More

    ಚಂದ್ರಶೇಖರ ಪಾಟೀಲ್‌ಗೆ ಕೈ ಟಿಕೆಟ್

    ರಾಯಚೂರು: ವಿಧಾನ ಪರಿಷತ್ತಿನ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಮತದಾರರ ನೋಂದಣಿ ಪ್ರಕ್ರಿಯೆ ಬಾಕಿ ಇರುವಾಗಲೇ ಕಾಂಗ್ರೆಸ್ ಅಭ್ಯರ್ಥಿ ಹೆಸರು ಪ್ರಕಟಿಸುವ ಮೂಲಕ ಮುಂದಡಿ ಇಟ್ಟಿದೆ. ಎಂಎಲ್ಸಿ ಡಾ.ಚಂದ್ರಶೇಖರ ಪಾಟೀಲ್‌ಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇದರಿಂದಾಗಿ ಬಿಜೆಪಿಯಲ್ಲೂ ಅಭ್ಯರ್ಥಿ ಹೆಸರು ಪ್ರಕಟಿಸುವ ಒತ್ತಡ ಹೆಚ್ಚಿದೆ.

    ಕಾಂಗ್ರೆಸ್ ಪರಿಷತ್ತ ಚುನಾವಣೆಗೆ ಸನ್ನದ್ಧ

    ಈ ಹಿಂದಿನ ಚುನಾವಣೆಗಳಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗುತ್ತಿತ್ತು. ಆದರೆ, ಈ ಬಾರಿ ಕಾಂಗ್ರೆಸ್ ನೋಂದಣಿ ಪ್ರಕ್ರಿಯೆ ಮುಗಿಯುವ ಮುಂಚೆಯೇ ಅಭ್ಯರ್ಥಿಯ ಹೆಸರು ಅಂತಿಮಗೊಳಿಸುವ ಮೂಲಕ ಚುನಾವಣೆಗೆ ಸಜ್ಜಾಗಿ ಎನ್ನುವ ಸಂದೇಶವನ್ನು ಪಕ್ಷದ ಕಾರ್ಯಕರ್ತರಿಗೆ ರವಾನಿಸಿದೆ.

    ಇದನ್ನೂ ಓದಿ: ರಸ್ತೆಗೆ ಹೂವು ಸುರಿದು ರೈತರ ಆಕ್ರೋಶ; ಬೆಲೆ ಕುಸಿತಕ್ಕೆ ಕಣ್ಣೀರು

    ಬೆಂಗಳೂರು ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ, ಆಗ್ನೇಯ ಶಿಕ್ಷಕರ ಕ್ಷೇತ್ರ ಹಾಗೂ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಭಾನುವಾರ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದೆ. ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಕಳೆದ ಬಾರಿಯ ವಿಜೇತ, ಬೀದರ್ ಜಿಲ್ಲೆಯ ಹುಮನಾಬಾದ್‌ನ ಡಾ.ಚಂದ್ರಶೇಖರ ಪಾಟೀಲ್ ಅವರನ್ನು ಮತ್ತೊಮ್ಮೆ ಕಣಕ್ಕಿಳಿಸಿದೆ.
    ಕಳೆದ ಚುನಾವಣೆಯಲ್ಲಿ ಬಿಜೆಪಿಯ ಕೆ.ಬಿ.ಶ್ರೀನಿವಾಸ ವಿರುದ್ಧ ಡಾ.ಚಂದ್ರಶೇಖರ ಪಾಟೀಲ್ ಕೇವಲ 321 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಗೆಲುವು ಸಾಧಿಸಿದ ನಂತರ ಕ್ಷೇತ್ರ ವ್ಯಾಪ್ತಿಯಲ್ಲಿನ ಜಿಲ್ಲೆಗಳಿಗೆ ಭೇಟಿ ನೀಡಿಲ್ಲ. ಪಕ್ಷದ ಕಾರ್ಯಕರ್ತರೊಂದಿಗೂ ಉತ್ತಮ ಬಾಂಧವ್ಯ ಹೊಂದಿಲ್ಲವೆಂಬ ಆರೋಪ ಡಾ.ಚಂದ್ರಶೇಖರ ಪಾಟೀಲ್ ಮೇಲಿದೆ.

    ಬಿಜೆಪಿ ಕಳೆದ ಚುನಾವಣೆಯಲ್ಲಿ ಎಂಎಲ್ಸಿಯಾಗಿದ್ದ ಕಲಬುರಗಿಯ ಅಮರನಾಥ ಪಾಟೀಲ್ ಅವರನ್ನು ಕೈಬಿಟ್ಟು ಹೊಸಪೇಟೆಯ ಕೆ.ಬಿ.ಶ್ರೀನಿವಾಸಗೆ ಟಿಕೆಟ್ ನೀಡಿತ್ತು. ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಮೊದಲಿನಿಂದಲೂ ಪ್ರಾಬಲ್ಯ ಹೊಂದಿದ್ದ ಬಿಜೆಪಿ ಕಳೆದ ಚುನಾವಣೆಯಲ್ಲಿ ಸೋಲುಂಡಿತ್ತು.
    ಕ್ಷೇತ್ರವನ್ನು ಬಿಜೆಪಿಯ ಎಂ.ಆರ್.ತಂಗಾ ನಾಲ್ಕು ಬಾರಿ ಹಾಗೂ ರಾಯಚೂರಿನ ಮನೋಹರ ಮಸ್ಕಿ, ಕಲಬುರಗಿಯ ಅಮರನಾಥ ಪಾಟೀಲ್ ತಲಾ ಒಂದು ಬಾರಿ ಪ್ರತಿನಿಧಿಸಿದ್ದರು. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಎಡವಿದ್ದರಿಂದ ಸೋಲುಣ್ಣುವಂತಾಗಿತ್ತು.
    ಬಿಜೆಪಿಯಲ್ಲಿ ಈ ಬಾರಿ ಟಿಕೆಟ್‌ಗಾಗಿ ಹೆಚ್ಚಿನ ಪೈಪೋಟಿ ನಡೆದಿದ್ದು, ಗುಲ್ಬರ್ಗ ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಹಾಗೂ ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರಾಯಚೂರಿನ ಡಾ.ಶರಣಬಸವ ಪಾಟೀಲ್ ಜೋಳದಹೆಡಗಿ, ಕಲಬುರಗಿಯ ಅಮರನಾಥ ಪಾಟೀಲ್, ಕೊಪ್ಪಳದ ಶ್ರೀಧರ ಕೇಸರಟ್ಟಿ, ಯಾದಗಿರಿಯ ಸುರೇಶ ಸಜ್ಜನ್ ರೇಸ್‌ನಲ್ಲಿದ್ದಾರೆ.

    ಮನೋಹರ ಮಸ್ಕಿಗೆ ಹೊರತುಪಡಿಸಿ ರಾಯಚೂರು ಜಿಲ್ಲೆಗೆ ಬಿಜೆಪಿ ಪ್ರಾತಿನಿಧ್ಯ ನೀಡಿಲ್ಲ. ಈ ಬಾರಿ ರಾಯಚೂರು ಜಿಲ್ಲೆಗೆ ಟಿಕೆಟ್ ನೀಡಬೇಕು ಎನ್ನುವ ಒತ್ತಾಯ ಪಕ್ಷದಲ್ಲಿ ಕೇಳಿ ಬರುತ್ತಿದ್ದು, ಯುವಕರಿಗೆ ಆದ್ಯತೆ ನೀಡಬೇಕು ಎನ್ನುವ ಆಗ್ರಹ ಕೇಳಿ ಬರುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಹೆಸರು ಘೋಷಣೆ ಮಾಡಿರುವುದರಿಂದ ಬಿಜೆಪಿ ಕೂಡಾ ಅಭ್ಯರ್ಥಿಯ ಹೆಸರು ಘೋಷಣೆ ಮಾಡುವ ಅನಿವಾರ್ಯತೆ ಎದುರಾಗಿದೆ. ಅಭ್ಯರ್ಥಿ ಘೋಷಣೆ ವಿಳಂಬ ಮಾಡಿದಲ್ಲಿ ನೋಂದಣಿ ಮತ್ತು ಪ್ರಚಾರಕ್ಕೆ ಅನನುಕೂಲವಾಗುವ ಸಾಧ್ಯತೆಯಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts