More

    ಜನಜೀವನ ಶೀಘ್ರ ಪುನಶ್ಚೇತನ

    ಕಾರ್ಕಳ: ಕೋವಿಡ್-19 ಆತಂಕ ಇನ್ನು ಕೆಲ ತಿಂಗಳೊಳಗೆ ಸಂಪೂರ್ಣ ದೂರವಾಗಿ ಜನ ಜೀವನ ಪುನಶ್ಚೇತನಗೊಳ್ಳಲಿದೆ. ಪ್ರತಿಯೊಬ್ಬರು ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬೇಕಾಗಿದೆ ಎಂದು ಗೃಹ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
    ಕಾರ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ 10 ಹಾಸಿಗೆಯ ತುರ್ತು ನಿಗಾ ಘಟಕ ಉದ್ಘಾಟಿಸಿ ಮಾತನಾಡಿದರು.
    ಕೋವಿಡ್ ಕಾರಣಕ್ಕಾಗಿ ದಿನನಿತ್ಯದ ಚಟುವಟಿಕೆ ನಿಲ್ಲಿಸಲು ಅಸಾಧ್ಯ. ಆದರೆ ಸ್ವಯಂ ಶಿಸ್ತಿನ ಅವಶ್ಯಕತೆಯಿದೆ. ಸಾಮಾಜಿಕ ಸ್ವಾಸ್ಥೃ ಬಹಳ ಮುಖ್ಯವಾದುದು. ವೈಯಕ್ತಿಕ, ಕೌಟುಂಬಿಕ ಹಾಗೂ ಸಾಮಾಜಿಕ ಆರೋಗ್ಯದ ಬಗ್ಗೆ ಜಾಗೃತಿ ಉಂಟಾದಲ್ಲಿ ಕೋವಿಡ್ ಸುಲಭವಾಗಿ ನಿವಾರಿಸಲು ಸಾಧ್ಯ. ಮುಂಬರುವ ದಿನಗಳಲ್ಲಿ ಕರೊನಾ ಬಾಧಿತರಿಗೆ ಆತಂಕವಾಗಬಾರದು ಎಂಬ ನೆಲೆಯಲ್ಲಿ ಕಾರ್ಕಳದಲ್ಲಿ ಐಸಿಯು, ವೆಂಟಿಲೇಟರ್ ಮೊದಲಾದ ಸುಸಜ್ಜಿತ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಇಂತಹ ಘಟಕದಲ್ಲಿ ಆಕ್ಸಿಜನ್ ಅತ್ಯಗತ್ಯವಾಗಿದೆ. ಅದರ ನಿರ್ವಹಣೆಯನ್ನು ಹಿರಿಯ ವೈದ್ಯರೊಬ್ಬರಿಗೆ ವಹಿಸಿಕೊಡಬೇಕು ಎಂದು ಸೂಚಿಸಿದರು.

    ಶಾಸಕ ಹಾಗೂ ಸರ್ಕಾರದ ಮುಖ್ಯ ಸಚೇತಕ ವಿ.ಸುನೀಲ್‌ಕುಮಾರ್ ಮಾತನಾಡಿ, ತುರ್ತು ನಿಗಾ ಘಟಕ ಇದ್ದಾಗ ಮಾತ್ರ ಸಂಭವಿಸಬಹುದಾದ ಅನಾಹುತ ತಪ್ಪಿಸಲು ಸಾಧ್ಯ. ಕೋವಿಡ್-19 ನಿಗ್ರಹಕ್ಕೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಹಾಗೂ ಭುವನೇಂದ್ರ ರೆಸಿಡೆನ್ಸಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ಇಲಾಖಾ ಸಿಬ್ಬಂದಿ, ವೈದ್ಯರು, ನರ್ಸ್‌ಗಳ ಸಹಕಾರದಿಂದ ಉತ್ತಮ ಸೇವೆ ದೊರಕಿಸುವಲ್ಲಿ ಸಾಧ್ಯವಾಗಿದೆ ಎಂದರು.
    ತಾಲೂಕು ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯ ಮಡಿವಾಳ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಪಂಚಾಯಿತಿ ಸದಸ್ಯರಾದ ಇರ್ವತ್ತೂರು ಉದಯ ಎಸ್.ಕೋಟ್ಯಾನ್, ಸುಮಿತ್ ಶೆಟ್ಟಿ, ದಿವ್ಯಶ್ರೀ ಅಮೀನ್, ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ, ತಹಸೀಲ್ದಾರ್ ಪುರಂದರ ಹೆಗ್ಡೆ, ತಾಪಂ ಕಾರ್ಯನಿರ್ವಹಣಾಧಿಕಾರಿ ಮೇಜರ್ ಡಾ.ಹರ್ಷ, ತಾಲೂಕು ಆರೋಗ್ಯಾಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿ, ಪುರಸಭಾ ಮೂಖ್ಯಾಧಿಕಾರಿ ರೇಖಾ ಶೆಟ್ಟಿ, ತಾಲೂಕು ಸರ್ಕಾರಿ ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ ಡಾ. ಪಿ.ಕೆ.ಮಲ್ಯ ಮೊದಲಾದವರು ಉಪಸ್ಥಿತರಿದ್ದರು. ಪ್ರಕಾಶ್ ರಾವ್ ಸ್ವಾಗತಿಸಿದರು. ನಾಗೇಶ್ ನಿರೂಪಿಸಿ ವಂದಿಸಿದರು.

    ಕರೊನಾ, ಮಳೆ ಪ್ರವಾಹದ ನಡುವೆಯೂ ಕಾರ್ಕಳದ ಅಭಿವೃದ್ಧಿ ಕಾಮಗಾರಿ ವೇಗವಾಗಿ ಸಾಗುತ್ತಿದೆ. ಜವುಳಿ ಪಾರ್ಕ್ ನಿರ್ಮಾಣದ ಮೂಲಕ ಯುವ ಜನತೆಗೆ ಉದ್ಯೋಗ ಲಭಿಸಲಿದೆ. ಎಣ್ಣೆಹೊಳೆಯಲ್ಲಿ ನೀರಾವರಿ ಯೋಜನೆಯ ಮೂಲಕ ಕರಿಯಕಲ್ಲು ಕಾರ್ಕಳ ಸಂಪದ್ಭರಿತ ನಾಡಾಗಲಿದೆ.
    ಬಸವರಾಜ ಬೊಮ್ಮಾಯಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ

    ಉಡುಪಿ ಜಿಲ್ಲೆಗೆ 10 ಕೋಟಿ ರೂ. ಬಿಡುಗಡೆ
    ಪಡುಬಿದ್ರಿ: ರಾಷ್ಟ್ರೀಯ ವಿಪತ್ತು ನಿಧಿಯಿಂದ ಉಡುಪಿ ಜಿಲ್ಲೆಗೆ 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

    ಕಡಲ್ಕೊರೆತದಿಂದ ಹಾನಿಗೊಂಡ ಪಡುಬಿದ್ರಿ ಬೀಚ್‌ಗೆ ಮಂಗಳವಾರ ಭೇಟಿ ನೀಡಿ ಮಾತನಾಡಿದರು. ರಾಜ್ಯದ ಮಳೆ ಹಾನಿಗಳ ಬಗ್ಗೆ ಪ್ರಧಾನಿಯೊಂದಿಗೆ ಚರ್ಚಿಸಿದ್ದೇನೆ. ಮುಖ್ಯವಾಗಿ ಕಡಲ್ಕೊರೆತ ಸಹಿತ ಅನಿರೀಕ್ಷಿತ ನೆರವು ವಿಚಾರಗಳಿಗೆ ಸ್ಪಂದಿಸಲು ಎನ್‌ಡಿಆರ್‌ಎಫ್ ಮತ್ತು

    ಅಗ್ನಿ ಶಾಮಕ ದಳ ಒಳಗೊಂಡ ನಾಲ್ಕು ತಂಡವನ್ನು ರಾಜ್ಯದಲ್ಲಿ ರಚಿಸಲಾಗಿದೆ ಎಂದರು.
    ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಪಂ ಅಧ್ಯಕ್ಷ ದಿನಕರ ಬಾಬು, ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ತಹಸೀಲ್ದಾರ್ ಮಹಮ್ಮದ್ ಇಸಾಕ್, ತಾಪಂ ಸದಸ್ಯೆ ನೀತಾ ಗುರುರಾಜ್, ಪಕ್ಷದ ಪ್ರಮುಖರಾದ ಉದಯಕುಮಾರ್ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್, ಶ್ರೀಕಾಂತ ನಾಯಕ್ ಅಲೆವೂರು, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಶಿವಪ್ರಸಾದ್ ಶೆಟ್ಟಿ ಎಲ್ಲದಡಿ, ಡಿವೈಎಸ್ಪಿ ಜೈಶಂಕರ್, ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್, ಕಂದಾಯ ನಿರೀಕ್ಷಕ ರವಿಶಂಕರ್, ಗ್ರಾಮ ಕರಣಿಕ ಶ್ಯಾಮ್ ಸುಂದರ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts