More

    ಸಿನಿಮಾ ಕಾರ್ಮಿಕರಿಗೆ ರಿಲಯನ್ಸ್ ನೆರವು ಸಿಕ್ಕಿದ್ದು ಹೇಗೆ? … ಸೋಷಿಯಲ್ ಮೀಡಿಯಾದಲ್ಲಿ ಬಿ.ಎಸ್. ಲಿಂಗದೇವರು ಸುದೀರ್ಘ ಪತ್ರ

    ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರಿಗೆ ರಿಲಯನ್ಸ್ ಇಂಡಸ್ಟ್ರೀಸ್ ದೊಡ್ಡ ಮಟ್ಟದಲ್ಲಿ ನೆರವು ನೀಡಿದೆ. ದಿನನಿತ್ಯದ ಅಗತ್ಯದ ಆಹಾರ ಪದಾರ್ಥಗಳನ್ನು ಕೊಳ್ಳುವುದಕ್ಕೆ ಆರು ಸಾವಿರ ಕಾರ್ಮಿಕರಿಗೆ ರಿಲಯನ್ಸ್ ಸಂಸ್ಥೆಯಿಂದ ಕೂಪನ್‌ಗಳು ಸಿಗುತ್ತಿವೆ. ಇದರಿಂದ ಬಹಳಷ್ಟು ಜನರಿಗೆ ಉಪಯೋಗವಾಗಲಿದ್ದು, ಇದರ ಮಧ್ಯೆಯೇ ಕನ್ನಡ ಚಿತ್ರರಂಗದಲ್ಲೊಂದು ವಿಚಿತ್ರ ಬೆಳವಣಿಗೆಯಾಗುತ್ತಿದೆ. ಪ್ರಮುಖವಾಗಿ, ಈ ಕೆಲಸದ ಕ್ರೆಡಿಟ್ ಪಡೆಯುವುದಕ್ಕೆ ಹಲವರು ಪ್ರಯತ್ನಿಸುತ್ತಿದ್ದಾರೆ. ರಿಲಯನ್ಸ್ ಸಂಸ್ಥೆಯ ಗಮನಸೆಳೆದು, ಅವರಿಂದ ಸಹಾಯ ಪಡೆಯುವ ಕೆಲಸ ಮಾಡಿದ್ದು ತಾವೇ ಎಂದು ಪ್ರಚಾರ ಪಡೆಯುತ್ತಿದ್ದಾರೆ. ಇಷ್ಟಕ್ಕೂ ಕಾರ್ಮಿಕರ ಸಮಸ್ಯೆಯತ್ತ ರಿಲಯನ್ಸ್ ಗಮನಸೆಳೆದು, ನೆರವು ನೀಡುವಂತೆ ಮಾಡಿದ್ದು ಯಾರು? ಈ ಕುರಿತು ಹಿರಿಯ ನಿರ್ದೇಶಕ ಬಿ.ಎಸ್. ಲಿಂಗದೇವರು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಪತ್ರ ಬರೆದಿದ್ದಾರೆ. ಇಷ್ಟಕ್ಕೂ ಸಿನಿಮಾ ಕಾರ್ಮಿಕರಿಗೆ ರಿಲಯನ್ಸ್ ಸಂಸ್ಥೆಯಿಂದ ನೆರವು ಸಿಕ್ಕಿದ್ದು ಹೇಗೆ ಎಂದು ವಿವರಿಸಿದ್ದಾರೆ. ಆ ಪತ್ರದ ಒಕ್ಕಣಿ ಹೀಗಿದೆ …

    ಚಲನಚಿತ್ರರಂಗದ ಕೆಲ ಗಣ್ಯರು ಸೇರಿ, ಸಿನಿಮಾ ಕ್ಷೇತ್ರದ ಕಾರ್ಮಿಕ ವರ್ಗ ಮತ್ತು ಕಷ್ಟದಲ್ಲಿರುವ ಅನೇಕರಿಗೆ ಏನಾದರೂ ಸಹಾಯವಾಗಲಿ ಎಂದು ಮುಖ್ಯ ಮಂತ್ರಿಗಳು ಮತ್ತು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಪ್ರಸ್ತಾಪ ಮಾಡಿದ್ದಾರೆ. ತುರ್ತಾಗಿ ಸ್ಪಂದಿಸುವ ಸಲುವಾಗಿ ಹಲವು ಸಭೆಗಳೂ ಆಗಿವೆ. ಆದರೆ, ಸರ್ಕಾರದ ವ್ಯವಸ್ಥೆಯಲ್ಲಿ ಸಹಾಯ ಮಾಡಲು ಇತಿಮಿತಿಗಳು ಇವೆ ಎನ್ನುವುದನ್ನು ಮನಗೊಂಡ ಗಣ್ಯರು, ಬಿ.ವೈ. ವಿಜಯೇಂದ್ರ ಅವರನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ಅವರ ಗಮನಕ್ಕೂ ತಂದಿದ್ದಾರೆ.

    ತಕ್ಷಣ ವಿಜಯೇಂದ್ರ ಅವರು, ರಿಲಯನ್ಸ್‌ನವರಲ್ಲಿ ಮನವಿ ಮಾಡಿದ್ದರ ಪರಿಣಾಮ, ರಿಲಯನ್ಸ್ ಇಂಡಸ್ಟ್ರೀಸ್‌ನವರು ರೇಷನ್ ಮತ್ತು ಇತರೆ ಸಾಮಾನುಗಳನ್ನು ಖರೀದಿಸಲು ಸುಮಾರು 6000 ಕೂಪನ್‌ಗಳನ್ನು ಕೊಟ್ಟಿರುತ್ತಾರೆ. ಮೂರು ಸಾವಿರ ರೂ.ಗಳ ಮುಖ ಬೆಲೆಯ ಈ ಕೂಪನ್ ಅತ್ಯಂತ ಕಷ್ಟದಲ್ಲಿ ಇರುವವರು ಬಳಸಲು ಅವಕಾಶವಾಗಲಿ.

    ಸರ್ಕಾರ ಉಚಿತವಾಗಿ ನಂದಿನಿ ಹಾಲು ವಿತರಣೆ ಮಾಡುವಾಗ, ಉಳ್ಳವರೂ ಕೂಡ ಕ್ಯೂನಲ್ಲಿ ನಿಂತು ಪಡೆದಿರುವುದನ್ನ ನಾವು ಮಾಧ್ಯಮಗಳಲ್ಲಿ ನಿತ್ಯ ನೋಡುತ್ತಿದ್ದೇವೆ.

    ನನ್ನ ಭಾವನೆಯಲ್ಲಿ ಇದು ಸರ್ಕಾರದ ಕಾರ್ಯಕ್ರಮ ಅಲ್ಲ. ಸರ್ಕಾರ ಬೇರೆಯೇ ರೀತಿಯಲ್ಲಿ ಯೋಚನೆ ಮಾಡಿ ಯೋಜನೆ ರೂಪಿಸುತ್ತದೆ. ಅಲ್ಲಿಯವರೆಗೂ ಸಮಾಧಾನದಿಂದ , ಒಗ್ಗಟ್ಟಿನಿಂದ ಇರಬೇಕಾದ್ದು ನಮ್ಮೆಲ್ಲರ ಕರ್ತವ್ಯ. ಕನ್ನಡ ಚಿತ್ರರಂಗವನ್ನು ಮುನ್ನೆಡೆಸುವವರು ಇವತ್ತು ಇಲ್ಲ ಎಂದು ನಾನು ಹಿಂದೆಯೂ ಹೇಳಿದ್ದೆ. ಡಾ. ರಾಜಕುಮಾರ್, ವಿಷ್ಣುವರ್ಧನ್ ಮತ್ತು ಅಂಬರೀಶ್ ನಂತರ ನಾವು ಅನಾಥ ರಾಗಿದ್ದೇವೆ ಎಂದರೂ ತಪ್ಪಾಗದು. ನಮ್ಮಲ್ಲಿ ಹಲವಾರು ಸಂಘಟನೆಗಳು ಇವೆಯಾದರೂ, ಒಗ್ಗಟ್ಟು ಕಡಿಮೆ.

    ಈ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಸಿನಿಮಾ ಕ್ಷೇತ್ರಕ್ಕೆ ಚಲನಚಿತ್ರ ಅಕಾಡೆಮಿ ಸೇತುವೆ ಆಗಿ ಕೆಲಸ ಮಾಡುತ್ತಿದೆ. ಸುನೀಲ್ ಪುರಾಣಿಕ್ ಅವರು ತಮ್ಮ ಸ್ವಇಚ್ಛೆಯಿಂದ ಚಿತ್ರರಂಗದ ಹಿರಿಯರಾದ ರಾಕ್‌ಲೈನ್ ವೆಂಕಟೇಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜಯರಾಜ್, ತಾರಾ ಅನುರಾಧ ಮುಂತಾದ ಹಿರಿಯರ ಜೊತೆ ಸಂಪರ್ಕ ಇಟ್ಟುಕೊಂಡು ಮುಂದೆ ಹೋಗುತ್ತಿದ್ದಾರೆ. ನಾವು ಗಮನಿಸಬೇಕಾದ್ದು ಇದು ಅಕಾಡೆಮಿ ಕೆಲಸ ಅಲ್ಲ ಅನ್ನುವುದು. ಇಲ್ಲಿ ವೈಯಕ್ತಿಕ ಭಿನ್ನಾಭಿಪ್ರಾಯ ಏನೇ ಇದ್ದರೂ, ಅಕಾಡೆಮಿ ಸರ್ಕಾರದ ಒಂದು ಭಾಗ ಎನ್ನುವುದು ನಾವು ಮರೆಯಬಾರದು.

    ಇಂತಹ ಸಮಯದಲ್ಲಿ ನಿಖಿಲ್ ಕುಮಾರಸ್ವಾಮಿ, ಪುನೀತ್, ಉಪೇಂದ್ರ, ಬಿ. ಸರೋಜಾದೇವಿ, ಸುದೀಪ್, ದರ್ಶನ್ ಸೇರಿದಂತೆ ಹಲವರನ್ನು ನಾನು ಸ್ಮರಿಸುತ್ತಾ ಮತ್ತು ಇತರೆ ಅನೇಕ ಗಣ್ಯರೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಹೇಳಬಯಸುತ್ತೇನೆ. ವಿಶೇಷವಾಗಿ ರಿಲಯನ್ಸ್ ಇಂಡಸ್ಟ್ರೀಸ್ ನವರಿಗೆ ನನ್ನ ಧನ್ಯವಾದ. ಸತ್ಯಾಸತ್ಯತೆಗಳನ್ನು ಬಯಸುವವರು ಸತ್ಯಾನ್ವೇಷಣೆ ಮಾಡಿಕೊಳ್ಳೀ. ಅನಗತ್ಯ ಚರ್ಚೆ ಬೇಡ.

    ಇದು ಲಿಂಗದೇವರು ಅವರ ಪತ್ರದ ಒಕ್ಕಣಿ. ಇದರ ಜತೆಗೆ ಒಂದು ಕಾರ್ಟೂನ್ ಸಹ ಬಿಡಿಸಿದ್ದಾರೆ. ಇದರಲ್ಲಿ ಒಳ್ಳೆಯ ಕೆಲಸವೊಂದಕ್ಕೆ ಎಷ್ಟು ಜನ ಕ್ರೆಡಿಟ್ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದೂ ಚಿತ್ರಿಸಿದ್ದಾರೆ.

    ಲಾಕ್​ಡೌನ್​ ನಡುವೆಯೂ ನಡೆಯಿತು ನಿಖಿಲ್-ರೇವತಿ ವಿವಾಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts