More

    ಗ್ರಾಮೀಣ ಮಟ್ಟದಲ್ಲಿ ಕ್ರೀಡೆಗಳು ಹೆಚ್ಚಾಗಲಿ

    ಗೋಣಿಕೊಪ್ಪ: ಗ್ರಾಮೀಣ ಮಟ್ಟದಲ್ಲಿ ಕ್ರೀಡೆಗೆ ಅವಕಾಶಗಳು ದೊರೆತಲ್ಲಿ ನೈಜ ಪ್ರತಿಭೆಗಳು ಹೊರಹೊಮ್ಮಲು ಅವಕಾಶವಾಗಲಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಮಟ್ಟದಲ್ಲಿ ಕ್ರೀಡೆಗಳು ಹೆಚ್ಚಾಗಿ ನಡೆಯುವಂತಾಗಲಿ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಆಶಿಸಿದರು.

    ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ 6ನೇ ವಿಭಾಗದ ಕಾವೇರಿ ಹಿಲ್ಸ್ ಬಡಾವಣೆಯಲ್ಲಿ ಕಾವೇರಿ ಸಂಘದಿಂದ ಬುಧವಾರ ಆಯೋಜಿಸಿದ್ದ ಹೊನಲು ಬೆಳಕಿನ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.

    ಚುನಾವಣಾ ಪೂರ್ವದಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡುವುದಾಗಿ ಭರವಸೆ ನೀಡಿದ್ದೆ. ಇಂದಿಗೂ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಲೇ ಬಂದಿದ್ದೇನೆ. ಕ್ಷೇತ್ರದಲ್ಲಿ ಕ್ರೀಡೆಗೆ ಬೇಕಾದ ಮೈದಾನ, ಹೊನಲು ಬೆಳಕಿನ ವ್ಯವಸ್ಥೆ, ಬಾಸ್ಕೆಟ್‌ಬಾಲ್ ಮೈದಾನಗಳು ಸೇರಿದಂತೆ ಕ್ರೀಡೆಗೆ ಅಗತ್ಯವಿರುವ ಶಾಶ್ವತ ಯೋಜನೆಗಳು ಮುಂದಿನ ದಿನಗಳಲ್ಲಿ ಜಾರಿಗೆ ಬರಲಿವೆ. ಇದರಿಂದ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರಿದಿದೆ. ಮೈದಾನದಲ್ಲಿ ಕ್ರೀಡಾಪಟುಗಳಿಗೆ ಅಗತ್ಯವಿರುವ ತರಬೇತಿದಾರರು ಕೂಡ ಲಭ್ಯವಾಗಬೇಕು. ಪೊನ್ನಂಪೇಟೆ ಕ್ರೀಡಾ ವಸತಿ ಶಾಲೆಯಲ್ಲಿರುವ ಟರ್ಫ್ ಮೈದಾನದಂತೆ ಇನ್ನೊಂದು ಮೈದಾನ ನಿರ್ಮಾಣ ಯೋಜನೆ ತಯಾರಾಗುತ್ತಿದೆ ಎಂದು ತಿಳಿಸಿದರು.

    ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಕಿಗೆ ಉತ್ತಮ ಸ್ಥಾನಮಾನವಿದೆ. ಕೊಡಗಿನ ಹಲವು ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸುತ್ತಿದ್ದರು. ಹಾಕಿ ಕ್ರೀಡೆಯಲ್ಲಿ ಕೊಡಗಿನ ಕ್ರೀಡಾಪಟುಗಳು ಇಲ್ಲದ ದಿನಗಳಿರಲಿಲ್ಲ. ಇದೀಗ ಒಡಿಶಾ ಹಾಗೂ ಪಂಜಾಬ್ ತಂಡದ ಕ್ರೀಡಾಪಟುಗಳು ಹಾಕಿ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ 2 ರಾಜ್ಯದಲ್ಲಿ ಅಲ್ಲಿನ ಕ್ರೀಡಾಪಟುಗಳಿಗೆ ಹೆಚ್ಚಿನ ಟರ್ಫ್ ಮೈದಾನಗಳ ವ್ಯವಸ್ಥೆಯನ್ನು ಅಲ್ಲಿನ ಸರ್ಕಾರ ನೀಡಿದೆ. ಇದರಿಂದ ಅಲ್ಲಿಯ ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿದೆ. ಕರ್ನಾಟಕ ರಾಜ್ಯದಲ್ಲಿಯೂ ಅದರಲ್ಲೂ ವಿಶೇಷವಾಗಿ ಕೊಡಗಿನ ಕ್ರೀಡಾಪಟುಗಳಿಗೆ ಹೆಚ್ಚಿನ ಮೂಲ ಸೌಕರ್ಯಗಳು ಸಿಗುವಂತಾಗಬೇಕು. ಇದರಿಂದ ಹಲವು ಪ್ರತಿಭೆಗಳು ಹೊರಹೊಮ್ಮಲು ಸಾಧ್ಯವಾಗಲಿದೆ ಎಂದರು.

    ಕಾವೇರಿ ಸಂಘದ ಅಧ್ಯಕ್ಷರಾದ ಶಾಂತೆಯಂಡ ಮಧುಮಾಚಯ್ಯ ಅಧ್ಯಕ್ಷತೆ ವಹಿಸಿದ್ದರು. ಮೇಜರ್ ಚೋನಿರ ಗಾಯಾನ್ ಗಣಪತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನ್ನಕ್ಕಮನೆ ಸೌಮ್ಯಾಬಾಲು, ಸದಸ್ಯರಾದ ಬಿ.ಎನ್.ಪ್ರಕಾಶ್, ರತಿ ಅಚಪ್ಪ ಸೇರಿದಂತೆ ಇತರರು ಇದ್ದರು. ಕಾವೇರಿ ಸಂಘದ ಕಾರ್ಯದರ್ಶಿಗಳಾದ ರಫೀಕ್ ಹಾಗೂ ಸುನೀಲ್, ಉಪಾಧ್ಯಕ್ಷ ಧನಲಕ್ಷ್ಮೀ, ಖಜಾಂಚಿ ಚೋನಿರ ಸತ್ಯ, ನಿರ್ದೇಶಕರಾದ ಸೌಮ್ಯಾಕೃಷ್ಣ, ಬಿಂದು, ಶೈಲಜಾ, ಭವಿಷ್ಯತ್, ಪ್ರವೀಣ್,ರಜಾಕ್, ಮುಕ್ತಾರ್ ಬೇಗ್ ಸೇರಿದಂತೆ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts