More

    ಭಾಷೆ ಬಳಕೆ ನಿರಂತರ ನಡೆಯಲಿ – ಕೊಣ್ಣೂರ ನುಡಿ ಸಡಗರ ಕನ್ನಡ ಜಾತ್ರೆ

    ರಬಕವಿ/ಬನಹಟ್ಟಿ: ಭಾಷಾ ಬಳಕೆಯಲ್ಲಿ ಮುಕ್ತ, ಖಚಿತ ಹಾಗೂ ನಿಯಮಿತ ಇದ್ದರೆ ಮಾತ್ರ ನುಡಿ ಸೊಗಡು ನೂರ್ಮಡಿಗೊಳ್ಳುವುದು. ಸಾಹಿತ್ಯ ಸೌರಭ ಈ ಪ್ರದೇಶದಲ್ಲಿ ಹಾಸು ಹೊಕ್ಕಾಗಿದೆ ಎಂದು ಖ್ಯಾತ ಸಾಹಿತಿ, ನುಡಿ ಸಡಗರದ ಸರ್ವಾಧ್ಯಕ್ಷ ಬೆಂಗಳೂರಿನ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಹೇಳಿದರು.

    ತಾಲೂಕಿನ ಯಲ್ಲಟ್ಟಿ ಗ್ರಾಮದ ಕೊಣ್ಣೂರ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೊಣ್ಣೂರ ನುಡಿ ಸಡಗರದ ಲಿಂ.ಮಲ್ಲಪ್ಪ ಕೊಣ್ಣೂರ ವೇದಿಕೆಯಲ್ಲಿ ಮೊದಲ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಭಾಷೆಯನ್ನು ಸಶಕ್ತ ಹಾಗೂ ನಿರಂತರವಾಗಿ ಬಳಸುವ ಜತೆಗೆ ಅವಿರತವಾಗಿ ಅದನ್ನು ಶ್ರೀಮಂತಗೊಳಿಸುವ ಪ್ರಕ್ರಿಯೆ ನಡೆದರೆ ಮಾತ್ರ ಕನ್ನಡ ನಿರಂತರವಾಗಿ ಬೆಳೆಯಬಲ್ಲದು. ಬದುಕಿನ ಸರ್ವೋತ್ತಮ ಮತ್ತು ಅಂತಿಮ ಘಟ್ಟವೇ ಸ್ವಸಾಕ್ಷಾತ್ಕಾರ ಹೊಂದುವುದಾಗಿದೆ ಎಂದರು.

    ನಿರಂತರ ಕಲಿಕಾ ಪ್ರಕ್ರಿಯೆಯಲ್ಲಿರಬೇಕು. ಎಲ್ಲವನ್ನೂ ಗ್ರಹಿಸುವ ಮನೋಭಾವ ಮೂಡಿದರೆ ಪರಿಪೂರ್ಣ ಬೆಳವಣಿಗೆ ಆಗುತ್ತದೆ. ತಾಯಿ ಮತ್ತು ತಾಯಿ ಭಾಷೆ ಜೀವನದುದ್ದಕ್ಕೂ ನಮ್ಮಲ್ಲಿರುತ್ತದೆ ಎಂಬುದನ್ನು ಅರಿತು ತಾಯಿಗೆ ನೀಡುವಷ್ಟೇ ಗೌರವವನ್ನು ತಾಯಿಭಾಷೆಗೂ ನೀಡಬೇಕು. ಅದನ್ನು ಮುಂದಿನ ತಲೆಮಾರಿಗೆ ತಲುಪಿಸುವ ಗುರುತರ ಹೊಣೆಗಾರಿಕೆ ಎಲ್ಲ ಕನ್ನಡಿಗರ ಮೇಲಿದೆ ಎಂದರು.

    ನಾಡೋಜ ಜಗದೀಶ ಗುಡಗುಂಟಿ ಮಾತನಾಡಿ, ವಸ್ತು ಕೆಟ್ಟರೆ ಅದನ್ನು ನವೀಕರಿಸಬಹುದು, ಆದರೆ ಶಿಕ್ಷಣ ಕ್ಷೇತ್ರದಲ್ಲಿ ಒಮ್ಮೆ ಯಾವುದೇ ದೋಷವುಂಟಾದಲ್ಲಿ ಅದರಿಂದ ಒಂದು ಪೀಳಿಗೆಯೇ ಹಾಳಾಗುತ್ತದೆ. ಇಡೀ ಸಮಾಜವೇ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.

    ನಿಕಟಪೂರ್ವ ಅಧ್ಯಕ್ಷ, ಕವಿ ಬಿ.ಆರ್.ಲಕ್ಷ್ಮಣರಾವ ಮಾತನಾಡಿ, ಕನ್ನಡವನ್ನೇ ಉಸಿರಾಗಿಸಿಕೊಂಡ ಈ ಪ್ರದೇಶದ ಜನರಲ್ಲಿ ನಾಡು, ನುಡಿ ಬಗ್ಗೆ ಎಲ್ಲಿಲ್ಲದ ಭಕ್ತಿಯಿದೆ ಎಂದರು.

    ಸಮಾರಂಭದ ಗೌರವಾಧ್ಯಕ್ಷ ಪ್ರೊ.ಬಿ.ಆರ್.ಪೊಲೀಸ್‌ಪಾಟೀಲ ಮಾತನಾಡಿ, ನಾವು ಈ ದೇಶದ ಪ್ರಜ್ಞಾವಂತ ಪ್ರಜೆಗಳಾಗಿ ನಮ್ಮತನ ಉಳಿಸಿಕೊಳ್ಳಲು ಹೋರಾಡಬೇಕಿದೆ. ನಮಗ್ಯಾಕ ಬೇಕ್ರೀ ಉಸಾಬರಿ ಎಂಬ ಭಾವನೆ ತ್ಯಜಿಸಿ ದೇಶವನ್ನು ಎತ್ತಿ ನಿಲ್ಲಿಸೋ ಕೆಲಸ ದೇಶದ ಯುವಜನತೆ ಮಾಡಬೇಕು ಎಂದರು.

    ಸಂಸ್ಥೆ ಗೌರವಾಧ್ಯಕ್ಷೆ ದೀಪಾ ಕೊಣ್ಣೂರ ಸಭೆ ಅಧ್ಯಕ್ಷತೆ ವಹಿಸಿದ್ದರು. ಸಿದ್ದು ಕೊಣ್ಣೂರ, ಡಾ.ಮಹಾವೀರ ದಾನಿಗೊಂಡ, ಮಲ್ಲಿಕಾರ್ಜುನ ನಾಶಿ, ಧರೆಪ್ಪ ಉಳ್ಳಾಗಡ್ಡಿ, ಎನ್.ಎಸ್.ದೇವರವರ, ಬಿ.ಡಿ.ಭದ್ರನ್ನವರ, ಬಸವರಾಜ ಹಿಟ್ಟಿನಮಠ, ಮುತ್ತಪ್ಪ ಕೋಮಾರ, ಬಸವರಾಜ ದಲಾಲ್, ಡಾ.ಪದ್ಮಜೀತ ನಾಡಗೌಡಪಾಟೀಲ, ಡಾ.ಎಸ್.ಎಸ್.ಹೂಲಿ, ಶ್ರೀಶೈಲ ಉಳ್ಳಾಗಡ್ಡಿ, ಮ.ಕೃ.ಮೇಗಾಡಿ, ಪಿಂಟು ಚಿಂಡಕ ಇತರರಿದ್ದರು.

    ಸೌಮ್ಯಾ ಕುಂಬಾರ ಸಂಗಡಿಗರು ನಾಡಗೀತೆ ಹಾಡಿದರು. ಸ್ವಾತಿ ಮಡ್ಡೇನಿ ಸಂಗಡಿಗರು ಪ್ರಾರ್ಥಿಸಿದರು. ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಪ್ರೊ.ಬಸವರಾಜ ಕೊಣ್ಣೂರ ಸ್ವಾಗತಿಸಿದರು. ಚಂದ್ರಕಾಂತ ಹೊಸೂರ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts