More

    ಸರ್ಕಾರಿ ಉತ್ಸವ ಬೆಂಗಳೂರಿಗೆ ಸೀಮಿತವಾಗದಿರಲಿ

    ಕಲಘಟಗಿ: ಸರ್ಕಾರದ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭಗಳು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆಚೆಯೂ ನಡೆಯಬೇಕು. ರಂಗಭೂಮಿಯ ಕಲೆ, ಸಂಸ್ಕೃತಿಯ ಅಡಿಪಾಯವಾದ ಗ್ರಾಮೀಣ ಪ್ರದೇಶಗಳಲ್ಲಿ, ಕಲಘಟಗಿಯಂತಹ ಮಲೆನಾಡಿನ ನಿಸರ್ಗದ ಮಡಿಲಲ್ಲಿ ನಡೆದ ಇಂಥ ಪ್ರಶಸ್ತಿ, ಪುರಸ್ಕಾರ ಕಾರ್ಯಕ್ರಮ, ಕಲಾ ಉತ್ಸವ ಹಬ್ಬದ ಸಂಭ್ರಮ ಹೀಗೆ ಮುಂದವರಿಯಲಿ ಎಂದು ನಾಟಕ ಅಕಾಡೆಮಿಯ ಜೀವಮಾನದ ರಂಗ ಗೌರವ ಪ್ರಶಸ್ತಿ ವಿಜೇತ ಹಿರಿಯ ನಟ ಸೇತೂರಾಂ ಹೇಳಿದರು.

    ಪಟ್ಟಣ ಹೊರವಲಯದ ಹನ್ನೆರಡುಮಠದ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕರ್ನಾಟಕ ನಾಟಕ ಅಕಾಡೆಮಿಯ ವಿವಿಧ ರಂಗಳಲ್ಲಿ ಸೇವೆ ಸಲ್ಲಿಸಿದ ರಂಗಭೂಮಿ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

    ರಾಜಧಾನಿಯಲ್ಲಿ ನಡೆಯುತ್ತಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಹುತೇಕ ಕಲಾವಿದರು, ಸಾಹಿತಿಗಳ ಸಮಾರಂಭಗಳಲ್ಲಿ ಪ್ರಶಸ್ತಿ ಪುರಸ್ಕೃತರು, ಅವರ ಸಂಬಂಧಿಗಳು ಮಾತ್ರ ಕಾಣುತ್ತಾರೆ. ಆದರೆ, ಈ ಕಾರ್ಯಕ್ರಮದಲ್ಲಿ ಎಲ್ಲ ವರ್ಗದ ಕಲಾವಿದರು ಪಾಲ್ಗೊಂಡಿದ್ದಾರೆ. ರಂಗ ಕಲಾವಿದರ ಉತ್ಸವದ ವಾತಾವರಣ ನಿರ್ವಣವಾಗಿರುವುದು ಹರ್ಷ ತಂದಿದೆ ಎಂದರು.

    ಹನ್ನೆರಡುಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ನನ್ನ 42 ವರ್ಷಗಳ ರಾಜಕೀಯ ಜೀವನದಲ್ಲಿ ರಾಜಧಾನಿಯಲ್ಲಿ ವಿವಿಧ ರಂಗಗಳ ಕಲೆ, ಸಾಹಿತಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೇನೆ. ಅಲ್ಲಿ ನಿಗದಿತ ಸಮಯ ಮುಗಿದರೂ ಹೆಚ್ಚಿನ ಜನರು ಪಾಲ್ಗೊಳ್ಳುವುದಿಲ್ಲ. ಪ್ರಚಾರ ಮಾತ್ರ ಇರುತ್ತದೆ. ಗ್ರಾಮೀಣ ಭಾಗದಲ್ಲಿ ಹಾಗಲ್ಲ. ಈ ಸಂಭ್ರಮದ ಕಲಾ ಉತ್ಸವ ಮುಂದುವರಿಯಲು ನಿರಂತರವಾಗಿ ಪ್ರಯತ್ನಿಸುತ್ತೇನೆ. ಕಲಘಟಗಿ ಕಲಾವಿದರ ಬೇಡಿಕೆಯಂತೆ ಸುಸಜ್ಜಿತ ರಂಗಮಂದಿರ ನಿರ್ವಿುಸಲು ಸರ್ಕಾರದಿಂದ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

    ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಎಂ. ನಿಂಬಣ್ಣವರ, ಹನ್ನೆರಡುಮಠದ ಆವರಣದಲ್ಲಿ ಸುಸಜ್ಜಿತ ರಂಗಮಂದಿರ ನಿರ್ವಿುಸಲು ರಂಗಭೂಮಿ ಕಲಾವಿದರ ಬೇಡಿಕೆಯಂತೆ ಜಾಗ ನೀಡಿದರೆ ಕೂಡಲೆ ಮೊದಲ ಹಂತವಾಗಿ ಸರ್ಕಾರದಿಂದ 10 ಲಕ್ಷ ರೂ. ಅನುದಾನ ಮಂಜೂರು ಮಾಡಿಸಲಾಗುವುದು ಎಂದು ಭರವಸೆ ನೀಡಿದರು.

    ಸದ್ಯ ಕಾರ್ಯಕ್ರಮ ನಡೆಯುತ್ತಿರುವ ಐತಿಹಾಸಿಕ ಪ್ರಸಿದ್ಧ ಲಿಂ. ಮಡಿವಾಳ ಶಿವಾಚಾರ್ಯ ಸ್ವಾಮಿಗಳ ಹನ್ನೆರಡುಮಠದ ಜೀಣೋದ್ಧಾರಕ್ಕಾಗಿ 50 ಲಕ್ಷ ರೂ. ಅನುದಾನವನ್ನು ನಾಲ್ಕು ತಿಂಗಳ ಹಿಂದೆಯೇ ಮಂಜೂರಿ ಮಾಡಲಾಗಿದೆ. ಆದರೆ, ಇದುವರೆಗೂ ಕಾರ್ಯವಾಗಿಲ್ಲ. ಹೀಗಾಗದರೆ ಮಂಜೂರಾದ ಹಣ ಮರಳಿ ಸರ್ಕಾರಕ್ಕೆ ಹೋಗುತ್ತದೆ. ಮಠದ ಅಭಿವೃದ್ಧಿ ಕಾರ್ಯ ಮಾಡುವವರು ಕಾಮಗಾರಿ ಮಾಡುವ ಗುತ್ತಿಗೆದಾರರನ್ನು ಬದಲಾಯಿಸಿ ಜೀಣೋದ್ಧಾರಕ್ಕೆ ಮುಂದಾಗಬೇಕು ಎಂದರು. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಪ್ರೊ. ಭೀಮಸೇನ ಆರ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕಾಡೆಮಿ ರಜಿಸ್ಟ್ರಾರ್ ಬಿ. ಮಂಜುನಾಥ ಆರಾಧ್ಯ, ಕಾರ್ಯಕ್ರಮ ಸಂಚಾಲಕ ಶಿವಪ್ಪ ಅದರಗುಂಚಿ, ಕಜಾಪ ತಾಲೂಕಾಧ್ಯಕ್ಷ ಎಂ.ಆರ್. ತೋಟಗಂಟಿ, ಕಲಾವಿದ ಡಾ. ರಾಜಾರಾಂ, ಪೊಲೀಸ್ ಇನ್​ಸ್ಪೆಕ್ಟರ್ ಪ್ರಭು ಸೂರಿನ್ ಇತರರಿದ್ದರು.

    ಪ್ರಶಸ್ತಿ ವಿವರ: ಜೀವಮಾನದ ರಂಗಗೌರವ ಪ್ರಶಸ್ತಿನಟ ಎಸ್.ಎನ್. ಸೇತೂರಾಂ ಸಂತೋಷ ಕುಮಾರ ಕುಸನೂರು, ಎಂ. ಇಸ್ಮಾಯಿಲ್​ಸಾಬ್, ಮ.ಬ. ಸೋಮಣ್ಣ, ಗೆಣಿಕೆಹಾಳು ತಿಮ್ಮನಗೌಡ ಮೇಲುಸೀಮೆ, ಗುರುಬಸಪ್ಪ ಕಲ್ಲಪ್ಪ ಸಜ್ಜನ, ಹಣಮವ್ವ ಕುಳಲಿ, ಹನುಮಾನದಾಸ ಪವಾರ, ಉಮಾದೇವಿ ಹಿರೇಮಠ, ಬಸವರಾಜ ಬ. ಕಡ್ಲೆಣ್ಣನವರ, ಬಸವರಾಜ ಐರಣಿ, ಮಹಾವೀರ ಜೈನ, ಅಶ್ವತ್ಥ ಕದಂಬ, ಎಂ.ಆರ್. ಚಂದ್ರಶೇಖರಯ್ಯ, ಧನ್ಯಕುಮಾರ, ವೆಂಕಟರಮಣಸ್ವಾಮಿ, ಶ್ರೀನಿವಾಸ ಪ್ರಭು ಉಪ್ಪುಂದ, ರೋಹಿಣಿ ಜಗರಾಂ, ಕೆ.ಎನ್. ವಾಸುದೇವಮೂರ್ತಿ, ವಿ. ಲಕ್ಷ್ಮೀಪತಿ, ಡಾ. ಎಂ.ಎಸ್. ವಿದ್ಯಾ, ಮಂಜುಳಾ ಬಿ.ಎಲ್. ಗೀತಾ ಸುರತ್ಕಲ್, ಬಾಬು ಹಿರಣ್ಣಯ್ಯ, ಮೋಹನರಾಂ ಅವರಿಗೆ 2021-22ನೇ ಸಾಲಿನ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಮಾಸ್ಟರ್ ಭಾಸ್ಕರಗೆ ಕೆ. ಹಿರಣ್ಣಯ್ಯ ದತ್ತಿ ಪುರಸ್ಕಾರ, ವೆಂಕಣ್ಣ ಕಾಮನೂರಗೆ ನಟ ರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ, ಅನ್ನಪೂರ್ಣ ಬಿ. ಹೊಸಮನಿಗೆ ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ, ಸುನಂದಾ ಹೊಸಪೇಟಿಗೆ ಮಾಲತಿಶ್ರೀ ಮೈಸೂರು ದತ್ತಿ ಪುರಸ್ಕಾರ, ಬೆಳಗಾವಿ ರಂಗಸಂಸ್ಥೆ ರಂಗಸಂಪದ ಕೆ. ರಾಮಚಂದ್ರ ದತ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಕರ್ಟನ್ ಕಾಲ್​ಗೆ ಲೈಟೇ ಬರಲಿಲ್ಲ ಕೃತಿಗೆ 2019ನೇ ಸಾಲಿನ ಪುಸ್ತಕ ಬಹುಮಾನ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts