More

    ನಡಹಳ್ಳಿಯವರು ಕೂಡಲ ಶ್ರೀಗಳ ಕ್ಷಮೆಯಾಚಿಸಲಿ

    ಮುದ್ದೇಬಿಹಾಳ: ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿಯವರು ಕೂಡಲ ಸಂಗಮ ಪಂಚಮಸಾಲಿ ಗುರುಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರಿಗೆ ಅಪಮಾನವಾಗುವಂಥ ಹೇಳಿಕೆ ನೀಡಿದ್ದಕ್ಕೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ತಾಲೂಕು ಪಂಚಮಸಾಲಿ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.

    ಗುರುವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಅಧ್ಯಕ್ಷ ಅಮರೇಶ ಗೂಳಿ, ಮುಖಂಡರಾದ ಗುರು ತಾರನಾಳ, ಕಾಮರಾಜ ಬಿರಾದಾರ, ಅರವಿಂದ ಕೊಪ್ಪ, ಪುರಸಭೆ ಸದಸ್ಯ ವೀರೇಶ ಹಡಲಗೇರಿ, ತಾಪಂ ಮಾಜಿ ಸದಸ್ಯ ತಂಗಡಗಿ ಪಿಕೆಪಿಎಸ್ ಅಧ್ಯಕ್ಷ ಶ್ರೀಶೈಲ ಮರೋಳ ಇತರರು, ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುವಾಗ ಪಂಚಮಸಾಲಿ ಸಮಾಜದ ಸ್ವಾಮೀಜಿಗಳನ್ನು ಗುರಿಯಾಗಿಸಿಕೊಂಡು ಮಾತನಾಡಿರುವ ವೀಡಿಯೋ ವೈರಲ್ ಆಗಿದೆ. ಇದು ಸ್ವಾಮೀಜಿಗಳ ಮನಸ್ಸಿಗೆ ನೋವುಂಟು ಮಾಡಿದೆ. ನಮ್ಮ ಸಮಾಜಕ್ಕೆ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರೇ ಗುರುಗಳು. ನಮ್ಮ ಗುರುಗಳ ಬಗ್ಗೆ ಅಪಮಾನಕರವಾಗುವ ರೀತಿಯಲ್ಲಿ ಮಾತನಾಡಿದ್ದನ್ನು ಖಂಡಿಸುತ್ತೇವೆ ಎಂದರು.

    ನಡಹಳ್ಳಿಯವರು ನಮ್ಮ ಸಮಾಜದವರೇ ಆಗಿರುವ ತಮ್ಮ ಕೆಲವು ಆಪ್ತರೊಂದಿಗೆ ಮುದ್ದೇಬಿಹಾಳದಲ್ಲಿ ಇತ್ತೀಚೆಗೆ ಮತ್ತೊಂದು ಸುದ್ದಿಗೋಷ್ಠಿ ನಡೆಸಿ ತಾವು ನಮ್ಮ ಸ್ವಾಮೀಜಿಗಳ ಬಗ್ಗೆ ಏನನ್ನೂ ಮಾತನಾಡಿಯೇ ಇಲ್ಲ. ಅವರ ಹೆಸರನ್ನೂ ಎಲ್ಲಿಯೂ ಬಳಸಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆಯೇ ಹೊರತು ಕ್ಷಮೆ ಕೇಳಿಲ್ಲ. ಆಗ ಮಾತನಾಡುವ ಸಂದರ್ಭ ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ವಿನಾಕಾರಣ ಟ್ರೋಲ್ ಮಾಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ನಮಗೂ ಕಾನೂನು ಗೊತ್ತಿದೆ. ನಾವೂ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಎಂದರು.

    ನಡಹಳ್ಳಿಯವರು ಕ್ಷಮೆ ಕೇಳಲು ಕಾಲಾವಕಾಶ ಕೊಡುತ್ತಿದ್ದೇವೆ. ಅವರು ನಮ್ಮ ಗುರುಗಳ ಕ್ಷಮೆ ಕೋರದಿದ್ದರೆ, ತಮ್ಮ ಹೇಳಿಕೆಗಳಿಗೆ ವಿಷಾಧ ವ್ಯಕ್ತಪಡಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಬಿಜೆಪಿಯಲ್ಲಿರುವ ಪಂಚಮಸಾಲಿ ಸಮಾಜದ ಮುಖಂಡರಾರೂ ಪಾಲ್ಗೊಂಡಿರಲಿಲ್ಲ. ಬಹುತೇಕ ಕಾಂಗ್ರೆಸ್ ಬೆಂಬಲಿಗರೇ ಇದ್ದರು. ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಈ ವಿಷಯದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ನಾವೆಲ್ಲರೂ ನಮ್ಮ ಸಮಾಜದ ಗುರುಗಳಿಗಾದ ಅವಮಾನವನ್ನು ಸಮಾಜದ ವತಿಯಿಂದ ಖಂಡಿಸಲು ಇಲ್ಲಿ ಸೇರಿದ್ದೇವೆ ಎಂದರು.

    ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಮುತ್ತಿನಶೆಟ್ಟಿ ಗೂಳಿ, ಬಸವರಾಜ ಅಂಗಡಿ, ಪ್ರಕಾಶ ಹೊಳಿ, ಶ್ರೀಕಾಂತ ಬಿರಾದಾರ, ಪರಶುರಾಮ ಬಯ್ಯಪುರ, ವೀರೇಶ ಕೆಲ್ಲೂರ, ರಾಚೋಟಿ ಬಳಿಗಾರ, ಮಹಾಂತೇಶ ಝಳಕಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts