More

    ಶಿರಗಂಬಿ ಗ್ರಾಮದ ಜಮೀನುಗಳಲ್ಲಿ ಚಿರತೆ ಪ್ರತ್ಯಕ್ಷ

    ರಟ್ಟಿಹಳ್ಳಿ: ತಾಲೂಕಿನ ಶಿರಗಂಬಿ ಗ್ರಾಮ ವ್ಯಾಪ್ತಿಯ ಜಮೀನು, ತೋಟಗಳಲ್ಲಿ ಕಳೆದ ಐದಾರು ದಿನಗಳಿಂದ ಚಿರತೆಯೊಂದು ಮರಿಯೊಂದಿಗೆ ಪ್ರತ್ಯಕ್ಷವಾಗುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

    ಗ್ರಾಮದ ಕಂಬಾಳಿಸ್ವಾಮಿ ಕಂಬಾಳಿಮಠ ಅವರು ಮೂರ್ನಾಲ್ಕು ದಿನದ ಹಿಂದೆ ತಮ್ಮ ಜಮೀನಿನಲ್ಲಿ ಚಿರತೆ ತನ್ನ ಮರಿಯೊಂದಿಗೆ ಇರುವುದನ್ನು ಕಂಡಿದ್ದರು. ಅವರ ಸಹೋದರ ಶಿವಕುಮಾರ ಅವರು ಮಂಗಳವಾರ ಬೆಳಗ್ಗೆ ಚಿರತೆ ಮರಿಯನ್ನು ಜಮೀನಿನಲ್ಲಿ ನೋಡಿ, ಭಯದಿಂದ ಮನೆಗೆ ಬಂದಿದ್ದಾರೆ.

    ಪದೇಪದೆ ಶಿರಗಂಬಿ ಗ್ರಾಮದ ಭಾಗದಲ್ಲಿ ಚಿರತೆ ಮರಿಯೊಂದಿಗೆ ಕಾಣಿಸಿಕೊಳ್ಳುತ್ತಿದ್ದು, ರೈತರು ಕೃಷಿ ಚಟುವಟಿಕೆಗೆ ತೆರಳಲು ಭಯಪಡುವಂತಾಗಿದೆ.
    ಗ್ರಾಮದ ಕಂಬಾಳಿಸ್ವಾಮಿ ಅವರ ಜಮೀನಿನಲ್ಲಿ ಚಿರತೆ ತನ್ನ ಮರಿಯೊಂದಿಗೆ ಓಡಾಡಿರುವ ಹೆಜ್ಜೆ ಗುರುತು ಮೂಡಿವೆ. ಸ್ಥಳಕ್ಕೆ ಭೇಟಿ ನೀಡಿದ ಉಪವಲಯ ಅರಣ್ಯಾಧಿಕಾರಿ ಸಂತೋಷ ಆವಕ್ಕನವರ ಅವರು, ಹೆಜ್ಜೆಗುರುತು ಒಂದು ದೊಡ್ಡ ಚಿರತೆ ಮತ್ತು ಮರಿ ಚಿರತೆಯದು ಎಂದು ಖಚಿತಪಡಿಸಿದ್ದಾರೆ. ರೈತರ ಬೇಡಿಕೆಯಂತೆ ಮೇಲಧಿಕಾರಗಳ ಗಮನಕ್ಕೆ ತಂದು ಬೋನಿನ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

    ರಟ್ಟಿಹಳ್ಳಿ ಮಾರ್ಗದ ಹಿರೇಮೊರಬ ಹಳ್ಳದ ಬಳಿ ಇರುವ ಜಮೀನಿನಲ್ಲಿ ಪದೇಪದೆ ಚಿರತೆ ಕಾಣಿಸಿಕೊಳ್ಳುತ್ತಿದೆ. ಪ್ರಸ್ತುತ ಜಮೀನಿನಲ್ಲಿ ಗೋವಿನಜೋಳ ಮತ್ತು ಸೂರ್ಯಕಾಂತಿ ಬೆಳೆಗೆ ನೀರು ಹಾಯಿಸಬೇಕಾಗಿದೆ. ರಾತ್ರಿ ವೇಳೆ ನೀರು ಹಾಯಿಸಲು ಹೋಗಲು ಭಯದ ವಾತಾವರಣ ಸೃಷ್ಟಿಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಜಮೀನಿನಲ್ಲಿ ಬೋನು ಇಟ್ಟು, ಆದಷ್ಟು ಬೇಗ ಚಿರತೆ ಸೆರೆ ಹಿಡಿಯಬೇಕು ಎಂದು ಕಂಬಾಳಿಸ್ವಾಮಿ ಕಂಬಾಳಿಮಠ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts