More

    ರಸ್ತೆಗೆ ಹೂವು ಸುರಿದು ರೈತರ ಆಕ್ರೋಶ; ಬೆಲೆ ಕುಸಿತಕ್ಕೆ ಕಣ್ಣೀರು

    ಹಾವೇರಿ: ಹೂವಿನ ಬೆಲೆ ಕುಸಿತ ಹಾಗೂ ವ್ಯಾಪಾರಿಗಳು ಬೇರೆ ಜಿಲ್ಲೆಯಿಂದ ಹೂವು ಖರೀದಿಸುತ್ತಿದ್ದಾರೆ ಎಂಬ ಕಾರಣಕ್ಕೆ ಆಕ್ರೋಶಗೊಂಡ ಸ್ಥಳೀಯ ಹೂವು ಬೆಳೆಗಾರರು ಜಿಲ್ಲಾಸ್ಪತ್ರೆ ಎದುರು ಸೋಮವಾರ ರಸ್ತೆ ಮೇಲೆ ಹೂವು ಸುರಿದು ಪ್ರತಿಭಟಿಸಿದರು. ಸೂಕ್ತ ಬೆಲೆ ಸಿಗದ ಕಾರಣ ಕಣ್ಣೀರು ಸುರಿಸಿದರು.
    ದಲ್ಲಾಳಿಗಳು ಅವರ ಲಾಭಕ್ಕೋಸ್ಕರ ಸ್ಥಳೀಯ ರೈತರ ಹೂವು ಬಿಟ್ಟು ಬೇರೆ ಜಿಲ್ಲೆಗಳಿಂದ ಹೂವು ಖರೀದಿಸುತ್ತಿದ್ದಾರೆ. ಜಿಲ್ಲೆಯಲ್ಲೇ ರೈತರ ಹೂವು ಇದ್ದರೂ ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ವಿಜಯಪುರದಿಂದ ಹೂವು ಖರೀದಿಸುತ್ತಿದ್ದಾರೆ. ಇದರಿಂದ ಸ್ಥಳೀಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬರದ ನಡುವೆಯೂ ಕಷ್ಟಪಟ್ಟು ಬೆಳೆದ ಹೂವು ಮಾರಾಟವಾಗದೇ ಬೀದಿ ಪಾಲಾಗುವಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
    ಕೇವಲ 10, 15 ರೂಪಾಯಿಗೆ ಕೆಜಿ ಕೊಟ್ಟರೂ ಹೂವು ಖರೀದಿಸಲು ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲೆಯ ರೈತರಿಗೆ ಅನ್ಯಾಯ ಆಗಲು ಬಿಡಲ್ಲ. ಸೂಕ್ತ ಬೆಲೆಗೆ ಸ್ಥಳೀಯ ರೈತರ ಮಾಲು ಮೊದಲು ಖರೀದಿಸಬೇಕು. ಈ ಬಗ್ಗೆ ಸರ್ಕಾರ ಗಮನಹರಿಸಬೇಕು. ಇಲ್ಲದಿದ್ದರೆ ಹೋರಾಟ ಚುರುಕುಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
    ರೈತ ಮುಖಂಡರಾದ ರಾಜು ತರ್ಲಘಟ್ಟ, ಮಲ್ಲನಗೌಡ ಪಾಟೀಲ, ಲಾಲಸಾಬ ನದಾಫ್, ಅಣ್ಣಪ್ಪ ಮೇಗಳಮನಿ, ಇತರರಿದ್ದರು.
    ಮಾರುಕಟ್ಟೆ ಸ್ಥಳಾಂತರಿಸಿ
    ಈಗಿನ ಹೂವಿನ ಮಾರುಕಟ್ಟೆಯಲ್ಲಿ ಹೂವು ಇಡಲು, ಪಾರ್ಕಿಂಗ್, ಮತ್ತಿತರ ಯಾವುದೇ ಸೂಕ್ತ ಸೌಲಭ್ಯಗಳಿಲ್ಲ. ಹಾಗಾಗಿ, ಇದನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಹೂವು ಬೆಳೆಗಾರ ಕಲ್ಲಾಪುರ ಗ್ರಾಮದ ರೈತ ಮಲ್ಲನಗೌಡ ಪಾಟೀಲ ಒತ್ತಾಯಿಸಿದರು.
    ಎಲ್ಲೆಡೆ ಬೆಲೆ ಇಳಿಕೆ
    ಕಳೆದ ವರ್ಷ ಸೇವಂತಿ ಹೂವು ಕೆಜಿಗೆ 100, 200 ರೂ.ಗೆ ಮಾರಾಟವಾಗಿತ್ತು. ಹಾಗಾಗಿ, ಒಂದು ಎಕರೆ ಹೂವು ಬೆಳೆಯುವ ರೈತರು ಮೂರು, ಐದು ಎಕರೆ ಹೂವು ಬೆಳೆದಿದ್ದಾರೆ. ಆದ್ದರಿಂದ ಈ ಸಲ ಬೆಲೆ ಕಡಿಮೆಯಾಗಿದೆ ಎನ್ನುತ್ತಾರೆ ಹೂವಿನ ವ್ಯಾಪಾರಿ ಅತಾವುಲ್ಲಾ ಶೇಕ್‌ಸನದಿ.

    ರೈತನ ಕಣ್ಣೀರು
    ಮಾರ್ಕೆಟ್‌ಗೆ ಚಂಡಿ ಹೂವು ತಂದಿದ್ದೇನೆ. ನೂರಕ್ಕೆ 10 ರೂ. ಕಮಿಷನ್ ದಲ್ಲಾಳಿಗೆ ಕೊಡಬೇಕು. ಕೇವಲ 10 ರೂ.ಗೆ ಕೆಜಿ ಕೊಡಲು ಸಿದ್ಧನಿದ್ದರೂ ಯಾರೂ ಖರೀದಿಸುತ್ತಿಲ್ಲ ಎಂದು ದೇವಿಹೊಸೂರಿನ ರೈತ ಸಿದ್ದನಗೌಡ ಪಾಟೀಲ ಕಣ್ಣೀರಿಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts