More

    ವೃಂದ-ನೇಮಕಾತಿ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಿ

    ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ವಾಣಿಜ್ಯ ಸಂಕೀರ್ಣದ ಸಭಾಂಗಣದಲ್ಲಿ ಶನಿವಾರ ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಅವರ ಅಧ್ಯಕ್ಷತೆಯಲ್ಲಿ ಪ್ರಾಧಿಕಾರದ ನೌಕರರ ಕುಂದು ಕೊರತೆ ಸಭೆ ನಡೆಯಿತು.

    ಈ ವೇಳೆ ನೌಕರರು ಮಾತನಾಡಿ, ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಿ ಗ್ರೂಪ್ ಹಾಗೂ ದ್ವಿತೀಯ ದರ್ಜೆ ಸಹಾಯಕರನ್ನು ವೃಂದ ಮತ್ತು ಆಧಾರದಲ್ಲಿ ನೇಮಕ ಮಾಡಿಕೊಳ್ಳದ ಪರಿಣಾಮ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸಿದರೂ ಯಾವುದೇ ಬಡ್ತಿ ಸಿಗುತ್ತಿಲ್ಲ. ಇದರಿಂದ ಇದೇ ವೃತ್ತಿಯಲ್ಲಿ ಮುಂದುವರಿಯಬೇಕಿದೆ. ಇದರಿಂದ ತುಂಬ ತೊಂದರೆಯಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ನಿಯಮವನ್ನು ಬದಲಾಯಿಸಿ ವೃಂದ ಮತ್ತು ನೇಮಕಾತಿ ಆಧಾರದಲ್ಲಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

    ಇನ್ನು ಕೆಲ ನೌಕರರು ಮಾತನಾಡಿ, ಪ್ರಾಧಿಕಾರದ ವಿವಿಧ ವಿಭಾಗಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇವೆ. ಆದರೆ ಸರ್ಕಾರದ ಸವಲತ್ತುಗಳು ಸಿಗುತ್ತಿಲ್ಲ. ಹಾಗಾಗಿ ಕರ್ತವ್ಯ ನಿರ್ವಹಿಸುವ ವೇಳೆ ಮೃತಪಟ್ಟ ನೌಕರರ ಕುಟುಂಬದಲ್ಲಿ ಒಬ್ಬರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಬೇಕು. ಪ್ರವಾಸ ಭತ್ಯೆ, ಗಳಿಕೆ ರಜೆ ಸೇರಿದಂತೆ 6ನೇ ವೇತನ ಆಯೋಗದಂತೆ ವೇತನ ನೀಡಬೇಕು. ಅಲ್ಲದೆ ಜಾತ್ರೆ ಹಾಗೂ ವಿಶೇಷ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಕೆಲಸಕ್ಕೆ ನಿಯೋಜಿಸುವ ನೌಕರರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.

    ಕೆಲವರು ದೀಪದಗಿರಿ ಒಡ್ಡುವಿನ ಬಳಿ ಶ್ರೀ ಮಹದೇಶ್ವರರ ಪ್ರತಿಮೆ ನಿರ್ಮಾಣಕ್ಕೆ ಜಮೀನು ನೀಡಲಾಗಿದೆ. ಆದ್ದರಿಂದ ಪ್ರಾಧಿಕಾರದಲ್ಲಿ ಕೆಲಸ ನೀಡುವಂತೆ ಮನವಿ ಮಾಡಿದರು.

    ಪೌರಕಾರ್ಮಿಕರ ಸಂಘದ ಅಧ್ಯಕ್ಷ ಗೋಪಾಲ್ ಮಾತನಾಡಿ, ಪೌರಕಾರ್ಮಿಕರ ಕಾಲನಿಯಲ್ಲಿ ನಿರ್ಮಿಸಿರುವ ಮನೆಗಳು ಶಿಥಿಲಗೊಂಡಿವೆ. ಇದರಿಂದ ವಾಸಿಸಲು ತುಂಬ ತೊಂದರೆ ಅನುಭವಿಸಬೇಕಿದೆ. ಆದ್ದರಿಂದ ನಿವೇಶನದ ಜತೆಗೆ ಮನೆ ನಿರ್ಮಿಸಿ ಕೊಡುವಂತೆ ಮನವಿ ಮಾಡಿದರು.
    ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಪ್ರತಿಕ್ರಿಯಿಸಿ, ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಒದಗಿಸಲು ಅಗತ್ಯ ಕ್ರಮವಹಿಸಲಾಗುವುದು. ಸ್ಥಳ ಗುರುತಿಸಿ ಪೌರಕಾರ್ಮಿಕರಿಗೆ ಮನೆ ನಿರ್ಮಿಸಿ ಕೊಡಲಾಗುವುದು. ಜತೆಗೆ ನೌಕರರ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts