More

    ಪಿಯು ಕಾಲೇಜುಗಳಲ್ಲಿ ಪಾಠಪ್ರವಚನ ಕೇಳುವ ಭಾಗ್ಯ ಇಲ್ಲ ; 200ಕ್ಕೂ ಹೆಚ್ಚು ಗೆಸ್ಟ್ ಲೆಕ್ಚರರ್‌ಗಳ ಕೊರತೆ

    ತುಮಕೂರು: ಕರೊನಾ 3ನೇ ಅಲೆ ಆತಂಕದ ನಡುವೆಯೂ ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಆರಂಭವಾಗಿ ತಿಂಗಳಾಗುತ್ತಾ ಬಂದರೂ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಇನ್ನೂ ಅತಿಥಿ ಉಪನ್ಯಾಸಕರ ನೇಮಕವಾಗಿಲ್ಲ. ಕಾಲೇಜುಗಳತ್ತ ಮುಖ ಮಾಡಿರುವ ವಿದ್ಯಾರ್ಥಿಗಳಿಗೆ ಇನ್ನೂ ಪಾಠಪ್ರವಚನ ಆರಂಭವಾಗಿಲ್ಲ.

    ಆಗಸ್ಟ್ 21ಕ್ಕೆ ದ್ವಿತೀಯ ಪಿಯು ಕಾಲೇಜುಗಳ ಭೌತಿಕ ತರಗತಿಗಳು ಆರಂಭವಾಗಿದ್ದು ಬಳಿಕ ಪ್ರಥಮ ಪಿಯು ತರಗತಿಗಳು ಪ್ರಾರಂಭವಾಗಿವೆ. ಹಾಗಾಗಿ, ಜಿಲ್ಲೆಯ ಸರ್ಕಾರಿ ಪಿಯು ಕಾಲೇಜುಗಳಲ್ಲಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಕೆಲವು ಪಠ್ಯ ವಿಷಯಗಳ ಬೋಧನೆಗೆ ಉಪನ್ಯಾಸಕರೇ ಇಲ್ಲವಾಗಿದೆ. 188 ಹುದ್ದೆಗಳು ಖಾಲಿ ಇದ್ದು ಕಾಯಂ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳದ ಕಾರಣ ಅತಿಥಿ ಉಪನ್ಯಾಸಕರನ್ನೇ ಅವಲಂಬಿಸಲಾಗಿದೆ.

    ಜಿಲ್ಲೆಯ 74 ಸರ್ಕಾರಿ ಪಿಯು ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಕೊರತೆಯಿಂದ ಕೆಲವು ಪಠ್ಯವಿಷಯಗಳ ತರಗತಿಗಳು ಇನ್ನೂ ಆರಂಭವಾಗಿಲ್ಲ. ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಶೇ.100ರಷ್ಟು ಫಲಿತಾಂಶ ಬಂದಿದ್ದರಿಂದ ಪಿಯು ಕಾಲೇಜುಗಳು ತುಂಬಿತುಳುಕುತ್ತಿವೆ. ದ್ವಿತೀಯ ಪಿಯು ಜತೆಗೆ ಪ್ರಥಮ ಪಿಯು ತರಗತಿಗಳ ಆರಂಭವಾಗಿದ್ದು ಉಪನ್ಯಾಸಕರ ಕೊರತೆಯಿಂದ ಗ್ರಾಮೀಣ ವಿದ್ಯಾರ್ಥಿಗಳು ತರಗತಿಗಳಿಂದ ವಂಚಿತರಾಗುತ್ತಿರುವುದು ಬೆಳಕಿಗೆ ಬಂದಿದೆ.

    ಗೆಸ್ಟ್ ಲೆಕ್ಚರರ್‌ಗಳ ಕೊರತೆ: ಕಳೆದ 2 ವರ್ಷಗಳಿಂದ ಬಹುತೇಕ ಶೈಕ್ಷಣಿಕ ವರ್ಷ ಹಳಿತಪ್ಪಿದ್ದು ಈಗ ಶಾಲಾ-ಕಾಲೇಜುಗಳು ಹಂತ, ಹಂತವಾಗಿ ಬಾಗಿಲು ತೆರೆಯುತ್ತಿವೆ. ಆನ್‌ಲೈನ್ ಪಾಠಗಳು ಪರಿಣಾಮಕಾರಿ ಎನಿಸದ ಕಾರಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೆಟ್ಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ 9, 10, 11 ಹಾಗೂ 12ನೇ ತರಗತಿಗಳನ್ನು ಆರಂಭಿಸಲಾಗಿದೆ. ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗಿದ್ದ ಗ್ರಾಮೀಣ ಮಕ್ಕಳಿಗೆ ಈಗ ಭೌತಿಕ ತರಗತಿಗಳು ಆರಂಭವಾದ ಬಳಿಕವು ಸರ್ಕಾರಿ ಪಿಯು ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯಿಂದ ಶೈಕ್ಷಣಿಕವಾಗಿ ಹಿನ್ನಡೆ ಅನುಭವಿಸುವಂತಾಗಿದೆ.

    ಜಿಲ್ಲೆಯ 74 ಸರ್ಕಾರಿ ಪಿಯು ಕಾಲೇಜುಗಳಲ್ಲಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ 200ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಕೊರತೆ ಇದೆ. ಈ ಬಾರಿ ಹೆಚ್ಚು ಡಿಮಾಂಡ್ ಇರುವ ವಾಣಿಜ್ಯ ವಿಭಾಗದಲ್ಲಿ ಹೆಚ್ಚಿನ ಶಿಕ್ಷಕರ ಕೊರತೆ ಕಂಡುಬಂದಿದೆ. ಭೌತಿಕ ತರಗತಿಗಳು ಆರಂಭವಾಗಿ 22 ದಿನಗಳಾಗುತ್ತ ಬಂದಿದೆಯಾದರೂ ಸರ್ಕಾರವು ಇನ್ನೂ ಅತಿಥಿ ಉಪನ್ಯಾಸಕರನ್ನು ನೇಮಿಸಿಲ್ಲ. ಇದರಿಂದ ವಿಜ್ಞಾನ, ವಾಣಿಜ್ಯ ವಿಭಾಗದ ಕೆಲವು ಪಠ್ಯವಿಷಯಗಳ ತರಗತಿಗಳ ಪ್ರಾರಂಭ ವಿಳಂಬವಾಗಿದೆ.

    ಜಿಲ್ಲೆಯವರೇ ಆದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಈ ಬಗ್ಗೆ ಗಮನಹರಿಸಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಆದೇಶ ಹೊರಡಿಸಿ ಸುಸೂತ್ರವಾಗಿ ಪಾಠಪ್ರವಚನಗಳು ನಡೆಯಲು ಅನುವು ಮಾಡಿಕೊಡಲಿದ್ದಾರೆ ಎಂಬ ನಿರೀಕ್ಷೆ ವಿದ್ಯಾರ್ಥಿಗಳದ್ದಾಗಿದೆ.

    ಉಪನ್ಯಾಸಕರ ಕೊರತೆಯಿಂದ ಗ್ರಾಮೀಣ ವಿದ್ಯಾರ್ಥಿಗಳು ತರಗತಿಗಳಿಂದ ವಂಚಿತರಾಗುತ್ತಿದ್ದಾರೆ. ಜಿಲ್ಲೆಯ ಸರ್ಕಾರಿ ಪಿಯು ಕಾಲೇಜುಗಳಲ್ಲಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ 200ಕ್ಕಿಂತ ಹೆಚ್ಚು ಕೊರತೆ ಇದೆ. ಅದರಲ್ಲೂ ವಾಣಿಜ್ಯ ವಿಭಾಗದಲ್ಲಿ ಹೆಚ್ಚಿನ ಶಿಕ್ಷಕರ ಕೊರತೆ ಇದೆ. ಭೌತಿಕ ತರಗತಿಗಳು ಆರಂಭವಾಗಿ ತಿಂಗಳಾಗುತ್ತ ಬರುತ್ತಿದೆಯಾದರೂ ಸರ್ಕಾರ ಇನ್ನೂ ಅತಿಥಿ ಉಪನ್ಯಾಸಕರ ನೇಮಿಸಿಲ್ಲ. ನಮ್ಮ ಜಿಲ್ಲೆಯವರೇ ಆದ ಶಿಕ್ಷಣ ಸಚಿವರು ಇತ್ತ ಗಮನಹರಿಸಲಿ.
    ಅಪ್ಪು ಪಾಟೀಲ್, ವಿಭಾಗ ಸಂಘಟನಾ ಕಾರ್ಯದರ್ಶಿ, ಎಬಿವಿಪಿ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts