More

    ಮನುಷ್ಯನ ದುರಾಸೆಯಿಂದ ಪರಿಸರ ನಾಶ

    ಸಾಗರ: ಕಾನು ಅರಣ್ಯ ಸಂರಕ್ಷಣೆ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಕಾನೂನುಗಳು ವ್ಯವಸ್ಥಿತವಾಗಿದ್ದರೂ ಪರಿಪಾಲನೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಸಾಗರದ ಪ್ರಧಾನ ಹಿರಿಯ ವ್ಯವಹಾರ ನ್ಯಾಯಾಧೀಶ ಎಸ್.ನಟರಾಜ್ ಹೇಳಿದರು.
    ಸಾಗರದ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ಜೀವವೈವಿಧ್ಯ ಮಂಡಳಿ, ತಾಲೂಕು ಜೀವವೈವಿಧ್ಯ ನಿರ್ವಹಣಾ ಸಮಿತಿ, ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದಿಂದ ಏರ್ಪಡಿಸಿದ್ದ ಜೀವವೈವಿಧ್ಯ ಕಾಯ್ದೆ ಮತ್ತು ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
    ಜನಸಂಖ್ಯೆ ಹೆಚ್ಚಿರುವುದರಿಂದ ಸಹಜವಾಗಿ ಮನುಷ್ಯ ಬದುಕು ಕಟ್ಟಿಕೊಳ್ಳಲು ಅರಣ್ಯ ನಾಶ ಮಾಡುತ್ತಿದ್ದಾನೆ. ಮನುಷ್ಯನ ದುರಾಸೆಯಿಂದ ಪರಿಸರ ನಾಶವಾಗುತ್ತಿದೆ. ಮುಂದಿನ ಪೀಳಿಗೆಗಾಗಿ ಪರಿಸರ ಸಂರಕ್ಷಣೆ ಕುರಿತು ನಾವು ಸಂಕಲ್ಪ ಮಾಡುವ ಅನಿವಾರ್ಯತೆ ಇದೆ ಎಂದರು.
    ಮಲೆನಾಡು ಭಾಗದಲ್ಲಿ ದಟ್ಟವಾದ ಅರಣ್ಯವಿತ್ತು. ಜತೆಗೆ ಪ್ರಜ್ಞಾವಂತರು ಸಹ ದೊಡ್ಡ ಸಂಖ್ಯೆಯಲ್ಲಿದ್ದು ಸ್ವಯಂಪ್ರೇರಿತವಾಗಿ ಅರಣ್ಯ ರಕ್ಷಣೆ ಮಾಡುತ್ತಿದ್ದಾರೆ. ಇಂತಹ ಪ್ರದೇಶದಲ್ಲಿ ಸಹ ಅರಣ್ಯ ಅತಿಕ್ರಮಣ ಪ್ರಕರಣ ಜಾಸ್ತಿಯಾಗುತ್ತಿರುವುದು ಆತಂಕಕಾರಿ ಸಂಗತಿ. ಅರಣ್ಯ ಇಲಾಖೆ ಅತಿಕ್ರಮ ತಡೆಯುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
    ಪಶ್ಚಿಮಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ಅರಣ್ಯ ಕಾಯ್ದೆ, ಪರಿಸರ ಕಾಯ್ದೆ, ಮಾಲಿನ್ಯ ನಿಯಂತ್ರಣ ಕಾಯ್ದೆ, 2002ರಲ್ಲಿ ಜಾರಿಗೆ ಬಂದ ಜೀವವೈವಿಧ್ಯ ಸಂರಕ್ಷಣಾ ಕಾಯ್ದೆ ಎಲ್ಲವೂ ಇದೆ. ಆದರೆ ಅರಣ್ಯ ಮತ್ತು ಪರಿಸರ ಸಂರಕ್ಷಣೆ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಪರಿಸರ ಸಂರಕ್ಷಣೆ ವಿಷಯಕ್ಕೆ ಬಂದಾಗ ನ್ಯಾಯಾಲಯ ಸದಾ ಬೆಂಬಲ ನೀಡುತ್ತಾ ಬಂದಿದೆ ಎಂದರು.
    ಅಂಬಾರಗುಡ್ಡ ಗಣಿಗಾರಿಕೆ ನಿಲ್ಲಿಸುವಲ್ಲಿ ಸಹ ನ್ಯಾಯಾಲಯ ನೀಡಿದ ತೀರ್ಪು ಅವಿಸ್ಮರಣೀಯವಾದದ್ದು. ಜೀವವೈವಿಧ್ಯ ಸಂರಕ್ಷಣೆ ಮಾಡಿದಿದ್ದಲ್ಲಿ ಇನ್ನಷ್ಟು ಮಾರಕ ಪರಿಣಾಮ ಮನುಕುಲ ಎದುರಿಸಬೇಕಾಗುತ್ತದೆ. ಈಗಲೇ ಹವಾಮಾನ ವೈಪರಿತ್ಯದಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೇವೆ. ಮಲೆನಾಡಿನ ಮಳೆ ಕಾಡುಗಳೂ ಸಹಿತ ಮಾಯವಾಗುತ್ತಿದ್ದು ಮುಂದೆ ಭಾರಿ ಅನಾಹುತ ಎದುರಿಸ ಬೇಕಾಗುತ್ತದೆ. ಇನ್ನಾದರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.
    ತಾಪಂ ಕಾರ್ಯನಿರ್ವಾಹಣಾಧಿಕಾರಿ ನಾಗೇಶ್ ಬ್ಯಾಲದ್, ನ್ಯಾಯಾಧೀಶರಾದ ಶ್ರೀಶೈಲ ಭೀಮಸೇನಾ ಬಾಗಡಿ, ಸ್ಪರ್ಶ ಡಿಸೋಜಾ, ಕೆ.ಆರ್.ದೀಪಾ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ವಕೀಲರ ಸಂಘದ ಕಾರ್ಯದರ್ಶಿ ರಮೇಶ್, ಪವಿತ್ರಾ, ದಾಸೇಗೌಡ, ವೆಂಕಟೇಶ್ ಕವಲಕೋಡು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts