More

    ಬಿಡುಗಡೆಯಾದ ಅನುದಾನದ ಶ್ವೇತಪತ್ರ ಹೊರಡಿಸಲಿ

    ಚಿಕ್ಕಮಗಳೂರು: ಜಿಎಸ್‌ಟಿ ಕೌನ್ಸಿಲ್ ಮೀಟಿಂಗ್‌ಗೆ ಒಮ್ಮೆಯೂ ಹೋಗದ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಮನಮೋಹನ್ ಸಿಂಗ್ ಪ್ರಧಾನಮಂತ್ರಿ ಆಗಿದ್ದ 10 ವರ್ಷದಲ್ಲಿ ಎಷ್ಟು ತೆರಿಗೆ ಹಣ ಹಾಗೂ ಅನುದಾನ ರಾಜ್ಯಕ್ಕೆ ಬಂದಿತ್ತು, ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ರಾಜ್ಯಕ್ಕೆ ಎಷ್ಟು ತೆರಿಗೆ ಹಣ ಹಾಗೂ ಅನುದಾನ ಬಂದಿದೆ ಎಂಬ ಬಗ್ಗೆ ಸಿದ್ದರಾಮಯ್ಯ ಶ್ವೇತಪತ್ರ ಹೊರಡಿಸಲಿ ಎಂದು ಮಾಜಿ ಸಚಿವ ಸಿ.ಟಿ.ರವಿ ಸವಾಲು ಹಾಕಿದರು.

    ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇಕೆ ಜಿಎಸ್‌ಟಿ ಮೀಟಿಂಗ್‌ಗೆ ಹೋಗಬೇಕು ಎಂದು ಸಿದ್ದರಾಮಯ್ಯ ಅಹಂಕಾರ ತೋರುತ್ತಾರೆ. ಒಂದು ವೇಳೆ ರಾಜ್ಯಕ್ಕೆ ಅನ್ಯಾಯವಾಗಿದ್ದೇ ಆದರೆ ಮೀಟಿಂಗ್‌ನಲ್ಲೇ ಪ್ರಶ್ನಿಸಬಹುದಿತ್ತು. ಮೀಟಿಂಗ್‌ಗೆ ಸಚಿವ ಕೃಷ್ಣಬೈರೇಗೌಡ ಅವರನ್ನು ಕಳುಹಿಸುತ್ತಾರೆ. ಕೃಷ್ಣಬೈರೇಗೌಡ ಅವರು ಮೀಟಿಂಗ್‌ನಲ್ಲಿ ಕೇಂದ್ರ ಸರ್ಕಾರವನ್ನು ಹೊಗಳಿ ಬರುತ್ತಾರೆ. ಇಲ್ಲಿಗೆ ಬಂದ ಬಳಿಕ ಮತ್ತೆ ಸುಳ್ಳು ಹೇಳಲು ಆರಂಭಿಸುತ್ತಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.
    2004ರಿಂದ 2014ರವರೆಗೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ರಾಜ್ಯಕ್ಕೆ ತೆರಿಗೆ ಪಾಲು 81,795 ಕೋಟಿ ರೂ. ನೀಡಿದ್ದರು. ಇದೇ ಅವಧಿಯಲ್ಲಿ ರಾಜ್ಯಕ್ಕೆ ಅನುದಾನ ಮತ್ತು ಸಹಾಯಧನ ಸೇರಿ 60,779 ಕೋಟಿ ರೂ. ಬಂದಿತ್ತು. ಅದೇ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ರಾಜ್ಯಕ್ಕೆ ತೆರಿಗೆ ಪಾಲು 2,87,791 ಕೋಟಿ ರೂ., ಅನುದಾನ ಮತ್ತು ಸಹಾಯಧನ 2,08,832 ಕೋಟಿ ರೂ. ನೀಡಲಾಗಿದೆ ಎಂದು ತಿಳಿಸಿದರು.
    ಕಾಂಗ್ರೆಸ್ ಸರ್ಕಾರ ಟೂಲ್ ಕಿಟ್ ರಾಜಕಾರಣ ಮಾಡುತ್ತಿದೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಪದೇಪದೇ ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ನೀತಿ ಆಯೋಗದ ನಿಯಮದಂತೆ ಜನಸಂಖ್ಯೆ ಆಧಾರದ ಮೇಲೆ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ನೀಡಲಾಗುತ್ತದೆ ಎನ್ನುವ ಕನಿಷ್ಠ ಮಾಹಿತಿ ಕಾಂಗ್ರೆಸ್ ನಾಯಕರಿಗೆ ಇದ್ದಂತಿಲ್ಲ ಎಂದು ಲೇವಡಿ ಮಾಡಿದರು.
    ದೇಶ ಒಡೆಯುವ ಕೆಲಸ: ಪಂಚ ರಾಜ್ಯ ಚುನಾವಣೆ ಬಳಿಕ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ. ಬೇರೆ ಬೇರೆ ಏಜೆನ್ಸಿ ಗಳ ಸರ್ವೇ ಹಾಗೂ ಮಾಧ್ಯಮಗಳ ಸರ್ವೇಯಲ್ಲಿ ಮತ್ತೆ ನರೇಂದ್ರ ಮೋದಿ ಅವರೇ ಪ್ರಧಾನಿಯಾಗುತ್ತಾರೆ ಎಂದು ವರದಿ ಬಂದಿದೆ. ಇದರಿಂದ ಇನ್ನಷ್ಟು ಹತಾಶವಾದ ಕಾಂಗ್ರೆಸ್ ಪಕ್ಷ ದೇಶ ಒಡೆಯುವ ಅಪಾಯಕಾರಿ ಕೆಲಸಕ್ಕೆ ಕೈ ಹಾಕಿದೆ ಎಂದು ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು. ಹಿಂದಿನಿಂದಲೂ ಕಾಂಗ್ರೆಸ್ ಇದೇ ಕೆಲಸ ಮಾಡಿಕೊಂಡು ಬಂದಿದೆ. ಇದರಿಂದಲೇ ಸಾಕಷ್ಟು ನೋವು ಅನುಭವಿಸಿದೆ. ಇಂದಿರಾ ಗಾಂಧಿ ಅವರು ಪಂಜಾಬ್‌ನಲ್ಲಿ ಅಕಾಲಿ ದಳ ಹತ್ತಿಕ್ಕಲು ಭಯೋತ್ಪಾದನೆ ಬೆಂಬಲಿಸಿದ್ದರ ಪರಿಣಾಮ ಅವರೇ ಬಲಿಯಾಗಬೇಕಾಯಿತು. ಎಲ್‌ಟಿಟಿಇಗೆ ಬೆಂಬಲ ನೀಡುವ ನೀತಿ ಬೆಂಬಲಿಸಿದ ಪರಿಣಾಮ ರಾಜೀವ್ ಗಾಂಧಿ ಬಲಿಯಾಗಬೇಕಾಯಿತು. ಇದೀಗ ಕಾಂಗ್ರೆಸ್ ಪಕ್ಷ ತನ್ನ ಸ್ವಾರ್ಥಕ್ಕಾಗಿ ದೇಶ ಒಡೆಯುವ ಸಂಚು ಮಾಡುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ನಡೆಸುತ್ತಿರುವುದು ಭಾರತ್ ಜೋಡೋ ಯಾತ್ರೆಯಲ್ಲ ಬದಲಿಗೆ ಭಾರತ್ ತೋಡೋ ಯಾತ್ರೆ. ಭಾರತವನ್ನು ಜೋಡಿಸುವ ಮನಸ್ಥಿತಿಯೇ ಅವರಿಗಿಲ್ಲ. ಭಾರತದ ಉತ್ತರ, ಭಾರತದ ದಕ್ಷಿಣ ಎನ್ನಬೇಕು. ಅದನ್ನು ಬಿಟ್ಟು ಉತ್ತರ ಭಾರತ, ದಕ್ಷಿಣ ಭಾರತ ಎಂದರೆ ಅಪಾರ್ಥವಾಗುತ್ತದೆ. ಸಿಎಂ ಸಿದ್ದರಾಮಯ್ಯ ಅವರು ಮೊದಲು ನಮ್ಮ ನಾಡಗೀತೆಯನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು ಎಂದರು.
    ಎನ್‌ಡಿಎ ಗೆಲುವಿಗೆ ಶ್ರಮಿಸುತ್ತೇವೆ: ಜೆಡಿಎಸ್ ಎನ್‌ಡಿಎ ಭಾಗ. ಎನ್‌ಡಿಎ ಗೆಲುವಿಗೆ ನಾವೆಲ್ಲರೂ ಸೇರಿ ಶ್ರಮಿಸುತ್ತೇವೆ. ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಗಳು ಕಣಕ್ಕಿಳಿಯುತ್ತಾರೆ ಎಂದು ಎನ್‌ಡಿಎ ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ ಎಂದು ಸಿ.ಟಿ.ರವಿ ತಿಳಿಸಿದರು. ಪ್ರೀತಮ್ ಗೌಡ ಅವರು ಪಕ್ಷದ ಹಿತದೃಷ್ಟಿಯಿಂದ ಹಾಸನದಲ್ಲಿ ಅವಕಾಶ ಕೇಳಿದ್ದಾರೆ. ಆದರೆ ಈ ಬಗ್ಗೆ ನಿರ್ಧಾರ ಮಾಡಬೇಕಿರುವುದು ಎನ್‌ಡಿಎ ಸಭೆ ಎಂದು ಸ್ಪಷ್ಟನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts