More

    ದೇವಾಲಯದ ಪಾವಿತ್ರ್ಯವನ್ನು ರಕ್ಷಿಸೋಣ; ಡಾ.ವೀರೇಂದ್ರ ಹೆಗ್ಗಡೆಯವರ ಅಂಕಣ

    ದೇವಾಲಯದ ಪಾವಿತ್ರ್ಯವನ್ನು ರಕ್ಷಿಸೋಣ; ಡಾ.ವೀರೇಂದ್ರ ಹೆಗ್ಗಡೆಯವರ ಅಂಕಣವಿದೇಶಗಳ ಕ್ರೖೆಸ್ತ ಸಂಸ್ಥೆಗಳಿಗೆ ಸಂಬಂಧಪಟ್ಟ ಒಂದು ತಂಡ ಭಾರತ ವೀಕ್ಷಣೆಗೆ ಬಂದಿತ್ತು. ಪ್ರತಿ ವರ್ಷವೂ ಅವರು ಮಂಗಳೂರಿಗೆ ಬಂದಾಗ, ಇಲ್ಲಿನ ರ್ಚಚಿನವರು ಎಂಟರಿಂದ ಹದಿನೈದು ಜನರಿರುವ ಈ ಗುಂಪನ್ನು ಹಿಂದೂ ದೇವಸ್ಥಾನಗಳ ಸಂದರ್ಶನಕ್ಕಾಗಿ ಧರ್ಮಸ್ಥಳಕ್ಕೆ ಕರೆದುಕೊಂಡು ಬರುತ್ತಾರೆ. ಒಮ್ಮೆ ಅಂಥ ತಂಡದಲ್ಲಿದ್ದವರೆಲ್ಲ ಯುವಕರಾಗಿದ್ದರು. ಧರ್ಮಸ್ಥಳಕ್ಕೆ ಬಂದಾಗ ಅವರ ಜೊತೆಯಲ್ಲಿ ಕೆಲವು ಹೊತ್ತು ಮಾತನಾಡಿದೆ. ಅವರಿಗೆ ಹಿಂದೂ ದೇವಸ್ಥಾನಗಳ ವಿಶೇಷತೆ ಕುರಿತು ಮಾಹಿತಿ ಕೊಟ್ಟು, ಏನಾದರೂ ಪ್ರಶ್ನೆಗಳಿದ್ದರೆ ಕೇಳಿ ಎಂದೆ.

    ಆ ತಂಡದಲ್ಲಿದ್ದ ಒಬ್ಬ ಸದಸ್ಯ, ‘ನಾವು ಅನೇಕ ಧಾರ್ವಿುಕ ಸ್ಥಳಗಳಿಗೆ ಹೋಗುತ್ತೇವೆ. ಅಲ್ಲೆಲ್ಲ ನಿಶ್ಶಬ್ದ ಇರುತ್ತದೆ. ಆದರೆ ಭಾರತದ ಕೆಲವು ದೇವಸ್ಥಾನಗಳಲ್ಲಿ ಹಾಗೂ ಧರ್ಮಸ್ಥಳ ದೇವಸ್ಥಾನದ ಒಳಗೆ ಹೋದಾಗ, ದೇವರ ದರ್ಶನಕ್ಕೆ ಬಂದಂಥ ಬಹುಪಾಲು ಭಕ್ತರು ಏನೇನೋ ಮಾತನಾಡುತ್ತಿದ್ದರು. ಕೆಲವರು ಏರಿದ ಧ್ವನಿಯಲ್ಲಿ! ಇದು ಯಾಕೆ ಹೀಗೆ?’ ಎಂದು ಪ್ರಶ್ನೆ ಮಾಡಿದ.

    ಅವರಿಗೇನು ಉತ್ತರ ಕೊಡಬೇಕು ಎಂಬುದು ಆ ಕ್ಷಣಕ್ಕೆ ಹೊಳೆಯಲಿಲ್ಲ. ಯಾಕೆಂದರೆ ಶಾಸ್ತ್ರ ಆಧಾರಿತವಾಗಿ ಅಥವಾ ಪರಂಪರಾನುಗತವಾಗಿ ಬಂದಂಥ ಉತ್ತರ ಎಂಬುದು ಇದ್ದರೂ ಅದನ್ನು ಯಾರೂ ಗಮನಿಸುವುದಿಲ್ಲ. ಧರ್ಮಸ್ಥಳದ ದೇವರ ದರ್ಶನಕ್ಕೆ ಸರತಿಸಾಲಿನಲ್ಲಿ ಬರುವವರಿಗೆ ಕಾಣುವಂತೆ ಈ ಬರಹವಿದೆ-

    ಪಾದೌ ಪಾದಾಂತರೇ ಕೃತ್ವಾ, ಕರೌ ಚಲನವರ್ಜಿತೌ |

    ವಾಚಾ ಸ್ತೋತ್ರಂ, ಹೃದಿ ಧ್ಯಾನಂ ಚತುರಂಗಂ ಪ್ರದಕ್ಷಿಣಮ್ ||

    ಪ್ರದಕ್ಷಿಣೆಯನ್ನು ನಾಲ್ಕು ಅಂಗಗಳಿಂದ ಕೂಡಿ ಮಾಡಬೇಕು. ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುತ್ತ, ಕೈಗಳನ್ನು ಜೋಡಿಸಿಕೊಂಡು ಕೈಮುಗಿಯುತ್ತ, ಬಾಯಿಯಲ್ಲಿ ಸ್ತೋತ್ರ ಪಠಣ ಮಾಡುತ್ತ, ಹೃದಯದಲ್ಲಿ ಧ್ಯಾನ ಮಾಡುತ್ತ ನಮಸ್ಕರಿಸುವುದು ಸಂಪ್ರದಾಯ. ಇಲ್ಲಿ ಸರ್ವ ಸಮರ್ಪಣಾ ಭಾವ ವ್ಯಕ್ತವಾಗುವುದು. ಇದು ದೇವರಿಗೆ ನಮಸ್ಕಾರ ಮಾಡುವ ಕ್ರಮ. ಎದೆ, ಹಣೆ, ಕಣ್ಣು, ಮನಸ್ಸು, ಮಾತು, ಕೈಗಳು, ಪಾದಗಳು ಮತ್ತು ಮೊಣಕಾಲುಗಳನ್ನು ನೆಲಕ್ಕೆ ತಾಗಿಸಿ ನಮಸ್ಕರಿಸುವುದು ಉದ್ದಂಡ ನಮಸ್ಕಾರ. ಸ್ತ್ರೀಯರು ಸಾಷ್ಟಾಂಗ ನಮಸ್ಕಾರ ಮಾಡುವುದು ಸೂಕ್ತವಲ್ಲ.

    ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಇದು ಲೌಕಿಕ ವಿಷಯ. ಅವರಿಗೆ ಏನಾದರೂ ಉತ್ತರ ಕೊಡಬೇಕಲ್ಲ ಎಂಬ ದೃಷ್ಟಿಯಿಂದ ಕೊನೆಗೆ ಒಂದು ಉತ್ತರವನ್ನು ನೀಡಿದೆ. ‘ಸಾಮಾನ್ಯವಾಗಿ ಒಬ್ಬ ಮನುಷ್ಯನು ಏಕಾಗ್ರತೆ ಸಿದ್ಧಿಸಿಕೊಳ್ಳಬೇಕಾದರೆ ಕೊಂಚ ಕಾಲಾವಕಾಶ ಬೇಕಾಗುತ್ತದೆ. ಒಬ್ಬ ವ್ಯಕ್ತಿ ದೇವರ ದರ್ಶನ ಮಾಡುವಾಗ ಅಥವಾ ರ್ಚಚಿಗೆ ಹೋಗಿ ಪ್ರಾರ್ಥನೆ ಮಾಡುವಾಗ ಮೂವತ್ತು ಸೆಕೆಂಡಿನಿಂದ ಒಂದೂವರೆ ನಿಮಿಷದವರೆಗೆ ಅವರಿಗೆ ಏಕಾಗ್ರತೆ ಇರಬಹುದು. ಅರ್ಧಗಂಟೆ, ಒಂದು ಗಂಟೆಗಳ ಕಾಲ ಕೆಲವೊಮ್ಮೆ ಕಣ್ಣು ಮುಚ್ಚಿ ಕುಳಿತರೂ ಮನಸ್ಸಿನಲ್ಲಿ ಅನೇಕ ವಿಚಾರಗಳು ಬಂದು ಹೋಗುತ್ತಿರುತ್ತವೆ. ಮನಸ್ಸು ನಿಂತಲ್ಲಿಯೇ ನಿಲ್ಲುವುದಿಲ್ಲ. ಅದು ಚಂಚಲವಾಗಿ ಓಡಾಡುತ್ತಿರುತ್ತದೆ’. ಅವರಿಗೆ ಒಂದು ಉದಾಹರಣೆ ನೀಡಿದೆ. ‘ಇಂಗ್ಲಿಷ್ ಭಾಷೆಯ ಮಿಸ್ಟರ್ ಬೀನ್ ಎಂಬ ಹಾಸ್ಯಸರಣಿ. ಅದರಲ್ಲಿ ಮಿಸ್ಟರ್ ಬೀನ್ ಎಂಬ ಹಾಸ್ಯನಟ ರ್ಚಚಿಗೆ ಹೋಗಿ ಕುಳಿತುಕೊಂಡ. ಕೆಲವೇ ಸೆಕೆಂಡುಗಳ ಕಾಲ ಅವನ ಮನಸ್ಸು ಆ ರ್ಚಚಿನ ಪ್ರಾರ್ಥನಾಸ್ಥಳ ಅಥವಾ ಧರ್ಮಗುರುಗಳು ಬೋಧಿಸುವುದರ ಮೇಲೆ ಇತ್ತು. ಇದ್ದಕ್ಕಿದ್ದಂತೆ ಅಲ್ಲಿಯೇ ಅವನಿಗೆ ನಿದ್ದೆ ಆವರಿಸಿಕೊಂಡಿತು. ಎಷ್ಟು ನಿದ್ದೆ ಆವರಿಸಿತೆಂದರೆ ಪಕ್ಕದಲ್ಲಿ ಕುಳಿತುಕೊಂಡವರ ಹೆಗಲಮೇಲೆ ಅವನು ಬಿದ್ದ. ಅವನು ಬೀಳುವುದನ್ನು ತಪ್ಪಿಸಿಕೊಳ್ಳಲು ಪಕ್ಕದವರು ಪ್ರಯತ್ನಿಸಿದಾಗ, ಅವನು ನಿದ್ದೆಯಲ್ಲಿ ಬಗ್ಗಿ ಬಗ್ಗಿ ನೆಲಕ್ಕೆ ಬಿದ್ದುಬಿಟ್ಟ. ಇನ್ನೊಂದು ಸಂದರ್ಭದಲ್ಲಿ ಅವನು ಕೆಲಹೊತ್ತು ಸುಮ್ಮನೆ ಕುಳಿತುಕೊಂಡಿದ್ದ. ಆಮೇಲೆ ಮಣಮಣ ಎಂದು ಏನೇನೋ ಮಾತನಾಡುತ್ತ, ಒಳಧ್ವನಿಯಲ್ಲಿ ಹಾಡನ್ನು ಹಾಡಿಕೊಳ್ಳುತ್ತ, ಕೊನೆಗೆ ಆ ರ್ಚಚಿನ ಒಳಗಿದ್ದ ಒಳ್ಳೆಯ ವಾತಾವರಣವನ್ನು ಹಾಳು ಮಾಡಿದ. ಹೀಗೆ ಏಕಾಗ್ರತೆ ತಂದುಕೊಳ್ಳುವುದು ತುಂಬ ಕಷ್ಟ.

    ಅದಕ್ಕಾಗಿ ನಮ್ಮವರು ಮಹಾಪೂಜೆ ಸಂದರ್ಭದಲ್ಲಿ ಅನೇಕ ವಾದ್ಯಗಳನ್ನು ಬಳಸುತ್ತಾರೆ. ಚಂಡೆ, ಜಾಗಟೆ, ಶಂಖ ಇನ್ನೂ ಅನೇಕ ವಾದ್ಯವಿಶೇಷಗಳನ್ನು ಮಹಾಪೂಜೆ ಸಂದರ್ಭದಲ್ಲಿ ಬಳಸುತ್ತಾರೆ. ಸಾಮಾನ್ಯವಾಗಿ ನಮ್ಮ ದೇವಸ್ಥಾನಗಳಲ್ಲಿ ನಾಗಸ್ವರ ವಾದನವಿರುತ್ತದೆ. ಹತ್ತು-ಹನ್ನೆರಡು ಜನ ಬಾರಿಸುವಂಥ ಬ್ಯಾಂಡ್​ಸೆಟ್ ಇರುತ್ತದೆ. ಜೊತೆಗೆ ಧರ್ಮಸ್ಥಳದಂಥ ದೇವಸ್ಥಾನದಲ್ಲಿ ಬೃಹತ್ತಾದ ಗಂಟೆಗಳಿವೆ. ಈ ಗಂಟೆಗಳನ್ನು ಬಾರಿಸುತ್ತಿದ್ದ ಹಾಗೆ ಅಲ್ಲಿ ಸೇರಿರುವ ಎಲ್ಲರ ಏಕಾಗ್ರತೆ ಭಗವಂತನ ಕಡೆಗೆ ಹರಡುತ್ತದೆ. ಹಾಗಾಗಿ ಆ ಸಂದರ್ಭದಲ್ಲಿ ಐದಾರು ನಿಮಿಷಗಳ ಕಾಲ ಯಾರಿಗೂ ಮಾತನಾಡುವುದಕ್ಕೂ ಆಗುವುದಿಲ್ಲ. ಮನಸ್ಸು ಎಲ್ಲೆಲ್ಲೋ ಹರಿಯುವುದೂ ಇಲ್ಲ. ಮಂಗಳಧ್ವನಿಗೆ ದೇವರ ಕಡೆಗೆ ಗಮನ ಹರಿಯುತ್ತದೆ. ಹಾಗಾಗಿ ಈ ಸಮಯವನ್ನು ಹೊರತುಪಡಿಸಿದರೆ ಅನೇಕ ಜನರು ಏಕಾಗ್ರತೆ ಕಾಪಾಡಿಕೊಳ್ಳಲು ಅಸಮರ್ಥರಾಗಿ ಮಾತನಾಡುತ್ತಾರೆ’.

    ಈ ಉತ್ತರ ಆ ಕ್ಷಣಕ್ಕೆ ನನಗೆ ತೋರಿದ ವಿಚಾರವಾಗಿತ್ತು. ನಾನು ಕೊಟ್ಟ ಉತ್ತರ ಆ ಪ್ರಶ್ನೆಗೆ ನ್ಯಾಯವಾದ ಉತ್ತರ ಎಂದು ನೀವು ತಿಳಿದುಕೊಳ್ಳಬಾರದು. ಆದರೆ ನಮ್ಮ ಕ್ಷೇತ್ರದಲ್ಲಿ ದೇವರ ದರ್ಶನಕ್ಕೆ ಭಕ್ತಾದಿಗಳು ಬಂದಾಗ ಇಂಥ ಘಟನೆಗಳನ್ನು ಕಂಡಾಗ ನಮಗೆ ತುಂಬ ಬೇಸರವಾಗುತ್ತದೆ.

    ಕಲಾವಾಗಮಮುಲ್ಲಂಘ್ಯ ಯೋಧಿನ್ಯಮಾರ್ಗಂ ಪ್ರವರ್ತತೆ |

    ನ ತಸ್ಯ ಗತಿರಸ್ತೀತಿ ಸತ್ಯಂ ಸತ್ಯಂ ನ ಸಂಶಯಃ ||

    ದೇವಸ್ಥಾನಕ್ಕೆ ಬರುವ ಭಕ್ತರು ದೇವಾಲಯದ ವಿಧಿ ನಿಷೇಧಗಳನ್ನು ಅರಿತು ಪಾಲಿಸಿ ದೇವರನ್ನು ಪ್ರಾರ್ಥಿಸಿದರೆ ಪುಣ್ಯವನ್ನು ಪಡೆಯುತ್ತಾರೆ. ವಿಧಿ ನಿಷೇಧಗಳನ್ನು ನಿರ್ಲಕ್ಷಿಸಿ ಅದಕ್ಕೆ ವಿರುದ್ಧವಾಗಿ ವರ್ತಿಸಿದರೆ ಪುಣ್ಯದ ಬದಲು ಮತ್ತಷ್ಟು ಪಾಪವನ್ನೇ ಪಡೆಯುತ್ತಾರೆ ಎಂದು ಆಗಮಶಾಸ್ತ್ರ ತಿಳಿಸುತ್ತದೆ.

    ಅನ್ಯ ಕ್ಷೇತ್ರೆ ಕೃತಂ ಪಾಪಂ ಪುಣ್ಯಕ್ಷೇತ್ರೆ ವಿನಶ್ಯತಿ |

    ಪುಣ್ಯಕ್ಷೇತ್ರೆ ಕೃತಂ ಪಾಪಂ ವಜ್ರಲೇಪೊ ಭವಿಷ್ಯತಿ ||

    ಬೇರೆಡೆ ಮಾಡಿದ ಪಾಪ ಪುಣ್ಯಕ್ಷೇತ್ರಸಂದರ್ಶನದಿಂದ ನಾಶವಾಗುತ್ತದೆ. ಪುಣ್ಯಕ್ಷೇತ್ರದಲ್ಲಿ ಮಾಡಿದ ಪಾಪ ವಜ್ರಲೇಪದಂತೆ ಶಾಶ್ವತವಾಗಿ ಅಂಟಿಕೊಳ್ಳುತ್ತದೆ.

    ದೇವಸ್ಥಾನದ ಹೊರಗೆ ಎಷ್ಟು ಶಾಂತವಿರುತ್ತದೆಯೋ ಒಳಗಡೆ ಅಷ್ಟೇ ಗದ್ದಲವಿರುತ್ತದೆ. ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತವರು ಪರಸ್ಪರ ಮಾತನಾಡಿಕೊಳ್ಳುವುದು ಒಂದಾದರೆ, ಸ್ನೇಹಿತರು ಅಥವಾ ಯುವಕ-ಯುವತಿಯರು ಏನೇನೋ ವಿಷಯಗಳನ್ನು ಮಾತನಾಡಿಕೊಳ್ಳುತ್ತ, ಪರಸ್ಪರ ಹಾಸ್ಯ ಮಾಡಿಕೊಳ್ಳುತ್ತ ಇರುತ್ತಾರೆ. ನಾನು ಒಮ್ಮೆ ದೇವಸ್ಥಾನದ ಒಳಗೆ ಇರುವಾಗ, ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಬ್ಬ ಸಿಬ್ಬಂದಿ, ಆ ಭಕ್ತರ ಹತ್ತಿರ ಹೋಗಿ, ‘ಯಾಕೆ ಗಟ್ಟಿಯಾಗಿ ಮಾತನಾಡುತ್ತಿದ್ದೀರಿ? ಸಣ್ಣಸ್ವರದಲ್ಲಿ ಮಾತನಾಡಿ’ ಎಂದ. ಅವರು ಮತ್ತೂ ಗಟ್ಟಿಯಾಗಿ ಹಾಸ್ಯ ಮಾಡತೊಡಗಿದರು. ಅಲ್ಲಿಯೇ ಇದ್ದ ನಾನು ಒಂದು ನಿಮಿಷ ನಿಂತು ಅವರಿಗೆ ಹೇಳಿದೆ- ‘ನೋಡಿ, ನಿಮ್ಮ ಊರಿನಿಂದ ಧರ್ಮಸ್ಥಳಕ್ಕೆ ಬರಲಿಕ್ಕೆ ಐದಾರು ಗಂಟೆ ತಗುಲಿರಬಹುದು. ಇಲ್ಲಿಂದ ಹಿಂದೆ ಹೋಗಲು ಕೂಡ ಅಷ್ಟೇ ಸಮಯ ಬೇಕು. ಅಂದರೆ ಹತ್ತರಿಂದ ಹನ್ನೆರಡು ತಾಸು ಮನರಂಜನೆಗೆ, ಹಾಸ್ಯಕ್ಕೆ, ಪರಸ್ಪರ ಸುಖ-ದುಃಖಗಳನ್ನು ಮಾತನಾಡಿಕೊಳ್ಳುವುದಕ್ಕೆ, ಸ್ನೇಹದ ಸಮಯವನ್ನು ಕಳೆಯುವುದಕ್ಕೆ ಅವಕಾಶವಿದೆ. ಈ ದೇವಸ್ಥಾನದ ಒಳಗಡೆ ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತು ಸಂಚರಿಸುವಾಗ ಕೆಲವು ಕಾಲ ದೇವರ ಆವರಣದಲ್ಲಿ ಸಮಯ ಸಿಗುತ್ತದೆ. ಈ ಸಮಯವನ್ನಾದರೂ ನೀವು ಮೌನವಾಗಿದ್ದು, ಗೌರವದಿಂದ ಕಳೆಯಬೇಕು. ಇನ್ನು ಭಗವಂತನ ದರ್ಶನ ಮಾಡುತ್ತಿದ್ದೇವೆ ಎಂಬಂಥ ಭಕ್ತಿ, ಗೌರವ ನಿಮ್ಮಲ್ಲಿರಬೇಕು. ನಿಮ್ಮಲ್ಲಿ ಇಬ್ಬರು ಕೂದಲನ್ನು ಕೊಟ್ಟವರು ಅಂದರೆ ವ್ರತಧಾರಿಗಳಾದವರು ಕೂಡ ಇದ್ದೀರಿ. ಅಷ್ಟು ದೂರದಿಂದ ಬಂದು, ಇಷ್ಟೆಲ್ಲ ಕಾದು, ಭಗವಂತನ ಸಾನ್ನಿಧ್ಯ ಬರುವವರೆಗಾದರೂ ಮೌನವಾಗಿರಬೇಕಾದ ಪ್ರಜ್ಞೆ ಇಲ್ಲ ಅಂದರೆ ಹೇಗಪ್ಪ?’ ಎಂದು ಹೇಳಿದೆ. ಸ್ವಲ್ಪ ನಿಶ್ಶಬ್ದವಾಯಿತು.

    ದೇವಾಲಯದ ಪಾವಿತ್ರ್ಯವನ್ನು ರಕ್ಷಿಸೋಣ; ಡಾ.ವೀರೇಂದ್ರ ಹೆಗ್ಗಡೆಯವರ ಅಂಕಣ
    ಶ್ರೀ ಕ್ಷೇತ್ರ ಧರ್ಮಸ್ಥಳ

    ಗದ್ದಲ ನಿಯಂತ್ರಿಸುವುದಕ್ಕಾಗಿ ನಮ್ಮ ದೇವಸ್ಥಾನದಲ್ಲಿ ಎರಡು ಬೋರ್ಡನ್ನು ಹಾಕಿದ್ದೇವೆ. ಮೊದಲನೆಯದಾಗಿ- ‘ಕುಟುಂಬದ ಸದಸ್ಯರೆಲ್ಲರೂ ಜೊತೆಯಾಗಿ ಹೋಗಿ’ ಎಂದು. ಇದರಿಂದ ಕೊನೆಯಪಕ್ಷ ಮನೆಯವರು, ಕುಟುಂಬದವರು ದೇವಸ್ಥಾನದ ಒಳಗಡೆ ಹೋಗಿ ಹೊರಗೆ ಬರುವವರೆಗೆ ಜೊತೆಯಾಗಿದ್ದರೆ ಅವರ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಇನ್ನೊಂದು ನಮಗೆ ಗೊತ್ತಿರುವ ಹಾಗೆ ಜೊತೆಯಾಗಿ ಬಂದವರು ತಮ್ಮ ಸಮಸ್ಯೆಗಳನ್ನು ಸರತಿ ಸಾಲಿನಲ್ಲಿ ನಿಂತಾಗ ಮಾತನಾಡುತ್ತಾರೆ. ಮಧ್ಯಮವರ್ಗ ಮತ್ತು ಹಳ್ಳಿಯ ಜನ ಬಂದರೆ ಅವರು ಸಹಜವಾದ ಎತ್ತರದ ಸ್ವರದಲ್ಲಿ ಮಾತನಾಡುತ್ತಾರೆ. ಅವರು ಮಾತನಾಡುವುದು ಸಹಜವಾಗಿದ್ದರೂ, ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ಆ ಮಾತುಕತೆ ಇತರ ಭಕ್ತರ ಏಕಾಗ್ರತೆಗೆ ತೊಂದರೆಯನ್ನುಂಟುಮಾಡುತ್ತದೆ. ಹಾಗಾಗಿ ಅಂಥವರಿಗೆ ತಿಳಿಹೇಳಿ ಸುಮ್ಮಗಿರಿಸುವುದು ದೊಡ್ಡ ಸಾಹಸವೇ. ಅದಕ್ಕಾಗಿ ‘ಮೌನವಾಗಿ ಮುಂದೆ ಚಲಿಸಿ’ ಎಂಬ ಫಲಕ ಇರುತ್ತದೆ.

    ತೀರ್ಥಕ್ಷೇತ್ರಗಳ ಸಮೀಪದಲ್ಲಿ ತೀರ್ಥಸ್ನಾನದ ನದಿಗಳು ಇರುತ್ತವೆ. ಮುಖ್ಯವಾದ ಸಮಸ್ಯೆ ಎಂದರೆ ಅಲ್ಲಿಗೆ ಹೋದಾಗ ಹಲವರು ವಿಚಿತ್ರವಾಗಿ ವರ್ತಿಸುತ್ತಾರೆ. ಉದಾಹರಣೆಗೆ, ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ಬಟ್ಟೆಯನ್ನು ಬಿಸಾಡುವುದು ದೊಡ್ಡ ಸಮಸ್ಯೆಯಾಗಿದೆ. ‘ಹರಿದ ಬಟ್ಟೆ, ಮಲಿನವಾದ ಬಟ್ಟೆಯನ್ನು ಧರ್ಮಕ್ಷೇತ್ರಗಳಿಗೆ ಹೋದಾಗ ನೀರಿನಲ್ಲಿ ಹಾಕಿ ಎಂದು ಹೇಳಿದ್ದಾರೆ’ ಎಂದು ಯಾತ್ರಿಕರು ಹೇಳುತ್ತಾರೆ. ಈ ಸಮಸ್ಯೆ ಪರಿಹರಿಸುವುದಕ್ಕೆ ಪಕ್ಕದಲ್ಲಿ ಪೈಪುಗಳನ್ನು ಕಟ್ಟಿದ್ದೇವೆ. ಅದಕ್ಕೆ ನೀವು ವಿಸರ್ಜನೆಯ ಬಟ್ಟೆಗಳನ್ನು ಕಟ್ಟಬೇಕು ಎಂದು ಬೋರ್ಡ್ ಹಾಕಲಾಗಿದೆ. ಆದರೂ ಅವರು ಸ್ನಾನ ಮಾಡಿ ಅಲ್ಲಲ್ಲಿಯೇ ಬಟ್ಟೆಯನ್ನು ಬಿಸಾಡಿ ಬಿಡುತ್ತಾರೆ. ಅನೇಕ ಬಾರಿ ಕೆಲವು ಸ್ವಯಂಸೇವಾ ಸಂಸ್ಥೆಗಳ ಸ್ವಯಂಸೇವಕರು ಹಾಗೂ ನಮ್ಮ ಕಾರ್ಯಕರ್ತರು ಇಂಥ ಮಲಿನ ವಸ್ತ್ರಗಳನ್ನು ಸಂಗ್ರಹಿಸಿ, ಸ್ವಚ್ಛಗೊಳಿಸಿದಂಥ ಉದಾಹರಣೆಗಳಿವೆ.

    ಧರ್ಮಸ್ಥಳ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳನ್ನು ಗುರುತಿಸುವುದಾದರೆ, ಈ ಹಿಂದೆ ಉಗುಳುವಂಥ ದುರಭ್ಯಾಸ ಬಹುಮಂದಿಯಲ್ಲಿ ಇತ್ತು. ಆದರೆ ನಮ್ಮ ಮತ್ತು ಸರ್ಕಾರದ ವಿಶೇಷ ಪ್ರಯತ್ನದಿಂದ ಸಿಗರೇಟು, ಬೀಡಿಗಳನ್ನು ಸೇದುವುದು ಮತ್ತು ಉಗುಳುವುದು ನೂರಕ್ಕೆ ನೂರರಷ್ಟು ಕಡಿಮೆಯಾಗಿದೆ. ಕಂಡಕಂಡಲ್ಲಿ ಮೂತ್ರ ವಿಸರ್ಜಿಸುವುದು ಮತ್ತು ಅಸಹ್ಯ ಮಾಡುವುದು ಕೂಡ ಮೊದಲು ಸಾಮಾನ್ಯವಾಗಿತ್ತು. ಈಗ ಅದು ಬಹಳ ಕಡಿಮೆಯಾಗಿದೆ. ಅಂತೂ ಜನರಲ್ಲಿ ಉಂಟಾದ ಅರಿವಿನಿಂದಾಗಿ ಇಂಥ ಸಾಮಾಜಿಕವಾದಂಥ ಸಮಸ್ಯೆಗಳು ಕಡಿಮೆಯಾಗುತ್ತಿವೆ. ಸ್ವಚ್ಛತೆ ಬಗ್ಗೆ ಜಾಗೃತಿ ಮೂಡುತ್ತಿದೆ. ಆದರೆ ಇನ್ನೂ ಅದನ್ನು ನಾವು ಎಲ್ಲರಿಗೂ ತಿಳಿಸಬೇಕಾದ ಸ್ಥಿತಿಯಲ್ಲಿದ್ದೇವೆ. ಯಾರು ಸಾರ್ವಜನಿಕ ನೀತಿನಿಯಮಗಳನ್ನು ಪರಿಪಾಲಿಸಿಕೊಂಡು, ಪರಿಸರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುತ್ತಾರೋ ಅಂಥ ಭಕ್ತರನ್ನು, ಜನರನ್ನು ನಾವು ಅಭಿನಂದಿಸಲೇಬೇಕು. ಇಂಥ ಒಳ್ಳೆಯ ಪರಿವರ್ತನೆಗಳು ನಮ್ಮ ದೇಶದಲ್ಲಿ, ನಮ್ಮ ಸಮಾಜದಲ್ಲಿ ಆಗಬೇಕು ಎಂಬುದೇ ನನ್ನ ಆಶಯ.

    (ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

    ವಾಟ್ಸ್​ಆ್ಯಪ್​ಗೆ ಬಾಯ್​ ಬಾಯ್​, ಟೆಲಿಗ್ರಾಮ್​ಗೆ ಹಾಯ್​ ಹಾಯ್​: ಯಾಕೆ, ಏನಾಯಿತು?

    ಹೀರೋಗಳು ಏನಂತಾರೆ? … ಓಟಿಟಿಯಲ್ಲಿ ಚಿತ್ರ ಬಿಡುಗಡೆಗೆ ಸ್ಟಾರ್‌ಗಳ ನಿಲುವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts