More

    ಹಣ ಕೊಡು, ಇಲ್ಲವೇ ಜಮೀನು ಪತ್ರ ತಂದ್ಕೊಡು; ಜೈಲಿನಲ್ಲಿ ಕುಳಿತೇ ರೌಡಿಯಿಂದ ಚಿನ್ನಾಭರಣ ವ್ಯಾಪಾರಿಗೆ ಬೆದರಿಕೆ!

    ವಿಜಯಪುರ: ಭೀಮಾತೀರದ ರೌಡಿಶೀಟರ್ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ದಾಳಿ ನಡೆಸಿ ಅಂದರ್ ಆಗಿರುವ ಆರೋಪಿ ಮಡುಸ್ವಾಮಿ ಇದೀಗ ದರ್ಗಾ ಜೈಲಿನಲ್ಲಿ ಕುಳಿತುಕೊಂಡೇ ಡೀಲ್‌ಗೆ ಮುಂದಾಗಿದ್ದಾನೆ ಎನ್ನಲಾದ ಪ್ರಕರಣ ಬೆಳಕಿಗೆ ಬಂದಿದೆ!

    ನಗರದ ಚಿನ್ನಾಭರಣ ತಯಾರಕನಿಗೆ ಕರೆ ಮಾಡಿ ಆಸ್ತಿ ಇಲ್ಲವೇ ಒಂದು ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇರಿಸಿದ್ದಲ್ಲದೇ ಅದಕ್ಕೆ ಜಗ್ಗದ ಕಾರಣ ಲಾಂಗ್, ರಾಡ್ ಹಾಗೂ ಹಾಕಿ ಸ್ಟಿಕ್‌ನಿಂದ ಹಲ್ಲೆಗೆ ಯತ್ನಿಸಿ ಇದ್ದ ಹಣ ಕಿತ್ತುಕೊಳ್ಳಲಾಗಿದೆ. ಇದೆಲ್ಲವೂ ಮಡುಸ್ವಾಮಿ ಜೈಲಿನಲ್ಲಿ ಕುಳಿತುಕೊಂಡೇ ನಿಭಾಯಿಸಿದ್ದಾನೆಂದು ಹಲ್ಲೆಗೊಳಗಾದ ವ್ಯಾಪಾರಿ ದೂರಿನಲ್ಲಿ ತಿಳಿಸಿದ್ದಾರೆ.

    ಅಂದ ಹಾಗೆ ಕುಕೃತ್ಯಕ್ಕೆ ಸಿಲುಕಿದ ವ್ಯಾಪಾರಿ ಇಲ್ಲಿನ ರಹೀಮ ನಗರದ ಸೈಪೊದೀನ ಶಿರಾಜ ಶೇಖ ಎಂಬುವರಾಗಿದ್ದು, ಗಾಂಧಿ ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಮೂಲಕ ಶೇಖ ಪೊಲೀಸರ ಮೊರೆ ಹೋಗಿದ್ದಾನೆ.

    ಏನಿದು ಪ್ರಕರಣ?: ಡಿ. 15ರಂದು ಬೆಳಗ್ಗೆ 11.30 ರ ಸುಮಾರಿಗೆ ಗಾಂಧಿ ಚೌಕ್ ಹತ್ತಿರದ ಆಜಾದ್ ರಸ್ತೆಯಲ್ಲಿರುವ ಅಂಗಡಿಯಲ್ಲಿ ಒಡೆವೆ ತಯಾರಿಸುತ್ತಿದ್ದ ಸೈಪೊದೀನ್ ಶಿರಾಜ್ ಶೇಖ ಹತ್ತಿರ ಸಿದ್ದು ಎಂಬಾತ ಬಂದಿದ್ದಾನೆ. ಜೈಲಿನಿಂದ ಮಡುಸ್ವಾಮಿ ತನ್ನನ್ನು ಕಳುಹಿಸಿದ್ದು ನಿನ್ನ ಜೊತೆ ಆತ ಮಾತನಾಡಬೇಕಿದೆ ಎಂದಿದ್ದಾನೆ. ಅದಕ್ಕೆ ಶೇಖ ಮಡುಸ್ವಾಮಿ ಯಾರು ಗೊತ್ತಿಲ್ಲ ಎಂದಾಗ ಸಿದ್ದು ಫೋನ್ ಮಾಡಿ ಶೇಖ್ ಕೈಗೆ ಕೊಟ್ಟಿದ್ದು, ಆ ಕಡೆಯಿಂದ ‘ನಾನು ಮಡು ಸ್ವಾಮಿ ದರ್ಗಾ ಜೈಲಿನಿಂದ ಮಾತನಾಡುತ್ತಿದ್ದೇನೆ. ನಾವು ಮಹಾದೇವ ಸಾಹುಕಾರನ ಕೊಲೆಗೆ ಸ್ಕೆಚ್ ಹಾಕಿದ್ದು ನಿನಗೆ ಗೊತ್ತಿರಬೇಕಲ್ಲ. ಅದು ನಾನೇ ನಮ್ಮದೇ ಗ್ಯಾಂಗ್’ ಎಂದಿದ್ದಾನೆ. ಅದಕ್ಕೆ ಶೇಖ ‘ನನ್ನ ಹತ್ತಿರ ಏನು ಕೆಲಸ?’ ಎನ್ನಲಾಗಿ ಅತ್ತಲಿಂದ ಅವಾಚ್ಯ ಶಬ್ದಗಳಿಂದ ಬೈದಾಡಲು ಶುರು ಮಾಡಿದ್ದಾನೆ. ಅಲ್ಲದೇ, ‘ನೀನು ಇಂಡಿ ರಸ್ತೆಯ ಜಾಗ ಖರೀದಿಯ ಇಸಾರ ಪತ್ರ ಮಾಡಿಕೊಂಡಿದ್ದು ಅದರಲ್ಲ ನನಗೂ ಪಾಲು ಬೇಕು, ಒಂದು ಕೋಟಿ ರೂಪಾಯಿ ಕೊಡು, ಇಲ್ಲದಿದ್ದರೆ ನಮ್ಮ ಗ್ಯಾಂಗ್ ಗುಂಡು ಹಾಕಿ ಖಲಾಸ್ ಮಾಡಿಬಿಡುತ್ತದೆ’ ಎಂದು ಜೀವ ಭಯ ಹಾಕಿದ್ದಾನೆ.

    ಬಳಿಕ ಮಡುಸ್ವಾಮಿಯಿಂದ ಮತ್ತೊಬ್ಬ ಫೋನ್ ತೆಗೆದುಕೊಂಡನು. ಆತ ‘ತನ್ನ ಹೆಸರು ಶಿವಾನಂದ ನಿಂಗೊಂಡ ಚಿಕ್ಕೋಡಿ ಎಂದಾಗಿದ್ದು, 1 ಕೋಟಿ ರೂಪಾಯಿ ಕೊಡಬೇಕು. ಇಲ್ಲ ಅಂದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ’ ಎಂದು ಫೋನ್ ಅಕ್ಬರ್ ಬಾಗವಾನ ಮತ್ತು ಶಿವಾಜಿ ರಾಮು ಚವಾಣ್ ಇವರಿಗೆ ಕೊಟ್ಟಿದ್ದು ಅವರು ಸಹ ಅಶ್ಲೀಲವಾಗಿ ಬೈಯುತ್ತಾ ‘ನಾವು ಎಲ್ಲರೂ ರೌಡಿಗಳು. ಮರ್ಡ್‌ರ್, ಸುಲಿಗೆಗೆ ಅಂತಾನೆ 100 ಜನರ ಗ್ಯಾಂಗ್ ತಯಾರ ಮಾಡಿವಿ. ನಿನಗೆ ಜೀವ ಸಹಿತ ಬಿಡುವುದಿಲ್ಲ’ ಎಂದಿದ್ದಾರೆ.

    ಹಲ್ಲೆಗೆ ಯತ್ನ: ಸತತ ಒಂದು ವಾರದಿಂದ ಬೇರೆ ಬೇರೆ ನಂಬರ್‌ಗಳಿಂದ ಶೇಖಗೆ ಫೋನ್ ಮಾಡಿದ್ದು ಅಲ್ಲದೇ ಅಂಗಡಿಗೆ ಬಂದಿದ್ದ ಸಿದ್ದು ಎಂಬ ವ್ಯಕ್ತಿ ಇಸಾರ ಪತ್ರದ ಬಾಂಡ್ ಪೇಪರ್ ಕೊಡಲು ಒತ್ತಾಯಿಸಿದ್ದಾನೆ. ಆಗ ಆ ಪತ್ರ ವಕೀಲರ ಬಳಿ ಇದೆ ಎಂದು ಹೇಳಿದರೂ ಕೇಳದ ಕಾರಣ ಶೇಖ ಬಾಂಡ್ ಪೇಪರ್ ತರಲೆಂದು ಮನೆಗೆ ಹೋಗಿದ್ದಾನೆ. ಪುನಃ ಫೋನ್ ಮಾಡಿದ ಸಿದ್ದು ಅಂಗಡಿ ಬಳಿ ಬರಲು ಹೇಳಿದನು. ಬಳಿಕ ಬಸ್ ನಿಲ್ದಾಣ ಬಳಿ ಬರಲು ಹೇಳಿದ್ದು ಆಗ ಶೇಖ ಅತೀಕ ಹಬ್ಬು ಮಕಾನದಾರ ಹಾಗೂ ಮಹ್ಮದಫಾರೂಕ ಹನೀಫ್ ಸುತಾರ ಇವರೊಂದಿಗೆ ಬಸ್ ನಿಲ್ದಾಣ ಬಳಿಯ ತಾಜೋದ್ದೀನ್ ಹೋಟೆಲ್ ಹತ್ತಿರ ಹೋದಾಗ 12-14 ಜನರ ಗುಂಪು ಕೈಯಲ್ಲಿ ಹಾಕಿ ಸ್ಟಿಕ್, ರಾಡ್ ಹಾಗೂ ಇನ್ನಿತರ ಆಯುಧ ಹಿಡಿದು ‘ಬಾಂಡ್ ಪೇಪರ್ ಕೊಡು, ಇಲ್ಲ ಅಂದರೆ 1 ಕೋಟಿ ರೂಪಾಯಿ ಕೊಡು’ ಎಂದು ಅಶ್ಲೀಲವಾಗಿ ಬೈದಾಡಿದ್ದಾರೆ. ಅಲ್ಲದೇ ಸಿದ್ದು ಎಂಬಾತ ‘ಮಡು ಅಣ್ಣ, ಶಿವಾನಂದ ಇಕ್ಕೋಡಿ, ಅಕ್ಬರ್ ಬಾಗವಾನ, ಶಿವಾಜಿ ಚವಾಣ್ ಇವರು ಈತನಿಗೆ ಖಲಾಸ್ ಮಾಡಲು ಹೇಳಿದ್ದಾರೆ. ಇವನಿಗೆ ಖಲಾಸ್ ಮಾಡುತ್ತೇನೆ’ ಎಂದವನೇ ಕೈಯಲ್ಲಿ ತಂದಿದ್ದ ಲಾಂಗ್ ಜೋರಾಗಿ ಕುತ್ತಿಗೆಗೆ ಹೊಡೆಯಲು ಬೀಸಿದ್ದು, ಆಗ ಶೇಖ ತಪ್ಪಿಸಿಕೊಂಡಿದ್ದಾನೆ. ಕೂಡಲೇ ಉಳಿದವರು ಸಹ ಲಾಂಗ್, ರಾಡ್, ಹಾಕಿ ಸ್ಟಿಕ್‌ನಿಂದ ಹಲ್ಲೆ ಮಾಡಲು ಯತ್ನಿಸಿ ಹಣ ಕಿತ್ತುಕೊಂಡು ಹೋಗಿದ್ದಾರೆ.

    ಡಿ. 16ರಂದು ಗಾಂಧಿ ಚೌಕ್ ಠಾಣೆಗೆ ನೀಡಿದ ದೂರಿನಲ್ಲಿ ಶೇಖ ಈ ಎಲ್ಲ ವಿವರ ದಾಖಲಿಸಿದ್ದು, ಪ್ರಕರಣದ ತನಿಖೆ ಎಲ್ಲಿಗೆ ಬಂದಿದೆ? ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಎಸ್‌ಪಿ ಎಚ್.ಡಿ. ಆನಂದಕುಮಾರ ಅವರನ್ನು ‘ವಿಜಯವಾಣಿ’ ಸಂಪರ್ಕಿಸಲಾಗಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts