More

    ಗುರುಗುಂಟಾ ಅಮರೇಶ್ವರ ಜಾತ್ರೆ ಸರಳ; ತಹಸೀಲ್ದಾರ್ ಚಾಮರಾಜ ಪಾಟೀಲ್ ಮಾಹಿತಿ

    ಲಿಂಗಸುಗೂರು: ಕೋವಿಡ್-19 ಎರಡನೇ ಅಲೆ ತೀವ್ರವಾಗುತ್ತಿರುವ ಕಾರಣ ಮಾ.28 ರಂದು ನಡೆಯಲಿರುವ ತಾಲೂಕಿನ ಇತಿಹಾಸ ಪ್ರಸಿದ್ಧ ಗುರುಗುಂಟಾ ಅಮರೇಶ್ವರ ಜಾತ್ರಾ ಮಹೋತ್ಸವವನ್ನು ಸರ್ಕಾರಿ ನಿರ್ದೇಶನದಂತೆ ಕರೊನಾ ನಿಯಮಾನುಸಾರ ಜರುಗಲಿದೆ ಎಂದು ತಹಸೀಲ್ದಾರ್ ಚಾಮರಾಜ ಪಾಟೀಲ್ ತಿಳಿಸಿದ್ದಾರೆ.

    ಜಾನುವಾರು ಜಾತ್ರೆ, ಸಾಮಾಜಿಕ ನಾಟಕ, ನಾನಾ ಅಂಗಡಿಗಳನ್ನು ಸ್ಥಾಪಿಸುವುದನ್ನು ನಿರ್ಬಂಧಿಸಲಾಗಿದ್ದು, ಧಾರ್ಮಿಕ, ಪೂಜಾ ಕೈಂಕರ್ಯಗಳು ಎಂದಿನಂತೆ ಜರುಗಲಿವೆ ಎಂದು ಮಂಗಳವಾರ ವಿಜಯವಾಣಿಗೆ ಮಾಹಿತಿ ನೀಡಿದರು.

    ಅಮರೇಶ್ವರ ಗುರುಗಜದಂಡ ಶಿವಾಚಾರ್ಯರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಆಚರಣೆ ನಡೆಯಲಿವೆ. ಮಾ.26 ರಂದು ಸಂಜೆ 4.30ಕ್ಕೆ ದೇವಸ್ಥಾನದಲ್ಲಿ ಪ್ರಥಮ ಉತ್ಸವ, ಸಂಜೆ 6 ಗಂಟೆಗೆ ಶ್ರೀಗಳು ಅರ್ಚಕರ, ಪಲ್ಲಕ್ಕಿ ಸಮೇತ ಗುರುಗುಂಟಾ ಗ್ರಾಮಕ್ಕೆ ತೆರಳಿ ಕಳಸದ ಗುಡಿಯಲ್ಲಿ ವಿಶೇಷ ಪೂಜೆ ನೆರವೇರಿಸುವರು. ನಂತರ ರಾಜಬೀದಿಯಲ್ಲಿ ಪುರವಂತಿಗೆ ಸಮೇತ ಮಹಾರಥೋತ್ಸವ ಕಳಸದ ಮೆರವಣಿಗೆ ನಡೆಯುವುದು.

    ಮಾ.27ರಂದು ಬೆಳಗ್ಗೆ ಗುರುಗುಂಟಾದಿಂದ ಶ್ರೀಗಳು ಕಳಸದ ಪಲ್ಲಕ್ಕಿಯೊಂದಿಗೆ ದೇವಸ್ಥಾನಕ್ಕೆ ಆಗಮಿಸಲಿದ್ದು, ಸಂಜೆ 4.30ಕ್ಕೆ ದ್ವಿತೀಯ ಉತ್ಸವ, ಸಂಜೆ 6 ಗಂಟೆಗೆ ಶ್ರೀಗಳು ಕಳಸ, ಉತ್ಸವ ಮೂರ್ತಿಯೊಂದಿಗೆ ಗುಂತಗೋಳ ಸಂಸ್ಥಾನಕ್ಕೆ ತೆರಳುವರು. ರಾತ್ರಿ 9 ಗಂಟೆಗೆ ಕೃಷ್ಣಾ ನದಿಯಲ್ಲಿ ಪುಣ್ಯಸ್ನಾನ ಮತ್ತು ವಿಶೇಷ ಪೂಜೆಗಳು ಜರುಗಲಿವೆ. ರಾತ್ರಿ 10 ಗಂಟೆಗೆ ಗುಂತಗೋಳ ದರ್ಬಾರದಲ್ಲಿ ಪುರವಂತಿಗೆ ಸೇವೆ ಜರುಗುವುದು.

    ಮಾ.28ಕ್ಕೆ ಅಮರೇಶ ದೇವಸ್ಥಾನಕ್ಕೆ ಶ್ರೀಗಳು, ಕಳಸ, ಉತ್ಸವ ಮೂರ್ತಿ, ಪಲ್ಲಕ್ಕಿ ಸಮೇತ ಆಗಮಿಸಲಿದ್ದು, ಬೆಳಗ್ಗೆ 9 ಗಂಟೆಗೆ ತೃತೀಯ ಉತ್ಸವ ಜರುಗಲಿದೆ. ಮಧ್ಯಾಹ್ನ 2 ಗಂಟೆಗೆ ಮಹಾರಥೋತ್ಸವಕ್ಕೆ ಕಳಸಾರೋಹಣ, ಸಂಜೆ 6.30 ಗಂಟೆಗೆ ಮಹಾರಥೋತ್ಸವ ಜರುಗಲಿದೆ. ಮಾರ್ಚ್ 30ರಂದು ಆದಯ್ಯ ಮಾಳಗುಂಡಮ್ಮರ ವಿವಾಹ ಮಹೋತ್ಸವ, ಕಡುಬಿನ ಕಾಳಗ ಬಳಿಕ ಸಂಜೆ 5.30 ಗಂಟೆಗೆ ಉತ್ಸವ ರಥೋತ್ಸವ ಜರುಗಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts