More

    ಜವಾಬ್ದಾರಿ ಮರೆಯದಿರೋಣ, ಲಾಕ್​ಡೌನ್ ವಿನಾಯ್ತಿಯ ದುರುಪಯೋಗವಾಗದಿರಲಿ

    ಕರೊನಾ ಸೋಂಕಿನ ಹಾವಳಿಯ ಮಧ್ಯೆಯೂ ಸೀಮಿತ ಆರ್ಥಿಕ ಚಟುವಟಿಕೆಗಳಿಗೆ ಅನುವು ಮಾಡಿಕೊಡಲು ಕೇಂದ್ರ ಸರ್ಕಾರ ಮನಸ್ಸು ಮಾಡಿದೆ. ಹಾಗಾಗಿ, ಇಂದಿನಿಂದ (ಸೋಮವಾರ) ‘ಅಪಾಯವಲ್ಲದ ಪ್ರದೇಶ’ಗಳಲ್ಲಿ ದಿಗ್ಬಂಧನ ಸಡಿಲಿಕೆ ಆಗಲಿದ್ದು, ಕೆಲಸಕಾರ್ಯಗಳನ್ನು ಆರಂಭಿಸಲು ಸಾಧ್ಯವಾಗಲಿದೆ. ಅವಶ್ಯಕ ಸೇವೆಗಳ ಜತೆಗೆ ಸಣ್ಣ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳಿಗೆ ವಿನಾಯ್ತಿಯ ಲಾಭ ಸಿಗಲಿದೆ. ಕೃಷಿ ಚಟುವಟಿಕೆಗಳು ನಿರಾಂತಕವಾಗಿ ಸಾಗಲಿವೆ. ಇದರಿಂದ, ಸಂಪೂರ್ಣ ಸ್ತಬ್ಧಗೊಂಡಿದ್ದ ಆರ್ಥಿಕ ಚಟುವಟಿಕೆಗಳಿಗೆ ಕೊಂಚ ಜೀವ ಬರಲಿದೆ. ಕಾರ್ವಿುಕರಿಗೆ, ದಿನಗೂಲಿ ನೌಕರರಿಗೆ ಕೆಲಸ ಸಿಗುವಂಥ ವಾತಾವರಣ ರೂಪುಗೊಳ್ಳಲಿದೆ. ಪರಿಸ್ಥಿತಿಯನ್ನು ಪರಾಮಶಿಸಿಯೇ ಮತ್ತು ಸಂಬಂಧಿತ ತಜ್ಞರೊಂದಿಗೆ ಚರ್ಚೆ ನಡೆಸಿದ ಬಳಿಕವೇ ಕೇಂದ್ರ ಸರ್ಕಾರ ಇಂಥದ್ದೊಂದು ನಿರ್ಣಯದ ಅನುಷ್ಠಾನಕ್ಕೆ ಮುಂದಾಗಿದೆ. ಭಾನುವಾರದ ಹೊತ್ತಿಗೆ ಸೋಂಕು ಪೀಡಿತರ ಪೈಕಿ ಶೇಕಡ 14.1ರಷ್ಟು ರೋಗಿಗಳು ಗುಣಮುಖರಾಗಿದ್ದರೆ, 54 ಜಿಲ್ಲೆಗಳಲ್ಲಿ 14 ದಿನಗಳಿಂದ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಪರಿಣಾಮ, ಲಾಕ್​ಡೌನ್​ನ ಕೊಂಚ ಸಡಿಲಿಕೆಯ ಕ್ರಮ ಪೂರಕವಾಗಿ ಪರಿಣಮಿಸಬಹುದು.

    ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಮಾಡುವುದು ರಾಜ್ಯ ಸರ್ಕಾರಗಳ ಜವಾಬ್ದಾರಿ ಎಂದೂ ಕೇಂದ್ರ ಹೇಳಿದೆ. ಇಲ್ಲಿ ಕೆಲ ವಾಸ್ತವಗಳನ್ನು ಜನಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕಿದೆ. ಕರೊನಾ ಸೋಂಕಿನ ವಿರುದ್ಧದ ಈ ಯುದ್ಧ ಇಷ್ಟರಲ್ಲೇ ಮುಗಿಯುವುದಿಲ್ಲ. ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬಂದು, ಅದರ ಹರಡುವಿಕೆ ಇನ್ನಿಲ್ಲದಂತೆ ಆಗಲು ಸಾಕಷ್ಟು ಕಾಲಾವಕಾಶ ಬೇಕು. ಅಷ್ಟು ದಿನಗಳವರೆಗೆ ಪೂರ್ಣ ದಿಗ್ಬಂಧನ ಸಾಧ್ಯವಿಲ್ಲ. ಹಂತಹಂತವಾಗಿ ವಿನಾಯ್ತಿ ತೋರುವುದು ಅಗತ್ಯ ಮತ್ತು ಅನಿವಾರ್ಯವೂ ಹೌದು. ಆದರೆ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು, ಕೆಲಸದ ಸ್ಥಳದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಶುಚಿತ್ವ ಕಾಪಾಡುವುದು ಎಲ್ಲರ ಜವಾಬ್ದಾರಿಯೂ ಹೌದು. ಸರ್ಕಾರದ ಮಟ್ಟದಲ್ಲಿ ಸೋಂಕಿನ ವಿರುದ್ಧ ಹೋರಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿರುವುದು ಗೊತ್ತಿರುವಂಥದ್ದೇ. ಇದರಲ್ಲಿ ಜನಸಾಮಾನ್ಯರ ಪಾತ್ರವೂ ಮಹತ್ವದ್ದಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಲಾಕ್​ಡೌನ್ ಬೇಗ ಮುಗಿಯಬೇಕು ಅಥವಾ ಅದರ ಭಾಗಶಃ ನಿರ್ಬಂಧಗಳು ಕೊನೆಗೊಳ್ಳಬೇಕು ಎಂದರೆ ಶ್ರೀಸಾಮಾನ್ಯರು ಜವಾಬ್ದಾರಿಯಿಂದ ವರ್ತಿಸಬೇಕು. ಸಾಮಾಜಿಕ ಅಂತರವನ್ನು ಪರಿಗಣಿಸದೆ ಸಂಚಾರ ಮಾಡುವುದು, ಗುಂಪುಗೂಡುವಂಥ ನಿದರ್ಶನಗಳನ್ನು ದೇಶದ ಅಲ್ಲಲ್ಲಿ ಈಗಲೂ ಕಾಣುತ್ತಿದ್ದೇವೆ. ಇದು ದೊಡ್ಡ ಅಪಾಯವನ್ನೇ ತಂದೊಡ್ಡಬಲ್ಲದು ಮತ್ತು ಸರ್ಕಾರ ಈವರೆಗೆ ಕೈಗೊಂಡ ಕ್ರಮಗಳನ್ನೆಲ್ಲ ನಿಷ್ಪ್ರಯೋಜಕ ಮಾಡಬಲ್ಲದು ಎಂಬ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ನಿಸ್ಸಂದೇಹವಾಗಿಯೂ, ಇದೊಂದು ಸಂದಿಗ್ಧದ, ಸಂಕಷ್ಟದ ಸಮಯ. ಇದರ ವಿರುದ್ಧ ಎಷ್ಟು ಪ್ರಬುದ್ಧತೆಯಿಂದ ಹೋರಾಡುತ್ತೇವೆ ಎಂಬುದರ ಆಧಾರದ ಮೇಲೆ ಮುಂದಿನ ದಿನಗಳ ಫಲಿತಾಂಶ ಅವಲಂಬನೆ ಆಗಿದೆ. ಜನರು ತಮ್ಮ ಜವಾಬ್ದಾರಿ ಅರಿತುಕೊಂಡು ನಡೆದರೆ, ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಹಾಗೂ ಪರಿಣಾಮಕಾರಿಯಾಗಿ ಪಾಲಿಸಿದರೆ ಖಂಡಿತವಾಗಿಯೂ ಸೋಂಕನ್ನು ಕಡಿಮೆ ಅವಧಿಯಲ್ಲಿ ನಿಯಂತ್ರಿಸಬಹುದು. ಆದ್ದರಿಂದ, ಯಾವುದೇ ಆರ್ಥಿಕ, ಔದ್ಯೋಗಿಕ ಚಟುವಟಿಕೆಗಳು ಆರಂಭಗೊಂಡರೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts