More

    ಉದ್ಯೋಗ ನಿರೀಕ್ಷೆ ಈಡೇರಲಿ; ನೂತನ ನೀತಿಯ ಸೂಕ್ತ ಅನುಷ್ಠಾನ ಅಗತ್ಯ

    ಬಂಡವಾಳ ಹೂಡಿಕೆಯ ಪ್ರಮಾಣಕ್ಕೆ ಅನುಗುಣವಾಗಿ ಉದ್ಯೋಗ ಸೃಷ್ಟಿಯನ್ನು ತಳಕು ಹಾಕಿರುವ ನೂತನ ಉದ್ಯೋಗ ನೀತಿಯನ್ನು ಕರ್ನಾಟಕ ಸರ್ಕಾರ ಘೋಷಿಸಿದೆ. ರಾಜ್ಯದಲ್ಲಿ ಉದ್ಯೋಗ ಕ್ಷೀಣಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಈ ನೀತಿಯ ಮೂಲಕ ಉದ್ದಿಮೆಗಳಲ್ಲಿ ಹೆಚ್ಚುವರಿ ಉದ್ಯೋಗ ಸೃಷ್ಟಿಗೆ ಮಹತ್ವದ ಕ್ರಮ ಕೈಗೊಳ್ಳಲು ಮುಂದಾಗಿದೆ. ಇದೇ ವೇಳೆ, ಉದ್ಯಮಗಳಲ್ಲಿ ಕನ್ನಡಿಗರಿಗೆ ಸಿ ಮತ್ತು ಡಿ ಶ್ರೇಣಿಯ ಉದ್ಯೋಗಗಳನ್ನು ಮಾತ್ರ ನೀಡಲಾಗುತ್ತಿದೆ ಎಂಬ ಆಕ್ಷೇಪಗಳ ಹಿನ್ನೆಲೆಯಲ್ಲಿ, ಉನ್ನತ ಶ್ರೇಣಿಯ ಹುದ್ದೆಗಳಲ್ಲೂ ಸ್ಥಳೀಯರಿಗೆ ಅವಕಾಶ ನೀಡಬೇಕು ಎಂಬ ಷರತ್ತು ವಿಧಿಸಲು ಮುಂದಾಗಿರುವುದು ಕನ್ನಡಿಗರಿಗೆ ಆಶಾಕಿರಣ ಎನ್ನಬಹುದಾಗಿದೆ.

    ಉದ್ಯಮಗಳಲ್ಲಿ ಬಂಡವಾಳ ಹೂಡಿಕೆಯ ಪ್ರಮಾಣವನ್ನು ಆಧರಿಸಿ ಅದಕ್ಕೆ ಸರಿಸಮನಾದ ರೀತಿಯಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕೆಂಬ ಮಹತ್ವದ ಅಂಶವನ್ನೂ ಒಳಗೊಂಡಿರುವ ನೂತನ ಉದ್ಯೋಗ ನೀತಿಗೆ ರಾಜ್ಯ ಸಂಪುಟ ಸಮ್ಮತಿ ನೀಡಿದೆ. 2022-23ನೇ ಸಾಲಿನ ಬಜೆಟ್​ನಲ್ಲಿ ನೀಡಿರುವ ಆಶ್ವಾಸನೆ ಈಡೇರಿಸುವ ನಿಟ್ಟಿನಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಿದ್ದು, ಅಂದಾಜು 3 ಪಟ್ಟು ಹೆಚ್ಚು ಉದ್ಯೋಗ ಸೃಷ್ಟಿ ನಿರೀಕ್ಷಿಸಲಾಗಿದೆ. ಭಾರತೀಯ ಆರ್ಥಿಕತೆ ನಿಗಾ ಕೇಂದ್ರ (ಸಿಎಫ್​ಎಂಇಎ) ಪ್ರಕಾರ, ಕೋವಿಡ್ ಎರಡನೇ ಅಲೆಯಲ್ಲಿ ಅಂದಾಜು 1 ಕೋಟಿ ಜನರು ಭಾರತದಲ್ಲಿ ಉದ್ಯೋಗ ಕಳೆದುಕೊಂಡರು ಹಾಗೂ ಶೇ. 97ರಷ್ಟು ಕುಟುಂಬಗಳ ಆದಾಯ ಗಣನೀಯವಾಗಿ ಕುಸಿಯಿತು. ಕರ್ನಾಟಕದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಈಗಷ್ಟೇ, ದೇಶ ಹಾಗೂ ರಾಜ್ಯದಲ್ಲಿ ಆರ್ಥಿಕ ಚೇತರಿಕೆ ಕಾಣಿಸಿಕೊಳ್ಳುತ್ತಿದ್ದರೂ ಬೆಲೆಯೇರಿಕೆ ಬಿಸಿ ಜನಸಾಮಾನ್ಯರನ್ನು ತಟ್ಟುತ್ತಿದೆ.

    ಹೆಚ್ಚು ಉದ್ಯೋಗ ಸೃಷ್ಟಿಸಬಹುದಾದ ಜವಳಿ, ಆಟಿಕೆ ತಯಾರಿಕೆ, ಎಫ್​ಎಂಸಿಜಿ, ಚರ್ಮ ಉತ್ಪನ್ನ, ಆಹಾರ ಸಂಸ್ಕರಣೆ, ಆಭರಣ ವಲಯಗಳ ಮೇಲೆ ಹೆಚ್ಚಿನ ಗಮನ ಹಾಗೂ ಇವುಗಳಿಗೆ ಹೆಚ್ಚಿನ ಪ್ರೋತ್ಸಾಹಕಗಳನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಿರುವುದು ಸಮಂಜಸವೇ ಆಗಿದೆ. ಉದ್ಯಮಗಳನ್ನು ಮಧ್ಯಮ, ಬೃಹತ್, ಮೆಗಾ, ಸೂಪರ್ ಮೆಗಾ, ಆಲ್ಟಾ›, ಸೂಪರ್ ಆಲ್ಟ್ರಾ ಎಂದು ವರ್ಗೀಕರಿಸಿ, ಈ ವರ್ಗೀಕರಣ ಪ್ರಕಾರ ಹೂಡಿಕೆ ಹೆಚ್ಚಾದಂತೆ ಹೆಚ್ಚಿನ ಉದ್ಯೋಗ ಒದಗಿಸಬೇಕೆಂದು ಸೂಚಿಸಿರುವುದು ದೂರದೃಷ್ಟಿಯ ಕ್ರಮವಾಗಿ ಕಂಡುಬರುತ್ತದೆ.

    ಉದ್ಯೋಗ ಸೃಷ್ಟಿಗೆ ಉಪಕ್ರಮವಾಗಿ ರಾಜ್ಯದ ಅನೇಕ ನಗರಗಳಲ್ಲಿ ವಿವಿಧ ರೀತಿ ಉದ್ಯಮ ಸ್ಥಾಪನೆಗೆ ಪ್ರೋತ್ಸಾಹ ನೀಡಲೂ ಸರ್ಕಾರ ಮುಂದಾಗಿದೆ. ರಾಜಧಾನಿ ಬೆಂಗಳೂರಿನ ಮೇಲಿನ ಒತ್ತಡ ತಗ್ಗಿಸುವ ನಿಟ್ಟಿನಲ್ಲಿ ಇಂತಹ ಇನ್ನಷ್ಟು ಕ್ರಮಗಳ ಅವಶ್ಯಕತೆ ಇದೆ. ಯಾವುದೇ ನೀತಿಯ ಕಡ್ಡಾಯ ಜಾರಿ ಕಷ್ಟಕರ. ಏಕೆಂದರೆ, ಇದು ಕಾನೂನಿನ ರೂಪವನ್ನು ಪಡೆದುಕೊಂಡಿರುವುದಿಲ್ಲ. ಸಬ್ಸಿಡಿ, ಉತ್ತೇಜಕ ಮುಂತಾದವುಗಳ ಮೂಲಕವೇ ಜಾರಿಗೆ ಮುಂದಾಗಬೇಕಾಗುತ್ತದೆ. ಹೊಸ ನೀತಿಯ ಅನುಷ್ಠಾನದಲ್ಲಿ ಅನೇಕ ಸವಾಲುಗಳು ಸಹಜ. ನೂತನ ನೀತಿಯ ಜಾರಿ ಹೊಣೆಯನ್ನು ಸರ್ಕಾರವು ಕೆಐಎಡಿಬಿ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗಳಿಗೆ ವಹಿಸಿದೆ. ನೂತನ ನೀತಿಯ ಅನುಷ್ಠಾನ ಸಮರ್ಪಕವಾಗಿ ನೆರವೇರಿದರೆ ಮಾತ್ರ ಹೊಸ ಉದ್ಯೋಗಗಳು ಸೃಷ್ಟಿಯಾಗಿ ಕನ್ನಡಿಗರಿಗೆ ಹುದ್ದೆಗಳು ದೊರೆಯಲು ಸಾಧ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts