More

    ಕೊಲೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, ಪ್ರಿಯಕರನ ಜತೆಗೂಡಿ ಪತಿಯ ಹತ್ಯೆ ಪ್ರಕರಣ

    ಮಂಗಳೂರು: ಪ್ರಿಯಕರನ ಜತೆಗೂಡಿ ಪತಿಯ ಕೊಲೆಗೈದ ಪ್ರಕರಣದಲ್ಲಿ ಇಬ್ಬರಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
    ಮೂಡುಬಿದಿರೆ ಕುಕ್ಕುದಕಟ್ಟೆ ಮೂಡುಕೊಣಾಜೆ ಗ್ರಾಮದ ಅಶ್ವಿನಿ ಯಾನೆ ಮಮತಾ ಹಾಗೂ ಅದೇ ಗ್ರಾಮದ ಆನಂದ ಮೇರ ಶಿಕ್ಷೆಗೊಳಗಾದವರು. ಜಯರಾಜ್ ಕೊಲೆಯಾದವರು.

    ಪ್ರಕರಣದ ಹಿನ್ನೆಲೆ: ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಪೇರಮೊಗರಿನ ಜಯರಾಜ್ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. 2014ರಲ್ಲಿ ಅಶ್ವಿನಿ ಜತೆ ವಿವಾಹವಾಗಿದ್ದು, ಮೂಡುಬಿದಿರೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. 2015ರಲ್ಲಿ ಅಶ್ವಿನಿ ಗರ್ಭಿಣಿಯಾಗಿ ತವರು ಮನೆಗೆ ಹೆರಿಗೆಗೆ ಹೋಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.

    ಅದೇ ಊರಿನ ಆನಂದ ಮೇರನೊಂದಿಗೆ ಸಂಬಂಧವಿರಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಪತಿ-ಪತ್ನಿ ನಡುವೆ ವೈಮನಸ್ಸು ಉಂಟಾಗಿತ್ತು. ತಾಯಿ ಮನೆಯಲ್ಲಿದ್ದ ಅಶ್ವಿನಿ 2016ರ ಸೆ.13ರಂದು ಪತಿಯನ್ನು ಹಣ ಕೊಡುವುದಾಗಿ ಮನೆಗೆ ಕರೆಸಿ ಆನಂದನ ಜತೆ ಸೇರಿ ಕೊಲೆ ಮಾಡಲು ಸಂಚು ರೂಪಿಸಿದ್ದಳು. ಬೆಳಗ್ಗೆ 11.30ರ ವೇಳೆಗೆ ಬಂದಾಗ ಮನೆಯೊಳಗೆ ಹಣದ ಬಗ್ಗೆ ವಿಚಾರಿಸುತ್ತಿದ್ದ ವೇಳೆ ಆನಂದ ಮೇರ ಕಬ್ಬಿಣದ ರಾಡ್‌ನಿಂದ ಜಯರಾಜ್‌ನ ತಲೆಗೆ ಹೊಡೆದು, ಹೊಟ್ಟೆಗೆ ತಿವಿದು ಕೊಲೆ ಮಾಡಿದ್ದ. ಜಯರಾಜ್‌ನ ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿ ಮನೆ ಹಿಂಬದಿಯ ಶಾಲೆ ಕಾಂಪೌಂಡ್ ಬಳಿ ಅಡಗಿಸಿಟ್ಟಿದ್ದ. ಮೊಬೈಲ್, ಎಟಿಎಂ ಕಾರ್ಡ್ ಇತ್ಯಾದಿ ವಸ್ತುಗಳನ್ನು ತೆಗೆದು ದೇಹವನ್ನು ಪಾಳುಬಾವಿಗೆ ಹಾಕಿದ್ದ. ಮೃತದೇಹ ಕೊಳೆತಾಗ ವಾಸನೆ ಬಾರದ ಹಾಗೆ ರಾಸಾಯನಿಕ ವಸ್ತುವನ್ನೂ ಹಾಕಿದ್ದ.

    ಪೊಲೀಸರ ತನಿಖೆಯ ದಿಕ್ಕು ತಪ್ಪಿಸುವ ಉದ್ದೇಶದಿಂದ ಅಶ್ವಿನಿ ಪತಿ ಕಾಣೆಯಾಗಿದ್ದಾರೆ ಎಂದು ಸೆ.16ರಂದು ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.
    ಮೂಡುಬಿದಿರೆ ಇನ್‌ಸ್ಪೆಕ್ಟರ್ ರಾಮಚಂದ್ರ ನಾಯಕ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಬಸಪ್ಪ ಬಾಲಪ್ಪ ಜಕಾತಿ ಅಭಿಯೋಜನಾ ಪರವಾಗಿ ಒಟ್ಟು 36 ಮಂದಿ ಸಾಕ್ಷಿದಾರರನ್ನು ವಿಚಾರಿಸಿ ಆನಂದ ಮತ್ತು ಅಶ್ವಿನಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದರು. 10 ಸಾವಿರ ರೂ. ಹಣವನ್ನು ಜಯರಾಜ್ ಅವರ ತಾಯಿಗೆ ನೀಡುವಂತೆ ಹಾಗೂ ಜಯರಾಜ್ ಅವರ ಮಗಳಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಆದೇಶಿಸಿ ತೀರ್ಪು ನೀಡಿದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ನಾರಾಯಣ ಶೇರಿಗಾರ್ ಯು. ವಾದ ಮಂಡಿಸಿದ್ದಾರೆ.

    ಅಪಹರಣ ನಾಟಕ: ಕೊಲೆ ನಡೆಸಿದ ಬಳಿಕ ಆರೋಪಿ ಆನಂದನು ಜಯರಾಜ್‌ನನ್ನು ಅಪಹರಿಸಿರುವುದಾಗಿ ನಾಟಕ ಮಾಡಿದ್ದ. ಇದಕ್ಕೆ ಶ್ರೀಪತಿ ಮತ್ತು ಧನಪತಿ ಎಂಬುವರು ಸಹಕರಿಸಿದ್ದರು. ಜಯರಾಜ್‌ನ ಮೊಬೈಲ್ ಸಿಮ್ ಬಳಸಿ ತಾಯಿಗೆ ಕರೆ ಮಾಡಿ, ‘ಜಯರಾಜ್ ನಮಗೆ 62 ಸಾವಿರ ರೂ. ನೀಡಬೇಕಿತ್ತು. ಅದಕ್ಕಾಗಿ ಕರೆದುಕೊಂಡು ಬಂದಿದ್ದೇವೆ. ಹಣ ಬರುವವರೆಗೆ ದುಡಿಸಿ ಬಳಿಕ ಕಳುಹಿಸುತ್ತೇವೆ’ ಎಂದಿದ್ದರು. ಇದರಿಂದ ಅನುಮಾನಗೊಂಡ ಜಯರಾಜ್ ಅಣ್ಣ ಗಿರೀಶ್ ಸೆ.22ರಂದು ಮೂಡುಬಿದಿರೆ ಠಾಣೆಗೆ ಅಪಹರಣ ಬಗ್ಗೆ ದೂರು ದಾಖಲಿಸಿದ್ದರು. ತನಿಖೆ ನಡೆಸಿದಾಗ ಅದು ಕೊಲೆ ಪ್ರಕರಣವೆಂದು ತಿಳಿದು ಬಂದಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts