More

    ಅಸಭ್ಯತೆಗೆ ಪಿನಾಯ್ಲ್​ ಸುರಿಯೋಣ..ನಡೆಯಲಿ ಸ್ವಚ್ಛ ಹಾಸ್ಯ ಅಭಿಯಾನ…

    ಅಸಭ್ಯತೆಗೆ ಪಿನಾಯ್ಲ್​ ಸುರಿಯೋಣ..ನಡೆಯಲಿ ಸ್ವಚ್ಛ ಹಾಸ್ಯ ಅಭಿಯಾನ...ನಮ್ಮ ಮನೆಯಲ್ಲಿ ಟಿ.ವಿ. ಧಾರಾವಾಹಿಗಳನ್ನು ನೋಡುವವರ ಸಂಖ್ಯೆ ಕಡಿಮೆ. ದೂರದರ್ಶನದ ಹಿತವಾದ ವಾರ್ತಾಪ್ರಸಾರ, ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಕುರಿತಾದ ಕಾರ್ಯಕ್ರಮಗಳು, ಶಾಂತಸ್ವರದಲ್ಲಿ ಪರಿಚಯಿಸಲ್ಪಡುವ ಸಾಧಕರು, ಪ್ರತಿಭಾವಂತರು, ಹಳೆಯ ಹಾಡುಗಳು ಇತ್ಯಾದಿಗಳನ್ನು ನೋಡುತ್ತೇವೆ. ಈ ಕಾರ್ಯಕ್ರಮಗಳ ಬಗೆಗಾಗಲಿ, ರಿಮೋಟಿಗಾಗಲಿ ನಮ್ಮ ಕುಟುಂಬದ ಸದಸ್ಯರು ಪೈಪೋಟಿ ನಡೆಸಿ ಜಗಳವಾಡಿ ಕೊಳ್ಳುವುದಿಲ್ಲ. ಇತ್ತೀಚೆಗೆ ನಗರಗಳಲ್ಲಿ ಮಕ್ಕಳಿಗೆ ‘ಕರೊನಾ ರಜಾ’ ಘೋಷಣೆ ಆದ ಪ್ರಯುಕ್ತ ನಮ್ಮ ಹಳ್ಳಿಯ ಮನೆಗೆ ಹತ್ತಿರದ ಬಂಧುಗಳ ಪ್ರವೇಶವಾಯಿತು. ವೈರಸ್ಸಿಗೆ ಹೆದರಿ ತಾವಿರುವ ನಗರವನ್ನು ಬಿಟ್ಟು ಬಂದ ಬಂಧುಗಳು. ‘ಇಲ್ಲ’ ಎನ್ನಲಾಗದೆ ಆಶ್ರಯ ನೀಡಿದೆವು. ಹಳ್ಳಿಯ ನಮ್ಮ ತೋಟದ ಮನೆಯಲ್ಲಿ ಎಂದೋ ಬಾಧಿಸಬಹುದಾದ ಮಂಗನ ಕಾಯಿಲೆಯೊಂದನ್ನು ಬಿಟ್ಟರೆ ಯಾವುದೇ ವೈರಸ್ಸಿನ ಭಯವಿಲ್ಲದೆ ನಿರಾಳವಾಗಿ ಉಸಿರಾಡಿಸಿಕೊಂಡಿದ್ದೇವೆ.

    ನಮ್ಮ ಕೊಟ್ಟಿಗೆ, ಸಗಣಿ ಗೊಬ್ಬರಕುಳಿ ಎಲ್ಲೆಲ್ಲೂ ವೈರಸ್​ಗಳ ಸದ್ದಿಲ್ಲ. ಗಂಡಸರು ಬಾಯ್ತುಂಬ ತುಂಬಿಕೊಂಡಿರುವ ಎಲೆಯಡಿಕೆ ರಸವನ್ನು ಉಗುಳಲು ಮಾತ್ರ ಮನೆಯಿಂದ ದೂರದಲ್ಲಿ ವ್ಯವಸ್ಥೆ ಮಾಡಿದ್ದೇವೆ. ಆ ಮಟ್ಟಿಗೆ ನಮ್ಮ ಇಡೀ ಹಳ್ಳಿಯೇ ವೈರಸ್ ಮುಕ್ತ. ವೈರಸ್ ಭಯಮುಕ್ತವೂ ಹೌದು.

    ಆದರೆ ನಮ್ಮೀ ಬಂಧುಗಳ ಕುಟುಂಬ ಬರುವಾಗ ನಮ್ಮ ಮನೆಯಲ್ಲಿ ಇದುವರೆಗೆ ಇಲ್ಲದ ವೈರಾಣುವೊಂದನ್ನು ತಂದು ಒಳಗೆ ಬಿಟ್ಟಿತು. ಅದೆಂದರೆ, ಅವರ ಕುಟುಂಬದ ಎಲ್ಲರ ಊಟ, ಕಾಫಿ ಎಲ್ಲವೂ ಟಿವಿಯ ಮುಂದೇ. ದಾಕ್ಷಿಣ್ಯಕ್ಕೆ ಕಟ್ಟು ಬಿದ್ದ ನಾವು ಸಹ ಅವರ ಜತೆ ಕುಳಿತು ಅವರು ನೋಡುವ ಧಾರಾವಾಹಿಗಳನ್ನು, ಕಾರ್ಯಕ್ರಮಗಳನ್ನು ಅನಿವಾರ್ಯವಾಗಿ ನೋಡುತ್ತ ಕಾಫಿ, ಕಷಾಯ ಕುಡಿಯುವುದು ಪ್ರಾರಂಭವಾಯಿತು. ಬಕೆಟ್​ಗಟ್ಟಲೆ ಕಣ್ಣೀರು ಸುರಿಸುವ, ಮಸಲತ್ತು ನಡೆಸುವ ಗಂಭೀರ ಗೋಳುಕರೆ ಧಾರಾವಾಹಿಗಳು ಬೇಕೋ, ನಕ್ಕು ನಗಿಸುವ ಹಾಸ್ಯದ ಕಾಮೆಡಿ ಶೋಗಳು ಬೇಕೋ ಎಂದು ಅವರವರಲ್ಲೇ ವಾದ ನಡೆಯುತ್ತಿರುವಾಗ ಸುಮ್ಮನಿರಲಾರದೆ ನಾನು ‘ಇರುವೆ ಬಿಟ್ಟುಕೊಂಡರು’ ಎಂಬಂತೆ ‘ಅಯ್ಯೋ ಗೋಳು ಕರೆ ಧಾರಾವಾಹಿಗಳನ್ನು ಏಕೆ ನೋಡುತ್ತೀರಾ? ಅಷ್ಟಿಷ್ಟು ನಗಿಸುವ ಶೋಗಳನ್ನು ನೋಡಿಬಿಡಿ’ ಎಂದು ಸಹಮತಿ ಸೂಚಿಸಿದೆ. ತಗೊಳ್ಳಿ ಶುರುವಾಯಿತು ಕಾಮಿಡಿ ಶೋಗಳ ಅಟ್ಟಹಾಸ! ಹಾಸ್ಯದ ಹೆಸರಿನಲ್ಲಿ ಅಶ್ಲೀಲತೆಯ ಯಶಸ್ವಿ ಪ್ರಯೋಗ. ಒಂದು ಪಾತ್ರವಾದರೂ ದ್ವಂದ್ವಾರ್ಥವಿಲ್ಲದ ನೆಟ್ಟಗೆ ಮಾತು ಆಡಿದರೆ ಹೇಳಿ. ಪಾತ್ರವೊಂದು ಪ್ರವೇಶಿಸುತ್ತಿರುವಾಗಲೇ ಅಸಹ್ಯವಾದ ಭಂಗಿಯನ್ನು ಪ್ರದರ್ಶಿಸುತ್ತ ಕೊಳಕು ಲೈಂಗಿಕ ಭಾಷೆಯನ್ನೇ ಹೇಳುತ್ತ ಬರುವುದು. ಈಚೆ ಮನೆಯವನ ಹೆಂಡತಿಯನ್ನು ಆಚೆ ಮನೆಯವನು ತಬ್ಬಿಕೊಳ್ಳುವುದು ಆಚೆ ಮನೆಯವನ ಹೆಂಡತಿಗೆ ಈ ಕಡೆಯವನು ಸನ್ನೆ ಮಾಡುವುದು… ನಮ್ಮ ಮನೆ ಮಂದಿಗೆಲ್ಲ ಉಸಿರು ಕಟ್ಟತೊಡಗಿತು. ಆ ಥರದ ಹಾಸ್ಯಕ್ಕೆ ಅಡಿಯಾಳಾಗಿ ಹೋಗಿದ್ದ ನಮ್ಮ ಬಂಧುಗಳ ಕುಟುಂಬ ಮಾತ್ರ ಎಗ್ಗಿಲ್ಲದೆ ತಾನೂ ನಗುತ್ತ ನಮ್ಮ ಉಸಿರನ್ನು ಇನ್ನಷ್ಟು ಕಟ್ಟಿಸಿತು. ‘ಇದು ಹಾಸ್ಯವಲ್ಲ ಅಶ್ಲೀಲತೆ ಕಣ್ರೀ’ ಎಂದು ಉಪದೇಶಿಸಲು ಹೊರಟ ನನ್ನ ಮಾತನ್ನು ಅವರ್ಯಾರೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಕಾಮೆಡಿ ಶೋ ಕೊಡಲು ಬರುವ ಸ್ಪರ್ಧಿಗಳು ಸ್ತ್ರೀಪಾತ್ರ ಧರಿಸಿ ಬರುವ ಗಂಡಸರ ಕೆಟ್ಟ ಆಂಗಿಕ ಭಂಗಿಗಳನ್ನು, ದ್ವಂದ್ವಾರ್ಥದ ಸಂಭಾಷಣೆಗಳನ್ನು ಸಹಿಸಿಕೊಂಡು ನಗುತ್ತ ಕುಳಿತ ತೀರ್ಪುಗಾರರ ಮೇಲೆ ನನಗೆ ಎಲ್ಲಿಲ್ಲದ ಸಿಟ್ಟು ಬರುತ್ತಿತ್ತು.

    ಈ ದೃಶ್ಯಮಾಧ್ಯಮಗಳ ಅದರಲ್ಲೂ ಸಾಮಾಜಿಕ ಜಾಲತಾಣಗಳ ಅಟ್ಟಹಾಸ ಪ್ರಾರಂಭವಾಗುವ ಮೊದಲು ಮುದ್ರಣ ಮಾಧ್ಯಮದಲ್ಲಿ ‘ಓದುವ ಸುಖ’ವನ್ನು ಹೆಚ್ಚಿನ ಸಾಹಿತ್ಯಾಸಕ್ತರು ಮನೆಗಳಲ್ಲಿ, ಲೈಬ್ರರಿಗಳಲ್ಲಿ ಕೂತು ಓದುವುದರ ಮೂಲಕ ಪಡೆಯುತ್ತಿದ್ದರು. ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಓದುವ, ವಿಮಶಿಸುವ ಬೇರೆಯವರಿಗೆ ಅದರ ಕುರಿತು ಹೇಳುವ ಒಂದು ಸತ್ಪರಂಪರೆಯ ವ್ಯಕ್ತಿಗಳು ಪ್ರತಿ ಊರಿನಲ್ಲಿಯೂ ಸಿಗುತ್ತಿದ್ದರು. ಅರಳಿಕಟ್ಟೆಯಲ್ಲಿ ಹರಟುವ ಹಳ್ಳಿಗರು ಯಕ್ಷಗಾನ, ದೊಡ್ಡಾಟ, ಅಂಟಿಗೆಪಂಟಿಗೆ, ಹರಿಕಥೆ, ಕಥಾ ಕಾಲಕ್ಷೇಪ, ಹಾಡು ಹಸೆ… ಹೀಗೆ ಮನರಂಜನೆಗೆ ಹಲವಾರು ಜಾನಪದ ವಿಧಾನಗಳನ್ನು ಕಂಡುಕೊಂಡಿದ್ದರು. ಟಿ.ವಿ. ಎಂಬ ‘ಮೂರ್ಖರ ಪೆಟ್ಟಿಗೆ’ ಯಾವಾಗ ಮನೆಮನೆಯ ಜಗುಲಿಯಲ್ಲಿ ಪ್ರತಿಷ್ಠಾಪಿಸಲ್ಪಟ್ಟಿತೋ ಅಂದೇ ಈ ಎಲ್ಲ ಜಾನಪದ ಕಲಾಪ್ರಕಾರಗಳ ಅವಸಾನ ಪ್ರಾರಂಭವಾಯಿತು. ಮುಂದೊಂದು ದಿನ ಈ ಎಲ್ಲ ಕಲಾ ಪ್ರಕಾರಗಳನ್ನು ತನ್ನ ಕಬಂಧಬಾಹುಗಳ ಒಳಗೆ ತೆಗೆದುಕೊಂಡು ಟಿವಿಯವರು ಶುದ್ಧ, ಅಶುದ್ಧ ಶಿಷ್ಟ, ಅಶಿಷ್ಟ, ಶೀಲ, ಅಶ್ಲೀಲಗಳ ವ್ಯತ್ಯಾಸವನ್ನು ತೆಗೆದೊಗೆದು ತಮಗೆ ತೋಚಿದ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ನೀಡತೊಡಗಿದರು. ಕೆಲವು ಮುಗ್ಧ ಕಲಾವಿದರು ಹೆಸರಿನ, ಹಣದ, ಕೀರ್ತಿಯ ಆಮಿಷಕ್ಕೆ ಬಲಿಯಾಗಿ ಈ ಕಬಂಧಬಾಹುಗಳ ಒಳಗೆ ತಾವೇ ಹೋಗಿ ಸಿಲುಕಿಕೊಂಡರು (ಅಶ್ಲೀಲ ಕಾಮಿಡಿ ಶೋಗಳ ತೀರ್ಪಗಾರರಾಗಿ ಕುಳಿತ ಖ್ಯಾತನಾಮರನ್ನು ನೋಡಿದಾಗೆಲ್ಲ ಹೀಗೆ ಅನ್ನಿಸುತ್ತದೆ). ಅಂತಹ ಶೋಗಳಲ್ಲಿ ಹೋಗಿ ಕುಳಿತು ಚಪ್ಪಾಳೆ ತಟ್ಟಿ ಕೂಗಿ ಕಿರುಚಿ ಬರುವ ಪ್ರೇಕ್ಷಕವರ್ಗವೂ ತಯಾರಾಯಿತು. ಸರಿ ಆ ಪ್ರೇಕ್ಷಕವರ್ಗದ ಅಭಿರುಚಿಯನ್ನು ಕೊಳಕು ಅಭಿರುಚಿಗೆ ಹೊಂದಿಸಿಕೊಳ್ಳುವ ಕಲಾವಿದರು ಸಾಕಷ್ಟು ಸಂಖ್ಯೆಯಲ್ಲಿ ಹುಟ್ಟಿಕೊಂಡರು. ವೇದಿಕೆಗೆ ಬರುವಾಗಲೇ ಅಸಭ್ಯ ಭಂಗಿಯಲ್ಲಿ ಅಶ್ಲೀಲ ಮಾತುಗಳನ್ನು ಆಡುತ್ತ ಹಾಡುತ್ತ ಬಂದು ತಮ್ಮ ದುರಭ್ಯಾಸಗಳ ವರ್ಣನೆ ಮಾಡುವುದು, ಕುಡಿಯುವುದು, ಬಡಿಯುವುದು ಇತ್ಯಾದಿ ಮಾಡುತ್ತ ಹೆಚ್ಚುಗಾರಿಕೆ ಎಂಬಂತೆ ತೀರ್ಪಗಾರರನ್ನೂ ತಮ್ಮೊಂದಿಗೆ ಬರಲು ಕರೆಯುವುದು, ಹೀಗೆ ಎಂಬ ನಿಯಮಗಳೇ ಇಲ್ಲ! ಮಾತಿಗಂತೂ ಲಗಾಮೇ ಇಲ್ಲ. ಮಾಡಿದ್ದೇ ಅಭಿನಯ ಆಡಿದ್ದೇ ಮಾತು. ಅಶ್ಲೀಲತೆಯ ಪರಾಕಾಷ್ಠೆಯಲ್ಲಿ ಬೀಳುವ ಚಪ್ಪಾಳೆಗಳು. ಇವೆಲ್ಲವೂ ನಡೆಯುವುದು ಹಾಸ್ಯ ಷೋಗಳ ಹೆಸರಿನಲ್ಲಿ!

    ನಿಜವಾದ ಹಾಸ್ಯವನ್ನು ಕಂಡು ಬಲ್ಲವರು, ಇಷ್ಟಪಡುವವರು ಇಂಥ ಕಾರ್ಯಕ್ರಮಗಳನ್ನು ನೋಡುವುದೇ ಇಲ್ಲ. (ನೋಡಿ ಪ್ರಾರಂಭದಲ್ಲೇ ಖಂಡಿಸತೊಡಗಿದ್ದರೆ ಇವು ಇಷ್ಟು ಹೆಚ್ಚಿ ಕೊಳ್ಳುತ್ತಿರಲಿಲ್ಲವೇನೋ). ಸ್ವಲ್ಪ ಸುಸಂಸ್ಕೃತ, ಸಂತುಲಿತ ಮನಸ್ಸಿನ ಪ್ರೇಕ್ಷಕರು ಹೊಸ ತಲೆಮಾರಿನ ಯುವಕ-ಯುವತಿಯರು ಹಾಸ್ಯವೆಂದರೆ ಇದೇ ಇರಬೇಕು ಎಂಬ ಅಭಿಪ್ರಾಯವನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಇದು ನಮ್ಮ ಟಿವಿ ಸಂಸ್ಕೃತಿ ತಂದಿಟ್ಟಿರುವ ಸಾಂಸ್ಕೃತಿಕ ದುರಂತ. ಸರಿಪಡಿಸಿಕೊಳ್ಳಲೇ ಬೇಕಾದ ಬೆಳವಣಿಗೆ (ಗುಣಪಡಿಸಲೇ ಬೇಕಾದ ಕಾಯಿಲೆ. ಅಸಭ್ಯತೆ ಅಶ್ಲೀಲತೆಗಳಂಥ ವೈರಾಣಗಳು ತಂದುಬಿತ್ತಿರುವ ಕಾಯಿಲೆ).

    ಒತ್ತಡದ ದಿನಚರಿಯ ಇಂದಿನ ದಿನಗಳಲ್ಲಿ ಮನಸ್ಸನ್ನು ಹಗುರವಾಗಿಸಲು ಹಾಸ್ಯಪ್ರಸಂಗಗಳ ವೀಕ್ಷಣೆ ತಪ್ಪೇನಲ್ಲ. ಉತ್ತಮ ಹಾಸ್ಯದ ಉದ್ದೇಶವೇ ಮನರಂಜನೆ ಹಾಗೂ ಮನಸ್ಸನ್ನು ಅರಳಿಸುವುದು. ಶ್ರೇಷ್ಠ ಹಾಸ್ಯ ಕೃತಿಗಳನ್ನು ರಚಿಸಿಟ್ಟು ಹೋದ ಎಷ್ಟೋ ಮಹಾತ್ಮರು ಕನ್ನಡದಲ್ಲಿದ್ದಾರೆ. ಹಾಸ್ಯನಟರು, ಹಾಸ್ಯ ನಾಟಕಕಾರರು, ಕಲಾವಿದರು ತಮ್ಮ ಹಾಸ್ಯ ಸಂಭಾಷಣೆಗಳ ಮೂಲಕವಾಗಿ ಜನರನ್ನು ನಕ್ಕು ನಲಿಸಿ ಕೊನೆಯಲ್ಲೊಂದು ಉತ್ಕೃಷ್ಟವಾದ ಸಂದೇಶವನ್ನು ಇಟ್ಟೇ ಪ್ರದರ್ಶನವನ್ನು ಕೊನೆಗೊಳಿಸುತ್ತಿದ್ದರು. ಕೈಲಾಸಂ, ನಾ. ಕಸ್ತೂರಿ, ಬೀಚಿ, ರಾ.ಶಿ, ದಾಶರಥಿ ದೀಕ್ಷಿತ್, ನಾಡಿಗೇರ ಕೃಷ್ಣರಾಯರು, ಪಾವೆಂ ಆಚಾರ್ಯರು, ವಿ. ಸೀತಾರಾಮಯ್ಯ, ಪಡುಕೋಣೆ ರಮಾನಂದ ರಾಯರು, ಅರಾಸೆ, ಟಿ.ಸುನಂದಮ್ಮ… ಹೀಗೆ ಹಿರಿಯರದೊಂದು ತಲೆಮಾರು ಸಮೃದ್ಧ ಹಾಸ್ಯಸಾಹಿತ್ಯದ ಕಣಜವನ್ನೇ ಕಟ್ಟಿ ಗಟ್ಟಿ ಕಾಳುಗಳನ್ನು ತುಂಬಿಟ್ಟು ಹೋಗಿದ್ದಾರೆ. ರಾಶಿಯವರು ಪ್ರಾರಂಭಿಸಿದ ‘ಕೊರವಂಜಿ’ ಅನೇಕ ವರ್ಷಗಳ ಕಾಲ ಕನ್ನಡಿಗರನ್ನು ನಗಿಸಿತು. ‘ಕೊರವಂಜಿ’ಯ ಮಗಳು ‘ಅಪರಂಜಿ’ ಹಾಸ್ಯಪತ್ರಿಕೆಯಾಗಿ ಉತ್ಕೃಷ್ಟ ಬರಹಗಳನ್ನು ಪ್ರಕಟಿಸುತ್ತ ಬಂದಿದೆ. ಪ್ರತಿ ವರ್ಷ ಮೇಲೆ ಹೇಳಿದ ಎಲ್ಲ ಹಾಸ್ಯ ದಿಗ್ಗಜರ ನೆನಪಿನಲ್ಲಿ ಹಾಸ್ಯೋತ್ಸವವನ್ನು ನಡೆಸಿ ದೇಶ-ವಿದೇಶಗಳಿಂದ ಅಭಿಮಾನಿಗಳು ಬಂದು ಕೂತು ನಕ್ಕು ಹಗುರಾಗಿ ಹೋಗುವ ಕಾರ್ಯಕ್ರಮಗಳನ್ನು ದಶಕಗಳ ಕಾಲ ನಡೆಸಿತ್ತು. ಈ ಹಾಸ್ಯೋತ್ಸವಗಳ ನಿರ್ದೇಶನದ ಹೊಣೆ ಹೊತ್ತು ಇಡೀ ದಿನದ ಕಾರ್ಯಕ್ರಮಗಳಿಗೆ ಒಂದು ಸಾಹಿತ್ಯಿಕ ಟಚ್ ಕೊಡುವ, ಘನತೆಯನ್ನು ಸ್ಥಾಪಿಸುವ ಕೆಲಸ ಮಾಡಿದವರು ವಿದ್ವಾಂಸರೂ ಕನ್ನಡ ಪ್ರಾಧ್ಯಾಪಕರೂ ಹಾಸ್ಯ ಸಾಹಿತ್ಯದ ಅಧಿಕೃತ ಮುಂಚೂಣಿಯಲ್ಲಿರುವವರೂ ಆದ ಅ.ರಾ. ಮಿತ್ರ ಅವರು. ಅವರು ಮಾತನಾಡಲು ನಿಂತರೆ ಕುಮಾರವ್ಯಾಸ, ಕಾಳಿದಾಸ, ಪಂಪ, ರನ್ನ ಇತ್ಯಾದಿ ಕನ್ನಡದ ಗಣಿಗಳಿಂದ ಆಯ್ದು ಹಾಸ್ಯದ ಮಾತುಗಳಲ್ಲಿ ಪೋಣಿಸಿ ಪ್ರೇಕ್ಷಕರನ್ನು ತಲೆದೂಗುವಂತೆ ಮಾತನಾಡುವ ವಾಗ್ಮಿಗಳು. ಮಿತ್ರ ಅವರ ಗರಡಿಯಲ್ಲಿ ತಯಾರಾದ ಹಾಸ್ಯ ಲೇಖಕರ ದೊಡ್ಡ ಪಟ್ಟಿಯೇ ಇದೆ. ಅವರೆಲ್ಲರೂ ಉತ್ತಮ ಹಾಸ್ಯ ಭಾಷಣಕಾರರು ಸಹ ಆಗಿದ್ದಾರೆ. ಅಪರಂಜಿ ಶಿವು, ಶ್ರೀನಿವಾಸ ವೈದ್ಯ, ವೈ.ವಿ. ಗುಂಡೂರಾವ್, ಬೇಲೂರು ರಾಮಮೂರ್ತಿ, ಅಣಕು ರಾಮನಾಥ್, ಕೃಷ್ಣ ಸುಬ್ಬರಾವ್, ನುಗ್ಗೇಹಳ್ಳಿ ಪಂಕಜಾ, ಲೀಲಾ ಮಿರ್ಲೆ ಇವರೆಲ್ಲರ ಜತೆ ನಾನು ಸಹ ತ್ರಿಕರಣಪೂರ್ವಕವಾಗಿ ಹಾಸ್ಯೋತ್ಸವದಲ್ಲಿ ಪಾಲ್ಗೊಂಡಿದ್ದೇನೆ. ನಕ್ಕು ನಕ್ಕು ಹೊಟ್ಟೆ ಹುಣ್ಣು ಮಾಡಿಕೊಂಡು ಮುಂದಿನ ವರ್ಷದ ಹಾಸ್ಯೋತ್ಸವಕ್ಕೆ ಈಗಲೇ ಜಾಗ ಬುಕ್ ಮಾಡಿಡುವ ಪ್ರೇಕ್ಷಕರನ್ನು ನೋಡಿದ್ದೇನೆ. ‘ಅಪರಂಜಿ’ ಬಳಗದ ಕಾರ್ಯದರ್ಶಿಯಾಗಿ ಸ್ವತಃ ಬೀಚಿಯವರ ಮೊಮ್ಮಗನೇ ಆದ ಉಲ್ಲಾಸ ಅವರು ಉತ್ಸಾಹದಿಂದ ಕಾರ್ಯಕ್ರಮವನ್ನು ಸಂಘಟಿಸುವ ಹೊಣೆ ಹೊತ್ತಿದ್ದಾರೆ. ಪ್ರತಿವರ್ಷ ಡಿಸೆಂಬರ್ 25ರಂದು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದ ಹಾಸ್ಯೋತ್ಸವ ಈಗ ಸಂಕ್ಷಿಪ್ತ ರೂಪ ಪಡೆದು ಏಪ್ರಿಲ್ ಮೊದಲ ವಾರದಲ್ಲಿ ‘ಅಪರಂಜಿ ಹಬ್ಬ’ ಎಂಬ ಕಾರ್ಯಕ್ರಮವಾಗಿ ಆಚರಿಸಲ್ಪಡುತ್ತಿದೆ. ಮತ್ತದೇ ಹಿರಿಕಿರಿಯ ಹಾಸ್ಯ ಸಾಹಿತಿಗಳ ಸಮಾಗಮ. ವೇದಿಕೆಯಲ್ಲಿ ಚಟಪಟನೆ ಸಿಡಿಯುವ ನಗೆಚಟಾಕಿಗಳು, ಅಣಕವಾಡುಗಳು, ನಾಟಕದ ತುಣುಕುಗಳು, ವೈವಿಧ್ಯಮಯ ಹಾಸ್ಯದ ರಸದೌತಣ. ನೋಡುವವರು, ಕೇಳುವವರು ನಕ್ಕು ನಕ್ಕು ಕಣ್ಣಲ್ಲಿ ನೀರು ಬರುವಷ್ಟು ಕಚಗುಳಿ.

    ಈ ಬಗೆಯ ಹಾಸ್ಯ ಗೋಷ್ಠಿಗಳು ಕನ್ನಡದಲ್ಲಿ ಸಾಧ್ಯವಿರುವಾಗ ಟಿವಿ ಕಾಮಿಡಿ ಶೋಗಳು ಅಂತಹ ಅಪೂರ್ವ ಭಂಡಾರದಿಂದ ವಸ್ತುಗಳನ್ನೇಕೆ ಎತ್ತಿಕೊಳ್ಳಬಾರದು? ಅಶ್ಲೀಲತೆಗೆ ಬಟ್ಟೆತೊಡಿಸಿ, ಅಸಭ್ಯತೆಗೆ ಫಿನಾಯ್ಲ್ ಸುರಿದು, ಅಸಹ್ಯಕ್ಕೆ ಡಿ ಆಡರಂಟ್ ಹಾಕಿ ಸ್ವಚ್ಛ ಹಾಸ್ಯ ಅಭಿಯಾನ ಆರಂಭವಾಗಲಿ ಎಂದು ಹಾಸ್ಯ ಸಾಹಿತಿಗಳ ಹಾಗೂ ಹಾಸ್ಯಾಸಕ್ತರೆಲ್ಲರ ಪರವಾಗಿ ಹಾರೈಸುತ್ತೇನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts