More

    ತಾರ್ಕಿಕ ಅಂತ್ಯ ಕಲ್ಪಿಸಿ; ಶಿಕ್ಷಕರ ವರ್ಗಾವಣೆ ಸಮಸ್ಯೆ ಬಗೆಹರಿಯಲಿ

    ನನೆಗುದಿಗೆ ಬಿದ್ದಿದ್ದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಅಂತೂ ಇಂತೂ ಚಾಲನೆ ಸಿಗುವ ಲಕ್ಷಣ ಗೋಚರಿಸಿದೆ. ಶಿಕ್ಷಕರು ಎದುರಿಸಿದ ಸಮಸ್ಯೆ, ದೀರ್ಘ ಕಾಯುವಿಕೆ, ಮತ್ತೆ ಮತ್ತೆ ಬೇಡಿಕೆಯನ್ನು ಪ್ರಭುತ್ವದ ಮುಂದೆ ಇಟ್ಟಿದ್ದು, ಕೆಎಟಿ ಮೊರೆ ಹೋಗಿದ್ದು ಹೀಗೆ ಹತ್ತುಹಲವು ಪ್ರಕ್ರಿಯೆಗಳನ್ನು ಪೂರೈಸಿದ ಬಳಿಕ ಭರವಸೆಯ ಕಿರಣ ಗೋಚರಿಸಿದೆ. ‘ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ) ಅಧಿನಿಯಮ 2020’ನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ರಾಜ್ಯ ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಅಂದರೆ, ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ. ಏಪ್ರಿಲ್ 26ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ಸಿಗುವ ಸಾಧ್ಯತೆ ಇದೆ. ಬಳಿಕ ರಾಜ್ಯಪಾಲರ ಅಂಕಿತ ಸಿಕ್ಕ ನಂತರ ಸುಗ್ರೀವಾಜ್ಞೆ ಜಾರಿಯಾಗಲಿದೆ.

    ಸಾರ್ವಜನಿಕ ಶಿಕ್ಷಣ ಇಲಾಖೆಯು 2020 ನವೆಂಬರ್ 11ರಂದು 2020-21ನೇ ಸಾಲಿನ ಶಿಕ್ಷಕರ ವರ್ಗಾವಣೆ ಮಾರ್ಗಸೂಚಿಗಳನ್ನು ಪ್ರಕಟಿಸುವ ಮೂಲಕ, ವರ್ಗಾವಣೆ ಪ್ರಕ್ರಿಯೆ ಆರಂಭಿಸಿತ್ತು. ವರ್ಗಾವಣೆ ಕೋರಿ 70 ಸಾವಿರಕ್ಕಿಂತ ಅಧಿಕ ಶಿಕ್ಷಕರು ಅರ್ಜಿ ಸಲ್ಲಿಸಿದ್ದರು ಎಂಬುದು ಗಮನಾರ್ಹ. ಆದರೆ, 2019-20ರಲ್ಲಿ ಹಳೆಯ ವರ್ಗಾವಣೆ ಕಾಯಿದೆ ಅನ್ವಯ ಸಾವಿರಾರು ಶಿಕ್ಷಕರು ಹೆಚ್ಚುವರಿ ಮತ್ತು ಕಡ್ಡಾಯ ವರ್ಗಾವಣೆ ಶಿಕ್ಷೆಗೆ ಗುರಿಯಾಗಿದ್ದರು. ಈ ಶಿಕ್ಷಕರ ಹಿತವನ್ನು ಗಮನದಲ್ಲಿ ಇರಿಸಿಕೊಂಡು ಶಿಕ್ಷಣ ಇಲಾಖೆ 2020-21ರಲ್ಲಿ ಪ್ರಥಮ ಆದ್ಯತೆ ನೀಡಿ ವರ್ಗಾವಣೆ ಮಾಡಲು ಮುಂದಾಯಿತು.

    2016-17ನೇ ಸಾಲಿನಲ್ಲಿ ‘ಹೆಚ್ಚುವರಿ ವರ್ಗಾವಣೆ’ ಶಿಕ್ಷೆಗೆ ಗುರಿಯಾದ ಶಿಕ್ಷಕರು ಈ ಕ್ರಮ ವಿರೋಧಿಸಿ ‘ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ (ಕೆಎಟಿ)’ ಮೊರೆ ಹೋಗಿದ್ದರು. ಈ ವರ್ಷದ ಜನವರಿ 2ರಂದು ತೀರ್ಪು ಪ್ರಕಟಿಸಿದ ಕೆಎಟಿ, ‘ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ) ಅಧಿನಿಯಮ 2020’ರ ಅನ್ವಯ ಕಾಯಿದೆಯ ಅಂಶಗಳನ್ನು ಹೊರತುಪಡಿಸಿ ಬೇರೆ ಯಾವುದೇ ಅಂಶಗಳನ್ನು ಜಾರಿಗೊಳಿಸದೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗಳನ್ನು ನಡೆಸಬೇಕು ಎಂದಿತು. ಹೈಕೋರ್ಟ್ ಕೂಡ ಕೆಎಟಿ ತೀರ್ಪಗಳನ್ನು ಎತ್ತಿಹಿಡಿದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

    ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರೌಢಶಾಲಾ ಶಿಕ್ಷಕರ ಸಂಘಗಳು ಕೂಡ ವರ್ಗಾವಣೆ ಪ್ರಕ್ರಿಯೆ ಆರಂಭಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದವು. ಶಿಕ್ಷಕರ ದೀರ್ಘ ಕಾಯುವಿಕೆ ಮುಗಿಯುವ ಸಾಧ್ಯತೆ ಇದ್ದರೂ, ವರ್ಗಾವಣೆ ಪ್ರಕ್ರಿಯೆಯಲ್ಲಿ ಮೇಲಿಂದ ಮೇಲೆ ಉದ್ಭವಿಸುವ ಗೊಂದಲಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಪ್ರತಿ ವರ್ಷ ನಿಯಮಿತವಾಗಿ ವರ್ಗಾವಣೆ ಪ್ರಕ್ರಿಯೆ ನಡೆಯುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವ ಜವಾಬ್ದಾರಿ ಶಿಕ್ಷಣ ಇಲಾಖೆಯದ್ದು. ಒಟ್ಟಾರೆ, ನಿಯಮ ಅಥವಾ ವ್ಯವಸ್ಥೆಯ ಲೋಪಗಳಿಂದ ಶಿಕ್ಷಕರು ಬವಣೆ ಅನುಭವಿಸುವಂತಾಗಬಾರದು ಎಂಬ ಕಾಳಜಿ ಮುಖ್ಯ.

    ಏಕೆಂದರೆ ಶಿಕ್ಷಕರು ಈಗಾಗಲೇ ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಅದರಲ್ಲೂ ವರ್ಗಾವಣೆಯಂಥ ವಿಷಯದಲ್ಲಿ ನ್ಯಾಯಾಂಗ ಹೋರಾಟ ನಡೆಸುವುದು ಅಥವಾ ದೀರ್ಘಾವಧಿ ಕಾಯುವಂಥ ಅಪಸವ್ಯಗಳು ಮತ್ತೆ ಸಂಭವಿಸಬಾರದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts