More

    ಸೇವೆಗೆ ಕರುಣೆ, ಮಾನವೀಯ ಸ್ಪರ್ಶವಿರಲಿ:ಡಾ.ಸಿ.ಎನ್. ಮಂಜುನಾಥ್ ಸಲಹೆ

    ಬೆಂಗಳೂರು: ಸೇವೆಯು ಎಂದಿಗೂ ಕರುಣೆ, ಮಾನವೀಯತೆ ಹಾಗೂ ಬದ್ಧತೆಯಿಂದ ಕೂಡಿರಬೇಕು. ಹಾಗಿದ್ದಾಗ ನಿವೃತ್ತಿ ನಂತರವೂ ಸಮಾಜ ನಮ್ಮನ್ನು ಗೌರವಿಸುತ್ತದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿವೃತ್ತ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಹೇಳಿದ್ದಾರೆ.

    ರಾಜ್ಯ ಒಕ್ಕಲಿಗರ ಸಂಘ ಶನಿವಾರ ಕುವೆಂಪು ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಆಸ್ಪತ್ರೆಗಳು ದೇವಾಲಯ ಇದ್ದಂತೆ. ಆಸ್ಪತ್ರೆಯಲ್ಲಿದ್ದವರು ಅಲ್ಲಿನ ಗೋಡೆಗಳಿಗೆ ದೇವಾಲಯಕ್ಕಿಂತಲೂ ಹೆಚ್ಚಿನ ಪ್ರಾರ್ಥನೆ ಸಲ್ಲಿಸಿರುತ್ತಾರೆ. ಬಡ ರೋಗಿಗಳ ಕಣ್ಣೀರು ಶೇ.1 ಇದ್ದರೆ, ಅದರ ಹಿಂದಿನ ನೋವು ಶೇ.99 ಇರುತ್ತದೆ. ಕರುಣೆ, ಹೃದಯವಂತಿಕೆ, ಮಾನವೀಯತೆ ಮತ್ತು ದೂರದೃಷ್ಟಿಯಿಂದ ಕೆಲಸ ಮಾಡಬೇಕು. ಕೆಲಸ ಮಾಡುವ ಸ್ಥಳದಲ್ಲಿ ಉತ್ತಮ ವಾತಾವರಣ ಬೆಳೆಸಿಕೊಂಡು ಪರಸ್ಪರ ಉತ್ತಮ ಸಂಬಂಧ ಇರಬೇಕು. ಅನುದಾನಕ್ಕಿಂತ ಅನುಷ್ಠಾನ ಮುಖ್ಯ. ಸಹಾಯ ಮಾಡುವುದೇ ಧರ್ಮವಾಗಬೇಕು ಎಂದರು.

    ಚುನಾವಣೆಗೆ ಸ್ಪರ್ಧಿಸುವುದಿಲ್ಲ:
    ರಾಜಕೀಯ ಕ್ಷೇತ್ರಕ್ಕೆ ಬರಲು ನನಗೆ ಆಸಕ್ತಿ ಇಲ್ಲ. ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ವೈದ್ಯಕೀಯ ವೃತ್ತಿಯಲ್ಲಿ ಮುಂದುವರಿಯುತ್ತೇನೆ. ಯಾವುದೇ ಫಲಾಪೇಕ್ಷೆ, ನಿರೀಕ್ಷೆ ಇಲ್ಲದೆ ಸೇವೆ ಮಾಡಬೇಕು. ಸೇವೆಯು ಪ್ರದರ್ಶನವಾಗದೆ ಆದರ್ಶವಾಗಿರಬೇಕು. 17-18 ವರ್ಷಗಳ ಕಾಲ ನಾನು ಸೇವೆ ಸಲ್ಲಿಸಿದ್ದು, ಈ ಅವಧಿಯಲ್ಲಿ ಜಯದೇವ ಆಸ್ಪತ್ರೆಯಲ್ಲಿ 75 ಲಕ್ಷ ಹೊರರೋಗಿಗಳಿಗೆ ಚಿಕಿತ್ಸೆ, 8 ಲಕ್ಷ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಎಷ್ಟು ಪಾರಿತೋಷಕ ಪಡೆದಿದ್ದೇನೆ ಎಂಬುದಕ್ಕಿಂತ ಎಷ್ಟು ಜನರ ಮನೆಯಲ್ಲಿ ಬೆಳಕು ಮೂಡಿಸಿದ್ದೇವೆ ಮುಖ್ಯ. ಖಾಸಗಿ ಆಸ್ಪತ್ರೆಯಲ್ಲಿ ಶ್ರೀಮಂತರಿಗೆ ಸಿಗುವ ಚಿಕಿತ್ಸೆಯನ್ನು ಜಯದೇವ ಆಸ್ಪತ್ರೆಯಲ್ಲಿ ಬಡವರು ಮತ್ತು ಮಧ್ಯಮ ವರ್ಗದವರಿಗೆ ಕಲ್ಪಿಸಲಾಗಿದೆ ಎಂದು ಮಂಜುನಾಥ್ ಹೇಳಿದರು.
    ಸಂಘದ ಗೌರವಾಧ್ಯಕ್ಷ ಬಿ. ಕೆಂಚಪ್ಪಗೌಡ, ಉಪಾಧ್ಯಕ್ಷರಾದ ಎಲ್. ಶ್ರೀನಿವಾಸ್, ಸಿ.ದೇವರಾಜು, ಪ್ರಧಾನ ಕಾರ್ಯದರ್ಶಿ ಎಚ್.ಸಿ. ಜಯಮುತ್ತು, ಸಹಾಯಕ ಕಾರ್ಯದರ್ಶಿ ವೆಂಕಟರಾಮೇಗೌಡ, ಖಜಾಂಚಿ ಸಿ.ಎಂ. ಮಾರೇಗೌಡ, ಕಾರ್ಯಾಧ್ಯಕ್ಷ ಬಿ.ಪಿ. ಮಂಜೇಗೌಡರು, ನಿರ್ದೇಶಕರಾದ ಎನ್. ಬಾಲಕೃಷ್ಣ, ಟಿ. ಕೋನಪ್ಪರೆಡ್ಡಿ ಮತ್ತಿತರರಿದ್ದರು.

    ಹಸಿವು ತಾಳಲಾರದೆ ಬೆಕ್ಕಿನ ಹಸಿ ಮಾಂಸ ತಿಂದ ಅಸ್ಸಾಂ ವ್ಯಕ್ತಿ!

    ಕಿಮ್ಸ್ ಜವಾಬ್ದಾರಿ ವಹಿಸಿಕೊಳ್ಳಿ…
    ಸಂಘದಿಂದ ಮುಂದಿನ ದಿನಗಳಲ್ಲಿ ಪ್ರಾರಂಭಿಸಲು ಉದ್ದೇಶಿಸಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಂಪೂರ್ಣ ಜವಾಬ್ದಾರಿ ಅಥವಾ ಮೇಲುಸ್ತುವಾರಿಯನ್ನು ಡಾ.ಮಂಜುನಾಥ್ ಅವರಿಗೆ ನೀಡಲು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಒಮ್ಮತದ ತೀರ್ಮಾನ ಮಾಡಲಾಗಿದೆ. ಸಂಘದ ಸಂಸ್ಥೆಗಳನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಹಾಗೂ ಹೊಸ ವೈದ್ಯಕೀಯ ಸೌಲಭ್ಯಗಳನ್ನು ಪ್ರಾರಂಭಿಸಲು ತಮ್ಮ ಅನುಭವ ಮತ್ತು ಮಾರ್ಗದರ್ಶನದ ಅವಶ್ಯಕತೆ ಇದೆ ಎಂದು ಸಂಘದ ಅಧ್ಯಕ್ಷ ಡಿ.ಹನುಮಂತಯ್ಯ, ಮಂಜುನಾಥ್ ಅವರಿಗೆ ಮನವಿ ಮಾಡಿದರು. ಅಲ್ಲದೆ, ‘ಕೆಂಪೇಗೌಡ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ’ಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಮನವಿ ಪತ್ರ ಸಲ್ಲಿಸಿದರು. ಅದಕ್ಕೆ ಡಾ.ಮಂಜುನಾಥ್ ಸಕಾರಾತ್ಮಕವಾಗಿ ಸ್ಪಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts