More

    ಗುಡಿಸಲಲ್ಲೇ ಕಮರುತ್ತಿದೆ ಬದುಕು

    ನರೇಂದ್ರ ಎಸ್.ಮರ್ಸಣಿಗೆ ಹೆಬ್ರಿ
    ಅಡಕೆ ಸೋಗೆಯ ಮೇಲ್ಮೈ.. ಅದರ ಕೆಳಗೆ ಅಲ್ಪಸ್ವಲ್ಪ ಟಾರ್ಪಲ್… ಅಡಕೆ ಹಾಳೆಯದೇ ಗೋಡೆ… ಇಂಥ ಮನೆಯಲ್ಲಿ ಕುಟುಂಬವೊಂದು ಜೀವನ ಸಾಗಿಸುತ್ತಿದೆ. ಅದೂ ಸರ್ಕಾರದ ಯಾವುದೇ ಸೌಲಭ್ಯವಿಲ್ಲದೆ.

    ತಾಲೂಕಿನ ಮುದ್ರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡಾಳ ಸಮೀಪ ಮಂಗನಜಿಡ್ಡು ಎಂಬಲ್ಲಿ ಎಸ್ಟಿ ಕುಟುಂಬವೊಂದು ಶೋಚನೀಯ ಸ್ಥಿತಿಯಲ್ಲಿ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದು ಸ್ವಾತಂತ್ರೃದ 75 ವರ್ಷದ ಸಂಭ್ರಮದಲ್ಲಿರುವ ಈ ಕಾಲದಲ್ಲೂ ಹಳ್ಳಿಗಾಡಿನ ಜನರ ಜೀವನ ಇನ್ನೂ ಶೋಚನೀಯ ಸ್ಥಿತಿಯಲ್ಲಿದೆ ಎಂಬುದಕ್ಕೆ ನಿದರ್ಶನ ಒದಗಿಸುವಂತಿದೆ.

    ಈ ಕುಟುಂಬದ ಹಿರಿಯರು ಮೂಲತಃ ಉಪ್ಪಳ ಪ್ರದೇಶದವರು. ಕೆಲವು ವರ್ಷಗಳ ಹಿಂದೆ ಉದ್ಯೋಗ ಅರಸಿಕೊಂಡು ತೀರ್ಥಹಳ್ಳಿಗೆ ಹೋದವರು ಸುಮಾರು ನಾಲ್ಕು ವರ್ಷ ಅಲ್ಲಿ ಜೀವನ ನಡೆಸಿದರು. ಸರಿಯಾದ ಕೂಲಿ ಸಿಗದ ಕಾರಣಕ್ಕೆ ಮತ್ತೆ ಗುಂಡಾಳಕ್ಕೆ ಬಂದು ಮಂಗನಜಿಡ್ಡುವಿನಲ್ಲಿ ನೆಲೆ ನಿಂತಿದ್ದಾರೆ. ಗುಡಿಸಲಿಗೆ ಟಾರ್ಪಲ್ ಮತ್ತು ಅಡಕೆ ಸೋಗೆಯ ಮೇಲ್ಮೈ ಹೊದಿಕೆ ಹೊಂದಿದ್ದು ಕೆಳ ಪದರಗಳಲ್ಲಿ ಅಡಕೆ ಹಾಳೆ ಹೊದಿಸಲಾಗಿದೆ. ಮಳೆಗಾಲದಲ್ಲಿ ನೀರು ಬರುವುದು, ಸೋರುವುದು ಸರ್ವೇ ಸಾಮಾನ್ಯ. ಕಾಡುಪ್ರಾಣಿಗಳ ಉಪಟಳ ಬೇರೆ. ಯಾವುದೇ ಸರ್ಕಾರಿ ಸೌಲಭ್ಯ ಇವರಿಗೆ ಸಿಗುತ್ತಿಲ್ಲ. ಕುಟುಂಬದ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಮನೆಯಲ್ಲಿ ಹಿರಿಯರಾದ ಗೌರಮ್ಮ, ಮಗ ವಿಶ್ವನಾಥ ಹಾಗೂ ಸೊಸೆ ಮತ್ತು ಇಬ್ಬರು ಮೊಮ್ಮಕ್ಕಳಿದ್ದಾರೆ.

    ತಮ್ಮ ವಾಸ್ತವ್ಯದ ಬಗ್ಗೆ ಈ ಕುಟುಂಬದಲ್ಲಿ ಸೂಕ್ತ ದಾಖಲೆಗಳಿಲ್ಲದಿರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದಕ್ಕಾಗಿ ಕುಟುಂಬದವರು ಗ್ರಾಮ ಪಂಚಾಯಿತಿಯನ್ನು ಸಂದರ್ಶಿಸಿದಾಗ ವಲಸೆ ದೃಢೀಕರಣ ಪತ್ರವನ್ನು ತೀರ್ಥಹಳ್ಳಿಯಿಂದ ತರಲು ಸೂಚನೆ ನೀಡಿದ್ದಾರೆ. ಪಡಿತರ ಚೀಟಿ, ಆಧಾರ್ ಕಾರ್ಡ್, ವೋಟರ್ ಐಡಿ ಯಾವುದೂ ಇವರ ಬಳಿಯಿಲ್ಲ!

    ಬಟ್ಟೆ ಅಡ್ಡ ಕಟ್ಟಿ ಸ್ನಾನ: ಒಂದೆಡೆ ಬಯಲು ಶೌಚಮುಕ್ತ ಪ್ರದೇಶ ಎಂಬ ಕೂಗು ಇರುವ ಮಧ್ಯೆ ಈ ಕುಟುಂಬ ಸ್ನಾನ ಮತ್ತು ಶೌಚಕ್ಕೆ ಸಮೀಪದ ಕಾಡನ್ನೇ ನೆಚ್ಚಿಕೊಂಡಿದ್ದಾರೆ. ಬೇಸಿಗೆಯಲ್ಲಿ ಹೊಳೆಯ ನೀರಿನಲ್ಲಿ ಸ್ನಾನ ಮಾಡುವ ಇವರು, ಮಳೆಗಾಲದಲ್ಲಿ ಬಟ್ಟೆ ಅಡ್ಡ ಕಟ್ಟಿ ಶೌಚಗೃಹದಂತೆ ಮಾಡಿಕೊಂಡು ಮಾಡಿ ಸ್ನಾನ ಮಾಡುವ ಸ್ಥಿತಿ ಇದೆ. ಕುಡಿಯಲು ಬೇರೆಯವರ ಜಮೀನಿನಿಂದ ನೀರು ತರಬೇಕು. ರಾತ್ರಿ ಹೊತ್ತು ಭಯದ ವಾತಾವರಣದಲ್ಲೇ ಇವರ ಜೀವನ ಸಾಗಬೇಕು. ಹುಲಿ, ಚಿರತೆ, ಹಂದಿ, ಇತರ ಕಾಡುಪ್ರಾಣಿಗಳ ಹಾವಳಿಯಿಂದ ಭಯದ ವಾತಾವರಣದಲ್ಲೇ ಜೀವನ ಸಾಗಿಸಬೇಕು.

    ಒಬ್ಬರ ದುಡಿಮೆಯೇ ಆಧಾರ: ಕೂಲಿ ಮಾಡಿಕೊಂಡು ಜೀವನ ಸಾಗಿಸುವ ಈ ಕುಟುಂಬದಲ್ಲಿ ಮಗ ವಿಶ್ವನಾಥ್‌ಗೆ ಒಂದು ಕಣ್ಣು ಕಾಣಿಸುವುದಿಲ್ಲ. ಲಾಕ್‌ಡೌನ್ ಅವಧಿಯಲ್ಲಿ ಇವರು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಯಾರ‌್ಯಾರೋ ಅಕ್ಕಿ, ಬೇಳೆ ಮತ್ತು ಕಿಟ್‌ಗಳೇ ಇವರ ಪಾಲಿಗೆ ದೇವರಾಗಿತ್ತು. ಲಾಕ್‌ಡೌನ್ ಸಡಿಲಗೊಂಡ ಬಳಿಕ ಇವರ ಪತ್ನಿಯ ಗೇರುಬೀಜದ ಕಾರ್ಖಾನೆಯ ಕೆಲಸವೂ ತಪ್ಪಿ ಹೋಯಿತು. ಈಗ ಒಬ್ಬರ ದುಡಿಮೆಯಿಂದ ಜೀವನ ಸಾಗಿಸಬೇಕು. ಮನೆಗೆ ಹೊಂದಿಕೊಂಡಂತೆ ನಾಯಿಗೂಡು ಇದ್ದು, ಕಾಡುಪ್ರಾಣಿಗಳು ನಾಯಿ ಎಳೆದುಕೊಂಡು ಹೋಗದಂತೆ ಅದನ್ನು ನಿರ್ಮಿಸಲಾಗಿದೆ.

    ಲಯನ್ಸ್‌ನಿಂದ ವಿದ್ಯುತ್ ಸಂಪರ್ಕ
    ಸುಮಾರು ವರ್ಷ ವಿದ್ಯುತ್ ಸಂಪರ್ಕ ಇಲ್ಲದೆ ಟಾರ್ಚ್ ಲೈಟ್‌ನಲ್ಲಿ ಜೀವನ ಸಾಗಿಸುತ್ತಿದ್ದ ಈ ಕುಟುಂಬಕ್ಕೆ ಲಯನ್ಸ ಕ್ಲಬ್ ಹೆಬ್ರಿ ವತಿಯಿಂದ ಉಚಿತವಾಗಿ ಸೋಲಾರ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೂ ಅನುಕೂಲವಾಗಿದೆ ಎನ್ನುತ್ತಾರೆ ಈ ಕುಟುಂಬದ ಮಹಿಳೆ.

    ಸರ್ಕಾರಿ ನಿಯಮಗಳು ಕಟ್ಟುನಿಟ್ಟಾಗಿದೆ. ಈ ವಲಸೆ ಕುಟುಂಬದಲ್ಲಿ ವಾಸ್ತವ್ಯ ಸಂಬಂಧಿತ ಯಾವುದೇ ದಾಖಲೆಗಳಿಲ್ಲ. ಅದಕ್ಕಾಗಿ ವಲಸೆ ದೃಢೀಕರಣ ಪತ್ರ ತರಲು ಸೂಚಿಸಲಾಗಿದೆ. ಅದನ್ನು ತರುವುದಾಗಿ ಹೇಳಿದ್ದು ಮುಂದಿನ ದಿನಗಳಲ್ಲಿ ಹಂತಹಂತವಾಗಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು.
    ಸಂತೋಷ್ ಕುಮಾರ್ ಶೆಟ್ಟಿ ಮುದ್ರಾಡಿ ಗ್ರಾಮ ಪಂಚಾಯಿತಿ ಸದಸ್ಯ

    ಗುಡಿಸಿಲಿನ ಜೀವನ ಅತ್ಯಂತ ಶೋಚನೀಯವಾಗಿದೆ. ಜೀವನ ನಡೆಸಲು ಒಂದು ನಿವೇಶನ ಬೇಕಾಗಿದೆ. ಪಂಚಾಯಿತಿಯವರು ಸೂಚಿಸಿದಂತೆ ದಾಖಲೆಗಳನ್ನು ಒಪ್ಪಿಸುತ್ತೇವೆ. ಕಾಡುಪ್ರಾಣಿಗಳ ಬಗ್ಗೆ ಜೀವ ಭಯವಿದೆ. ಒಟ್ಟಾರೆಯಾಗಿ ದಿಕ್ಕುದೆಸೆಯಿಲ್ಲದ ಬದುಕು ನಡೆಸುತ್ತಿದ್ದೇವೆ.
    ಗೌರಮ್ಮ ಗುಡಿಸಿಲಿನಲ್ಲಿ ವಾಸಿಸುತ್ತಿರುವ ಮಹಿಳೆ

    ಈ ಕುಟುಂಬದ ಸಮಸ್ಯೆ ಗಮನಕ್ಕೆ ಬಂದಿದೆ. ಇವರು ವಲಸೆ ಮೂಲದವರಾಗಿದ್ದು ಯಾವುದೇ ರೀತಿಯ ದಾಖಲೆಗಳು ಇಲ್ಲ. ಅವರ ಜತೆ ಸಮಾಲೋಚನೆ ನಡೆಸಿ ಅಗತ್ಯ ಪರಿಹಾರ ದೊರಕಿಸುವ ಕಾರ್ಯ ಮಾಡಲಾಗುವುದು.
    ಸದಾಶಿವ ಸೇರ್ವೆಗಾರ್
    ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮುದ್ರಾಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts