More

    ಕ್ಷೇತ್ರದ ಹೊರಗಡೆ ಪ್ರಚಾರಕ್ಕೂ ನಾಯಕರು ಸೈ, ಸ್ವಪಕ್ಷೀಯರ ಪರ ಮತ ಬೇಟೆ

    ಚಿಕ್ಕಬಳ್ಳಾಪುರ: ಸ್ವಕ್ಷೇತ್ರದಲ್ಲಿ ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡಿದ್ದ ನಾಯಕರು, ಇದೀಗ ಬೇರೆ ಬೇರೆ ಕ್ಷೇತ್ರಗಳಲ್ಲಿ ಪಕ್ಷದ ಪರ ಮತ ಯಾಚಿಸಲು ಮುಂದಾಗಿದ್ದಾರೆ.
    ಹೌದು! ರಾಜ್ಯದ ಮೊದಲ ಹಂತದ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮತದಾನ ಪ್ರಕ್ರಿಯೆ ಮುಗಿದಿದೆ. ಇನ್ನೂ ಫಲಿತಾಂಶಕ್ಕೆ ಎದುರು ನೋಡಲಾಗುತ್ತಿದೆ. ಇದರ ನಡುವೆ ಉಳಿದ ಭಾಗಗಳಲ್ಲಿ ಚುನಾವಣಾ ಪ್ರಚಾರದ ಕಡೆಗೆ ಜಿಲ್ಲೆಯ ನಾಯಕರು ಗಮನಹರಿಸುತ್ತಿದ್ದಾರೆ.
    ಈಗಾಗಲೇ ಪಕ್ಷದ ವರಿಷ್ಠರು ಸ್ವಪಕ್ಷೀಯರಿಗೆ ಜವಾಬ್ದಾರಿ ವಹಿಸಿ, ಗೆಲುವಿಗೆ ಶ್ರಮಿಸಲು ಸೂಚಿಸಿದ್ದಾರೆ. ಇದರ ಉತ್ಸಾಹದಲ್ಲಿ ಸ್ಥಳೀಯ ಪ್ರದೇಶದ ಮಾದರಿಯಲ್ಲಿ ಬೇರೆಡೆ ಮತಬೇಟೆಯನ್ನಾಡುವ ಕಾಯಕದಲ್ಲಿ ನಾಯಕರು ತೊಡಗಿದ್ದಾರೆ. ಇದರ ಜತೆಗೆ ಈ ಭಾಗದಲ್ಲಿನ ಬೆಂಬಲಿಗರನ್ನು ಸಹ ಕರೆದುಕೊಂಡು ಹೋಗಿ, ಬಿರುಸಿನ ಪ್ರಚಾರ ಕೈಗೊಳ್ಳಲು ತೀರ್ಮಾನಿಸಿದ್ದಾರೆ.

    * ಚುನಾವಣಾ ಪ್ರಚಾರ ಉಸ್ತುವಾರಿ
    ಕೋಲಾರ ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ, ಪ್ರಚಾರ ನೊಗವನ್ನು ಹೊತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ.ಸುಧಾಕರ್‌ಗೆ ಬೆಳಗಾವಿ ಭಾಗದ ಜವಾಬ್ದಾರಿಯನ್ನು ವಹಿಸಲಾಗಿದೆ. ಇನ್ನೂ ಕೈ ಪಾಳಯದ ಮಾಜಿ ಸಚಿವರು, ಶಾಸಕರು, ಪಕ್ಷದ ಪದಾಧಿಕಾರಿಗಳು ಪ್ರಚಾರಕ್ಕೆ ತೆರಳುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಡಾ ಕೆ.ಸುಧಾಕರ್‌ಗೆ ಆಂಧ್ರ ಪ್ರದೇಶದ ರಾಜಮಂಡ್ರಿ ಲೋಕಸಭಾ ಕ್ಷೇತ್ರದ ಉಸ್ತುವಾರಿ ವಹಿಸಲಾಗಿದೆ. ಆಂಧ್ರದ ರಾಜ್ಯ ಬಿಜೆಪಿ ಅಧ್ಯಕ್ಷೆ ಮತ್ತು ಮಾಜಿ ಮುಖ್ಯಮಂತ್ರಿ ಎನ್‌ಟಿಆರ್ ಪುತ್ರಿ ಪುರಂದೇಶ್ವರಿ ಸ್ಪರ್ಧಿಸಿರುವ ಕ್ಷೇತ್ರದಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುವ ಟಾಸ್ಕ್ ಅನ್ನು ನೀಡಲಾಗಿದೆ.

    * ಸುಡು ಬಿಸಿಲಿಗೆ ಮನೆ ಬಂಧಿ
    ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣಾ ಅಧಿಸೂಚನೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್, ಸಿಪಿಎಂ, ಜೆಡಿಎಸ್ ಮತ್ತು ಬಿಜೆಪಿ ಸೇರಿದಂತೆ ರಾಜಕೀಯ ಪಕ್ಷಗಳು ಈ ಭಾಗದಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಸ್ವಪಕ್ಷೀಯ ಅಭ್ಯರ್ಥಿಯ ಗೆಲುವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ಸುಡು ಬಿಸಿಲನ್ನು ಲೆಕ್ಕಿಸದೇ ಕ್ಷೇತ್ರದಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗಾಡಿದ್ದರು. ರ‍್ಯಾಲಿ, ಸಮಾವೇಶ, ಸಭೆ ಸಮಾರಂಭಗಳಲ್ಲಿ ಭಾಗವಹಿಸಿದ್ದರು. ಪ್ರತಿದಿನ ರಾಜಕೀಯ ಚಟುವಟಿಕೆಯ ಹಿನ್ನೆಲೆಯಲ್ಲಿ ಒತ್ತಡಕ್ಕೊಳಗಾಗಿದ್ದು ಏ.26 ರಂದು ಮತದಾನ ಪ್ರಕ್ರಿಯೆ ಮುಗಿಯುವುದನ್ನೇ ಎದುರು ನೋಡುತ್ತಿದ್ದರು. ಈಗ ಬಹುತೇಕರು ಮನೆ ಬಂಧಿಯಾಗಿದ್ದು ಬೇರೆ ಭಾಗಗಳ ಪ್ರಚಾರದ ಆಹ್ವಾನಕ್ಕೆ ಕೈ ಮುಗಿದು ಸುಮ್ಮನಾಗುತ್ತಿದ್ದಾರೆ. ಬೆರಳೆಣಿಕೆಯ ಸಂಖ್ಯೆಯಲ್ಲಿ ಮಾತ್ರ ಒಪ್ಪಿಗೆ ಸಿಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.

    *ಹಿಂದೆ ತೆಲಂಗಾಣದಲ್ಲಿ ಪ್ರಚಾರ
    ಈ ಭಾಗದಲ್ಲಿ ಚುನಾವಣೆ ನಡೆದಾಗ ಹೊರ ಭಾಗದವರು, ಹಾಗೆಯೇ ಇಲ್ಲಿನವರು ಬೇರೆ ಭಾಗಗಳಿಗೆ ತೆರಳಿ ಪ್ರಚಾರ ನಡೆಸುವಂತಹುದು ಸಾಮಾನ್ಯ. ತೆಲಂಗಾಣದಲ್ಲಿ ಕಳೆದ 2023 ರ ವಿಧಾನಸಭಾ ಸಭಾ ಚುನಾವಣಾ ಪ್ರಕ್ರಿಯೆಗಳು ನಡೆಯುತ್ತಿದ್ದಾಗ ಜಿಲ್ಲೆಯಲ್ಲಿನ ಸ್ಥಳೀಯ ಜನಪ್ರತಿನಿಧಿಗಳು, ರಾಜಕೀಯ ಪಕ್ಷದ ಬಹುತೇಕ ನಾಯಕರು ತೆರಳಿ, ಅಲ್ಲಿ ಅಬ್ಬರಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts