More

    ಡಿಜಿಟಲ್ ಮಾರುಕಟ್ಟೆ ಸದುಪಯೋಗಪಡಿಸಿಕೊಳ್ಳಿ: ಮಹಿಳಾ ಉದ್ಯಮಿಗಳಗೆ ಕೆ.ರತ್ನಪ್ರಭಾ ಸಲಹೆ

    ಮೈಸೂರು: ಆಧುನಿಕತೆಗೆ ತಕ್ಕಂತೆ ಹೆಚ್ಚುತ್ತಿರುವ ಅವಕಾಶಗಳ ಜತೆಗೆ ಡಿಜಿಟಲ್ (ಆನ್‌ಲೈನ್) ಮಾರುಕಟ್ಟೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಸಲಹೆ ನೀಡಿದರು.
    ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮಹಿಳಾ ಘಟಕವಾದ ವುಮೆನ್ ಇನ್ ಸ್ಮಾಲ್ ಎಂಟರ್‌ಪ್ರೈಸ್(ವೈಸ್) ಸಂಘಟನೆಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
    ಡಿಜಿಟಲೀಕರಣದಿಂದಾಗಿ ಜಗತ್ತಿನ ಮಾರುಕಟ್ಟೆ ವಿಸ್ತಾರಗೊಂಡಿದೆ. ಯಾವುದೇ ಮೂಲೆಯಲ್ಲಿ ಕುಳಿತು ಯಾವುದೇ ವಸ್ತು ಬೇಕಾದರೂ ಆನ್‌ಲೈನ್‌ನಲ್ಲಿ ಖರೀದಿ ಅಥವಾ ಮಾರಾಟ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮಾರುಕಟ್ಟೆ ಹೆಚ್ಚು ಜನಪ್ರಿಯವಾಗುತ್ತಿದ್ದು, ಮಹಿಳಾ ಉದ್ಯಮಿಗಳು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
    ಭಾರತದ ಆರ್ಥಿಕತೆಯು ಜಾಗತಿಕವಾಗಿ ಐದನೇ ಸ್ಥಾನಕ್ಕೆ ತಲುಪಿದ್ದರೂ ಇದರಲ್ಲಿ ಮಹಿಳೆಯರ ಪಾಲು ಶೇ.1520ಕ್ಕಿಂತ ಹೆಚ್ಚಿಲ್ಲ. ಈ ಪ್ರಮಾಣವು ಶೇ.45ರಿಂದ 50ಕ್ಕೆ ಹೆಚ್ಚಬೇಕು. ಅದಕ್ಕಾಗಿ ಮಹಿಳೆಯರು ಉದ್ಯಮದತ್ತ ಗಮನಹರಿಸಬೇಕು. ಅದಕ್ಕಾಗಿ ಸರ್ಕಾರಗಳೂ ಪ್ರೋತ್ಸಾಹ ನೀಡಬೇಕು ಎಂದು ಆಗ್ರಹಿಸಿದರು.
    ಎಫ್‌ಕೆಸಿಸಿಐ ಉಪಾಧ್ಯಕ್ಷೆ ಉಮಾ ರೆಡ್ಡಿ ಮಾತನಾಡಿ, ಮಹಿಳೆಯರು ಮುಖ್ಯವಾಹಿನಿ ಒಕ್ಕೂಟಗಳಲ್ಲಿ ಗುರುತಿಸಿಕೊಳ್ಳಬೇಕು. ಆನ್‌ಲೈನ್ ವೇದಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ನಾವು ಪುರುಷರಷ್ಟೇ ಸಮನಾದ ವೇದಿಕೆಯಲ್ಲಿ ಉತ್ಪನ್ನ ಮಾರುತ್ತಿದ್ದೇವೆ. ಮಹಿಳೆಯರು ಇದನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
    ಮಹಿಳಾ ಉದ್ಯಮಿಯಾದ ಲೇಖಕಿ ರೂಪಾ ಪಾಟೀಲ ಮಾತನಾಡಿದರು. ವೈಸ್ ಅಧ್ಯಕ್ಷೆ ಟಿ.ಎ. ವಸಂತಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಎಂಸಿಸಿಐ ಅಧ್ಯಕ್ಷ ಕೆ.ಬಿ. ಲಿಂಗರಾಜು, ಜಂಟಿ ಕಾರ್ಯದರ್ಶಿ ಪದ್ಮಾವತಿ ಭಟ್, ಉಪಾಧ್ಯಕ್ಷರಾದ ಪದ್ಮಿನಿ ಶಿವಣ್ಣ, ಮಾಲಿನಿ ಶ್ರೀನಿವಾಸನ್, ಜಂಟಿ ಗೌರವ ಕಾರ್ಯದರ್ಶಿ ಶಶಿಕಲಾ ಅಶೋಕ್, ಖಜಾಂಚಿ ಕಲ್ಪನಾ ಸುರೇಂದ್ರ, ವ್ಯವಸ್ಥಾಪಕಿ ಬಿ.ಆರ್. ಭಾರತಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts