More

    ಜನಮತ | ಸೌರ-ಪವನ ವಿದ್ಯುತ್​ಗೆ ಆದ್ಯತೆ ಸಿಗಲಿ

    ಪರಿಸರವನ್ನು ಹದಗೆಡಿಸುತ್ತಿರುವ ಇಂಗಾಲ ತಡೆಗೆ ಸೌರಶಕ್ತಿ ಸದ್ಬಳಕೆ ಮತ್ತು ಉದ್ಯಮ ಪರಿವರ್ತನೆ ದಿಸೆಯಲ್ಲಿ ಭಾರತ ಸಮರ್ಥ ನಾಯಕತ್ವವಹಿಸಿದ ಕಾರಣ ಜಾಗತಿಕ ಹವಾಮಾನ ಬದಲಾವಣೆ ತಡೆ ಕ್ರಮಗಳಿಗೆ ಹೆಚ್ಚಿನ ಶಕ್ತಿ ಬಂದಿದೆಯೆಂದು ವಿಶ್ವಸಂಸ್ಥೆಯ ಉಪ ಪ್ರಧಾನ ಕಾರ್ಯದರ್ಶಿಅಮೀನಾ ಮೊಹಮ್ಮದ್ ಅವರು ಈಚೆಗೆ ಪರಿಸರ ಬದಲಾವಣೆ ಕುರಿತಾದ ವೆಬಿನಾರ್ ಕಾರ್ಯಕ್ರಮದಲ್ಲಿ ಶ್ಲಾಘಿಸಿದ್ದಾರೆ. ಪರಿಸರವನ್ನು ಇಂಗಾಲಮುಕ್ತವಾಗಿಸಲು, ನೀರಾವರಿ ಕಾಲವೆಗಳಲ್ಲಿಯ ಶೇ.20ರಷ್ಟು ನೀರು ಆವಿಯಾಗಿ ಹೋಗುವುದನ್ನು ತಪ್ಪಿಸಿ ಬೆಳೆಗಳಿಗೆ ಹೆಚ್ಚು ನೀರು ಒದಗಿಸಲು ಪೂರಕವಾಗಿ, ಪರಿಸರದಲ್ಲಿ ಉಚಿತವಾಗಿ ದೊರೆಯುವ ಸೌರಶಕ್ತಿ ಅಥವಾ ಪವನಶಕ್ತಿಯನ್ನು ಸದ್ಬಳಕೆ ಮಾಡಿಕೊಂಡು ನೀರಾವರಿ ಕಾಲುವೆ, ಬರಡು ಸರ್ಕಾರಿ ಗೋಮಾಳದಲ್ಲಿ, ವಾಯು ವೇಗ ಹೆಚ್ಚಿರುವ ಸರ್ಕಾರಿ ಸ್ವಾಮ್ಯದ ಬೆಟ್ಟಗಳಲ್ಲಿ ಸೌರವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಹೋರಾಟ ಮಾಡುತ್ತಿರುವವರಿಗೆ ಈ ಮೂಲಕ ವಿಶ್ವಸಂಸ್ಥೆಯಿಂದ ನೈತಿಕ ಬೆಂಬಲ ದೊರೆತಂತಾಗಿದೆ. ಪವನ ಶಕ್ತಿ ಬಳಸಿಕೊಂಡು ಬಳ್ಳಾರಿ, ಹಾವೇರಿ, ಗದಗ, ಚಾಮರಾಜನಗರ ಜಿಲ್ಲೆಗಳಲ್ಲಿ ಪವನ ವಿದ್ಯುತ್ ಘಟಕ ಸ್ಥಾಪಿಸಲು ಮಾಡಿಕೊಂಡ ಮನವಿಗೆ ಸರ್ಕಾರ ಸ್ಪಂದಿಸಿ ಹರಪನಹಳ್ಳಿ, ಗಜೇಂದ್ರಗಡ, ನರಗುಂದ, ಶಿಗ್ಗಾವಿಯ ಬಳಿ ಪವನ ವಿದ್ಯುತ್ ಘಟಕ ಸ್ಥಾಪಿಸಿದ್ದು, ಚಾಮರಾಜನಗರ ಜಿಲ್ಲೆಗೆ ಯೋಜನೆ ಮಂಜೂರಾದರೂ ಅರಣ್ಯ ಇಲಾಖೆಯ ತಕರಾರಿನಿಂದ ಪವನ ವಿದ್ಯುತ್ ಘಟಕ ಸ್ಥಾಪನೆಯಾಗಿಲ್ಲ.

    ರಾಜ್ಯದ ನೀರಾವರಿ ಕಾಲುವೆಗಳ ಮೇಲೆ ಅಥವಾ ಸರ್ಕಾರಕ್ಕೆ ಸೇರಿದ ಬೋಳು ಬೆಟ್ಟಗಳ ಮೇಲೆ ಸೌರವಿದ್ಯುತ್ ಅಥವಾ ಪವನ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು 12/5/2014 ರಂದು ರಾಜ್ಯ ಇಂಧನ ಸಚಿವರಿಗೆ ಮನವಿ ಮಾಡಿಕೊಂಡಿದ್ದೆ. ಈ ಕುರಿತು ಅಭಿಪ್ರಾಯ ತಿಳಿಸಲು ಸಚಿವರು ಕೆಆರ್​ಇಡಿಎಲ್​ಗೆ 20/52014 ರಂದು ಕಳಿಸಿದ್ದು ನಿಗಮವು ಈ ಸಲಹೆ ಸಮರ್ಪಕವಾಗಿದೆಯೆಂದು ಅಭಿಪ್ರಾಯಪಟ್ಟು ಸೌರವಿದ್ಯುತ್ ಅಥವಾ ಪವನ ವಿದ್ಯುತ್ ಘಟಕ ಸ್ಥಾಪಿಸಲು ಅವಕಾಶವಿದೆಯೆಂದು ಸರ್ಕಾರಕ್ಕೆ ಅಭಿಪ್ರಾಯ ಸಲ್ಲಿಸಿತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೃಷ್ಣಾ ಬಲದಂಡೆ ಯೋಜನೆಯ ಮರೋಳ ಯಾತ ನೀರಾವರಿ ಕಾಲುವೆಯ ಮೇಲೆ ಪ್ರಾಯೋಗಿಕವಾಗಿ ಹುನಗುಂದ ಹೊರವಲಯದಲ್ಲಿ ಏಪ್ರಿಲ್ 2015 ಏಪ್ರಿಲ್​ನಲ್ಲಿ 700 ಮೀಟರ್ ಸೌರವಿದ್ಯುತ್ ಫಲಕ ಅಳವಡಿಸಿದಾಗ 2015ರ ಜೂನ್ 9ರಿಂದ 2016ರ ಮಾರ್ಚ್ 31ರ ಅವಧಿಯಲ್ಲಿ 14 ಲಕ್ಷ ಯುನಿಟ್ ಸೌರವಿದ್ಯುತ್ ಉತ್ಪಾದನೆಯಾಗಿದೆ. ರಾಜ್ಯದ ಎಲ್ಲ ನೀರಾವರಿ ಕಾಲುವೆಗಳು, ಬರಡು ಜಮೀನು, ಬೋಳುಬೆಟ್ಟಗಳ ಮೇಲೆ ವೈಜ್ಞಾನಿಕವಾಗಿ ಘಟಕಗಳನ್ನು ಸ್ಥಾಪಿಸುವ ಮೂಲಕ ಪರಿಸರ ಕೊಡುವ ಸೌರ ಅಥವಾ ಪವನ ವಿದ್ಯುತ್ ಸದ್ಬಳಕೆ ಮಾಡಿಕೊಂಡು, ವಿಶ್ವಸಂಸ್ಥೆಯ ಆಶಯದಂತೆ ನಮ್ಮ ದೇಶದ ಪರಿಸರವನ್ನು ಇಂಗಾಲಮುಕ್ತವಾಗಿಸುವ ಕಾರ್ಯದ ನೇತೃತ್ವವನ್ನು ಕರ್ನಾಟಕ ವಹಿಸಲೆಂದು ಪರಿಸರಪ್ರೇಮಿಗಳ ಪರವಾಗಿ ಕೋರುತ್ತೇನೆ.

    | ಬಸವರಾಜ ಹುಡೇದಗಡ್ಡಿ ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts