More

    ಗ್ರಾಮೀಣ ಸಂಸ್ಕೃತಿ ಉಳಿಸುವ ಕೆಲಸವಾಗಲಿ

    ಹಾನಗಲ್ಲ: ಪಾಶ್ಚಿಮಾತ್ಯ ಜೀವನ ಶೈಲಿಯ ನಡುವೆ ನಮ್ಮ ಜನಪದ ಜೀವನ ದೂರವಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಅಲ್ಲಲ್ಲಿ ಉಳಿದುಕೊಂಡಿರುವ ದೊಡ್ಡಾಟ, ಸಣ್ಣಾಟ, ಬಯಲಾಟ ಮತ್ತು ಗ್ರಾಮೀಣ ಸಂಸ್ಕೃತಿಯನ್ನು ಉಳಿಸಿಕೊಳ್ಳದಿದ್ದರೆ ಅವುಗಳೂ ನಶಿಸಿಹೋಗುತ್ತವೆ ಎಂದು ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಫಕೀರಪ್ಪ ಗೌರಮ್ಮನವರ ಆತಂಕ ವ್ಯಕ್ತಪಡಿಸಿದರು.

    ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ಗಂಗಾಪರಮೇಶ್ವರ ಡೊಳ್ಳಿನ ಸಂಘದ ವಾರ್ಷಿಕೋತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಜನೆಗಳು, ಗೀಗೀಪದಗಳು, ಬೀಸುವಕಲ್ಲಿನ ಹಾಡುಗಳು ಸೇರಿದಂತೆ ಎಲ್ಲ ಕೆಲಸಗಳ ಸಂದರ್ಭದಲ್ಲೂ ನಮ್ಮ ಸಂಸ್ಕೃತಿಗೆ ಹೊಂದುವ ಹಾಡುಗಳನ್ನು ರಚಿಸಲಾಗಿದೆ. ಅವುಗಳನ್ನು ವೃದ್ಧರ ಮೂಲಕ ಹೊಸ ಪೀಳಿಗೆಗೆ ಕಲಿಸಿಕೊಡುವ ಕಾರ್ಯ ನಡೆಯಬೇಕಿದೆ. ಹಳ್ಳಿಗಳಲ್ಲಿ ರಂಗಭೂಮಿ ನಾಟಕಗಳು ನಡೆಯುತ್ತಿದ್ದು, ಅವುಗಳನ್ನು ಪ್ರೋತ್ಸಾಹಿಸಲು ಸರ್ಕಾರ, ಸಂಘ-ಸಂಸ್ಥೆಗಳು ಮುಂದಾಗಬೇಕಿದೆ ಎಂದು ಮನವಿ ಮಾಡಿದರು.

    ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಮುಚ್ಚಂಡಿ ಮಾತನಾಡಿ, ಕಸಾಪ ವತಿಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಸಾಹಿತ್ಯ, ಸಂಗೀತ, ಜನಪದ ಸಾಹಿತ್ಯ ಉಳಿಸಲು ಪ್ರತಿ ತಿಂಗಳೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಕಾರ್ಯಕ್ರಮಗಳಿಗೆ ಆರ್ಥಿಕ ನೆರವು ನೀಡಿದರೆ ಇನ್ನಷ್ಟು ಯಶಸ್ಸು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸ್ಥಳೀಯ ಸಂಘಗಳ ಉತ್ತೇಜನಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಹೋತನಹಳ್ಳಿಯ ಸದ್ಗುರು ಶಂಕರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಮದ ಶತಾಯುಷಿ ಮಲ್ಲಮ್ಮ ಕರೆಚಂದಣ್ಣನವರ ಅವರನ್ನು ಸನ್ಮಾನಿಸಲಾಯಿತು. ಹಿರೇಹುಲ್ಲಾಳ ಗ್ರಾಮದ ಉಡಚಮ್ಮದೇವಿ ಡೊಳ್ಳಿನ ಸಂಘದ ಕಲಾವಿದರಿಂದ ಜಾನಪದ ಕಾರ್ಯಕ್ರಮಗಳು ಪ್ರಸ್ತುತಗೊಂಡವು.

    ಗಂಗಾಪರಮೇಶ್ವರಿ ಡೊಳ್ಳಿನ ಸಂಘದ ಅಧ್ಯಕ್ಷ ಬಸವರಾಜ ಕೋಳೂರ ಮಾತನಾಡಿದರು. ಸಂಘದ ಉಪಾಧ್ಯಕ್ಷ ಉಡಚಪ್ಪ ಕರೆಚಂದಣ್ಣನವರ, ಗ್ರಾಮದ ಪ್ರಮುಖರಾದ ರಾಮಣ್ಣ ಮಣ್ಣಕ್ಕನವರ, ರುದ್ರಪ್ಪ ಪೂಜಾರ, ಶಿವಪ್ಪ ರ್ಬಾ, ಪರಸಪ್ಪ ಓಣಿಕೇರಿ, ಸಂತೋಷ ಕಡೂರ, ಶಿವಪ್ಪ ಬ್ಯಾತನಾಳ, ವಿರೂಪಾಕ್ಷಪ್ಪ ಮಾಸನಕಟ್ಟಿ, ನಾಗರಾಜ ಚೌಡಣ್ಣನವರ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಚಂದ್ರಕಾಂತ ಕುಂದೂರ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts