More

    ಮಾರ್ಗಸೂಚಿ ಪಾಲಿಸದಿದ್ದರೆ ಪರವಾನಗಿ ರದ್ದು

    ಧಾರವಾಡ: ಕರೊನಾ 2ನೇ ಅಲೆ ತಡೆಯಲು ಸರ್ಕಾರ ಆರೋಗ್ಯ ಸುರಕ್ಷತಾ ಮಾರ್ಗಸೂಚಿಗಳನ್ನು ನೀಡಿದೆ. ಪಿಜಿ ಕೇಂದ್ರಗಳು, ಕೋಚಿಂಗ್ ಸೆಂಟರ್ ಹಾಗೂ ನಿರಂತರ ಗ್ರಂಥಾಲಯಗಳಲ್ಲಿ ನಿಯಮ ಪಾಲಿಸುತ್ತಿಲ್ಲ. ಪಾಲಿಕೆ ಹಾಗೂ ಪೊಲೀಸ್ ಇಲಾಖೆಯಿಂದ ವರದಿ ಪಡೆದು ಅಂತಹ ಕೇಂದ್ರಗಳ ಪರವಾನಗಿ ರದ್ದುಪಡಿಸಿ, ಮಾಲೀಕರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಎಚ್ಚರಿಕೆ ನೀಡಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ, ಪಿ.ಜಿ ಕೇಂದ್ರಗಳ ಹಾಗೂ ಗ್ರಂಥಾಲಯಗಳ ಮಾಲೀಕರ ಹಾಗೂ ನಿರ್ವಾಹಕರ ಸಭೆಯಲ್ಲಿ ಅವರು ಮಾತನಾಡಿದರು.

    ಕೋವಿಡ್ ಮಾರ್ಗಸೂಚಿಗಳ ಪಾಲನೆಗೆ ಎಲ್ಲ ವಾಣಿಜ್ಯ ಕೇಂದ್ರಗಳಿಗೆ ಹಾಗೂ ಅಂಗಡಿ ವ್ಯಾಪಾರಿಗಳಿಗೆ ತಿಳಿವಳಿಕೆ ನೀಡಲಾಗಿದೆ. ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳು ನಿತ್ಯ ಕಾರ್ಯಾಚರಣೆ ನಡೆಸಿ ದಂಡ ವಿಧಿಸಿ ಎಚ್ಚರಿಕೆ ನೋಟಿಸ್ ನೀಡುತ್ತಿದ್ದಾರೆ. ಆದಾಗ್ಯೂ ಕೆಲವರು ಉದಾಸೀನತೆ ಮತ್ತು ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡು ಬರುತ್ತಿದೆ ಎಂದರು.

    ವಿದ್ಯಾಥಿಗಳಲ್ಲಿ ಮಾಸ್ಕ್ ಧಾರಣೆ ಕಡ್ಡಾಯಗೊಳಿಸಿ, ಪರಸ್ಪರ ಅಂತರ ಪಾಲನೆ ಮಾಡದಿದ್ದರೆ ಮತ್ತಷ್ಟು ಕೋವಿಡ್ ಪ್ರಕರಣಗಳು ಹೆಚ್ಚುವ ಸಾಧ್ಯತೆ ಇದೆ. ಸರ್ಕಾರದ ಆದೇಶ ಮತ್ತು ಮಾರ್ಗಸೂಚಿಗಳನ್ನು ಗಂಭೀರವಾಗಿ ಪರಿಗಣಿಸಿ, ಪಾಲಿಸದಿದ್ದರೆ ಅಂತಹ ಕೇಂದ್ರಗಳ ಮಾಲೀಕರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗ ತಡೆ ಕಾಯ್ದೆ ಪ್ರಕಾರ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಇಂತಹ ಸ್ಥಳ ಹಾಗೂ ಕೇಂದ್ರಗಳನ್ನು ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಕೊನೆಗೊಳ್ಳುವವರೆಗೂ ಮುಚ್ಚಲಾಗುವುದು ಎಂದು ಎಚ್ಚರಿಸಿದರು.

    ಎಸಿಪಿ ಅನುಷಾ ಜಿ. ಮಾತನಾಡಿ, ಈಗಾಗಲೇ ಕೋಚಿಂಗ್ ಸೆಂಟರ್, ಪಿಜಿ ಹಾಗೂ ಗ್ರಂಥಾಲಯ ಮಾಲೀಕರ ಸಭೆ ನಡೆಸಿ ಸುರಕ್ಷತಾ ಮಾರ್ಗಸೂಚಿ ನೀಡಲಾಗಿದೆ. ಪ್ರತಿ ಕೇಂದ್ರದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ, ಸ್ವಚ್ಛತೆ, ಪರಸ್ಪರ ಅಂತರ, ಮಾಸ್ಕ್ ಧಾರಣೆ ಹಾಗೂ ಮಹಿಳಾ ಸುರಕ್ಷತಾ ಕ್ರಮ ಕೈಗೊಳ್ಳಲು, ಪ್ರತಿಯೊಬ್ಬರಿಗೂ ಕೇಂದ್ರದ ಗುರುತಿನ ಚೀಟಿ ನೀಡಲು ಸೂಚಿಸಲಾಗಿದೆ. ಬಹುತೇಕರು ಸೂಚನೆ ಪಾಲಿಸದಿರುವುದು ಕಂಡು ಬಂದಿದೆ. ಮತ್ತೊಮ್ಮೆ ಎಲ್ಲ ಕೇಂದ್ರಗಳ ಪರಿಶೀಲನೆ ನಡೆಸಿ, ಪರವಾನಗಿ ರದ್ದುಪಡಿಸಲು ಜಿಲ್ಲಾಧಿಕಾರಿಗೆ ಶಿಫಾರಸು ಮಾಡಲಾಗುವುದು ಎಂದರು.

    ಉಪವಿಭಾಗಾಧಿಕಾರಿ ಡಾ. ಬಿ. ಗೋಪಾಲಕೃಷ್ಣ , ಪ್ರಭಾರ ಅಪರ ಜಿಲ್ಲಾಧಿಕಾರಿ ರುದ್ರೇಶ, ಇತರರು ಇದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts