More

    ಹೊಸ ಬಿಪಿಎಲ್​,ಎಪಿಎಲ್​ ಮಂಜೂರಾತಿಗೆ ಮಿತಿ ಹೇರಿಕೆ: ಸರ್ಕಾರದ ಕ್ರಮದಿಂದ ನಿರಾಸೆ

    ಬೆಂಗಳೂರು: ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಮುಗಿದ ಬಳಿಕ ಬಾಕಿ ಉಳಿದ ಅರ್ಜಿ ವಿಲೇಗೆ ಅನುಮತಿ ಸಿಗುವ ಸಾಧ್ಯತೆ ಹೆಚ್ಚಿರುವ ಬೆನ್ನಲ್ಲೇ ರಾಜ್ಯ ಸರ್ಕಾರವು ಹೊಸ ಬಿಪಿಎಲ್​,ಎಪಿಎಲ್​ ಕಾರ್ಡ್​ ಮಂಜೂರಾತಿಗೆ ಮಿತಿ ಹೇರಿದೆ.

    ನಿಗದಿಗಿಂತ ಹೆಚ್ಚುವರಿ ಕಾರ್ಡ್​ ಮಂಜೂರು ಮಾಡಬಾರದು, ಮೂರು ತಿಂಗಳಿಂದ ರೇಷನ್​ ಪಡೆಯದ ಕಾರ್ಡ್​ಗಳನ್ನು ರದ್ದು ಮಾಡಬೇಕು, ಒಂದೇ ಬಾರಿ ಅರ್ಜಿಗಳ ವಿಲೇ ಮಾಡುವಂತಿಲ್ಲ, ಆರ್ಥಿಕ ಸಬಲರು ಪಡೆದಿರುವ ಕಾರ್ಡ್​ಗಳನ್ನು ರದ್ದು ಮಾಡಿದ ಆಧಾರದ ಮೇರೆಗೆ ಹಂತ ಹಂತವಾಗಿ ಅರ್ಜಿ ವಿಲೇ ಮಾಡಿ ಬಿಪಿಎಲ್​ ನೀಡಬೇಕು, ಹಿರಿತನ ಆಧಾರದ ಮೇರೆಗೆ ಅರ್ಜಿ ವಿಲೇಗೆ ಆದ್ಯತೆ ನೀಡಬೇಕು ಸೇರಿ ಇತರೆ ಮಾನದಂಡ ವಿಧಿಸಿದೆ. ಅಧಿಕಾರಿಗಳು ಈ ಮಾನದಂಡವನ್ನು ಪಾಲಿಸಿ ಅರ್ಜಿ ವಿಲೇ ಮಾಡಬೇಕು. ಯಾರಾದರೂ ನಿಯಮ ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಸರ್ಕಾರ, ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟಿದೆ. ಹೀಗಾಗಿ, ಹೊಸ ರೇಷನ್​ ಕಾರ್ಡ್​ಗಾಗಿ ಅರ್ಜಿ ಸಲ್ಲಿಸಿ ಮೂರು ವರ್ಷದಿಂದ ಚಾತಕಪಯಂತೆ ಕಾಯುತ್ತಿರುವವರಿಗೆ ಹಾಗೂ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿರುವವರಿಗೆ ಭಾರಿ ನಿರಾಸೆಯಾಗಿದೆ. ಜತೆಗೆ,ಇನ್ನುಮುಂದೆ ರಾಜ್ಯದಲ್ಲಿ ಹೊಸ ಕಾರ್ಡ್​ ಪಡೆಯುವುದು ಗಗನ ಕುಸುಮವಾಗಿದೆ.

    2017ರಿಂದ 2021ರವರೆಗೆ ರಾಜ್ಯಾದ್ಯಂತ ಹೊಸ ಬಿಪಿಎಲ್​, ಕುಟುಂಬ ಸದಸ್ಯರ ಸೇರ್ಪಡೆ, ತಿದ್ದುಪಡಿ ಕೋರಿ ಇಲಾಖೆಗೆ ಸಲ್ಲಿಕೆಯಾದ ಒಟ್ಟು 39,04,798 ಅರ್ಜಿಗಳ ಪೈಕಿ 26,48,171 ಅರ್ಜಿಗಳು ಅನುಮೋದನೆಗೊಂಡರೆ, 9,60,641 ಅರ್ಜಿಗಳು ತಿರಸ್ಕಾರಗೊಂಡಿವೆ. 36,08,812 ಅರ್ಜಿಗಳು ವಿಲೇವಾರಿಯಾದರೆ 2,95,986 ಬಾಕಿ ಉಳಿದಿವೆ. 2023ರ ಮೇನಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿತ್ತು. ಇದರಿಂದಾಗಿ ಪಡಿತರ ಚೀಟಿ ನೀಡಲು, ಸೇರ್ಪಡೆ, ತಿದ್ದುಪಡಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಅಂದಿನಿಂದ ಈವರೆಗೆ ಬಾಕಿ ಅರ್ಜಿಗಳ ವಿಲೇವಾರಿಗೆ ಹೊಸ ಸರ್ಕಾರ ಅನುಮತಿ ಕೊಟ್ಟಿಲ್ಲ. ಹೀಗಾಗಿ, ಬಾಕಿ ಅರ್ಜಿಗಳ ವಿಲೇವಾರಿಗೆ ಅನುಮತಿ ಕೋರಿ ಸರ್ಕಾರಕ್ಕೆ ಆಹಾರ ಇಲಾಖೆ ಪತ್ರ ಬರೆದಿತ್ತು. ಹೊಸ ಬಿಪಿಎಲ್​ ಕೋರಿ ಹೃದಯ ಸಮಸ್ಯೆ ಸೇರಿ ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರ ಸಾಕಷ್ಟು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಿಪಿಎಲ್​ ಪ್ರಮುಖವಾಗಿದೆ.ಇವರಿಗಾದರೂ ಕಾರ್ಡ್​ ಕೊಡಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಇಲಾಖೆ ಮನವಿ ಮಾಡಿಕೊಂಡಿತ್ತು. ಆದರೂ, ಸರ್ಕಾರ ಇದಕ್ಕೆ ಅನುಮತಿ ಕೊಟ್ಟಿಲ್ಲ.

    ತಾಯಿ ಎದುರೇ 15 ತಿಂಗಳ ಮಗುವನ್ನು ಬರ್ಬರವಾಗಿ ಕೊಂದು ಶವವನ್ನು ಚರಂಡಿಗೆ ಎಸೆದ ಪ್ರೇಮಿ

    ನಿಗದಿಗಿಂತ ಹೆಚ್ಚು ಕಾರ್ಡ್​ಗಳಿವೆ
    ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್​ಎ್​ಎಸ್​ಎ) ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಶೇ.76.04 ನಗರ ಪ್ರದೇಶಗಳಲ್ಲಿ ಶೇ.49.36 ಸೇರಿ ಒಟ್ಟು 3,58,87,666 ಲಾನುಭವಿಗಳಿಗೆ 1,03,70,669 ಬಿಪಿಎಲ್​ ಕಾರ್ಡ್​ ನೀಡಬೇಕೆಂಬ ನಿಯಮವಿದೆ. ಆದರೆ, ರಾಜ್ಯದಲ್ಲಿ ಸದ್ಯ 3,92,54,052 ಲಾನುಭವಿಗಳಿಗೆ 1,16,98,551 ರೇಷನ್​ ಕಾರ್ಡ್​ ನೀಡಲಾಗಿದೆ. ನಿಗದಿಗಿಂತ ಹೆಚ್ಚುವರಿಯಾಗಿ 13,27,882 ಬಿಪಿಎಲ್​ ಕಾರ್ಡ್​ ನೀಡಲಾಗಿದೆ. ಇದರಿಂದಾಗಿ ಪ್ರತಿ ವರ್ಷ ಸರ್ಕಾರಕ್ಕೆ ನೂರಾರು ಕೋಟಿ ರೂ.ಆರ್ಥಿಕ ಹೊರೆಯಾಗುತ್ತಿದೆ. ಹೀಗಾಗಿ, ಹೊಸ ಬಿಪಿಎಲ್​, ಎಪಿಎಲ್​ ಮಂಜೂರಾತಿಗೆ ಮಿತಿ ಹೇರಿದೆ. ರೇಷನ್​ ಕಾರ್ಡ್​ನಲ್ಲಿ ಹೆಸರು ಬದಲಾವಣೆ, ಆಧಾರ್​ ಕಾರ್ಡ್​ನಲ್ಲಿರುವ ಹೆಸರು ಸೇರ್ಪಡೆ, ಹೊಸ ಸದಸ್ಯರು ಸೇರಿಸುವುದು, ಯಾರಾದರೂ ಮೃತಪಟ್ಟರೆ ಅಂಥವರ ಹೆಸರು ಡಿಲೀಟ್​, ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ವರ್ಗಾವಣೆ ಹಾಗೂ ವಿಳಾಸ ಪರಿಷ್ಕರಣೆ ಮಾಡುವುದನ್ನೂ ಸ್ಥಗಿತಗೊಳಿಸಲಾಗಿದೆ.

    ಬಾಕಿ ಅರ್ಜಿಗಳ ಜಿಲ್ಲಾವಾರು ವಿವರ
    ಬೆಂಗಳೂರು 39785, ಬೆಳಗಾವಿ 27486, ಬಾಗಲಕೋಟೆ 11,563, ಬಳ್ಳಾರಿ 8946, ಬೆಂ. ಗ್ರಾಮಾಂತರ 5.403, ಬೀದರ್​ 12,930, ಚಾಮರಾಜನಗರ 4,583, ಚಿಕ್ಕಬಳ್ಳಾಪುರ 5,697, ಚಿಕ್ಕಮಗಳೂರು 3,758, ಚಿತ್ರದುರ್ಗ 6,134, ದಣ ಕನ್ನಡ 5,526, ದಾವಣಗೆರೆ 4,905, ಧಾರವಾಡ 13,992, ಗದಗ 9,691, ಹಾಸನ 5,022, ಹಾವೇರಿ 10,465, ಕಲಬುರಗಿ 20,303, ಕೊಡಗು 2,121, ಕೋಲಾರ 4,507, ಕೊಪ್ಪಳ 8,033, ಮಂಡ್ಯ 5,023, ಮೈಸೂರು 8,317, ರಾಯಚೂರು 12,587, ರಾಮನಗರ 3,253, ಶಿವಮೊಗ್ಗ 6,025, ತುಮಕೂರು 7,822, ಉಡುಪಿ 4,219, ಉತ್ತರ ಕನ್ನಡ 7,427, ವಿಜಯನಗರ 7,254, ವಿಜಯಪುರ 17,261, ಯಾದಗಿರಿ 6,367 ಅರ್ಜಿಗಳು.

    ಎಪಿಎಲ್​ಗೂ ಮಿತಿ
    ರಾಜ್ಯಾದ್ಯಂತ ಒಟ್ಟು 24 ಲಕ್ಷ ಎಪಿಎಲ್​ ಕಾರ್ಡ್​ಗಳಿದ್ದು, ಇದರಲ್ಲಿ ಶೇ.80 ಕಾರ್ಡ್​ದಾರರು ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ ರೇಷನ್​ ಪಡೆಯುತ್ತಿಲ್ಲ. ಹೀಗಾಗಿ, ರೇಷನ್​ ಪಡೆಯದ ಕಾರ್ಡ್​ಗಳಿಗೆ ರೇಷನ್​ ನಿಲ್ಲಿಸಲು ಆಹಾರ ಇಲಾಖೆ ನಿರ್ಧಾರ ತೆಗೆದುಕೊಂಡಿದೆ. ಬಡತನ ರೇಖೆಗಿಂತ ಮೇಲ್ಪಟ್ಟವರಿಗೆ ಇಲಾಖೆ ಎಪಿಎಲ್​ ನೀಡುತ್ತಿದೆ. ಇನ್ನುಮುಂದೆ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಗುರುತಿನ ಚೀಟಿಗಾಗಿ ಮಾತ್ರವೇ ಅಥವಾ ರೇಷನ್​ಕ್ಕಾಗಿಯೋ ಎಂಬುದನ್ನೂ ಪ್ರತ್ಯೇಕವಾಗಿ ನಮೂದಿಸಿ ಎಪಿಎಲ್​ ಕಾರ್ಡ್​ ಮಂಜೂರು ಮಾಡಲಾಗುತ್ತಿದೆ. ಒಂದು ವೇಳೆ ಕೇವಲ ಗುರುತಿನ ಚೀಟಿಗೆ ಕಾರ್ಡ್​ ಪಡೆಯುವವರಿಗೆ ರೇಷನ್​ ಸಿಗುವುದಿಲ್ಲ.ಎಪಿಎಲ್​ಗೆ ವ್ಯಯಸುತ್ತಿರುವ ಅನುದಾನವನ್ನು ಕಡಿತಗೊಳಿಸಿ ಬಿಪಿಎಲ್​ ಪಡಿತರದಾರರಿಗೆ ಬೇರೆ ರೇಷನ್​ ನೀಡುವ ಬಗ್ಗೆ ಚಿಂತನೆಯೂ ನಡೆದಿದೆ.

    ಸರ್ಕಾರದ ಮಿತಿಗಳೇನು?
    * ನಿಗದಿಗಿಂತ ಹೆಚ್ಚುವರಿ ಬಿಪಿಎಲ್​ ಕಾರ್ಡ್​ ಮಂಜೂರು ಮಾಡಬಾರದು
    * 3 ತಿಂಗಳಿಂದ ರೇಷನ್​ ಪಡೆಯದ ಕಾರ್ಡ್​ ರದ್ದು ಮಾಡಬೇಕು
    * ಒಂದೇ ಬಾರಿ ಅರ್ಜಿಗಳ ವಿಲೇ ಮಾಡುವಂತಿಲ್ಲ
    * ಅನರ್ಹರು ಪಡೆದಿರುವ ಬಿಪಿಎಲ್​ ಚೀಟಿ ರದ್ದು ಮಾಡಿದ ಆಧಾರದಲ್ಲಿ ಹಂತ ಹಂತವಾಗಿ ಅರ್ಜಿ ವಿಲೇ
    * ಹಿರಿತನ ಆಧಾರದ ಮೇರೆಗೆ ಅರ್ಜಿ ವಿಲೇಗೆ ಆದ್ಯತೆ ನೀಡಬೇಕು
    * ರೇಷನ್​ ಪಡೆಯದ ಎಪಿಎಲ್​ ಕಾರ್ಡ್​ ರದ್ದು ಮಾಡಬೇಕು
    * ಹೊಸ ಎಪಿಎಲ್​ಗೆ ಅರ್ಜಿ ಸಲ್ಲಿಸುವವರಿಗೆ ಗುರುತಿನ ಚೀಟಿಗಾಗಿ ಅಥವಾ ರೇಷನ್​ಕ್ಕಾಗಿಯೋ ಎಂಬುದನ್ನೂ ಪ್ರತ್ಯೇಕವಾಗಿ ನಮೂದಿಸಿ ಕಾರ್ಡ್​ ಮಂಜೂರು
    * ಕೇವಲ ಗುರುತಿನ ಚೀಟಿಗೆ ಕಾರ್ಡ್​ ಪಡೆಯುವವರಿಗೆ ರೇಷನ್​ ನೀಡಬಾರದು

    ಜನರಿಗೆ ಏನೇನು ತೊಂದರೆ?
    * ಹೊಸದಾಗಿ ಅರ್ಜಿ ಸಲ್ಲಿಸಲು ಆಗಲ್ಲ
    *ಹೃದಯ ಸಮಸ್ಯೆ ಸೇರಿ ಇತರೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ತೊಂದರೆ
    * ಆಸ್ಪತ್ರೆಯಲ್ಲಿ ಲಾಂತರ ರೂ.ಬಿಲ್​ ಹೊರೆ
    * ಶಿಕ್ಷಣ ಹಕ್ಕು ಕಾಯ್ದೆ(ಆರ್​ಟಿಇ) ಸವಲತ್ತು ಸಿಗಲ್ಲ
    * ಪಿಂಚಣಿ, ಹೊಸ ಮನೆ ಸೌಲಭ್ಯವೂ ದೊರೆಯಲ್ಲ
    * ಸರ್ಕಾರದಿಂದ ಸಿಗಬೇಕಿದ್ದ ಎಲ್ಲ ಸೌಲಭ್ಯದಿಂದ ವಂಚಿತ
    * ಉಚಿತ ಅಕ್ಕಿ ದೊರೆಯಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts