More

    ಅರಸನ ಕೆರೆಯಲ್ಲಿ ಮೀನುಗಳ ಸಾವು

    ಚಿತ್ರದುರ್ಗ: ಹೊರವಲಯ ಮಠದ ಮುಂಭಾಗವಿರುವ ಅರಸನ ಕೆರೆಯ ದಡದಲ್ಲಿ ಕಣ್ಣಾಯಿಸಿದಷ್ಟು ದೂರ ಮೀನುಗಳು ಮೃತಪಟ್ಟಿರುವ ರಾಶಿ ಕಣ್ಣಿಗೆ ರಾಚುತ್ತಿದೆ. ಇದರಿಂದಾಗಿ ಜೆಎಂಐಟಿ ಸರ್ಕಲ್ ಬಳಿ ಸಹಿಸಿಕೊಳ್ಳಲಾಗದ ದುರ್ವಾಸನೆ ಹೆಚ್ಚಳವಾಗಿದೆ.

    ಕೆರೆಯಲ್ಲಿನ ಸಾವಿರಾರು ಮೀನುಗಳು ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದು, ಸುತ್ತಮುತ್ತಲಿನ ಪ್ರದೇಶದವರೆಗೂ ದುರ್ವಾಸನೆ ಬೀರಲಾರಂಭಿಸಿದೆ. ಕೆರೆ ಮಾರ್ಗದಿಂದ ನಗರದೊಳಗೆ ಪ್ರವೇಶಿಸುವವರು ಮೂಗು ಮುಚ್ಚಿಕೊಂಡು ಬರುವ ದುಸ್ಥಿತಿ ನಿರ್ಮಾಣವಾಗಿದೆ.

    ಮೃತಪಟ್ಟಿರುವ ಮೀನಿನ ರಾಶಿಯ ಚಿತ್ರಗಳು ಹಾಗೂ ವಿಡಿಯೋ ತುಣುಕುಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ.

    ಮೃತ ಮೀನಿನ ರಾಶಿ ನೋಡಿದವರಿಗೂ ತೀವ್ರ ನೋವುಂಟಾಗಿದೆ. ಅಲ್ಲದೆ, ಕೆಲವರು ಗಾಬರಿಗೊಂಡಿದ್ದಾರೆ. 2020 ಮತ್ತು 2021ರ ಏಪ್ರಿಲ್ ತಿಂಗಳಿನಲ್ಲೇ ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಕೆರೆಯಲ್ಲೂ ಸಾವಿರಾರು ಮೀನುಗಳು ಮೃತಪಟ್ಟಿದ್ದ ಘಟನೆ ಗುತ್ತಿಗೆದಾರರ ಕಣ್ಣಾಲಿ ಒದ್ದೆಯಾಗಿಸಿದ್ದ ನಿದರ್ಶನಗಳು ಇವೆ.

    ಅನೇಕ ವರ್ಷಗಳಿಂದಲೂ ಕವಾಡಿಗರಹಟ್ಟಿ, ಗಾರೆಹಟ್ಟಿ, ಜಯಲಕ್ಷ್ಮಿ ಬಡಾವಣೆಯ ಮಲೀನ ನೀರು ಅರಸನ ಕೆರೆ ಸೇರುತ್ತಿದೆ. ತ್ಯಾಜ್ಯದ ರಾಶಿ ಕೂಡ ಇದಕ್ಕೆ ಹೊರತಾಗಿಲ್ಲ. ಹೀಗಾಗಿ ಬಹುತೇಕ ಕಲುಷಿತಗೊಂಡಿದೆ. ಮೀನುಗಳು ಮೃತಪಡಲು ಇದು ಕೂಡ ಕಾರಣವೇ ಎಂಬ ಸಂಶಯ ವ್ಯಕ್ತವಾಗುತ್ತಿದೆ.

    ಡ್ರೈನೇಜ್ ನೀರು, ವಿಷಕಾರಕ ಪದಾರ್ಥ, ವಿಪರೀತ ಪಾಚಿ, ಬೇಸಿಗೆಯಾದ್ದರಿಂದ ಅತಿಯಾದ ಉಷ್ಣ ಸೇರಿ ಈ ಎಲ್ಲ ಕಾರಣಗಳಿಂದಾಗಿ ಜೀವವಾಯುವಾದ ಆಮ್ಲಜನಕ ಕೊರತೆ ಉಂಟಾಗಿದೆ. ಹೀಗಾಗಿ ಉಸಿರಾಟದ ಸಮಸ್ಯೆಯಿಂದಾಗಿಯೂ ಮೃತಪಟ್ಟಿರಬಹುದು ಎಂದು ಸ್ಥಳ ಪರಿಶೀಲಿಸಲು ಶನಿವಾರ ಭೇಟಿ ನೀಡಿದ್ದ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

    ಮೃತ ಮೀನುಗಳನ್ನು ಕೂಡಲೇ ಹೊರಗೆ ತೆಗೆಸಬೇಕು. ಈ ಮೂಲಕ ಇಲ್ಲಿನ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗದಂತೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

    ಸಂಸ್ಕರಣಾ ಘಟಕಕ್ಕೆ ಚಿಂತನೆ: ಈ ಕೆರೆ ಗ್ರಾಪಂ ವ್ಯಾಪ್ತಿಗೆ ಸೇರಿದೆ. ಆದರೂ ಮೀನುಗಾರಿಕೆ ಇಲಾಖೆ, ಪಂಚಾಯಿತಿ ಅಧಿಕಾರಿಗಳೊಂದಿಗೆ ಸಮನ್ವಯತೆಯಿಂದ ಮೃತ ಮೀನು ಹೊರತೆಗೆಸಲು ನಗರಸಭೆ ಕೈಜೋಡಿಸಲಿದೆ ಎಂದು ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ. ಕೆರೆಗೆ ಒಳಚರಂಡಿ ನೀರು ಹರಿದು ಬರುತ್ತಿರುವ ವಿಷಯ ಗಮನಕ್ಕೆ ಬಂದಿದೆ. ಅದಕ್ಕಾಗಿ 35 ಲಕ್ಷ ರೂ.ವೆಚ್ಚದಲ್ಲಿ ಒಳಚರಂಡಿ ಸಂಸ್ಕರಣಾ ಘಟಕ ಸ್ಥಾಪಿಸಿ ನೀರನ್ನು ಶುದ್ಧೀಕರಿಸುವ ಕಾರ್ಯಕ್ಕೂ ಚಿಂತಿಸಲಾಗಿದೆ. ಆಗ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts