More

    ಶಿಶುಪಾಲನಾ ಕೇಂದ್ರ ಸದ್ಬಳಕೆಯಾಗಲಿ

    ಹನೂರು: ನರೇಗಾ ಯೋಜನೆಯಡಿ ಹೆಚ್ಚು ಮಹಿಳೆಯರು ಉದ್ಯೋಗ ಪಡೆಯಲು ಹಾಗೂ ಮಕ್ಕಳ ಅಪೌಷ್ಟಿಕತೆಯನ್ನು ನಿವಾರಿಸುವ ಉದ್ದೇಶದಿಂದ ತೆರೆಯಲಾಗಿರುವ ಶಿಶುಪಾಲನಾ ಕೇಂದ್ರದ (ಕೂಸಿನ ಮನೆ) ಪ್ರಯೋಜನವನ್ನು ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.

    ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇ ಮಾರ್ಟಳ್ಳಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಕೂಸಿನ ಮನೆಯನ್ನು ಉದ್ಘಾಟಿಸಿ ಮಾತನಾಡಿದರು.

    ರಾಷ್ಟ್ರೀಯ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಈ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳಲ್ಲಿ ಮಹಿಳೆಯರು ಉದ್ಯೋಗ ಪಡೆಯುತ್ತಿದ್ದಾರೆ. ಆದರೆ ಮಕ್ಕಳನ್ನು ಲಾಲನೆ ಮಾಡಲು ತೊಡಕಾಗಿ ಪರಿಣಮಿಸಿತ್ತು. ಇದರಿಂದ ಕೆಲವರು ಉದ್ಯೋಗವನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಈ ದಿಸೆಯಲ್ಲಿ ಮಹಿಳಾ ಕೂಲಿ ಕಾರ್ಮಿಕರ ಮಕ್ಕಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೂಸಿನ ಮನೆ ಯೋಜನೆಯಡಿ ಶಿಶು ಪಾಲನಾ ಕೇಂದ್ರವನ್ನು ತೆರೆಯಲಾಗಿದ್ದು, ಈ ಕೇಂದ್ರದಲ್ಲಿ ಆಟದ ಸಾಮಾನುಗಳನ್ನು ಒದಗಿಸಲಾಗಿದೆ. ಇದರಿಂದ ಮಕ್ಕಳ ಶಿಕ್ಷಣ ಪೂರ್ವ ಕಲಿಕೆಗೆ ಅನುಕೂಲವಾಗಿದೆ. ಇಲ್ಲಿ 3 ವರ್ಷದೊಳಗಿನ ಕೂಲಿ ಕಾರ್ಮಿಕರ ಮಕ್ಕಳನ್ನು ಲಾಲನೆ ಮಾಡಲಾಗುತ್ತದೆ. ಆದ್ದರಿಂದ ಮಹಿಳೆಯರು ಇದರ ಪ್ರಯೋಜನ ಪಡೆದುಕೊಂಡು ನರೇಗಾ ಯೋಜನೆಯಡಿ ಕೆಲಸ ಕಾರ್ಯಗಳಲ್ಲಿ ಭಾಗವಹಿಸಬೇಕು. ಕೇಂದ್ರದಲ್ಲಿನ ನಿರ್ವಾಹಕರು ಮಕ್ಕಳನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡಬೇಕು. ಇದರಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲದು ಎಂದು ತಿಳಿಸಿದರು.

    ಇದೇ ವೇಳೆ ರಾಷ್ಟ್ರೀಯ ಪರಾಕ್ರಮದ ದಿನದ ಅಂಗವಾಗಿ ಸುಭಾಷ್‌ಚಂದ್ರ ಬೋಸ್ ಅವರ 127ನೇ ಜನ್ಮ ದಿನವನ್ನು ಆಚರಿಸಲಾಯಿತು.

    ನೀರಿನ ಸಮಸ್ಯೆ ನಿವಾರಿಸಿ: ಈ ವೇಳೆ ಮುಖ್ಯ ಶಿಕ್ಷಕ ಮಾದೇಶ್ ಮಾತನಾಡಿ, ಶಾಲೆಯಲ್ಲಿ 210 ವಿದ್ಯಾರ್ಥಿಗಳಿದ್ದಾರೆ. ಆದರೆ ನೀರಿನ ಸಮಸ್ಯೆ ತೀವ್ರವಾಗಿದೆ. ಇದರಿಂದ ಅಡುಗೆಗೆ, ಕುಡಿಯುವ ಹಾಗೂ ಶೌಚಗೃಹದ ಬಳಕೆಯ ನೀರಿಗಾಗಿ ಹೆಚ್ಚಿನ ತೊಂದರೆ ಉಂಟಾಗಿದೆ. ಆದ್ದರಿಂದ ಕೊಳವೆ ಬಾವಿ ಕೊರೆಸುವುದರ ಮೂಲಕ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಶಾಸಕರಿಗೆ ಮನವಿ ಮಾಡಿದರು.

    ಈ ಸಂಬಂಧ ಶಾಸಕ ಎಂ.ಆರ್ ಮಂಜುನಾಥ್ ಅವರು ಸ್ಥಳದಲ್ಲಿದ್ದ ಪಿಡಿಒ ಶಿವಣ್ಣ ಅವರಿಗೆ ಬೋರ್ ಕೊರೆಯಿಸುವ ತನಕ ಶಾಲೆಗೆ ತಾತ್ಕಾಲಿಕವಾಗಿ ನೀರಿನ ವ್ಯವಸ್ಥೆ ಒದಗಿಸಲು ಕ್ರಮ ವಹಿಸಬೇಕು. ಜತೆಗೆ ಕ್ರಿಯಾಯೋಜನೆ ತಯಾರಿಸಿ ಬೋರ್ ಕೊರೆಯಿಸಿ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸೂಚನೆ ನೀಡಿದರು. ಜತೆಗೆ ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ತಾಪಂ ಇಒ ಉಮೇಶ್ ಅವರಿಗೆ ತಾಕೀತು ಮಾಡಿದರು. ಈ ಸಂದರ್ಭದಲ್ಲಿ ತಾಪಂ ಸಹಾಯಕ ನಿರ್ದೇಶಕ ರವೀಂದ್ರ, ಗ್ರಾಪಂ ಅಧ್ಯಕ್ಷ ಇನಾಸಿ ಮುತ್ತು, ಉಪಾಧ್ಯಕ್ಷೆ ನದಿಯಾ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts