುರಸಭೆ ವ್ಯಾಪ್ತಿಯ 35 ಅಂಗನವಾಡಿ ಕಟ್ಟಡಗಳಿಗೆ ಸರ್ಕಾರದ ಸುತ್ತೊಲೆಯಂತೆ ನಾಗರಿಕ ಸೌಲಭ್ಯದ ಮಿಸಲು ಜಾಗೆ ನೀಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಪ್ರಸ್ತಾಪಿಸಿದಾಗ ಸದಸ್ಯರು ಒಪ್ಪಿಗೆ ಸೂಚಿಸಿದರು.

    ವಾಣಿಜ್ಯ ಮಳಿಗೆ, ಸಂತೆ ಹರಾಜು ಹಾಗೂ ಮೂಲ ಸೌಲಭ್ಯ ಕುರಿತ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಸಿಒ ಜಗನ್ನಾಥ, ಸರ್ಕಾರದ ಮಾರ್ಗಸೂಚಿಯಂತೆ ಮಿಸಲಾತಿಯಡಿ ಶೀಘ್ರ ವಾಣಿಜ್ಯ ಮಳಿಗೆ ಹರಾಜು ಪ್ರಕ್ರಿಯೆ ನಡೆಯಲಿದೆ. ವಾರದ ಸಂತೆ ನಡೆವ ಸ್ಥಳದಲ್ಲಿ ಈಗಾಗಲೇ ಎರಡು ರೆಡಿಮೇಡ್ ಶೌಚಗೃಹ ನಿರ್ಮಿಸಲಾಗಿದೆ. ಎರಡು ಕುಡಿವ ನೀರಿನ ಟ್ಯಾಂಕರ್ ನಿಲ್ಲಿಸಲಾಗುತ್ತಿದೆ ಎಂದಾಗ, ಮಧ್ಯ ಪ್ರವೇಶಿಸಿದ ಸದಸ್ಯರು, ಸಂತೆಗೂ ಮುನ್ನ ಮತ್ತು ನಂತರ ಮಾರುಕಟ್ಟೆ ಸ್ವಚ್ಛತೆ ಹಾಗೂ ಅಗತ್ಯ ಶೌಚಗೃಹ ನಿರ್ಮಿಸಿ ಪರಿಸರ ಶುಚಿತ್ವ ಕಾಪಾಡಬೇಕೆಂದರು.

    20ಕ್ಕೂ ಅಧಿಕ ಸಂಘ ಸಂಸ್ಥೆ ಹಾಗೂ ಸಮಾಜದವರು ಕಟ್ಟಡ ನಿರ್ಮಾಣಕ್ಕೆ ನಾಗರಿಕ ಸೌಲಭ್ಯ ಜಾಗೆ ನೀಡಲು ಸಲ್ಲಿಸಿದ ಅರ್ಜಿ ಮುಂದೂಡಿದ ಸದಸ್ಯರು, ಕೆಲವು ಪ್ರಮುಖ ವೃತ್ತ, ಸ್ಥಳಗಳಲ್ಲಿ ಹೈಮಾಸ್ಟ್ ದೀಪ ಅಳವಡಿಸುವುದು ಮತ್ತು ಕೆರೆ ದಡದ ಉದ್ಯಾನವನಕ್ಕೆ ಹೆಸರಿಡುವ ಬಗ್ಗೆ ಹಿರಿಯ ಜನಪ್ರತಿನಿಧಿಗಳ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿದರು. ಪುರಸಭೆ ಉಪಾಧ್ಯಕ್ಷ ಎಂ.ಡಿ.ರಫೀ, ಸದಸ್ಯರಾದ ದೊಡ್ಡನಗೌಡ ಹೊಸಮನಿ, ಶಿವರಾಯ ದೇಗುಲಮಡಿ, ರೌಫ್ ಗ್ಯಾರಂಟಿ, ಬಾಬುರಡ್ಡಿ ಮುನ್ನೂರು, ಶರಣಪ್ಪ ಕೆಂಗೇರಿ, ಮುದುಕಪ್ಪ ನಾಯಕ, ಮುತ್ತು ಮೇಟಿ, ಮಹಾಂತೇಶ, ಮಲ್ಲಿಕಾರ್ಜುನ, ಸಿಒ ಜಗನ್ನಾಥ ಕುಲಕರ್ಣಿ, ವ್ಯವಸ್ಥಾಪಕ ವೆಂಕಟೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts