More

    ಮದಲೂರಿಗೆ ನೀರು ಬಿಡದಂತೆ ಪತ್ರ ; ಮಾಜಿ ಸಚಿವ ಶಿವಣ್ಣ ಹೆಸರಿನಲ್ಲಿ ಸಿಎಂಗೆ ಮನವಿ

    ತುಮಕೂರು: ಶಿರಾ ವಿಧಾನಸಭೆ ಉಪಚುನಾವಣೆ ಗೆಲ್ಲಲು ಎಲ್ಲ ರಾಜಕೀಯ ಪಕ್ಷಗಳು ಅಭಿವೃದ್ಧಿ ಮಂತ್ರ ಜಪಿಸಲಾರಂಭಿಸಿವೆ. ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ವಿಚಾರವೂ ರಾಜಕೀಯ ವಿಷಯವಾಗಿದೆ.

    ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಬೇಕು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪಗೆ ಮನವಿ ಸಲ್ಲಿಸಿದ ನಿಯೋಗದ ನೇತೃತ್ವ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡರೇ 2010ರಲ್ಲಿ ಶಿರಾಗೆ ನೀರು ಬಿಡದಂತೆ ಸರ್ಕಾರಕ್ಕೆ ಬರೆದಿದ್ದರು ಎನ್ನಲಾದ ಪತ್ರವೀಗ ವಿರೋಧ ಪಕ್ಷಗಳಿಗೆ ಚುನಾವಣಾ ಅಸ್ತ್ರವಾಗಿದೆ.

    ಕೃಷ್ಣಾ ಕೊಳ್ಳದ ಶಿರಾ ತಾಲೂಕು ಕಳ್ಳಂಬೆಳ್ಳ ಕೆರೆಗೆ ಹೇಮಾವತಿ ಹರಿಯುವ ಹಳ್ಳಕ್ಕೆ ಬ್ಯಾರೇಜ್ ಮಾಡಲಾಗಿದ್ದು ಹಾಗೂ ಮದಲೂರು ಮತ್ತು ಇತರ 24 ಕೆರೆಗಳಿಗೆ ನೀರು ಹರಿಸಲು ಆರ್‌ಡಿಪಿಆರ್ ಇಲಾಖೆ ರೂಪಿಸಿರುವ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ರದ್ದುಪಡಿಸಬೇಕು ಎಂದು ಆಗ್ರಹಿಸಿ 2010 ಮಾ.30ರಂದು ಅಂದಿನ ಸಿಎಂ ಬಿಎಸ್‌ವೈ ಅವರಿಗೆ ಮಾಜಿ ಸಚಿವ ಸೊಗಡು ಶಿವಣ್ಣ ಅವರ ಹೆಸರಿನಲ್ಲಿ ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆ ಪತ್ರಕ್ಕೆ ಶಾಸಕರಾಗಿದ್ದ ಬಿ.ಸುರೇಶ್‌ಗೌಡ ಹಾಗೂ ಬಿ.ಸಿ.ನಾಗೇಶ್ ಕೂಡ ಸಹಿ ಹಾಕಿದ್ದಾರೆ.

    ಜಿಲ್ಲೆಯ ಮೂವರು ಬಿಜೆಪಿ ಶಾಸಕರು ನೀಡಿದ್ದ ಪತ್ರದ ಆಧಾರದಲ್ಲಿ 2010 ಏ.3ರಂದು ಸಿಎಂ ಬಿ.ಎಸ್.ಯಡಿಯೂರಪ್ಪ ಕೂಡ ಆರ್‌ಡಿಪಿಆರ್ ಮುಖ್ಯಕಾರ್ಯದರ್ಶಿಗೆ ಟಿಪ್ಪಣಿ ಬರೆದಿದ್ದು ‘ಕೂಡಲೇ ಕಡತ ಮಂಡಿಸಿ ಅಂತಿಮ ತೀರ್ಮಾನಕ್ಕೂ ಮುಂಚೆ ಕಾಮಗಾರಿ ಮುಂದುವರಿಸಬಾರದು’ ಎಂದು ಸೂಚನೆ ಕೂಡ ನೀಡಿದ್ದಾರೆ.

    ಪತ್ರದಲ್ಲಿ, ತುಮಕೂರು ನಾಲಾ ವಲಯ ವ್ಯಾಪ್ತಿಯಲ್ಲಿ 1.60ಲಕ್ಷ ಹೆ. ಪ್ರದೇಶಕ್ಕೆ ನೀರಾವರಿ ಸೌಲಭ್ಯ ನೀಡಲು ಅವಕಾಶವಿದ್ದು, 1.20ಲಕ್ಷ ಹೆ. ಸೌಲಭ್ಯ ಕಲ್ಪಿಸಲಾಗಿದೆ. ಕುಣಿಗಲ್ ತಾಲೂಕಿನಲ್ಲಿ 40 ಸಾವಿರ ಹೆ. ಪ್ರದೇಶಕ್ಕೆ ನೀರುಣಿಸುವ ಕಾಮಗಾರಿ ಪ್ರಗತಿಯಲ್ಲಿದ್ದು ಶಿರಾಗೆ ನೀರು ಹರಿಸಬಾರದು ಎಂದು ಮನವಿ ಮಾಡಲಾಗಿದೆ.

    ಕೃಷ್ಣಾಕೊಳ್ಳದ ಉಲ್ಲೇಖವಿದೆ: ಪತ್ರದಲ್ಲಿ ಶಿರಾ ತಾಲೂಕು ಕೃಷ್ಣಾ ಕೊಳ್ಳ ವ್ಯಾಪ್ತಿಯಲ್ಲಿ ಬರಲಿದ್ದು, ಕಾವೇರಿ ಕೊಳ್ಳದ ಹೇಮಾವತಿ ನೀರು ಹರಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಪತ್ರಬರೆದವರೇ ಈಗ ಉಪಚುನಾವಣೆ ಕಾರಣಕ್ಕೆ ಹೇಮಾವತಿ ಹರಿಸುವಂತೆ ಅದೇ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿರುವುದು ಚರ್ಚೆಗೆ ಗ್ರಾಸವೊದಗಿಸಿದೆ.

    ಬಿಜೆಪಿಗೆ ಧರ್ಮ ಸಂಕಟ!: ಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದನ್ನು ಸಮರ್ಥಿಸಿಕೊಳ್ಳುವ ಅಥವಾ ವಿರೋಧಿಸುವ ಧರ್ಮ ಸಂಕಟ ಬಿಜೆಪಿ ನಾಯಕರಿಗೆ ಎದುರಾಗಿದೆ. ಶಾಶ್ವತ ಬರಪೀಡಿತ ಶಿರಾ ತಾಲೂಕಿನ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವುದು ಚುನಾವಣೆಯ ಪ್ರಮುಖ ವಿಷಯವಾಗಿರುವುದರಿಂದ 2010ರ ಬಿಜೆಪಿ ಶಾಸಕರ ಪತ್ರ ಕೂಡ ಕಾಂಗ್ರೆಸ್, ಜೆಡಿಎಸ್‌ಗೆ ಚುನಾವಣೆ ಅಸ್ತ್ರವಾಗಿದೆ.

    ಶಿರಾ ತಾಲೂಕಿಗೆ ಹೇಮಾವತಿ ನೀರು ಹರಿಸಲು ಬಿಜೆಪಿ ಆರಂಭದಿಂದಲೂ ವಿರೋಧಿಸಿಕೊಂಡು ಬಂದಿದೆ ಎಂಬುದಕ್ಕೆ ಪತ್ರವೇ ಸಾಕ್ಷಿಯಿದೆ. ಉಪಚುನಾವಣೆ ಕಾರಣಕ್ಕೆ ನೀರು ಹರಿಸುವ ಮಾತನಾಡುತ್ತಿದ್ದಾರೆ. ಹಿಂದಿನ ಪತ್ರದ ಬಗ್ಗೆ ಅವರೇ ಉತ್ತರಿಸಬೇಕು, ತಾಲೂಕಿನ ಜನರಿಗೆ ಸತ್ಯ ತಿಳಿದಿದೆ, ಅಭಿವೃದ್ಧಿ ವಿಷಯವನ್ನಿಟ್ಟುಕೊಂಡು ಕಾಂಗ್ರೆಸ್ ಚುನಾವಣೆ ಎದುರಿಸಲಿದೆ.
    ಟಿ.ಬಿ.ಜಯಚಂದ್ರ ಮಾಜಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts