More

    ಜನರ ಹಿತ ಕಾಯುವ ಪಕ್ಷ ಬಿಜೆಪಿ ಗೆಲ್ಲಿಸಿ

    ಕೆ.ಆರ್.ನಗರ: ಜನರ ಹಿತ ಕಾಯಲು ಆಡಳಿತ ನಡೆಸುವ ಭಾರತ ದೇವಾಲಯವಾಗಿರುವ ಸಂಸತ್ತಿಗೆ ಉತ್ತಮ ಸಂಸದೀಯ ಪಟುವನ್ನು ಆಯ್ಕೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮನವಿ ಮಾಡಿದರು.


    ಪಟ್ಟಣದ ಕೃಷ್ಣ ಮಂದಿರದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ತಮ್ಮ ಅಭಿಮಾನಿಗಳು ಮತ್ತು ಸ್ನೇಹಿತರ ಸಭೆಯಲ್ಲಿ ಮಾತನಾಡಿ, ಸಂಸತ್ತಿಗೆ ಸಾಹಿತಿಗಳು, ಬುದ್ಧಿಜೀವಿಗಳು, ವಿದ್ವಾಂಸರು ಉತ್ತಮ ಆಡಳಿತಗಾರರನ್ನು ಆಯ್ಕೆ ಮಾಡಿದಾಗ ಮಾತ್ರ ಗೌರವ ಹೆಚ್ಚುತ್ತದೆ ಎಂದು ತಿಳಿಸಿದರು.
    ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದಂತೆ ವಿಧಾನಸಭೆ ಮತ್ತು ಸಂಸತ್ತಿನ ಭಾವನೆಗಳ ಬೀಗದ ಕೀಲಿಯನ್ನು ಅಧಿಕಾರ ದುರುಪಯೋಗಪಡಿಸಿಕೊಳ್ಳುವವರಿಗೆ ಯಾವುದೇ ಕಾರಣಕ್ಕೂ ನೀಡಬೇಡಿ. ಸಂಸತ್ತಿಗೆ ಪ್ರವೇಶ ಮಾಡಿದ ನಂತರ ಪಕ್ಷಾತೀತ, ಜಾತ್ಯತೀತವಾಗಿ ಜನಸೇವೆ ಮಾಡುವಂತಹ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.


    ಇತ್ತೀಚಿಗೆ ವಿಧಾನಸಭೆ ಮತ್ತು ಸಂಸತ್ತಿಗೆ ಅನುಭವ ಇಲ್ಲದೆ ಹಣ ಇರುವ, ಲೂಟಿಕೋರರು, ಉದ್ದಿಮೆದಾರರು ತಾವು ಕೂಡಿಟ್ಟ ಹಣದ ರಕ್ಷಣೆಗೆ ರಾಜಕೀಯಕ್ಕೆ ಬರುವುದು ಹೆಚ್ಚಾಗಿದೆ. ಇಂತವರನ್ನು ಹೆಚ್ಚು ಆಯ್ಕೆ ಮಾಡುವುದ್ದರಿಂದ ದೇಶ ಮತ್ತು ರಾಜ್ಯ ಭ್ರಷ್ಟತೆಯಿಂದ ಕೂಡಿದೆ. ಇದಕ್ಕೆ ಯುವ ಸಮೂಹ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.


    ಮಂಡ್ಯ ಮತ್ತು ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಿಗೆ ರಾಜಕೀಯ ಇತಿಹಾಸ ಇದೆ. ಮಂಡ್ಯ ಲೋಕಸಭಾ ಅಭ್ಯರ್ಥಿ ಮಾಜಿ ಪ್ರಧಾನಿಯ ಪುತ್ರ ಹಾಗೂ ಈ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದು, ರೈತರು, ಬಡವರು, ಜನ ಸಾಮಾನ್ಯರ ಪರವಾಗಿ ಆಡಳಿತ ನಡೆಸಿದ ಅನುಭವ ಹೊಂದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಿ ಕಳಿಸಿದರೆ ಸಂಸತ್ತಿಗೂ ಗೌರವ, ರಾಜ್ಯಕ್ಕೂ ಗೌರವ. ಅಂತಹ ಕೆಲಸವನ್ನು ತಾಲೂಕಿನ ಯುವ ಜನತೆ ಮತ್ತು ಮಹಿಳೆಯರು ಮಾಡಬೇಕು ಎಂದು ಮನವಿ ಮಾಡಿದರು.
    ಕಾಂಗ್ರೆಸ್ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ ಎಚ್.ವಿಶ್ವನಾಥ್, ಮೈಸೂರು ಲೋಕಸಭಾ ಅಭ್ಯರ್ಥಿಯಾಗಿ ನಿಂತಿರುವ ಯದುವೀರ್ ಒಡೆಯರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕಾಗಿದ್ದ ಕಾಂಗ್ರೆಸ್ ತಪ್ಪು ಮಾಡಿದೆ. ರೈತರಿಗಾಗಿ ಅಣೆಕಟ್ಟೆಗಳನ್ನು ಕಟ್ಟಿ, ಶಾಲಾ ಕಾಲೇಜು, ಆಸ್ಪತ್ರೆಗಳು, ರಸ್ತೆಗಳನ್ನು ನಿರ್ಮಿಸುವ ಮೂಲಕ ರಾಜ್ಯಕ್ಕೆ ಮೈಸೂರು ಒಡೆಯರ ಕೊಡುಗೆ ಅಪಾರ ವಾಗಿದ್ದು, ಅಂತಹ ವ್ಯಕ್ತಿಯನ್ನು ಆಯ್ಕೆ ಮಾಡದೆ ಮತ್ಯಾವ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂದು ಪ್ರಶ್ನಿಸಿದರು.


    ಚುನಾವಣೆ ಬರುತ್ತದೆ ಹೋಗುತ್ತದೆ. ಆದರೆ ವ್ಯಕ್ತಿಗತವಾಗಿ ಮಾಡಿದ ಟೀಕೆ ಟಿಪ್ಪಣಿಗಳು ಹಾಗೆಯೇ ಉಳಿಯುತ್ತವೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ-ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಡುತ್ತಿರುವ ಟೀಕೆ ಟಿಪ್ಪಣಿಗಳು ಸಭ್ಯತೆಯ ಎಲ್ಲೆ ಮೀರುತ್ತಿದೆ. ಮುಂದಾದರೂ ಅವರ ಹುದ್ದೆಗಳ ಗೌರವಕ್ಕೆ ತಕ್ಕಂತೆ ಟೀಕಿಸುವುದನ್ನು ಕಲಿಯಲಿ ಎಂದು ಸಲಹೆ ನೀಡಿದರು.


    ಜಿ.ಪಂ. ಮಾಜಿ ಉಪಾಧ್ಯಕ್ಷ ಎ.ಎಸ್. ಚನ್ನಬಸಪ್ಪ, ಮಾಜಿ ಸದಸ್ಯ ಎಂ.ಟಿ.ಕುಮಾರ್, ನವ ನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಪುರಸಭೆ ಸದಸ್ಯ ಕೆ.ಪಿ.ಪ್ರಭುಶಂಕರ್, ವೈಧ್ಯ ಡಾ.ಮೋಹನದಾಸಭಟ್, ದಲಿತ ಮುಖಂಡ ಹನಸೋಗೆ ನಾಗರಾಜು ಮಾತನಾಡಿದರು.

    ಮೈಮಲ್ ಮಾಜಿ ಅಧ್ಯಕ್ಷ ಎ.ಟಿ.ಸೋಮಶೇಖರ್, ಪುರಸಭೆ ಮಾಜಿ ಅಧ್ಯಕ್ಷರಾದ ಡಿ.ಕಾಂತರಾಜು, ಭಾಗ್ಯಲಕ್ಷ್ಮೀ ಸುಬ್ರಮಣ್ಯ, ತಾಪಂ ಮಾಜಿ ಸದಸ್ಯ ಹಂಗರಬಾಯನಹಳ್ಳಿ ತಮ್ಮಣ್ಣ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ.ಅಣ್ಣೇಗೌಡ, ಮುಖಂಡರಾದ ಶಿವಣ್ಣ, ಪುರುಷೋತ್ತಮ, ಮಹಾದೇವ್ ಇತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts