More

  ಮಕ್ಕಳ ಜ್ಞಾನ ಹೆಚ್ಚಿಸಲು ಜ್ಞಾನಪ್ರಿಯ ಲೈಬ್ರೆರಿ:ಓದುವ ಹವ್ಯಾಸ ಬೆಳೆಸಲು ಶ್ರೀಗಳ ಪ್ರಯತ್ನ: ಬರೀ 10 ರೂ. ಶುಲ್ಕ

  ಹೇಮನಾಥ್ ಪಡುಬಿದ್ರಿ
  ಅದಮಾರು ಎಂಬ ಗ್ರಾಮೀಣ ಪ್ರದೇಶದಲ್ಲಿ ಅಂದು ಶಿಕ್ಷಣ ಸಂಸ್ಥೆಯೊಂದನ್ನು ಆರಂಭಿಸಿ ವಿಭುದೇಶತೀರ್ಥರು ಶೈಕ್ಷಣಿಕ ಕ್ರಾಂತಿ ಮಾಡಿದ್ದರೆ, ಇಂದು ಈಶಪ್ರಿಯತೀರ್ಥರು ಜ್ಞಾನಪ್ರಿಯ ಸಮುದಾಯ ಮಕ್ಕಳ ಗ್ರಂಥಾಲಯವನ್ನು ಆರಂಭಿಸುವ ಮೂಲಕ ಮಕ್ಕಳಲ್ಲಿ ಪರ್ಯಾಯವಾಗಿ ಜ್ಞಾನವನ್ನು ಕಟ್ಟುವ ಕಾರ್ಯಕ್ಕೆ ಮುಂದಾಗಿದ್ದಾರೆ.

  ಹಿಪೊಕ್ಯಾಂಪಸ್ ಎನ್ನುವ ಸಂಸ್ಥೆ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿ ಪ್ರಾಯೋಗಿಕವಾಗಿ ಬೆಂಗಳೂರಿನ ಚಾಗಲೇಟ್ಟಿ ಎಂಬಲ್ಲಿ ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳಿಗೋಸ್ಕರ ಆರಂಭಿಸಿರುವ ಗ್ರಂಥಾಲಯದಿಂದ ಪ್ರೇರಿತರಾದ ಸ್ವಾಮೀಜಿಯವರು, ಅದಮಾರಿನಲ್ಲಿ ಸಮುದಾಯ ಮಕ್ಕಳ ಗ್ರಂಥಾಲಯವನ್ನು ಒಂದೂವರೆ ತಿಂಗಳ ಹಿಂದೆ ಆರಂಭಿಸಿದ್ದಾರೆ. ಅದಮಾರು ಪೂರ್ಣ ಪ್ರಜ್ಞ ಸಮೂಹ ಸಂಸ್ಥೆ ಸಹಕಾರ ಮತ್ತು ಆಶ್ರಯದಲ್ಲಿ ಅಲ್ಲಿನ ಮಕ್ಕಳನ್ನೇ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿ, ಉಪಾಧ್ಯಕ್ಷರ ಸಹಿತವಾಗಿ 15 ಮಂದಿಯ ಕಾರ್ಯಕಾರಿ ಸಮಿತಿಯನ್ನು ರಚಿಸಿ ನಿರ್ದಿಷ್ಟ ಮಾನದಂಡಗಳಂತೆ ಗ್ರಂಥಾಲಯವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಮಕ್ಕಳಿಗೆ ಓದುವ ಅಭಿರುಚಿ ಹುಟ್ಟಿಸುವ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಜೋಡಿಸಿಡಲಾಗಿದೆ. ಈಗಾಗಲೇ ಸಮುದಾಯದ 15 ಮಂದಿ ಸದಸ್ಯರೂ ಆಗಿದ್ದಾರೆ. ಓದುವ ಹವ್ಯಾಸ ಬೆಳೆಸುವ ಮಕ್ಕಳು 10 ರೂ. ಪಾವತಿಸಿ ಸದಸ್ಯರಾಗಲು ಅವಕಾಶ ಕಲ್ಪಿಸಲಾಗಿದೆ.

  ಮಕ್ಕಳ ಸಂಬಂಧ ವೃದ್ಧಿಗೂ ಪ್ರೇರಣೆ: ಶಾಲಾ ಶಿಕ್ಷಣ ಅಥವಾ ಪಠ್ಯ ಪುಸ್ತಕದಿಂದ ಮಕ್ಕಳಿಗೆ ಬಹಳ ದೊಡ್ಡ ಜ್ಞಾನ ಲಭಿಸುವುದಿಲ್ಲ. ಸೀಮಿತವಾದ ಕಲಿಕೆಯಿರುತ್ತದೆ. ಕಲಿಕೆಯನ್ನು ವಿಸ್ತರಿಸುವ ಪ್ರಯತ್ನ ಈ ಗ್ರಂಥಾಲಯದಿಂದ ನಡೆಸಲಾಗುತ್ತಿದೆ. ಅದಕ್ಕಾಗಿ ಚಿಕ್ಕ ಮಕ್ಕಳು ಒಂದು ವ್ಯವಸ್ಥೆ ಮೂಲಕ ಕಲಿಕೆಗೆ ಬರಬೇಕೆನ್ನುವ ರೀತಿಯಲ್ಲಿ ಗ್ರಂಥಾಲಯದಲ್ಲಿ ವ್ಯವಸ್ಥೆ ಮಾಡಲಾಗಿದೆ. ಮಕ್ಕಳೇ ಬಂದು ಲೈಬ್ರರಿ ನಡೆಸುತ್ತಾರೆ. ಅವರೇ ಪುಸ್ತಕ ವಿತರಣೆ, ವಯಸ್ಸಿಗನುಗುಣವಾಗಿ ಗ್ರೇಡಿಂಗ್ ಮಾಡುತ್ತಾರೆ. ಕೇವಲ ಪೂರ್ಣಪ್ರಜ್ಞ ಸಂಸ್ಥೆಗೆ ಮಾತ್ರ ಸೀಮಿತವಲ್ಲದ ಈ ಗ್ರಂಥಾಲಯ ಸಮುದಾಯದ ಎಲ್ಲ ಮಕ್ಕಳಿಗೂ ಅವಕಾಶ ಕಲ್ಪಿಸುತ್ತಿದೆ. ನಿಗದಿತ ಅವಧಿಯಲ್ಲಿ ಬಂದು ಅಧ್ಯಯನ ಮಾಡಲು ಅವಕಾಶವಿದೆ. ಅವರವರ ಆಸಕ್ತಿಗನುಗುಣವಾಗಿ ಪುಸ್ತಕ ಓದಿ ತೃಪ್ತಿ ಪಡುವುದರೊಂದಿಗೆ ಮಕ್ಕಳ ಜೊತೆ ಸಂಬಂಧ ಬೆಳೆಸುವ ಕಾರ್ಯಕ್ಕೂ ಪ್ರೇರಣೆಯಾಗಲಿದೆ.

  ಭೇಟಿ ಸಮಯ ನಿಗದಿ: ಶಾಲಾವಧಿ ಬಳಿಕ ಸಮುದಾಯ ಮಕ್ಕಳ ಗ್ರಂಥಾಲಯ ಭೇಟಿಗೆ ವಾರದ 4 ದಿನ ಸಮಯ ನಿಗದಿ ಮಾಡಲಾಗಿದೆ. ಸೋಮವಾರ ಮತ್ತು ಗುರುವಾರ ಸಂಜೆ 4 ರಿಂದ 5 ಹಾಗೂ ಶನಿವಾರ ಮತ್ತು ಭಾನುವಾರ ಮಧ್ಯಾಹ್ನ 3ರಿಂದ 5 ಗಂಟೆ ವರೆಗೆ ಬರಬೇಕು. ಮಕ್ಕಳು ಇಲ್ಲೆ ಕುಳಿತು ಓದುವುದಲ್ಲದೆ. ಕೊಂಡುಹೋಗಿ ಓದಲು ಅವಕಾಶವಿದೆ. ಮಕ್ಕಳು ಒಬ್ಬರಿಂದ ಮತ್ತೊಬ್ಬರಿಗೆ ಸಂಪರ್ಕ ಸೇತುವಾಗಿ ಓದುವ ಹವ್ಯಾಸವನ್ನು ಬೆಳೆಸಲು ಇಲ್ಲಿ ಅವಕಾಶಗಳಿವೆ.

  ಬೃಹತ್ ಪುಸ್ತಕ ಮೇಳ ಚಿಂತನೆ: ಉಡುಪಿ ಜಿಲ್ಲೆಯಲ್ಲಿಯೇ ಪ್ರಥಮ ಎನ್ನಬಹುದಾದ ಗ್ರಂಥಾಲಯವನ್ನು ಇನ್ನಷ್ಟು ಬೆಳೆಸುವ ಯೋಜನೆಯನ್ನೂ ರೂಪಿಸಿಲಾಗುತ್ತಿದೆ. ಮುಂದಿನ ದಿನದಲ್ಲಿ ಅದಮಾರಿನಲ್ಲಿ ಬೃಹತ್ ಪುಸ್ತಕ ಮೇಳವನ್ನು ಆಯೋಜಿಸುವ ಇರಾದೆ ಇದೆ. ದಾನರೂಪದಲ್ಲಿ ಯಾರಾದರೂ ಪುಸ್ತಕಗಳನ್ನು ನೀಡುವವರಿದ್ದಲ್ಲಿ ಅವುಗಳನ್ನು ಪಡೆದು ಸಂಗ್ರಹಿಸುವ ಗುರಿಯೂ ಇದೆ. ಗ್ರಂಥಾಲಯಕ್ಕೆ ಪುಸ್ತಕಗಳನ್ನು ಉದಾರವಾಗಿ ನೀಡುವರಿದ್ದಲ್ಲಿ ಗ್ರಂಥಾಲಯ ಸಂಯೋಜಕರ ಮೊ.ಸಂ. 9449367794 ಸಂಪರ್ಕಿಸಬಹುದು.

  ಮನುಷ್ಯನಿಗೆ ಜ್ಞಾನದ ಅವಶ್ಯಕತೆಯಿದೆ. ಓದಿ, ನೋಡಿ, ಕೇಳುವುದರೊಂದಿಗೆ ನವ ಮಾಧ್ಯಮಗಳ ಮೂಲಕ ಜ್ಞಾನ ಪಡೆಯಬಹುದು. ಜ್ಞಾನ ಪಡೆಯಲು ತುಂಬಾ ಒಳ್ಳೆಯ ಅಕರ ಗ್ರಂಥಗಳಿವೆ. ಗ್ರಂಥಗಳ ಮೂಲಕ ಸಾವಿರಾರು ವರ್ಷ ಹಳೇ ಪರಿಸ್ಥಿಯನ್ನು ಅನುಭವಿಸಲು ಸಾಧ್ಯವಿದೆ. ಪ್ರಸ್ತುತ ಮಕ್ಕಳಲ್ಲಿರುವ ಹೊರಗಿನ ಗೊಂದಲಗಳಿಂದ ದೂರವಾಗಲು ಉತ್ತಮ ಜ್ಞಾನ ಕೊಡುವ ಗ್ರಂಥಾಲಯನ್ನು ರೂಪಿಸಲಾಗಿದೆ.
  ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಅದಮಾರು ಶಿಕ್ಷಣ ಸಂಸ್ಥೆ ಅಧ್ಯಕ್ಷರು.
  ಕರೊನ ಬಳಿಕ ಮಕ್ಕಳು ಓದುವ ಹವ್ಯಾಸದಿಂದ ವಿಮುಖರಾಗಿದ್ದಾರೆ. ಅವರಲ್ಲಿ ಜ್ಞಾನವನ್ನು ಕಟ್ಟುವ ವ್ಯವಸ್ಥೆಗೆ ಪೂರಕವಾಗಿ ಗ್ರಂಥಾಲಯ ಕಾರ್ಯಚರಿಸಲಿದೆ. ಮಕ್ಕಳು ಓದುವುದನ್ನು ಪ್ರೀತಿಸಬೇಕು. ಓದುವುದನ್ನು ಪ್ರೀತಿಸಲು ಇಲ್ಲಿ ಬೇರೆ ಬೇರೆ ವಿಧಾನಗಳನ್ನು ಕಲ್ಪಿಸಲಾಗಿದೆ. ಓದನ್ನು ಸಂಶೋಧನೆ ಮಾಡುವ ಕಾರ್ಯದೊಂದಿಗೆ ಮಕ್ಕಳನ್ನು ಬೆಳೆೆಸಲಾಗುತ್ತದೆ. ಸಮಾಜಶಾಸ್ತ್ರೀಯ, ಮನಃಶಾಸ್ತ್ರಿಯ ವಿಷಯಗಳ ಜೋಡಣೆಯೊಂದಿಗೆ ಶೈಕ್ಷಣಿಕ ವಿಷಗಳು ಒಳಗೊಂಡಿರುತ್ತವೆ.
  ಜಿ.ಪಿ. ಪ್ರಭಾಕರ್, ಜ್ಞಾನಪ್ರಿಯ ಸಮುದಾಯ ಮಕ್ಕಳ ಗ್ರಂಥಾಲಯ ಸಂಯೋಜಕ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts